ETV Bharat / state

ಕೊರೊನಾ ಕರ್ಪ್ಯೂ ಮುಂದುವರಿಕೆ ಬಗ್ಗೆ 12ರ ನಂತರ ತೀರ್ಮಾನ: ಸಿಎಂ ಬಿಎಸ್​ವೈ

author img

By

Published : May 4, 2021, 6:14 PM IST

Updated : May 4, 2021, 8:20 PM IST

ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

15:26 May 04

ರೆಮ್​​​​​ಡಿಸಿವಿರ್ ಔಷಧಿ ಕಾಳಸಂತೆಯಲ್ಲಿ ಮಾರಾಟ ಮಾಡುವ ದಂಧೆಕೋರರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದು, ಇದರಲ್ಲಿ ಯಾವುದೇ ಹಿಂಜರಿಕೆ ಇಲ್ಲ. ಚಾಮರಾಜನಗರ ಘಟನೆ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆ ಮರುಕಳಿಸದಂತೆ ಸಚಿವರಿಗೆ, ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಬಿಎಸ್​​ವೈ ಹೇಳಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರ್ನಾಲ್ಕು ಪಟ್ಟು ಹೆಚ್ಚುತ್ತಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದೇವೆ. ಪ್ರತಿಯೊಬ್ಬ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಬೇಕು. ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಧಿಕಾರ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸಂಜೆ ನಡೆದ ತುರ್ತು ವಿಶೇಷ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಳೆಯಿಂದಲೇ  ಜಿಲ್ಲಾ ಉಸ್ತುವಾರಿಗಳು ಸ್ಥಳದಲ್ಲಿ ಇದ್ದು ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.

ಆಕ್ಸಿಜನ್, ರೆಮ್​ಡಿಸಿವಿರ್, ವಾರ್ ರೂಂ ಉಸ್ತುವಾರಿ ಹಂಚಿಕೆ ಮಾಡಲಾಗಿದೆ. ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಆಕ್ಸಿಜನ್ ಸರಬರಾಜು ನಿರ್ವಹಣೆ ಬಗ್ಗೆ ಕೇಂದ್ರದ ಜೊತೆ ಸಂಪರ್ಕ ಮಾಡುವುದು ಹಾಗೂ ಸರಬರಾಜುದಾರರು,‌ ಉತ್ಪಾದಕರ ಜೊತೆ ಸಂಪರ್ಕ ಸಾಧಿಸಿ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ನೀಡಲಾಗಿದೆ.

ರೆಮ್​ಡಿಸಿವಿರ್, ಔಷಧ ಕೊರತೆ ನಿವಾರಣೆ ಅಗತ್ಯ ಮಾನವ ಸಂಪನ್ಮೂಲ ಕ್ರೋಡೀಕರಿಸುವ ಜವಾಬ್ದಾರಿ ಡಿಸಿಎಂ  ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ವಹಿಸಲಾಗಿದೆ. ಅಲ್ಲದೆ ಸಚಿವರಾದ ಆರ್. ಅಶೋಕ್ ಹಾಗೂ ‌ಬಸವರಾಜ ಬೊಮ್ಮಾಯಿಗೆ ಆಕ್ಸಿಜನ್ ಬೆಡ್ ಹಾಗೂ ಖಾಸಗಿ ಆಸ್ಪತ್ರೆ ಬೆಡ್ ಕೊರತೆ ನಿವಾರಣೆಗೆ ಕ್ರಮ ಕೈಗೊಳ್ಳಲು ಜವಾಬ್ದಾರಿ ನೀಡಲಾಗಿದೆ. ಸಚಿವ ಅರವಿಂದ ಲಿಂಬಾವಳಿ ಅವರಿಗೆ ವಾರ್ ರೂಂ, ಕಾಲ್ ಸೆಂಟರ್ ನಿರ್ವಹಣೆ, ವೈದ್ಯಕೀಯ ಸಲಹೆ ವ್ಯವಸ್ಥೆ ನಿರ್ವಹಣೆಯ ಹೊಣೆ ವಹಿಸಲಾಗಿದೆ ಎಂದು ಹೇಳಿದರು. 

ಶೀಘ್ರ ಆಕ್ಸಿಜನ್ ವ್ಯವಸ್ಥೆ 

ರಾಜ್ಯಕ್ಕೆ ಇದೀಗ ಆಕ್ಸಿಜನ್ ಹಂಚಿಕೆ 800 ಮೆಟ್ರಿಕ್ ಟನ್​​ಗೆ ಹೆಚ್ಚಿಸಲಾಗಿದ್ದು, ಕೇಂದ್ರದ ಸಚಿವರೊಂದಿಗೆ ಚರ್ಚೆ ನಡೆಸಿ ಶೀಘ್ರವಾಗಿ ಆಕ್ಸಿಜನ್ ಸರಬರಾಜು ವ್ಯವಸ್ಥೆ, ಮಹಾರಾಷ್ಟ್ರ ರಾಜ್ಯದ ಹಂಚಿಕೆಯನ್ನು ರಾಜ್ಯಕ್ಕೆ ನೀಡಲು ಕೇಂದ್ರ ಸಚಿವರು ಒಪ್ಪಿಗೆ ನೀಡಿದ್ದಾರೆ. ಈಗಾಗಲೇ ಆಕ್ಸಿಜನ್ ಉತ್ಪಾದಕರಿಗೆ ಹೆಚ್ವುವರಿ ಆಕ್ಸಿಜನ್ ಉತ್ಪಾದನೆಗೆ ಮನವಿ ಮಾಡಲಾಗಿದೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ರೆಮ್​​​​​ಡಿಸಿವಿರ್ ಔಷಧಿ ಕಾಳಸಂತೆಯಲ್ಲಿ ಮಾರಾಟ ಮಾಡುವ ದಂಧೆಕೋರರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದು, ಇದರಲ್ಲಿ ಯಾವುದೇ ಹಿಂಜರಿಕೆ ಇಲ್ಲ. ಚಾಮರಾಜನಗರ ಘಟನೆ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆ ಮರುಕಳಿಸದಂತೆ ಸಚಿವರಿಗೆ, ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಸಿಎಂ, ಚಾಮರಾಜನಗರ ಪ್ರಕರಣದ ಸಂಬಂಧ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ಕೊಡುವ ಬಗ್ಗೆ ಚರ್ಚೆ ನಡೆದಿದೆ ಎಂದರು.

ಎಷ್ಟೇ ದೊಡ್ಡವರಿದ್ದರೂ ಕ್ರಮ 

ಬೆಂಗಳೂರಿನಲ್ಲಿ ಬೆಡ್ ಬ್ಲಾಕ್ ದಂಧೆ ಕುರಿತಾಗಿಯೂ ಬಗ್ಗೆ ಚರ್ಚೆ ಆಗಿದೆ. ಸಂಸದ ತೇಜಸ್ವಿ ಸೂರ್ಯ ಅವರು ಅವ್ಯವಹಾರವನ್ನು ಬಯಲು ಮಾಡಿದ್ದಾರೆ. ಅವರ ಜೊತೆ ಚರ್ಚೆ ಮಾಡಿ ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಪತ್ತೆ ಹಚ್ಚಿ. ದಂಧಕೋರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ರಾಜ್ಯದಲ್ಲಿ ಉತ್ಪಾದನೆ ಆಗುತ್ತಿರುವ ಅಷ್ಟೂ ಆಮ್ಲಜನಕವನ್ನು ಸ್ಥಳೀಯವಾಗಿ ಬಳಸಲು ಕೇಂದ್ರ ಅವಕಾಶ ನೀಡಿದರೆ ತಕ್ಷಣ ಬಿಕ್ಕಟ್ಟಿನಿಂದ ಪಾರಾಗಬಹುದು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರೈಲ್ಚೆ ಸಚಿವ ಪಿಯೂಷ್ ಗೋಯಲ್ ಜೊತೆ ಚರ್ಚೆ ಮಾಡಿದ್ದೇನೆ. ಈ ಬಗ್ಗೆ ಭಾಗಶಃ ಒಪ್ಪಿಕೊಂಡಿದ್ದಾರೆ ಎಂದರು.

ಕರ್ಫ್ಯೂ ಮುಂದುವರಿಕೆ ಕುರಿತು ಮುಂದೆ ನಿರ್ಧಾರ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಯಾವಾಗ ರಾಜೀನಾಮೆ ಕೇಳಿಲ್ಲ ಹೇಳಿ. ಆದರೆ ಸರ್ಕಾರ ತನ್ನ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿದೆ. ಪ್ರತಿಪಕ್ಷದವರಾಗಿ ಅವರು ಅವರ ಕೆಲಸ ಮಾಡಲಿ, ಅವರು ಸಲಹೆ ಏನಾದರೂ ಇದ್ದರೆ ನೀಡಲಿ ಎಂದು ಸಿಎಂ ಗರಂ ಆದರು.

ಸದ್ಯ ಲಾಕ್​​ಡೌನ್ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಮೇ 12ರ ವರೆಗೆ ಕರ್ಪ್ಯೂ ಮುಂದುವರಿಯಲಿದೆ. ಮುಂದಿನ ನಿರ್ಧಾರವನ್ನು ಮತ್ತೆ ಮಾಡುತ್ತೇವೆ ಎಂದರು. 5 ಲಕ್ಷ ರೆಮ್​ಡೆಸಿವಿರ್, ಒಂದು ಲಕ್ಷ ಆಕ್ಸಿಜನ್ ಕಾನ್ಸಟ್ರೇಟರ್​​ಗಳ ಆಮದು ಮಾಡಿಕೊಳ್ಳಲು ತೀರ್ಮಾನಿಸಿರುವುದಾಗಿ ಹೇಳಿದರು.

ಮಾಧ್ಯಮದವರಿಗೂ ವ್ಯಾಕ್ಸಿನ್  

ಮಾಧ್ಯಮ ಸಿಬ್ಬಂದಿಯನ್ನು ಫ್ರಂಟ್ ಲೈನ್ ವರ್ಕ ವಾರಿಯರ್ಸ್​​ಗಳೆಂದು ಪರಿಗಣಿಸಿ ವ್ಯಾಕ್ಸಿನ್ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಜನರಲ್ಲಿರುವ ಭಯದ ವಾತಾವರಣ ಹೋಗಲಾಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

Last Updated :May 4, 2021, 8:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.