ETV Bharat / state

ವಿಶ್ವಕರ್ಮ ಅಧ್ಯಯನ ಪೀಠ ಸ್ಥಾಪನೆಗೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

author img

By ETV Bharat Karnataka Team

Published : Jan 2, 2024, 9:37 AM IST

ವಿಶ್ವಕರ್ಮ ಅಧ್ಯಯನ ಪೀಠ
ವಿಶ್ವಕರ್ಮ ಅಧ್ಯಯನ ಪೀಠ

ವಿಶ್ವಕರ್ಮ ಜಯಂತಿ ಮತ್ತು ಜಕಾಣಾಚಾರಿ ಜಯಂತಿ ಹಿನ್ನೆಲೆಯಲ್ಲಿ ಶಿಲ್ಪಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರು: "ಪ್ರತಿಯೊಬ್ಬ ಚರಿತ್ರಾರ್ಹ ವ್ಯಕ್ತಿಯ ಅಧ್ಯಯನವಾಗಬೇಕು. ವಿಶ್ವಕರ್ಮ ಸಮುದಾಯದ ಮೂಲಪುರುಷ ವಿಶ್ವಕರ್ಮ. ಅವರ ಅಧ್ಯಯನ ಪೀಠ ಸ್ಥಾಪಿಸಲಾಗುವುದು" ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ ಹಾಗೂ ಜಕಣಾಚಾರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, "ಇತಿಹಾಸ ಎಲ್ಲರಿಗೂ ತಿಳಿಯಬೇಕು. ಇತಿಹಾಸ ತಿಳಿಯದವರು ಇತಿಹಾಸ ರಚಿಸಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರತಿಯೊಬ್ಬ ಚರಿತ್ರಾರ್ಹ ವ್ಯಕ್ತಿಯ ಅಧ್ಯಯನವಾಗಬೇಕು. ವಿಶ್ವಕರ್ಮ ಸಮುದಾಯದ ಮೂಲಪುರುಷ ವಿಶ್ವಕರ್ಮ ಅವರ ಅಧ್ಯಯನ ಪೀಠವೂ ಆಗಬೇಕಿದೆ" ಎಂದರು.

"ಜಕಣಾಚಾರಿ ಸಂಸ್ಮರಣೆ 2019ರಲ್ಲಿ ಪ್ರಾರಂಭವಾದರೂ ಕೋವಿಡ್ ಇದ್ದುದರಿಂದ ಆಚರಿಸಲಾಗಲಿಲ್ಲ. ಕಳೆದ ವರ್ಷ ವಿಜಯನಗರ ಜಿಲ್ಲೆಯಲ್ಲಿ ಆಚರಿಸಲಾಗಿತ್ತು. ರಾಜ್ಯಮಟ್ಟದ ಜಯಂತಿಗಳನ್ನು ಬೆಂಗಳೂರಿನಲ್ಲಿಯೇ ಆಚರಿಸಬೇಕೆಂದು ಸೂಚಿಸಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿಯೂ ಆಚರಿಸಲಾಗುತ್ತದೆ" ಎಂದು ಹೇಳಿದರು.

ಕಾಲ್ಪನಿಕ ವ್ಯಕ್ತಿ ಎನ್ನುವುದು ಸುಳ್ಳು: "ಜಕಣಾಚಾರಿ ಎಲ್ಲರಿಗೂ ಗೊತ್ತಿರುವವರು. ಅವರು ಕಾಲ್ಪನಿಕ ವ್ಯಕ್ತಿ ಎನ್ನುವುದು ಸುಳ್ಳು. ವಿಶ್ವಕರ್ಮ ಸಮಾಜದಲ್ಲಿ ಜಕಣಾಚಾರಿ ಹುಟ್ಟಿದವರು. ಅವರು ಬೆಳೆದ ಎತ್ತರ ಜನರಿಗೆ ತಿಳಿಯಬಾರದೆಂದು ಇತಿಹಾಸ ತಿರುಚುವ ಪ್ರಯತ್ನ ಮಾಡಲಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಈ ಕೆಲಸ ಮಾಡಿದ್ದರೂ ಮಾಡಿರಬಹುದು. ಅಮರಶಿಲ್ಪಿ ಜಕಣಾಚಾರಿ ಇತಿಹಾಸ ನಮ್ಮ ಮುಂದಿದೆ. ವಿಶ್ವಕರ್ಮ ಅಭಿವೃದ್ಧಿ ನಿಗಮ, ಜಯಂತಿ ಆಚರಿಸುವ ತೀರ್ಮಾನವನ್ನು ನಮ್ಮ ಸರ್ಕಾರವೇ ಹಿಂದೆ ಮಾಡಿತ್ತು" ಎಂದು ತಿಳಿಸಿದರು.

ಜಾತ್ಯತೀತ ಸಮಸಮಾಜ ನಿರ್ಮಾಣ: "ಜಾತಿರಹಿತ, ವರ್ಗರಹಿತ, ಸಮಸಮಾಜ ನಿರ್ಮಾಣ ಮಾಡಬೇಕೆಂಬುದು ನಮ್ಮ ಸಂವಿಧಾನದ ಆಶಯ. ಸ್ವಾರ್ಥಕ್ಕಾಗಿ ಸಮಾಜದಲ್ಲಿ ಅಸಮಾನತೆ ಉಂಟಾಗಿದೆ. ಶತಶತಮಾನಗಳಿಂದ ಶೂದ್ರರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಅಸಮಾನತೆಗೆ ಬಲಿಯಾಗಿರುವ ವರ್ಗದ ಜನರಿಗೆ ಆರ್ಥಿಕ ಶಕ್ತಿ ತುಂಬಿ, ಅವರು ಮುಖ್ಯವಾಹಿನಿಗೆ ಬರುವಂತಾಗಬೇಕು. ಎಲ್ಲರಿಗೂ ಅವಕಾಶ ಒದಗಿಸುವುದು ಸರ್ಕಾರದ ಜವಾಬ್ದಾರಿ ಹಾಗೂ ಕರ್ತವ್ಯ. ಸಂವಿಧಾನಕ್ಕೆ ಧಕ್ಕೆ ತರುವವರನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸಬೇಕು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

"ಚಲನಶೀಲತೆ ಇಲ್ಲದ ಸಮಾಜದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿಯೇ ಸಂವಿಧಾನದ ಪೀಠಿಕೆವನ್ನು ಓದಿ ಅರ್ಥಮಾಡಿಕೊಂಡು ಅದರಂತೆ ನಡೆಯಬೇಕು. ಸಂವಿಧಾನದ ವಿರೋಧಿಗಳು ಸಮಾಜದಲ್ಲಿ ಬದಲಾವಣೆ ಬಯಸುವುದಿಲ್ಲ. ಸಂವಿಧಾನದ ಆಶಯಗಳನ್ನು ಈಡೇರಿಸಬೇಕು. ಇದಕ್ಕೆ ಧಕ್ಕೆ ತರುವವರನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸಬೇಕು" ಎಂದರು.

ನಾಲ್ವರು ಶಿಲ್ಪಿಗಳಿಗೆ ಜಕಣಾಚಾರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಸನದ ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠಾಧಿಪತಿ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಸೇರಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಇದನ್ನು ಓದಿ: 'ಯುವನಿಧಿ'ಗೆ 7 ದಿನದಲ್ಲಿ 19,800 ಅರ್ಜಿ: ಯಾವ ಜಿಲ್ಲೆಯಲ್ಲಿ ಎಷ್ಟು ನೋಂದಣಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.