ETV Bharat / state

ಸಂಪುಟ ವಿಸ್ತರಣೆ ವಿಳಂಬ: ಬೊಮ್ಮಾಯಿ ಬಳಿಯೇ ಉಳಿದ ಪ್ರಮುಖ ಖಾತೆಗಳು, ಅತೃಪ್ತರ ಕೆಂಗಣ್ಣು

author img

By

Published : Sep 15, 2022, 12:34 PM IST

Updated : Sep 15, 2022, 1:04 PM IST

cm basavaraj bommai
ಬಸವರಾಜ ಬೊಮ್ಮಾಯಿ

ಗ್ರಾಮೀಣಾಭಿವೃದ್ಧಿ, ಆಹಾರ ಇಲಾಖೆ ಸೇರಿದಂತೆ ಮುಂತಾದ ಸಾರ್ವಜನಿಕ ಮಹತ್ವದ ಖಾತೆಗಳು ಮುಖ್ಯಮಂತ್ರಿಗಳ ಹತ್ತಿರವೇ ಇರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಜವಾಬ್ದಾರಿಯುತ ಖಾತೆಗಳ ನಿರ್ವಹಣೆಯ ಒತ್ತಡ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಾಗದಿರುವ ಪರಿಣಾಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಹಣಕಾಸು , ಆಡಳಿತ ಸುಧಾರಣೆ ಖಾತೆಗಳಲ್ಲದೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ , ಆಹಾರ ಮತ್ತು ನಾಗರೀಕ ಪೂರೈಕೆ, ಅರಣ್ಯ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ಹಲವಾರು ಪ್ರಮುಖ ಖಾತೆಗಳು ಉಳಿದಿವೆ.

ಮುಖ್ಯಮಂತ್ರಿಗಳಾದವರಿಗೆ ಸರ್ಕಾರದ ಆಡಳಿತ ನಡೆಸುವ ಜವಾಬ್ದಾರಿಯೇ ಹೆಚ್ಚಾಗಿರುತ್ತದೆ. ಅಂತಹದರಲ್ಲಿ ವಿಧಾನಸಭೆ ಚುನಾವಣೆ ವರ್ಷದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿರುವುದರಿಂದ ಅವುಗಳ ನಿರ್ವಹಣೆ ಕಷ್ಟವಾಗುತ್ತದೆ. ಅಷ್ಟೇ ಅಲ್ಲದೇ, ಆಹಾರ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಸಾರ್ವಜನಿಕ ಮಹತ್ವದ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿ ನ್ಯಾಯ ದೊರಕಿಸುವುದು ಸವಾಲಿನ ಕೆಲಸವೇ ಸರಿಯೆನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಇದನ್ನೂ ಓದಿ: ಸಚಿವ ಸಂಪುಟ ಸಭೆಯಲ್ಲಿ ಭಾವುಕರಾದ ಸಚಿವ ವಿ ಸೋಮಣ್ಣ: ಕಮಿಷನ್ ಆರೋಪದ ಬಗ್ಗೆ ಗಂಭೀರ ಚರ್ಚೆ

ಚುನಾವಣೆ ವರ್ಷದಲ್ಲಿ ರಾಜ್ಯ ಪ್ರವಾಸ , ಬಜೆಟ್ ಅನುಷ್ಠಾನದ ಬಗ್ಗೆ ಸಭೆಗಳು, ಸಚಿವ ಸಂಪುಟ ಸಭೆ, ಹಿರಿಯ ಅಧಿಕಾರಿಗಳ ಸಭೆ, ಇಲಾಖೆವಾರು ಪರಿಶೀಲನಾ ಸಭೆ ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುವ ಒತ್ತಡ ಮುಖ್ಯಮಂತ್ರಿಗಳ ಮೇಲೆ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಹಲವಾರು ಪ್ರಮುಖ ಖಾತೆಗಳ ಉಸ್ತುವಾರಿ ನೋಡಿಕೊಳ್ಳುವುದು ಉತ್ತಮ ಆಡಳಿತ ನೀಡುವುದರ ಮೇಲೆ ಪರಿಣಾಮ ಬೀರುತ್ತದೆ.

ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ಸಹ ಮುಖ್ಯಮಂತ್ರಿಗಳೇ ಹೊಂದಿದ್ದು, ಇತ್ತೀಚೆಗೆ ರಾಜಧಾನಿಯಲ್ಲಿ ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ಥಗೊಂಡಾಗ ಬೆಂಗಳೂರಿಗೆ ಪ್ರತ್ಯೇಕ ಉಸ್ತುವಾರಿ ಸಚಿವರನ್ನ ನೇಮಕ ಮಾಡದಿರುವ ಬಗ್ಗೆ ರಾಜಕೀಯವಾಗಿ ಮತ್ತು ಸಾರ್ವಜನಿಕವಾಗಿ ವ್ಯಾಪಕ ಟೀಕೆಗಳೂ ಸಹ ವ್ಯಕ್ತವಾಗಿದ್ದವು.

ಬೆಂಗಳೂರು ಅಭಿವೃದ್ಧಿ ಖಾತೆ ಪಡೆಯಲು ರಾಜಧಾನಿಯಲ್ಲಿರುವ ಹೆಚ್ಚಿನ ಬಿಜೆಪಿ ಸಚಿವರು ಪಟ್ಟು ಹಿಡಿದಿರುವುದರಿಂದ ಮುಖ್ಯಮಂತ್ರಿ ಬೊಮ್ಮಾಯಿ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಯಾವ ಸಚಿವರಿಗೂ ನೀಡದೇ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಕಂದಾಯ ಸಚಿವ ಆರ್ ಅಶೋಕ್​, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ್​, ವಸತಿ ಸಚಿವ ಸೋಮಣ್ಣ, ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ತೋಟಗಾರಿಕೆ ಸಚಿವ ಮುನಿರತ್ನ ಮತ್ತು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಬೆಂಗಳೂರು ಅಭಿವೃದ್ಧಿ ಖಾತೆ ಮತ್ತು ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಸಚಿವ ಸ್ಥಾನವನ್ನು ತಮಗೆ ನೀಡಬೇಕೆಂದು ಪಟ್ಟು ಹಿಡಿದಿದ್ದರಿಂದ ಪಕ್ಷದ ಸಚಿವರಲ್ಲಿ ಮನಸ್ತಾಪ ಮತ್ತು ವಿವಾದಗಳ ಸಹವಾಸವೇ ಬೇಡವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮ ಬಳಿ ಉಳಿಸಿಕೊಂಡಿದ್ದಾರೆ.

ಈ ಹಿಂದೆ ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗಲೂ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಸಚಿವರ ಪೈಪೋಟಿಯಿಂದಾಗಿ ಯಾರಿಗೂ ಹಂಚಿಕೆ ಮಾಡದೇ ತಮ್ಮ ಹತ್ತಿರ ಇಟ್ಟುಕೊಂಡಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಬೆಂಗಳೂರು ನಗರದ ( ಸರ್ವಜ್ಞನಗರ ಕ್ಷೇತ್ರ) ಶಾಸಕರಾದ ಕೆ ಜೆ ಜಾರ್ಜ್ ಅವರಿಗೆ ನೀಡಿದ್ದರು.

ಇದನ್ನೂ ಓದಿ: ರಾಜ್ಯ ಬಿಜೆಪಿ ಕಾರ್ಯಕರ್ತರ ಅಸಮಾಧಾನ ಶಮನಗೊಳಿಸಿ ಚುನಾವಣೆಗೆ ಪಕ್ಷ ಸಜ್ಜುಗೊಳಿಸಿ: ಅಮಿತ್ ಶಾ ಸೂಚನೆ

ಅತೃಪ್ತರ ಕೆಂಗಣ್ಣು: ಸಚಿವ ಸಂಪುಟ ವಿಸ್ತರಣೆ ನಡೆಯದಿರುವ ಬಗ್ಗೆ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಹೆಚ್ಚಿನ ಪ್ರಮುಖ ಖಾತೆಗಳನ್ನು ಹೊಂದಿರುವ ಕುರಿತು ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೊನ್ನೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಪರೇಷನ್ ಕಮಲದಲ್ಲಿ ಬಿಜೆಪಿ ಸೇರಿದ ಪಕ್ಷೇತರ ಶಾಸಕರಾಗಿದ್ದ ಶಂಕರ್ ಅವರು ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಈ ಹಿಂದೆ ಇದ್ದ ಸಚಿವ ಸ್ಥಾನವೂ ಹೋಯಿತು. ಇನ್ಯಾವಾಗ ಸಚಿವ ಸಂಪುಟ ವಿಸ್ತರಣೆ ಎಂದು ಅಸಮಾಧಾನ ಹೊರಹಾಕಿದ್ದರು.

ಮಂತ್ರಿಮಂಡಲ ವಿಸ್ತರಣೆ ನಡೆಯದಿರುವ ಕುರಿತು ಹಲವು ಶಾಸಕರಲ್ಲಿ ಅತೃಪ್ತಿ ಮನೆ ಮಾಡಿದೆ. ಶಾಸಕಾಂಗ ಪಕ್ಷದ ಸಭೆಯೂ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಸಚಿವಾಕಾಂಕ್ಷಿಗಳು ಅತೃಪ್ತಿಯನ್ನು ಬಹಿರಂಗಪಡಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯಿಂದ ಭಿನ್ನಮತ ಹೆಚ್ಚಾಗುವ ಆತಂಕ ಮುಖ್ಯಮಂತ್ರಿಗಳನ್ನು ಕಾಡುತ್ತಿದೆಯಂತೆ. ಹಾಗಾಗಿ, ವಿಧಾನಸಭೆ ಚುನಾವಣೆ ವರ್ಷದಲ್ಲಿ ಗೊಂದಲಕ್ಕೆ ಆಸ್ಪದ ನೀಡಬಾರದೆಂದು ಕ್ಯಾಬಿನೆಟ್ ವಿಸ್ತರಣೆಗೆ ಹೆಚ್ಚಿನ ಒಲವು ತೋರುತ್ತಿಲ್ಲವೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸಂಪುಟ ವಿಸ್ತರಣೆ ವಿಳಂಬಕ್ಕೆ ಶಾಸಕ ರೇಣುಕಾಚಾರ್ಯ ಅಸಮಾಧಾನ

Last Updated :Sep 15, 2022, 1:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.