ETV Bharat / state

ಸೂರಣಗಿ ದುರಂತ: ಯಶ್ ಅಭಿಮಾನಿಗಳ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

author img

By ETV Bharat Karnataka Team

Published : Jan 8, 2024, 4:51 PM IST

Updated : Jan 8, 2024, 5:51 PM IST

ಮೃತ ಯುವಕರು
ಮೃತ ಯುವಕರು

ಸೂರಣಗಿ ಗ್ರಾಮದಲ್ಲಿ ನಡೆದ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಮೃತ ಯುವಕರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಹೆಚ್​ ಕೆ ಪಾಟೀಲ್ ಸಂತಾಪ ಸೂಚಿಸಿದ್ದಾರೆ.

ಬೆಂಗಳೂರು: ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಫ್ಲೆಕ್ಸ್ ಕಟ್ಟುವ ವೇಳೆ ವಿದ್ಯುತ್ ಪ್ರವಹಿಸಿ ಮೃತಪಟ್ಟ ಮೂವರು ಯುವಕರ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ ಎರಡು ಲಕ್ಷ ಪರಿಹಾರ ಘೋಷಿಸಿದ್ದಾರೆ. ಸುದ್ದಿ ತಿಳಿದು ಬೇಸರವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಬದುಕಿ ಬಾಳಬೇಕಿದ್ದ ಹುಡುಗರು ಹೀಗೆ ಅಚಾತುರ್ಯದಿಂದ ಸಾವಿಗೀಡಾಗಿದ್ದಾರೆ. ಅವರನ್ನು ನಂಬಿದ್ದ ಕುಟುಂಬಗಳೀಗ ಸಂಕಷ್ಟಕ್ಕೆ ಸಿಲುಕಿದ್ದು, ಆ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ತಲಾ 2 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.

  • ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಚಿತ್ರನಟ ಯಶ್ ಜನ್ಮದಿನದ ಫ್ಲೆಕ್ಸ್ ಕಟ್ಟುವ ವೇಳೆ ವಿದ್ಯುತ್ ಪ್ರವಹಿಸಿ ಮೂವರು ಯುವಕರು ಮೃತಪಟ್ಟ ಸುದ್ದಿ ತಿಳಿದು ಬೇಸರವಾಯಿತು.
    ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

    ಬದುಕಿ ಬಾಳಬೇಕಿದ್ದ ಹುಡುಗರು ಹೀಗೆ ಅಚಾತುರ್ಯದಿಂದ ಸಾವಿಗೀಡಾಗಿದ್ದಾರೆ, ಅವರನ್ನು… pic.twitter.com/6H93yWYngw

    — CM of Karnataka (@CMofKarnataka) January 8, 2024 " class="align-text-top noRightClick twitterSection" data=" ">

ಯಶ್ ಅಭಿಮಾನಿಗಳ ದಾರುಣ ಸಾವು ವಿಚಾರವಾಗಿ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಚಿವ ಹೆಚ್​ ಕೆ ಪಾಟೀಲ್​, ನಿನ್ನೆ ಮಧ್ಯರಾತ್ರಿ ಲಕ್ಷ್ಮೇಶ್ವರದ ಸೂರಣಗಿಯಲ್ಲಿ ಈ ದುರಂತ ನಡೆದಿದೆ. ಯಶ್ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದ ಹಿನ್ನೆಲೆ ಫ್ಲೆಕ್ಸ್ ನಿಲ್ಲಿಸಬೇಕು ಅಂತ ರಾಡ್ ಇಟ್ಟುಕೊಂಡಿದ್ದರು. ರಾಡ್ ಕೆಇಬಿ ಲೈನ್​ಗೆ ತಾಗಿ ಅಸುನೀಗಿದ್ದಾರೆ. ಮೂರು ಜನರಿಗೆ ತೀವ್ರವಾದ ಗಾಯಗಳಾಗಿದೆ. ಲಕ್ಷ್ಮೇಶ್ವರ ಆಸ್ಪತ್ರೆಗೆ ಒಬ್ಬರನ್ನು ದಾಖಲಿಸಲಾಗಿದೆ. ಇನ್ನೂ ಇಬ್ಬರನ್ನು ಕಿಮ್ಸ್​ಗೆ ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸೇರಿ ಇತರೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದು ಅತ್ಯಂತ ದುರ್ದೈವದ ಘಟನೆ. ಅವರ ಕುಟುಂಬಗಳಿಗೆ ಭಗವಂತ ದುಃಖ ತಡೆಯುವ ಶಕ್ತಿಕೊಡಲಿ. ಆಸ್ಪತ್ರೆಯಲ್ಲಿ ಇರುವವರು ಬೇಗ ಗುಣಮುಖರಾಗಲಿ ಎಂದರು.

ಇದನ್ನೂ ಓದಿ: ಗದಗ: ಯಶ್‌ ಬರ್ತ್​ಡೇ ಕಟೌಟ್‌ ನಿಲ್ಲಿಸುತ್ತಿದ್ದಾಗ ದುರಂತ; ವಿದ್ಯುತ್ ತಗುಲಿ ಮೂವರು ಯುವಕರು ಸಾವು

ನಟ ಯಶ್‌ ಹುಟ್ಟುಹಬ್ಬದ ಹಿನ್ನೆಲೆ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನೆಚ್ಚಿನ ನಟ ಕಟೌಟ್ ನಿಲ್ಲಿಸಲಾಗುತ್ತಿತ್ತು. ಈ ವೇಳೆ ಕಟೌಟ್​ಗೆ ವಿದ್ಯುತ್ ಸ್ಪರ್ಶಿಸಿ ಹನುಮಂತ ಹರಿಜನ (21), ಮುರಳಿ ನಡವಿನಮನಿ (20) ಹಾಗೂ ನವೀನ್ ಗಾಜಿ (19) ಎಂಬ ಮೂವರು ಯುವಕರು ಮೃತಪಟ್ಟಿದ್ದರು. ಯುವಕರ ಮೃತದೇಹಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ, ಬಳಿಕ ಏಕಕಾಲಕ್ಕೆ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಯಿತು. ಸ್ಥಳದಲ್ಲಿ ಸಂಬಂಧಿಕರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಇದನ್ನೂ ಓದಿ: ಮೂವರು ಅಭಿಮಾನಿಗಳು ಸಾವು: ಸೂರಣಗಿಗೆ ತೆರಳಲಿರುವ ನಟ ಯಶ್, ಕುಟುಂಬಸ್ಥರ ಭೇಟಿ

ಬೆಳಗಾವಿ ಎಂದೆಂದಿಗೂ ಕರ್ನಾಟಕದ್ದೇ: ಇದೇ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹಾರಾಷ್ಟ್ರ ಪರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಹೆಚ್​ ಕೆ ಪಾಟೀಲ್​, ಬೆಳಗಾವಿ ಎಂದೂ ಮಹಾರಾಷ್ಟ್ರಕ್ಕೆ ಸೇರಿಲ್ಲ. ಏಕೀಕರಣದ ಸಂದರ್ಭದಲ್ಲಿ ಎಲ್ಲರೂ ಒಂದಾಗಿದ್ದೇವೆ. ಬೆಳಗಾವಿ ಎಂದೆಂದಿಗೂ ಕರ್ನಾಟಕದ್ದೇ ಎಂದು ಸ್ಪಷ್ಟಪಡಿಸಿದರು.

ಹಿಂದೆ ಬಾಂಬೆ ಪ್ರಾವಿನ್ಸ್​ನಲ್ಲಿ ಇತ್ತು.‌ ಅದನ್ನು ತಪ್ಪು ಅರ್ಥ ಮಾಡಿಕೊಂಡಿರಬಹುದು. ಲಕ್ಷ್ಮಿ ಹೆಬ್ಬಾಳ್ಕರ್ ಹಾಗೆ ಹೇಳಲು ಸಾಧ್ಯವೇ ಇಲ್ಲ. ಯಾರಾದರೂ ಹಾಗೆ ಹೇಳಿದ್ದರೆ ತಪ್ಪು ಮಾಹಿತಿ ಇರಬಹುದು ಎಂದರು‌.

Last Updated :Jan 8, 2024, 5:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.