ETV Bharat / state

ರೋಗಿಗಳಿಗೆ ಆಹಾರ ಪೂರೈಸಿದವರಿಂದ ಲಂಚಕ್ಕೆ ಬೇಡಿಕೆ ಆರೋಪ; ಬೆಂಗಳೂರಲ್ಲಿ ಯುನಾನಿ ಅಧಿಕಾರಿ ಸಿಬಿಐ ಬಲೆಗೆ

author img

By PTI

Published : Nov 26, 2023, 6:26 PM IST

CBI arrests officer of National Institute of Unani Medicine in Bengaluru for bribery
ಬೆಂಗಳೂರು: ರೋಗಿಗಳಿಗೆ ಆಹಾರ ಪೂರೈಸಿದವರಿಂದ ಲಂಚಕ್ಕೆ ಬೇಡಿಕೆ, ಯುನಾನಿ ಸಂಸ್ಥೆಯ ಅಧಿಕಾರಿ ಸಿಬಿಐ ಬಲೆಗೆ

CBI arrests Administrative Officer of NIUM, Bengaluru: ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯುನಾನಿ ಮೆಡಿಸಿನ್‌ನ ಆಡಳಿತ ಅಧಿಕಾರಿ ನದೀಮ್ ಎ. ಸಿದ್ದಿಕಿ ಅವರನ್ನು ಸಿಬಿಐ ಬಂಧಿಸಿದೆ.

ನವದೆಹಲಿ/ಬೆಂಗಳೂರು: ಬೆಂಗಳೂರಿನ ಯುನಾನಿ ಔಷಧಗಳ ರಾಷ್ಟ್ರೀಯ ಸಂಸ್ಥೆ (National Institute of Unani Medicine - NIUM)ಯ ಆಡಳಿತ ಅಧಿಕಾರಿಯೊಬ್ಬರು 50 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ರೆಡ್‌ಹ್ಯಾಂಡ್​ ಆಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ಬಲೆಗೆ ಬಿದ್ದಿದ್ದಾರೆ. ಬಾಕಿ ಬಿಲ್‌ಗಳ ಬಿಡುಗಡೆಗೆ ಆಹಾರ ಪೂರೈಕೆದಾರರಿಂದ 1.10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಆಡಳಿತ ಅಧಿಕಾರಿ ನದೀಮ್ ಎ. ಸಿದ್ದಿಕಿ ಎಂಬುವವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಯುನಾನಿ ಆಸ್ಪತ್ರೆಯ ರೋಗಿಗಳಿಗೆ ಆಹಾರವನ್ನು ಕ್ಯಾಂಟೀನ್​ವೊಂದು ಪೂರೈಸುತ್ತಿತ್ತು. ಇದರ ಬಿಲ್‌ಗಳನ್ನು ಯುನಾನಿ ಮೆಡಿಸಿನ್ ಸಂಸ್ಥೆಯು ಬ್ಯಾಂಕ್​ ಖಾತೆಗೆ ಮಾಸಿಕ ಆಧಾರದ ಮೇಲೆ ಪಾವತಿಸುತ್ತದೆ. ಆದರೆ, ಎರಡು ತಿಂಗಳೊಳಗೆ ಇದರ ಗುತ್ತಿಗೆ ಅವಧಿ ಮುಗಿಯಲಿದ್ದು, ಎನ್‌ಐಯುಎಂನಲ್ಲಿ 3 ಲಕ್ಷ ರೂಪಾಯಿ ಮೊತ್ತದ ಎರಡು ತಿಂಗಳ ಬಿಲ್‌ಗಳು ಬಾಕಿ ಉಳಿದಿವೆ. ಬಾಕಿ ಇರುವ ಬಿಲ್‌ಗಳ ಬಿಡುಗಡೆಗೆ ಆಡಳಿತ ಅಧಿಕಾರಿ ಸಿದ್ದಿಕಿ ಕ್ಯಾಂಟೀಕ್​ ಮಾಲೀಕರಿಗೆ 1.10 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ದೂರು ನೀಡಲಾಗಿತ್ತು.

ಅಂತೆಯೇ, ದೂರುದಾರರಿಂದ ಸಿದ್ದಿಕಿ ಒಟ್ಟು ಬೇಡಿಕೆಯ ಲಂಚದ ಭಾಗವಾಗಿ 50 ಸಾವಿರ ರೂ.ಗಳನ್ನು ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್​​ ಆಗಿ ಬಂಧಿಸಲಾಗಿದೆ. ಆರೋಪಿಯ ಕಚೇರಿಯಲ್ಲಿ ಶೋಧ ನಡೆಸಲಾಗಿದ್ದು, ಈ ಸಂದರ್ಭದಲ್ಲಿ 2 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಸದ್ಯ ಆರೋಪಿಯನ್ನು ಬೆಂಗಳೂರಿನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಹಣಕ್ಕಾಗಿ ಸಂಸತ್ತಿನಲ್ಲಿ ಪ್ರಶ್ನೆ​: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆ ಶುರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.