ETV Bharat / state

ವಿಧಾನ ಪರಿಷತ್​​​ನಲ್ಲಿ ಗದ್ದಲ: ಕಲಾಪ 10 ನಿಮಿಷ ಮುಂದಕ್ಕೆ

author img

By

Published : Sep 26, 2020, 7:24 PM IST

Representative Image
ಸಾಂದರ್ಭಿಕ ಚಿತ್ರ

ವಿಧಾನಮಂಡಲ ಅಧಿವೇಶನದ ಕೊನೆಯ ದಿನವಾದ ಇಂದು ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಮಾತಿನ ಭರಾಟೆ ಜೋರಾಗಿದ್ದು, ವಿಧೇಯಕ ಅನುಮೋದನೆ ಪಡೆಯಲು ಆಡಳಿತ ಪಕ್ಷ ಕಸರತ್ತು ನಡೆಸುತ್ತಿದ್ದರೆ, ಚರ್ಚೆಗೆ ಅವಕಾಶ ಕಲ್ಪಿಸುವಂತೆ ಪ್ರತಿಪಕ್ಷಗಳು ಕಾಯುತ್ತಿವೆ. ಈ ಮಧ್ಯೆ ಪರಿಷತ್​ನಲ್ಲಿ ಗದ್ದಲ ಉಂಟಾದ ಹಿನ್ನೆಲೆ, ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಗಿದೆ.

ಬೆಂಗಳೂರು: ವಿಧಾನಪರಿಷತ್​​ನಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆದ ಹಿನ್ನೆಲೆ ಸಭಾಪತಿಗಳು ಕಲಾಪವನ್ನು 10ನಿಮಿಷ ಮುಂದೂಡಿದ ಪ್ರಸಂಗ ನಡೆಯಿತು.

ವಿಧಾನಸಭೆ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ನಿಯಮ 59ರ ಅಡಿ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ವಿಚಾರದ ಕುರಿತು ಚರ್ಚೆಗೆ ಅವಕಾಶ ಕೋರಿದರು. ಇದೇ ಸಂದರ್ಭ ನಿಯಮ 330ರಡಿ ತಮ್ಮ ವಿಚಾರದ ಚರ್ಚೆಗೆ ಅವಕಾಶ ನೀಡುವಂತೆ ಜೆಡಿಎಸ್ ಸದಸ್ಯ ಮರಿತಿಬ್ಬೆಗೌಡರು ಸಭಾಪತಿಗಳನ್ನು ಒತ್ತಾಯಿಸಿದರು. ಈ ಮಧ್ಯೆ ಆಡಳಿತ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಿಧಾನಸಭೆಯಲ್ಲಿ ಅನುಮೋದನೆ ಪಡೆದಿರುವ ವಿವಿಧ ವಿಧೇಯಕಗಳ ಅನುಮೋದನೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ವಿರೋಧಿಸಿದ ಸಂದರ್ಭ ಒಂದಿಷ್ಟು ಗದ್ದಲದ ವಾತಾವರಣ ನಿರ್ಮಾಣವಾಯಿತು.

ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಕಲಾಪ ಆರಂಭವಾದ ದಿನದಿಂದ ಇಲ್ಲಿಯವರೆಗೆ 32 ವಿಧೇಯಕಗಳನ್ನು ಅಂಗೀಕರಿಸಿ ಕೊಡಲಾಗಿದೆ. ಒಂದಿಷ್ಟು ಚರ್ಚೆಗೆ ಅವಕಾಶ ಬೇಡವೇ ಎಂದು ಪ್ರಶ್ನಿಸಿದರು. ಈ ಮಧ್ಯೆ ಆಡಳಿತ ಪಕ್ಷದವರು ವಿಧೇಯಕ ಮಂಡನೆಗೆ ಒತ್ತಾಯ ಹಿಡಿದು ಕುಳಿತಿದ್ದರೆ, ಇನ್ನೊಂದೆಡೆ ಪ್ರತಿಪಕ್ಷ ಸದಸ್ಯರು ಚರ್ಚೆಗೆ ಪಟ್ಟು ಹಿಡಿದು ಕುಳಿತರು. ಸುಗಮ ಕಲಾಪಕ್ಕೆ ತಡೆಯಾದ ಹಿನ್ನೆಲೆ, ಸಭಾಪತಿಗಳು ಕಲಾಪವನ್ನು 10ನಿಮಿಷ ಮುಂದೂಡಿದರು.

ವಿಧಾನಮಂಡಲ ಅಧಿವೇಶನ ಇಂದೇ ಕೊನೆಗೊಳ್ಳಲಿದ್ದು, ಶತಾಯಗತಾಯ ವಿಧೇಯಕ ಅನುಮೋದನೆ ಪಡೆಯಲು ಆಡಳಿತ ಪಕ್ಷ ಹಾಗೂ ಸಾಧ್ಯವಾದಷ್ಟು ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷಗಳು ಸಭಾಪತಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಹಿನ್ನೆಲೆ ಕಲಾಪ ಆರಂಭವಾದ ತಕ್ಷಣ ವಿಧೇಯಕ ಮಂಡನೆಗೆ ಅವಕಾಶ ಸಿಗುವುದಾ ಅಥವಾ ಚರ್ಚೆಗೆ ಅವಕಾಶ ಸಿಗುವುದಾ ಎಂಬ ಕುತೂಹಲ ಮೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.