ETV Bharat / state

ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರದ ವಿರುದ್ಧ ಆಗಸ್ಟ್ 23ಕ್ಕೆ ಬಿಜೆಪಿ ಪ್ರತಿಭಟನೆ: ಬಿ.ಎಸ್.ಯಡಿಯೂರಪ್ಪ

author img

By

Published : Aug 18, 2023, 10:46 PM IST

ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವ ದೃಷ್ಟಿಯಿಂದ ಆಗಸ್ಟ್ 23ರಂದು ಹೋರಾಟ ಮಾಡುತ್ತಿದ್ದೇವೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

bs-yediyurappa-calls-protest-against-congress-government-on-august-23
ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರದ ವಿರುದ್ಧ ಆಗಸ್ಟ್ 23ಕ್ಕೆ ಬಿಜೆಪಿಯಿಂದ ಪ್ರತಿಭಟನೆ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: "ಈ ಸರ್ಕಾರ ಪಾಪರ್ ಆಗಿದೆ, ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ, ಭ್ರಷ್ಟಾಚಾರ, ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಅಭಿವೃದ್ಧಿ ಕಾರ್ಯ ಸ್ಥಗಿತಗೊಳಿಸಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರದ ವಿರುದ್ಧ ಆಗಸ್ಟ್ 23 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಸರ್ಕಾರ ನಮ್ಮ ಪ್ರತಿಭಟನೆಗೆ ಮಣಿಯದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ" ಎಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿಂದು ಶಾಸಕರ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಬಗ್ಗೆ ಇಂದಿನ ಬೆಂಗಳೂರು ಶಾಸಕರ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚೆ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಈ ತಿಂಗಳ 23ರಂದು ಬುಧವಾರ ಐದಾರು ಸಾವಿರ ಜನ ಸೇರಿಸಿ ಈ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವ ದೃಷ್ಟಿಯಿಂದ ಹೋರಾಟವನ್ನು ಮಾಡುತ್ತಿದ್ದೇವೆ. ಪ್ರತಿನಿತ್ಯ ವರ್ಗಾವಣೆ ದಂಧೆ ನಡೆಯುತ್ತಿದೆ, ಅಧಿಕಾರಿಗಳಿಂದ ಪ್ರತಿ ತಿಂಗಳು ಇಷ್ಟು ಹಣ ಕೊಡಬೇಕು ಎಂದು ವಸೂಲಿ ಮಾಡುವ ಕೆಲಸ ನಡೆಯುತ್ತಿದೆ" ಎಂದು ಆರೋಪಿಸಿದರು.

"ಸರ್ಕಾರ ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿದೆ. ಸಾಮಾಜಿಕ ಜಾಲತಾಣ ಕಾರ್ಯಕರ್ತರಿಗೆ ಹೆದರಿಸುತ್ತಿದ್ದಾರೆ, ಮಾಧ್ಯಮದವರಿಗೂ ಕಿರುಕುಳ ಕೊಡುವ ಕೆಲಸ ನಡೆಯುತ್ತಿದೆ. ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ತಮಗಿಷ್ಟ ಬಂದಂತೆ ಬೆಂಗಳೂರಿನ ವಾರ್ಡ್‌ಗಳನ್ನು ಕೂಡ ಹಂಚಿಕೆ ಮಾಡುತ್ತಿದ್ದಾರೆ, ಇದೆಲ್ಲವನ್ನೂ ಖಂಡಿಸಿ ನಾವು ಹೋರಾಟ ಮಾಡಲಿದ್ದೇವೆ" ಎಂದರು.

"ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣವಾಗಿ ನಿಂತಿದೆ. ಕೆಲ ಶಾಸಕರು ಕಾಡಿಬೇಡಿ ಅನುದಾನ ಪಡೆದುಕೊಳ್ಳುವ ಭರವಸೆ ಪಡೆದಿದ್ದಾರೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಒಂದು ರೀತಿಯಲ್ಲಿ ಈ ಸರ್ಕಾರ ಪಾಪರ್ ಆಗಿದೆ. ರಾಜ್ಯದ ಯಾವುದಾದರೂ ಒಂದು ತಾಲೂಕಿನಲ್ಲಿ ಒಂದು ಕಿಮೀ ರಸ್ತೆ ಕೆಲಸ ನಡೆಯುತ್ತಿದೆ ಎಂದು ತೋರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ಗೆ ಸವಾಲೆಸೆದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಅಭಿವೃದ್ಧಿ ಕಾರ್ಯ ನಿಂತಿದೆ. ಸರ್ಕಾರ ಖಜಾನೆಯನ್ನು ಲೂಟಿ ಮಾಡುವ ಕೆಲಸದಲ್ಲಿ ನಿರವತವಾಗಿದೆ ಇದರ ವಿರುದ್ಧ ದೊಡ್ಡ ಹೋರಾಟ ಮಾಡುತ್ತಿದ್ದೇವೆ" ಎಂದು ಹೇಳಿದರು.

ಹೊಸ ಸರ್ಕಾರ ಎಂದು ಸ್ವಲ್ಪ ಸಮಯ ಕೊಟ್ಟು ಶಾಂತವಾಗಿದ್ದೆವು, ಆದರೆ ಭ್ರಷ್ಟಾಚಾರ ವರ್ಗಾವಣೆ ದಂಧೆ ಹಿನ್ನೆಲೆಯಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಹಾಗಾಗಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಕೈಗೊಳ್ಳುತ್ತೇವೆ, ಪ್ರತಿಪಕ್ಷಗಳು ಇವೆ ಎನ್ನುವ ಭಯವೂ ಇಲ್ಲದೆ ಹಗಲು ದರೋಡೆ ಮಾಡುತ್ತಿರುವ ಈ ಸರ್ಕಾರದ ವಿರುದ್ಧ ಹೋರಾಟ ಮಾಡಲು ತೀರ್ಮಾನ ಮಾಡಿದ್ದೇವೆ. ಬಹಳ ಸವಿಸ್ತಾರವಾಗಿ ಚರ್ಚೆ ಮಾಡಿದ್ದೇವೆ. ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸಿ ಹೋರಾಟ ಪ್ರಾರಂಭಿಸುತ್ತೇವೆ. ನಮ್ಮ ಈ ಹೋರಾಟಕ್ಕೆ ಸರ್ಕಾರ ಎಚ್ಚರ ವಹಿಸದಿದ್ದರೆ ಮುಂದಿನ ಹೋರಾಟ ಯಾವ ರೀತಿ ನಡೆಸಬೇಕು ಎಂದು ಚರ್ಚಿಸಿ ರಾಜ್ಯಾದ್ಯಂತ ಹೋರಾಟ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: 2ಎ ಮೀಸಲಾತಿ ಕೊಟ್ಟು ಸರ್ಕಾರ ಪಂಚಮಸಾಲಿ ಸಮಾಜದ ಋಣ ತೀರಿಸಲಿ: ಬಸವಜಯ ಮೃತ್ಯುಂಜಯ ಶ್ರೀ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.