ETV Bharat / state

ಕಡೇ ಚುನಾವಣೆ, ಕಣ್ಣೀರು ರಾಜಕಾರಣ ಮಾಡುತ್ತಾರೆ : ದಳಪತಿಗಳ ಕುರಿತು ಬಿ ಎಲ್ ಸಂತೋಷ್ ವ್ಯಂಗ್ಯ

author img

By

Published : Dec 18, 2022, 5:35 PM IST

Updated : Dec 18, 2022, 6:20 PM IST

bl-santhosh-sarcasm-against-jds-leaders
ಕಡೆ ಚುನಾವಣೆ, ಕಣ್ಣೀರು ರಾಜಕಾರಣ ಮಾಡುತ್ತಾರೆ : ದಳಪತಿಗಳ ವಿರುದ್ಧ ಬಿ.ಎಲ್ ಸಂತೋಷ್ ವ್ಯಂಗ್ಯ

ಅರಮನೆ ಮೈದಾನದಲ್ಲಿ ಪ್ರಕೋಷ್ಠಗಳ ರಾಜ್ಯ ಸಮಾವೇಶದಲ್ಲಿ ಮಾತನಾಡಿದ ಬಿ. ಎಲ್​ ಸಂತೋಷ್​ ಜೆಡಿಎಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ಪ್ರತಿ ಬಾರಿಯೂ ಇದೇ ನನ್ನ ಕಡೇ ಚುನಾವಣೆ ಅಂತಾ ಜನರ ಮುಂದೆ ಬರುತ್ತಾರೆ, ಮತ್ತೊಬ್ಬರು ಕಣ್ಣೀರು ಹಾಕುತ್ತಾರೆ, ಅವರು ಯಾಕೆ ಕಣ್ಣೀರು ಹಾಕುತ್ತಾರೋ, ಯಾಕೆ ಕಡೆ ಚುನಾವಣೆ ಅನ್ನುತ್ತಾರೋ ಗೊತ್ತಿಲ್ಲ ಎಂದು ಜೆಡಿಎಸ್ ನಾಯಕರ ಕುರಿತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್​ ಸಂತೋಷ್ ವ್ಯಂಗ್ಯವಾಡಿದ್ದಾರೆ.

ಅರಮನೆ ಮೈದಾನದಲ್ಲಿ ಪ್ರಕೋಷ್ಠಗಳ ರಾಜ್ಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆ ಇದೆ. ರಾಜ್ಯದಲ್ಲಿ ಕೆಲವು ರಾಜಕೀಯ ಮುಖಂಡರು ಬೀದಿಗೆ ಬಂದರು ಅಂದರೆ ಚುನಾವಣೆ ಬಂತು ಎಂದೇ ಅರ್ಥ. ಪ್ರತಿ ಬಾರಿಯೂ ಕಡೇ ಚುನಾವಣೆ ಅಂತಾ ಕಣ್ಣೀರು ಹಾಕುತ್ತಾರೆ.

ಅವರು ಯಾಕೆ ಕಣ್ಣೀರು ಹಾಕುತ್ತಾರೋ ಗೊತ್ತಿಲ್ಲ, ನಾವು ಒಳ್ಳೆಯ ಆಡಳಿತ ಕೊಟ್ಟಿದ್ದೇವೆ, ಅದಕ್ಕಾಗಿ ಆನಂದವಾಗಿದ್ದೇವೆ, ಅಪ್ಪ ಮಗನಿಗೆ, ಮಗ ಹೆಂಡತಿಗೆ, ಹೆಂಡತಿ ಇನ್ನೊಬ್ಬ ಮಗನಿಗೆ ತ್ಯಾಗ ಮಾಡುತ್ತಾರೆ. ಚುನಾವಣೆ ಬಂದಾಗ ಅವರಿಗೆ ಅವರ ತಾತ ನೆನಪಾಗುತ್ತಾರೋ ಗೊತ್ತಿಲ್ಲ, ಟಿಪ್ಪು ತಾತ ನೆನಪಾಗುತ್ತಾರೆ ಎಂದು ವ್ಯಂಗ್ಯವಾಡಿದರು.

ಅವರದ್ದು ಕೊಳಕು ರಾಜಕಾರಣ: ಸಿ ಟಿ ರವಿಗೆ ಕಾಂಗ್ರೆಸ್​ನ ಒಬ್ಬ ನಾಯಕ ಬೂತ್, ಮೋರ್ಚಾ ಮಾಡುತ್ತಿದ್ದೀರಂತೆ ನಾವೂ ಮಾಡುತ್ತೇವೆ ಹೇಳಿ ಅಂತ ಕೇಳಿದ್ದರಂತೆ ಆ ನಾಯಕನಿಗೆ ಈಗ ಸಿ ಟಿ ರವಿ ಉಗಿದು ಉಪ್ಪು ಖಾರ ಹಾಕಿದ್ದಾರೆ. ನಾವು ಕುಕ್ಕರ್ ಬ್ಲಾಸ್ಟ್ ಬಗ್ಗೆ ಡಿಜಿಪಿ ಯಾಕೆ ಟ್ವೀಟ್ ಮಾಡಿದರು ಅಂತ ಅವರ ಹಾಗೆ ಕೇಳಲ್ಲ, ಅವರದ್ದು ಕೊಳಕು ರಾಜಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಹೆಸರೇಳದೇ ಬಿ ಎಲ್ ಸಂತೋಷ್ ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರ ಇದ್ದಿದಕ್ಕೆ ದತ್ತಪೀಠ ವಿವಾದ ತಾರ್ಕಿಕ ಅಂತ್ಯ ಕಂಡಿದೆ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ ಸರ್ಕಾರ, ನಮ್ಮದು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ನೀತಿ ಎಂದರು.

ಚುನಾವಣೆ ನಂತರ ಸಿದ್ದರಾಮಯ್ಯ ನಿರುದ್ಯೋಗಿ: ಬಿಜೆಪಿಯ ವಿಚಾರಧಾರೆಗಳಿಗೆ ಯಾವತ್ತೂ ಸಾವು ಇಲ್ಲ. ಓಲೈಕೆ ರಾಜಕಾರಣ ಮಾಡುವವರಿಗೆ ರಾಷ್ಟ್ರೀಯ ಪರಿಕಲ್ಪನೆಗಳಿಲ್ಲ, ಲೋಕಸಭೆಯಲ್ಲಿ ಪ್ರತಿಪಕ್ಷ ಆಗುವುದಕ್ಕೂ ಕಾಂಗ್ರೆಸ್ ನಾಲಾಯಕ್ ಆಗಿದೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಣ್ಣ ನಿರುದ್ಯೋಗಿಯಾಗುತ್ತಾರೆ. ಕಾಂಗ್ರೆಸ್ ಅವಧಿಯಲ್ಲಿ ಕಸಬ್​ಗೆ ಜೈಲಿನಲ್ಲಿ ಅತಿಥಿ ಸತ್ಕಾರ ಮಾಡಿದರು. ಭಯೋತ್ಪಾದಕರ ಪರವಾಗಿ ಕಾಂಗ್ರೆಸ್​ ವಾದ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪಿಸಿದರು.

ಕಾಂಗ್ರೆಸ್ ಭಯೋತ್ಪಾದಕರ ಪಾರ್ಟಿ: ಡಿಜೆ ಹಳ್ಳಿ, ಕೆಜೆ ಹಳ್ಳಿ ಘಟನೆ, ಕುಕ್ಕರ್ ಬಾಂಬ್, ಹುಬ್ಬಳ್ಳಿ ಗಲಭೆಕೋರರ ಪರವಾಗಿ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ ಕಾಂಗ್ರೆಸ್ ಭಯೋತ್ಪಾದಕರ ಪಾರ್ಟಿ ಆಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಯೋತ್ಪಾದಕ ಚಟುವಟಿಕೆ ಎಷ್ಟಾಗಬಹುದು ಯೋಚನೆ ಮಾಡಿ?.

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್​ರವರೇ ನಿಮಗೆ ತಾಕತ್ ಇದ್ದರೆ ಹೇಳಿ ಮುಂದಿನ ಚುನಾವಣೆಗೆ ನಮಗೆ ಹಿಂದುಗಳ ಮತ ಬೇಡ ಎಂದು ಹೇಳಿ, ನಿಮ್ಮ ತಾಕತ್ ತೋರಿಸಿ. ಪ್ರತಿ ಹಿಂದೂ ವಿಚಾರಧಾರೆಯಲ್ಲಿ ನೀವು ಅಡ್ಡ ಬರುತ್ತಿದ್ದೀರಿ. ಅತೀ ಹೆಚ್ಚು ಹಗರಣಗಳು ಕಾಂಗ್ರೆಸ್ ಕಾಲದಲ್ಲಿ ನಡೆದವು. ಡಿ.ಕೆ. ಶಿವಕುಮಾರ್ ಕರ್ನಾಟಕ ಇತಿಹಾಸ ಬರೆಯಲು ತಿಹಾರ್ ಜೈಲಿಗೆ ಹೋಗಿದ್ರಾ? ಜೈಲಿಗೆ ಹೋಗುವಾಗಲೂ ಮೆರವಣಿಗೆ, ಬರುವಾಗಲೂ ಮೆರವಣಿಗೆ.. ಭ್ರಷ್ಟಾಚಾರ ಮುಚ್ಚಿ ಹಾಕುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮ ಎಂದು ಬಿ ಎಲ್​ ಸಂತೋಷ್​ ಟೀಕಾಪ್ರಹಾರ ನಡೆಸಿದರು.

ಕಾಂಗ್ರೆಸ್ ವಿರುದ್ಧ ಸಿ ಟಿ ರವಿ ವಾಗ್ದಾಳಿ: ಬಿಜೆಪಿ ಮಾಡಿದ್ದು ಜಾತಿವಾದದ ರಾಜಕಾರಣ ಅಲ್ಲ. ಹಿಂದುತ್ವದ, ವಿಕಾಸದ ರಾಜಕಾರಣ. ನಮ್ಮ ತಾಕತ್ ಇರೋದೇ ಹಿಂದುತ್ವ, ಅಭಿವೃದ್ಧಿ ರಾಜಕಾರಣದಲ್ಲಿ. ಮನೆ ಒಡೆಯುವ ಜಾತಿ ರಾಜಕಾರಣ ನಮ್ಮದಲ್ಲ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿ. ಸಿದ್ದರಾಮಯ್ಯ ಅಂತ ಅವರ ತಂದೆ ಹೆಸರಿಟ್ಟರು. ಆದರೆ ಜನ ಅವರಿಗೆ ಇಟ್ಟ ಹೆಸರು ಸಿದ್ರಾಮುಲ್ಲಾ ಖಾನ್, ಸಿದ್ರಾಮುಲ್ಲಾ ಖಾನ್ ಅನ್ನೋದು ನಾನು ಇಟ್ಟ ಹೆಸರಲ್ಲ, ರಾಜ್ಯದ ಜನ ಇಟ್ಟ ಹೆಸರು ಅದು ಎಂದು ಸಿದ್ದರಾಮಯ್ಯಗೆ ಸಿ ಟಿ ರವಿ ಟಾಂಗ್ ಕೊಟ್ಟರು.

ಕುಕ್ಕರ್​ ಮೇಲೆ ಪ್ರೀತಿ: ಡಿಜೆ ಹಳ್ಳಿ ಕೆಜಿ ಹಳ್ಳಿ ಆರೋಪಗಳಿಗೆ ಡಿಕೆಶಿ ‘‘ದೆ ಆರ್ ಮೈ ಬ್ರದರ್ಸ್’’ ಅಂದರು. ಕುಕ್ಕರ್ ಮೇಲೆ ಡಿಕೆಶಿ ಅಣ್ಣನಿಗೆ ಪ್ರೀತಿ ಬಂದಿದೆ. ಕುಕ್ಕರ್ ಅನ್ನು ಬಿರಿಯಾನಿ ಮಾಡೋಕ್ಕೆ ತಗೊಂಡ್ ಹೋಗ್ತಿರ್ಲಿಲ್ಲ, ಮನೆಹಾಳು ರಾಜಕಾರಣ ಮಾಡಿದ್ದು ಕಾಂಗ್ರೆಸ್, ಜಾತಿ ರಾಜಕಾರಣ ಮಾಡಿದ್ದು ಕಾಂಗ್ರೆಸ್, ಕುಂಕುಮ ಕಂಡ್ರೆ ಭಯ ಅಂದ್ರು ಸಿದ್ದರಾಮಯ್ಯ, ಕೇಸರಿ ಕಂಡ್ರೆ ಭಯ ಅಂದರು, ಶುದ್ಧ ಹಿಂದೂ ಈ ತರ ಯಾವತ್ತೂ ನೀಚ ಕೆಲಸ ಮಾಡಲ್ಲ. ನಾವು ಆವತ್ತೂ ಕೇಸರಿ, ಇವತ್ತೂ ಕೇಸರಿ ಎಂದು ವಾಗ್ದಾಳಿ ನಡೆಸಿದರು.

ಸಿ ಟಿ ರವಿಗೆ ಬಿಜೆಪಿ ಕಾರ್ಯಕರ್ತರಿಂದಲೇ ಕೌಂಟರ್: ಭಾಷಣಕ್ಕೂ ಮುನ್ನ ಕಾರ್ಯಕರ್ತರಿಂದ ಮೋದಿಯವರಿಗೆ ಸಿ ಟಿ ರವಿ ಜೈಕಾರ ಹಾಕಿಸಿದರು. ಮೋದಿಗೆ ಮಾತ್ರ ಜೈಕಾರ ಹಾಕಿಸಿ ಭಾಷಣ ಮುಂದುವರೆಸಲು ಮುಂದಾದರು. ರಾಜ್ಯ ಬಿಜೆಪಿ ಅಗ್ರಗಣ್ಯ ನಾಯಕ ಯಡಿಯೂರಪ್ಪಗೆ ಜೈಕಾರ ಹಾಕಿಸದೇ ಭಾಷಣ ಮುಂದುವರೆಸಿದರು.

ಈ ವೇಳೆ ಯಡಿಯೂರಪ್ಪಗೆ ಜೈ ಅಂದ ಕಾರ್ಯಕರ್ತರು, ಸ್ವತ: ತಾವೇ ಯಡಿಯೂರಪ್ಪಗೆ ಜೈಕಾರ ಹಾಕಿದರು. ಆ ಮೂಲಕ ಯಡಿಯೂರಪ್ಪಗೆ ಜೈಕಾರ ಹಾಕಿಸದ ಸಿ ಟಿ ರವಿಗೆ ಕಾರ್ತಕರ್ತರೇ ಟಕ್ಕರ್ ನೀಡಿದರು. ಕಾರ್ಯಕರ್ತರ ಟಕ್ಕರ್​ಗೆ ಪೆಚ್ಚಾಗಿ ನಗುತ್ತ ಸುಮ್ಮನಾದ ಸಿ ಟಿ ರವಿ ಬಳಿಕ ಯಡಿಯೂರಪ್ಪಗೆ ಸ್ವಾಗತ ಕೋರಿ ಭಾಷಣ ಮುಂದುವರೆಸಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಇಂದು ಕಾಂಗ್ರೆಸ್ ಚುನಾವಣಾ ಸಮಿತಿಯ ಮೊದಲ ಸಭೆ.. ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ

Last Updated :Dec 18, 2022, 6:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.