ETV Bharat / state

ಶೆಟ್ಟರ್ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ..!

author img

By

Published : Apr 17, 2023, 4:58 PM IST

ನಾಳೆ ಹುಬ್ಬಳ್ಳಿ ಧಾರವಾಡಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮಿಸಲಿದ್ದಾರೆ.

bjp
ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಜಗದೀಶ್​ ಶೆಟ್ಟರ್​

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿನಿಧಿಸುವ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಎರಡು ದಿನ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ಕಾರ್ಯತಂತ್ರ ರೂಪಿಸಲಿದ್ದಾರೆ. ಶೆಟ್ಟರ್ ಫ್ಯಾಕ್ಟರ್ ಬಿಜೆಪಿ ಮೇಲಾಗದಂತೆ ತಂತ್ರಗಾರಿಕೆ ರೂಪಿಸಲಿದ್ದಾರೆ.

ಮಧ್ಯ ಕರ್ನಾಟಕದ ಲಿಂಗಾಯತ ಸಮುದಾಯದ ಪ್ರಮುಖ ನಾಯಕ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದ ನಂತರ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಪರ್ಯಾಯ ನಾಯಕತ್ವ ಹುಟ್ಟುಹಾಕಲು ಬಿಜೆಪಿ ಹೈಕಮಾಂಡ್ ಮುಂದಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಕ್ಷೇತ್ರಕ್ಕೆ ಕಳುಹಿಸಿಕೊಡುತ್ತಿದೆ. ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಲಿರುವ ನಡ್ಡಾ ಬಿಜೆಪಿ ಪರ ಅಲೆ ಎಬ್ಬಿಸಲಿದ್ದಾರೆ. ಶೆಟ್ಟರ್ ಫ್ಯಾಕ್ಟರ್​​​ಗೆ ಕೌಂಟರ್ ನೀಡಲು ಮಾಸ್ಟರ್ ಪ್ಲಾನ್ ರೂಪಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಶೆಟ್ಟರ್ ಕ್ಷಮೆ ಕೇಳಿ ತತ್ವ ಸಿದ್ಧಾಂತ ಉಳಿಸಿದ ಪಕ್ಷಕ್ಕೆ ವಾಪಸ್ ಬರಬೇಕು: ಈಶ್ವರಪ್ಪ

ನಾಳೆ ಸಂಜೆ ಹುಬ್ಬಳ್ಳಿಗೆ ಆಗಮಿಸಲಿರುವ ನಡ್ಡಾ ಹುಬ್ಬಳ್ಳಿಯ ಬಿಯುಬಿ ಕಾಲೇಜಿನಲ್ಲಿ ಪ್ರಬುದ್ಧರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಹುಬ್ಬಳ್ಳಿಯಲ್ಲಿ ಧಾರವಾಡ ವಿಭಾಗದ ಬಿಜೆಪಿ ಶಕ್ತಿ ಕೇಂದ್ರದಲ್ಲಿ ಪ್ರಮುಖರ ಸಭೆ ನಡೆಸಲಿದ್ದಾರೆ. 800 ಪ್ರಮುಖರಿಗೆ ನಾಳೆ ಸಂಜೆಯ ಸಭೆಗೆ ಆಹ್ವಾನ ನೀಡಿದ್ದು, ಕ್ಷೇತ್ರದ ಚುನಾವಣಾ ಸಿದ್ದತೆ ಕುರಿತು ಮಹತ್ವದ ಸಭೆ ನಡೆಸಲಿದ್ದಾರೆ. ಕ್ಷೇತ್ರದಲ್ಲಿ ಬೂತ್ ಮಟ್ಟದಿಂದ ಎಲ್ಲಿಯೂ ಕಾರ್ಯಕರ್ತರಲ್ಲಿ ಗೊಂದಲವಾಗದಂತೆ ನೋಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಪ್ರಮುಖರಿಗೆ ಕೆಲ ಸಲಹೆ ಸೂಚನೆ ನೀಡಲಿದ್ದಾರೆ.

ಇದನ್ನೂ ಓದಿ: ವರುಣ ಕ್ಷೇತ್ರದಿಂದ ವಿ.ಸೋಮಣ್ಣ ನಾಮಪತ್ರ ಸಲ್ಲಿಕೆ: ಸಿಎಂ ಬೊಮ್ಮಾಯಿ, ಸಂಸದ ಪ್ರತಾಪ್ ಸಿಂಹ ಉಪಸ್ಥಿತಿ

ಯಾವ ರೀತಿ ಚುನಾವಣೆ ಎದುರಿಸಬೇಕು, ನಮ್ಮ ಕಾರ್ಯತಂತ್ರವೇನು ಎನ್ನುವ ಕುರಿತು ವಿವರಿಸಲಿದ್ದಾರೆ. ಈವರೆಗೂ ಪಕ್ಷದ ಅಭ್ಯರ್ಥಿಯಾಗಿದ್ದ ಶೆಟ್ಟರ್ ಈಗ ಮೊದಲ ಬಾರಿ ಬಿಜೆಪಿಗೆ ಎದುರಾಳಿಯಾಗಿರುವ ಹಿನ್ನೆಲೆಯಲ್ಲಿ ಕೆಲವೊಂದು ಹೊಸ ತಂತ್ರಗಾರಿಕೆಯನ್ನು ಅಳವಡಿಸಿಕೊಂಡು ಚುನಾವಣೆಗೆ ಸಿದ್ದತೆ ನಡೆಸುವ ಕುರಿತು ನಡ್ಡಾ ಸಲಹೆ ನೀಡಿಲಿದ್ದಾರೆ. ನಂತರ ಹುಬ್ಬಳ್ಳಿಯಲ್ಲಿಯೂ ನಾಳೆ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

ರಾಜ್ಯ ನಾಯಕರ ಜೊತೆ ಮಹತ್ವದ ಸಭೆ: ಬುಧವಾರ ಬೆಳಗ್ಗೆ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ನಡ್ಡಾ ಭೇಟಿ ನೀಡಲಿದ್ದು, ಬಳಿಕ ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ‌ ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಹುಬ್ಬಳ್ಳಿಯಿಂದ ದೆಹಲಿಗೆ ವಾಪಸ್ ಆಗಲಿದ್ದಾರೆ. ರಾಜ್ಯದಲ್ಲಿರುವ ಎರಡು ದಿನಗಳ ಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ರಾಜ್ಯ ನಾಯಕರ ಜೊತೆ ಮಹತ್ವದ ಸಭೆ ನಡೆಸಲಿದ್ದು, ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯದ ನಂತರ ಆರಂಭವಾಗಬೇಕಿರುವ ರಾಷ್ಟ್ರೀಯ ನಾಯಕರ ಪ್ರವಾಸ ಕಾರ್ಯಕ್ರಮಗಳ ಕುರಿತು ಚರ್ಚಿಸಲಿದ್ದಾರೆ.

ಇದನ್ನೂ ಓದಿ: ರಾಯಚೂರಿನಲ್ಲಿ ಬಿಜೆಪಿ ಸಮಾವೇಶ: ರಾಹುಲ್​ ಗಾಂಧಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.