ETV Bharat / state

'ಉಪರಾಷ್ಟ್ರಪತಿ ಅವಮಾನಿಸಿದ ವಿಪಕ್ಷಗಳಿಗೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ'

author img

By ETV Bharat Karnataka Team

Published : Dec 20, 2023, 6:37 PM IST

bjp-leader-kuljeet-singh-chahal-slams-congress
ಉಪ ರಾಷ್ಟ್ರಪತಿಗಳಿಗೆ ಅವಮಾನ ಮಾಡಿದ ವಿಪಕ್ಷಗಳಿಗೆ ತಕ್ಕ ಪಾಠ : ಕುಲ್‍ಜೀತ್ ಸಿಂಗ್ ಚಾಹಲ್

ಉಪರಾಷ್ಟ್ರಪತಿಗಳಿಗೆ ಅವಮಾನ ಮಾಡಿದ ವಿಪಕ್ಷಗಳಿಗೆ ಮುಂದಿನ ಲೋಕಸಭೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ದೆಹಲಿ ಪ್ರಧಾನ ಕಾರ್ಯದರ್ಶಿ ಕುಲ್‍ಜೀತ್ ಸಿಂಗ್ ಚಾಹಲ್ ಹೇಳಿದ್ದಾರೆ.

ಉಪ ರಾಷ್ಟ್ರಪತಿಗಳಿಗೆ ಅವಮಾನ ಮಾಡಿದ ವಿಪಕ್ಷಗಳಿಗೆ ತಕ್ಕ ಪಾಠ : ಕುಲ್‍ಜೀತ್ ಸಿಂಗ್ ಚಾಹಲ್

ಬೆಂಗಳೂರು: ಉಪ ರಾಷ್ಟ್ರಪತಿಗಳಿಗೆ ಅವಮಾನ ಮಾಡಿದ ವಿಪಕ್ಷಗಳಿಗೆ ಜನತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಲ್‍ಜೀತ್ ಸಿಂಗ್ ಚಾಹಲ್ ಹೇಳಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷಗಳ ಕ್ರಮವು ಎಲ್ಲ ರೈತ ಸಮುದಾಯ, ಒಬಿಸಿ ಸಮುದಾಯಕ್ಕೆ ಬೇಸರ ತಂದಿದೆ. ನಾನೂ ಒಬಿಸಿ ಸಮುದಾಯಕ್ಕೆ ಸೇರಿದವನು. ಸಂಸದರು ತಮ್ಮ ಸ್ಥಾನಕ್ಕೆ ತಕ್ಕುದಾಗಿ ವರ್ತಿಸುತ್ತಿಲ್ಲ ಎಂದು ಹೇಳಿದರು.

ಅಧಿಕಾರ ಕಳಕೊಂಡಾಗ ಅವರು ಹತಾಶರಾಗಿ ವರ್ತಿಸುತ್ತಾರೆ. ರಾಹುಲ್ ಗಾಂಧಿಯವರು ಉಪ ರಾಷ್ಟ್ರಪತಿಗಳ ಅಣಕವನ್ನು ವಿಡಿಯೋ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕನಂತೆ, ಸಂಸದನಂತೆ ಅವರ ವರ್ತನೆ ಇಲ್ಲ ಎಂದು ಟೀಕಿಸಿದರು.

ರೈತ ಸಮುದಾಯ ಮತ್ತು ಒಬಿಸಿ ಸಮುದಾಯದ ನಾಯಕ, ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಹೀಗೆ ಸದನದ ಒಳಗೆ ಮತ್ತು ಹೊರಗೆ ಅವಮಾನಿಸುವುದು ಸರಿಯಲ್ಲ. ವಿಪಕ್ಷಗಳ ಈ ವರ್ತನೆ ಶೋಭೆ ತರುವಂತಿಲ್ಲ. ಅದನ್ನು ತೀವ್ರವಾಗಿ ಖಂಡಿಸುತ್ತೇನೆ. ದೆಹಲಿಯಲ್ಲಿ ಮುಂಗೇರಿಲಾಲ್ ಕಿ ಹಸೀನ್ ಸಪ್ನೇ ಎಂಬ ಮಾತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಮಾಡುವ ಕನಸು ಕಾಣುವ ಮೊದಲು ಕಾಂಗ್ರೆಸ್ ಪಕ್ಷವು ಸಂಸದರ ಕುರಿತು ಅಗತ್ಯವಾಗಿ ಚಿಂತಿಸಬೇಕಿದೆ. ಕಾಂಗ್ರೆಸ್​ ಈಗ ಅತ್ಯಂತ ಕಡಿಮೆ ಸಂಸದರನ್ನು ಹೊಂದಿದೆ. ಇದು ಕೇವಲ ಹಗಲುಗನಸಷ್ಟೇ ಎಂದು ಅವರು ತಿಳಿಸಿದರು.

ಉತ್ತರದ ದೊಡ್ಡ 3 ರಾಜ್ಯಗಳ ಚುನಾವಣಾ ಫಲಿತಾಂಶವು ಮೋದಿ ಗ್ಯಾರಂಟಿಯ ಪರವಾಗಿದೆ. ಬಿಜೆಪಿ 2019ಕ್ಕಿಂತ ಹೆಚ್ಚು ಸ್ಥಾನಗಳೊಂದಿಗೆ 2024ರಲ್ಲಿ ಅಧಿಕಾರಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಆಪ್ ಪಕ್ಷದ ಮುಖಂಡರು ಕಡು ಭ್ರಷ್ಟಾಚಾರಿಗಳು ಎಂಬುದು ಸ್ಪಷ್ಟವಾಗಿದೆ. ಲಿಕ್ಕರ್ ಸ್ಕ್ಯಾಮ್‍ನಡಿ ದೆಹಲಿಯ ಕೇಜ್ರಿವಾಲ್ ಸಂಪುಟದ ಇಬ್ಬರು ಸಚಿವರು ಮತ್ತು ಒಬ್ಬ ಸಂಸದ ಈಗಾಗಲೇ ಜೈಲಿನಲ್ಲಿದ್ದು, ಅವರಿಗೆ ಜಾಮೀನೂ ಸಿಗುತ್ತಿಲ್ಲ. ಕೇಜ್ರಿವಾಲ್ ಸರದಿ ಇನ್ನು ಬರಲಿದೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್​ ಭರ್ಜರಿ ತಯಾರಿ ನಡೆಸುತ್ತಿದೆ. ವಿಪಕ್ಷಗಳ ಒಕ್ಕೂಟ ಇಂಡಿಯಾ ಮೈತ್ರಿಕೂಟದ ನಾಲ್ಕನೇ ನಿರ್ಣಾಯಕ ಸಭೆ ದೆಹಲಿಯಲ್ಲಿ ನಡೆದಿದೆ. ಲೋಕಸಭೆ ಚುನಾವಣೆ ಸಂಬಂಧ ಕೈಗೊಳ್ಳಬೇಕಾದ ವಿವಿಧ ಕಾರ್ಯತಂತ್ರಗಳ ಬಗ್ಗೆ ಪಕ್ಷದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ಸಭೆಯ ಬಳಿಕ ಪ್ರಧಾನಿ ಹುದ್ದೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಕೇಳಿಬಂದಿದೆ.

ಇದನ್ನೂ ಓದಿ : ಕಾರಾಗೃಹದಲ್ಲಿ ಆರೋಪಿಗಳಿಗೆ ರಾಜಾತಿಥ್ಯ ಆರೋಪ: ವರದಿ ಸಲ್ಲಿಸುವಂತೆ ಪೊಲೀಸ್ ಆಯುಕ್ತರಿಗೆ ಪ್ರಿಯಾಂಕ್ ಖರ್ಗೆ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.