ETV Bharat / state

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೈವೇಯಲ್ಲಿ 120kmph ಸ್ಪೀಡ್​ನಲ್ಲಿ ಹೋಗುವ ಸವಾರರೇ ಎಚ್ಚರ! ಡ್ರೈವಿಂಗ್‌ ಲೈಸನ್ಸ್‌ ರದ್ದಾಗಬಹುದು!

author img

By

Published : Jul 6, 2023, 7:13 AM IST

Updated : Jul 6, 2023, 9:34 AM IST

ಬೆಂಗಳೂರು- ಮೈಸೂರು ದಶಪಥ ಎಕ್ಸ್​ಪ್ರೆಸ್ ಹೈವೇನಲ್ಲಿ ನಿಗದಿಗಿಂತ ಹೆಚ್ಚು ವೇಗವಾಗಿ ವಾಹನ ಚಲಾಯಿಸುವ ಚಾಲಕರ ಪರವಾನಗಿ ಅಮಾನತುಗೊಳಿಸುವಂತೆ ಆರ್​ಟಿಒಗೆ ಪೊಲೀಸ್ ಇಲಾಖೆ ಪತ್ರ ಬರೆಯಲು ನಿರ್ಧರಿಸಿದೆ.

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೈವೇ
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೈವೇ

ರಾಮನಗರ ಜಿಲ್ಲಾಧಿಕಾರಿ ಅವಿನಾಶ್​ ಮೆನನ್​ ಹೇಳಿಕೆ

ಬೆಂಗಳೂರು: ಬೆಂಗಳೂರು- ಮೈಸೂರು ಎಕ್ಸ್​ಪ್ರೆಸ್ ಹೈವೇಯಲ್ಲಿ ಹೆಚ್ಚಾಗುತ್ತಿರುವ ಅಪಘಾತ ಪ್ರಕರಣಗಳ ನಿಯಂತ್ರಣಕ್ಕಾಗಿ ವಾಹನಗಳು ನಿಗದಿಕ್ಕಿಂತ ಹೆಚ್ಚು ವೇಗವಾಗಿ ಚಲಿಸಿದರೆ ಸವಾರರಿಂದ ದಂಡ ಪಾವತಿಸಿಕೊಳ್ಳುತ್ತಿರುವ ರಾಜ್ಯ ಪೊಲೀಸ್ ಇಲಾಖೆ ಕೈಗೊಂಡಿದ್ದ ಕ್ರಮಕ್ಕೆ ಪರ- ವಿರೋಧ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ, ಪೊಲೀಸ್ ಇಲಾಖೆ, ವೇಗದ ಮಿತಿ 120(kmph)ಕ್ಕಿಂತ ಅತಿಯಾದ ವಾಹನ ಚಾಲನೆ ಕಂಡು ಬಂದರೆ ಅಂತಹ ವಾಹನ ಚಾಲಕರ ಪರವಾನಗಿ ಅಮಾನತುಗೊಳಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆಯಲು ನಿರ್ಧರಿಸಿದೆ.

ಪದೇ ಪದೇ ನಿಗದಿಗಿಂತ ಹೆಚ್ಚು ವೇಗವಾಗಿ ವಾಹನ ಚಲಾಯಿಸುತ್ತಿರುವುದು ಕಂಡುಬಂದರೆ ಅಂತಹ ವಾಹನ ಚಾಲಕರ ಪರವಾನಗಿ ಅಮಾನತುಗೊಳಿಸುವಂತೆ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ಪತ್ರ ಬರೆಯಲು ಪೊಲೀಸ್ ಇಲಾಖೆ ಮುಂದಾಗಿದೆ. ಸದ್ಯ ಗರಿಷ್ಠ ಮಿತಿಯೊಳಗೆ ವಾಹನ ಚಾಲನೆಯ ವೇಗ ಪತ್ತೆ ಹಚ್ಚಲು ರಾಮನಗರದಲ್ಲಿ ಮೂರು ಹಾಗೂ ಮಂಡ್ಯದಲ್ಲಿ ಇಂಟರ್‌ಸೆಪ್ಟರ್ ವಾಹನಗಳಿಗೆ ಸ್ಪೀಡ್ ರಾಡಾರ್​ ಗನ್ ಅಳವಡಿಸಲಾಗಿದೆ.

ಮುಂದಿನ 15 ದಿನಗಳಲ್ಲಿ ಇನ್ನೂ ಮೂರು ಇಂಟರ್‌ಸೆಪ್ಟರ್ ರಾಡಾರ್ ಗನ್ ನಿಯೋಜಿಸಲಿದೆ. ಕಳೆದ ಮಾರ್ಚ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ 117 ಕಿಲೋಮೀಟರ್ ಉದ್ದದ ಬೆಂಗಳೂರು- ಮೈಸೂರು ಎಕ್ಸ್​ಪ್ರೆಸ್​ನಲ್ಲಿ ಅಧಿಕವಾಗುತ್ತಿರುವ ಅಪಘಾತಗಳನ್ನು ತಡೆಯಲು ವೇಗದ ಮಿತಿ ಕಿಲೋಮೀಟರ್​ಗೆ 100ಕ್ಕೆ ಸೀಮಿತಗೊಳಿಸಿದೆ.

ವೇಗದ ಮಿತಿ ದಾಟಿದವರಿಗೆ ಕಳೆದ ಎರಡು ದಿನಗಳಲ್ಲಿ 1 ಸಾವಿರ ರೂ.ನಂತೆ 40 ಮಂದಿ ವಾಹನ ಸವಾರರಿಂದ ದಂಡ ಸಂಗ್ರಹಿಸಿರುವ ಪೊಲೀಸರ ನಡೆಗೆ ವಿರೋಧ ವ್ಯಕ್ತವಾಗುತ್ತಿದೆ. ಅಪಘಾತ ತಗ್ಗಿಸಲು ಹೈವೆಯ ಗುರುತಿಸಿದ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ವೇಗದ ಮಿತಿ ಕಡಿಮೆಗೊಳಿಸುವ ಕ್ರಮ ಸರಿಯಲ್ಲ. ಇದರಿಂದ ಆ್ಯಕ್ಸಿಡೆಂಟ್ ಕಡಿಮೆಯಾಗುವ ಬದಲು ಹೆಚ್ಚಾಗಲಿದ್ದು ಕೂಡಲೇ ಹಾಕಲಾಗಿರುವ ಬ್ಯಾರಿಕೇಡ್​ಗಳನ್ನು ತೆರವುಗೊಳಿಸಬೇಕು. ರಸ್ತೆ ಶಿಸ್ತುಪಥ ಉಲ್ಲಂಘನೆಗೆ ಕಡಿವಾಣ ಬೀಳಬೇಕು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ ಎಚ್ಎಐ) ಹೆದ್ದಾರಿ ಹಾಗೂ ಎಕ್ಸ್​ಪ್ರೆಸ್ ಹೈವೇಗಳಲ್ಲಿ ಕ್ರಮವಾಗಿ 100 ಹಾಗೂ 120 ಕಿಲೋಮೀಟರ್ ವೇಗದಲ್ಲಿ ಚಲಿಸಲು ಅನುಮತಿ ನೀಡಿದರೂ ವಿನಾಕಾರಣ ಪೊಲೀಸರು ದಂಡ ವಿಧಿಸುತ್ತಿರುವುದು ಸರಿಯಲ್ಲ ಎಂದು ಜನರು ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಪೊಲೀಸ್ ಇಲಾಖೆ ಕೈಗೊಂಡ ನಿರ್ಧಾರ ಸ್ವಾಗತಾರ್ಹ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಎಕ್ಸ್​ಪ್ರೆಸ್ ಹೈವೇಗಳಲ್ಲಿ ಗರಿಷ್ಠ ವೇಗದ ಮಿತಿ ಎಷ್ಟು?: ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಹೈವೇ ಎಕ್ಸ್​ಪ್ರೆಸ್ ಕಾರಿಡಾರ್ ಹಾಗೂ ಹೆದ್ದಾರಿಗಳಲ್ಲಿ ವಾಹನಗಳು ಎಷ್ಟು ವೇಗವಾಗಿ ಚಾಲನೆ ಮಾಡಬೇಕು ಎಂಬುದರ ಬಗ್ಗೆ 2018ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಇದರಂತೆ ಎಕ್ಸ್​ಪ್ರೆಸ್​ಗಳಲ್ಲಿ ಕಿಲೋಮಿಟರ್​ಗೆ ಗರಿಷ್ಠ 120 ಹಾಗು ಹೆದ್ದಾರಿಯಲ್ಲಿ ಗರಿಷ್ಠ 100 ವೇಗದ ಮಿತಿ ನಿಗದಿ ಮಾಡಿದ್ದರೂ ಪೊಲೀಸರು ಯಾಕೆ 80ಕ್ಕೆ ಸ್ಪೀಡ್ ಲಿಮಿಟ್​ಗೆ ಸೀಮಿತಗೊಳಿಸಿದೆ? ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

"ಹೆದ್ದಾರಿಗಳಲ್ಲಿ ವಾಹನ ವೇಗದ ಮಿತಿ ಬಗ್ಗೆ 2018ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಮದ್ರಾಸ್ ಹೈಕೋರ್ಟ್ 2021ರಲ್ಲಿ ವಜಾಗೊಳಿಸಿ ಹೈವೆಗಳಲ್ಲಿ ಗರಿಷ್ಠ ಮಿತಿ 80ಕ್ಕೆ ಇಳಿಸಿತ್ತು. ಸುಧಾರಿತ ರಸ್ತೆಯನ್ನು ಹೊಂದಿದ್ದರೂ ಅತಿವೇಗ ಚಾಲನೆಯಿಂದಾಗಿ ಅಪಘಾತ ಕಡಿಮೆಯಾಗುವುದಿಲ್ಲ ಎಂಬುದರ ಬಗ್ಗೆ ನ್ಯಾಯಮೂರ್ತಿ ಎನ್.ಕಿರುಬಕರನ್ ಹಾಗೂ ನ್ಯಾ.ಟಿ.ವಿ.ತಮಿಳು ಸೆಲ್ವಿ ಅವರಿದ್ದ ವಿಭಾಗೀಯ ಪೀಠ ಮನಗಂಡಿತ್ತು. ಈ ಬಗ್ಗೆ ರಸ್ತೆ ಸಾರಿಗೆ ಸಚಿವಾಲಯವು ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಅರ್ಜಿ ವಿಚಾರಣೆ ಹಂತದಲ್ಲಿದೆ. ನಿಯಮದಂತೆ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ವೇನಲ್ಲಿ ಗರಿಷ್ಠ ಮಿತಿ 80ಕ್ಕೆ ನಿಗದಿಪಡಿಸಲಾಗಿದೆ" ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಪೊಲೀಸರ ದಂಡಾಸ್ತ್ರ ಪ್ರಯೋಗ ಹೀಗಿರಲಿದೆ..: ಅಪಘಾತಗಳ ಕಡಿವಾಣ, ನಿಯಮ ಉಲ್ಲಂಘನೆ ವಿರುದ್ಧ ಪೊಲೀಸ್ ಇಲಾಖೆ ಹೊಸ ಪ್ರಯೋಗ ಮಾಡಲು ಮುಂದಾಗಿದ್ದು, ಸ್ಪೀಡ್ ಲಿಮಿಟ್ ಮೀರಿದ್ರೆ 1 ಸಾವಿರ ರೂ ದಂಡ ಹಾಕಲಿದೆ. ಜೊತೆಗೆ ಮೇಲೆ ತಿಳಿಸಿರುವಂತೆ ಚಾಲಕರ ಡಿಎಲ್ ಕ್ಯಾನ್ಸಲ್ ಆಗುವ ಸಂಭವವಿದೆ. ಈಗಾಗಲೇ ಹೆದ್ದಾರಿಯಲ್ಲಿ ಸ್ಪೀಡ್ ರೆಡಾರ್ ಗನ್ ಮೂಲಕ ವಾಹನ ಕಾರ್ಯಾಚರಣೆ ಮಾಡಲಾಗುತ್ತಿದ್ದು, ರೆಡಾರ್ ಗನ್ ಇನ್ನಷ್ಟು ಹೆಚ್ಚಿಸಲಿದ್ದಾರೆ. ವಾಹನ ನಿಯಮ ಉಲ್ಲಂಘನೆ ಮಾಡಿದಾಗ ಸವಾರರ ಮೊಬೈಲ್​ಗೆ ವೇಗವಾಗಿ ಪೋಟೊ ಹಾಗೂ ನೋಟಿಸ್ ಬರುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಪೊಲೀಸರ ನಿಯಮಕ್ಕೆ ಸಾರ್ವಜನಿಕರ ಅಸಮಾಧಾನ: ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ಮೇರೆಗೆ ಈ ಎಲ್ಲ ಕಾರ್ಯಾಚರಣೆಯನ್ನು ಪೊಲೀಸರು ಮಾಡುತ್ತಿದ್ದಾರೆ. ಆದರೆ ಹೆದ್ದಾರಿಯಲ್ಲಿ ವಾಹನ ತಡೆದು ತಪಾಸಣೆ ಮಾಡುವ ಸಂದರ್ಭದಲ್ಲಿ ವಾಹನ ದಟ್ಟನೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಆಗಿ ಕಿ.ಮೀ. ಗಟ್ಟಲೆ ವಾಹನಗಳು ಹೆದ್ದಾರಿಯಲ್ಲೇ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಅಪಘಾತಗಳ ಬಗ್ಗೆ ರಾಮನಗರ ಜಿಲ್ಲಾಧಿಕಾರಿಗಳ ಹೇಳಿಕೆ: ಜಿಲ್ಲಾಧಿಕಾರಿ ಅವಿನಾಶ್ ಮೆನನ್ ಹಾಗೂ ಎಸ್ಪಿ‌ ಕಾರ್ತಿಕ್ ರೆಡ್ಡಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೂಡ ಹೆದ್ದಾರಿ ವೀಕ್ಷಣೆ ಮಾಡಿದ್ದಾರೆ‌. ಬೆಂಗಳೂರು-ಮೈಸೂರು ಹೆದ್ದಾರಿ ಸಂಬಂಧ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಅಪಘಾತಗಳು ಹೆಚ್ಚಳ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸರು ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿದ್ದಾರೆ ಎಂದು ತಿಳಿಸಿದ್ದಾರೆ. ಹಾಗೆಯೇ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಸಭೆ ನಡೆದಿದ್ದು, ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಮೂರು ಕಡೆ ಹೊಸ ಮೇಲ್ಸೇತುವೆ, ಅಂಡರ್ ಪಾಸ್, ಸ್ಕೈವಾಕ್​ಗಳನ್ನು ನಿರ್ಮಾಣ ಮಾಡಬೇಕೆಂದು ಸ್ಥಳ ಗುರುತಿಸಲಾಗಿದೆ.

ಮುಂದುವರೆದು, ಮಳೆ ಬಂದರೆ ಹೆದ್ದಾರಿಯಲ್ಲಿ ನೀರು ನಿಲ್ಲುವ ಸಂಭವವಿದ್ದು, ಕಳೆದ ಬಾರಿ‌ ನೀರು ನಿಂತಿರುವುದಕ್ಕೆ ಸರ್ವಿಸ್ ರಸ್ತೆಗಳು ಸರಿಯಾಗಿರಲಿಲ್ಲ. ಇದೀಗ ಸರ್ವೀಸ್ ರಸ್ತೆಗಳು ಎಲ್ಲೆಡೆ ಸಂಪೂರ್ಣವಾಗಿ ಮುಗಿದಿದೆ. ಇದಲ್ಲದೆ ಈಗಾಗಲೇ ಡ್ರೈನೇಜ್​ಗಳನ್ನು ಸರಿಪಡಿಸುವಂತೆ ಸೂಚಿಸಲಾಗಿದ್ದು, ಹೊಸದಾಗಿ ಡ್ರೈನೇಜ್ ನಿರ್ಮಿಸುವ ಬಗ್ಗೆ ಕೂಡ ಚಿಂತನೆ ಮಾಡಲಾಗಿದೆ. ಎಂಟ್ರಿ- ಎಕ್ಸಿಟ್​ಗಳ ಬಳಿ ಹಂಪ್​ಗಳನ್ನು‌ ನಿರ್ಮಿಸಲಾಗಿದೆ. ಹಲವು ಕಡೆ ಸೂಚನಾ ಫಲಕಗಳನ್ನು ಕೂಡ ಅಳವಡಿಸಲಾಗಿದ್ದು, ಒಂದು ತಿಂಗಳ ಒಳಗಾಗಿ ಕೆಲಸ ಮುಗಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಅಪಘಾತಗಳ ವರದಿ ನೋಡುದಾದರೆ, ಇದೇ ವರ್ಷ ಮಾಚ್​ನಲ್ಲಿ ಉದ್ಘಾಟನೆಯಾದಾಗಿನಿಂದ ಒಟ್ಟು 308 ಅಪಘಾತಗಳು ಸಂಭವಿಸಿವೆ. 100 ಮಂದಿ ಸಾವನ್ನಪ್ಪಿದರೆ 335 ಮಂದಿ ಗಾಯಗೊಂಡಿದ್ದರು. ರಾಮನಗರ ವ್ಯಾಪ್ತಿಯಲ್ಲಿ 48, ಮಂಡ್ಯದಲ್ಲಿ 49 ಹಾಗೂ ಮೈಸೂರಿನಲ್ಲಿ ಮೂವರು ಸೇರಿ ಒಟ್ಟು 100 ಮಂದಿ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ರೇಸಿಂಗ್ ಟ್ರ್ಯಾಕ್ ಅಲ್ಲ; ಅಪಘಾತಗಳಿಗೆ ಚಾಲಕರ ಬೇಜವಾಬ್ದಾರಿ ಕಾರಣ- ಪ್ರತಾಪ್ ಸಿಂಹ

Last Updated : Jul 6, 2023, 9:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.