ETV Bharat / state

ಬಿಬಿಎಂಪಿ 225 ವಾರ್ಡ್​ಗಳ ಅಂತಿಮ ನಕ್ಷೆ ಬಿಡುಗಡೆ

author img

By ETV Bharat Karnataka Team

Published : Oct 1, 2023, 10:03 PM IST

ರಾಜ್ಯ ಸರ್ಕಾರ
ರಾಜ್ಯ ಸರ್ಕಾರ

ರಾಜ್ಯ ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ 225 ವಾರ್ಡ್​ಗಳನ್ನು ಅಂತಿಮಗೊಳಿಸಿರುವ ಬಗ್ಗೆ ರಾಜ್ಯಪತ್ರದಲ್ಲಿ ಮಾಹಿತಿ ನೀಡಿದೆ.

ಬೆಂಗಳೂರು : ಬಿಬಿಎಂಪಿಯ 225 ವಾರ್ಡ್‌ಗಳನ್ನು ಅಂತಿಮಗೊಳಿಸಿ ರಾಜ್ಯ ಸರ್ಕಾರ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ. ಅದರ ಮುಂದುವರೆದ ಭಾಗವಾಗಿ ಪುನರ್ ಪರಿಶೀಲನೆ ಮಾಡಿ 225 ವಾರ್ಡ್​ಗಳ ಅಂತಿಮ ನಕ್ಷೆಗಳ ಬಿಡುಗಡೆ ಮಾಡಲಾಗಿದ್ದು, ವಾರ್ಡ್​ಗಳ ನಕ್ಷೆಯನ್ನು bbmpdelimitation2023.com ವೆಬ್​ಸೈಟ್​ನಲ್ಲಿ ವೀಕ್ಷಿಸಬಹುದು ಎಂದು ಪಾಲಿಕೆ ತಿಳಿಸಿದೆ.

ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಪರಿಶೀಲನಾ ಸಮಿತಿಯು ಮಾಡಿರುವ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಅದರಂತೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಅಧಿನಿಯಮ, 2020ರ ಕಲಂ 7ರಲ್ಲಿ ಅಧಿಕಾರವನ್ನು ಚಲಾಯಿಸಿ, 2011ರ ಜನಗಣತಿಯ ಆಧಾರದ ಮೇರೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡ್‌ವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಮಾಡಲಾಗಿದೆ ಎಂದು ಹೇಳಿದೆ.

ಪುನರ್ ಪರಿಶೀಲನೆ ಮಾಡಿ ಪಾಲಿಕೆ 225 ವಾರ್ಡ್​ಗಳ ನಕ್ಷೆಗಳ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 18ರಂದು ವಾರ್ಡ್ ಮರುವಿಂಗಡನೆಯ ಕರಡು ಪಟ್ಟಿಯನ್ನು ಪ್ರಕಟಿಸಿದ್ದ ಸರ್ಕಾರ, ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿತ್ತು. ಇದೀಗ ವಾರ್ಡ್‌ಗಳ ಮರು ವಿಂಗಡಣೆ ಸಮಸ್ಯೆ ಇತ್ಯರ್ಥವಾಗಿರುವುದರಿಂದ ಮುಂದಿನ ವರ್ಷದ ಜನವರಿಯಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಗಾಂಧಿ ಜಯಂತಿ ಪ್ರಯುಕ್ತ ಮಾಂಸ ಮಾರಾಟ ನಿಷೇಧ: ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ನಾಳೆ ಬೆಂಗಳೂರಿನಲ್ಲಿ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬೃಹತ್ ಬೆಂಗಳೂರು ನಗರ ಪಾಲಿಕೆ ಆದೇಶ ಹೊರಡಿಸಿದೆ. ಬಿಬಿಎಂಪಿ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಅ.2ರಂದು ಸೋಮವಾರ ಗಾಂಧಿ ಜಯಂತಿ ಪ್ರಯುಕ್ತ ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಹೇಳಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಉದ್ದಿಮೆ ನಡೆಸುತ್ತಿರುವ ಉದ್ದಿಮೆದಾರರಿಗೆ ಮಾಂಸ ಮಾರಾಟ ಮಾಡದಂತೆ ಸೂಚನೆ ನೀಡಿದ್ದು, ತಪ್ಪಿದಲ್ಲಿ ಪಾಲಿಕೆ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರದ ಅಧಿಸೂಚನೆಯಲ್ಲಿ ಬದಲಾದ ಪಾಲಿಕೆಯ 15 ವಾರ್ಡ್​ಗಳ ಹೆಸರು : ಶೀಘ್ರದಲ್ಲಿ ಮೀಸಲಾತಿ ಪ್ರಕಟವಾಗುವ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.