ETV Bharat / state

ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ‌ ರಾಜೀನಾಮೆ

author img

By

Published : May 13, 2023, 10:22 PM IST

Updated : May 13, 2023, 11:00 PM IST

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಸವರಾಜ ಬೊಮ್ಮಾಯಿ‌
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಸವರಾಜ ಬೊಮ್ಮಾಯಿ‌

ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ‌ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುವ ಬಿಜೆಪಿ ಪ್ರಯತ್ನ ವಿಫಲವಾಗಿ ಕಾಂಗ್ರೆಸ್ ಬಹುಮತ ಪಡೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ‌ ರಾಜೀನಾಮೆ ಸಲ್ಲಿಕೆ ಮಾಡಿದ್ದು, ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಮಾಡುವವರೆಗೂ ಉಸ್ತುವಾರಿ ಮುಖ್ಯಮಂತ್ರಿ ಆಗಿರಲಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ಶಿಗ್ಗಾವಿಯಿಂದ ಬೆಂಗಳೂರಿಗೆ ಆಗಮಿಸಿದ ಬಸವರಾಜ ಬೊಮ್ಮಾಯಿ‌ ರಾಜ ಭವನಕ್ಕೆ ತೆರಳಿದರು. ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದ ಸಿಎಂ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದರು. ನಂತರ ಹೊಸ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಮಾಡುವವರೆಗೂ ಉಸ್ತುವಾರಿ ಮುಖ್ಯಮಂತ್ರಿ ಆಗಿರುವಂತೆ ರಾಜ್ಯಪಾಲರು ಸಿಎಂ ಬೊಮ್ಮಾಯಿ‌ ಅವರಿಗೆ ಸೂಚನೆ ನೀಡಿದ್ದು, ಅದರಂತೆ ಹೊಸ ಸರ್ಕಾರ ರಚನೆವರೆಗೂ ಬೊಮ್ಮಾಯಿ‌ ಉಸ್ತುವಾರಿ ಮುಖ್ಯಮಂತ್ರಿ ಆಗಿರಲಿದ್ದಾರೆ.

19 ತಿಂಗಳು 17 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಇಂದು ರಾಜೀನಾಮೆ ನೀಡಿದರು. ಜುಲೈ 26, 2021ರಂದು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಯಡಿಯೂರಪ್ಪರ ರಾಜೀನಾಮೆ ನೀಡಿದ್ದರಿಂದ ಬೊಮ್ಮಾಯಿ ಸಿಎಂ ಪಟ್ಟಕ್ಕೇರಿದ್ದರು. ಬಯಸದೇ ಬಂದ ಭಾಗ್ಯದಂತೆ ಮುಖ್ಯಮಂತ್ರಿ ಪದವಿ ಅಲಂಕರಿಸಿದ್ದ ಬೊಮ್ಮಾಯಿ ಇಂದು ಪಕ್ಷಕ್ಕೆ ಸೋಲಾಗಿದ್ದರಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಕರ್ನಾಟಕ ವಿಧಾನಸಭೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾಂಗ್ರೆಸ್ 136 ಸ್ಥಾನಗಳನ್ನು ಜಯಿಸುವ ಮೂಲಕ ಅಭೂತಪೂರ್ವ ಜಯ ಸಾಧಿಸಿದೆ. ಬಿಜೆಪಿ ಕೇವಲ 65 ಸ್ಥಾನ ಗೆದ್ದು ಮುಖಭಂಗ ಅನುಭವಿಸಿದೆ.

ಜನತೆ ನೀಡಿದ ಅಭಿಪ್ರಾಯವನ್ನು ಗೌರವ ಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ: ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ಜನತೆ ನೀಡಿದ ಅಭಿಪ್ರಾಯವನ್ನು ಗೌರವ ಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ. ಈ ಸೋಲಿನ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ ಎಂದು ಬಸವರಾಜ ಬೊಮ್ಮಾಯಿ‌ ಸ್ಪಷ್ಟಪಡಿಸಿದ್ದಾರೆ.

ರಾಜ ಭವನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಭೇಟಿ ಮಾಡಿ ರಾಜೀನಾಮೆ ನೀಡಿದ್ದೇನೆ. ಜನರ ತೀರ್ಪನ್ನು ಗೌರವಯುತವಾಗಿ ಒಪ್ಪಿಕೊಂಡಿದ್ದೇವೆ. ಪಕ್ಷಕ್ಕೆ ಆದ ಹಿನ್ನಡೆಯನ್ನು ನಾನೇ ಜವಾಬ್ದಾರಿ ಹೊರುತ್ತೇನೆ. ಕಳೆದ ಬಾರಿ ನನಗೆ 104 ಸೀಟು ಬಂದಿತ್ತು. ಈ ಬಾರಿ ಪರ್ಸೆಂಟೇಜ್ ಜಾಸ್ತಿ ಬಂದ್ರು, ಕಡಿಮೆ ಸೀಟು ಬಂದಿವೆ. ಏನೇ ಆಗಲಿ ಸೋಲು ಸೋಲು. ನಾವು ಇದರ ಬಗ್ಗೆ ಆತ್ಮಾವಲೋಕನ ಮಾಡಿ ಎಲ್ಲಿ ತಪ್ಪು ಆಗಿದೆ ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ.

ನಮ್ಮದು ಒಂದು ರಾಷ್ಟ್ರೀಯ ಪಕ್ಷ. ನಾವು ಕೇವಲ ಚುನಾವಣೆಗೆ ಮಾತ್ರ ಕೆಲಸ ಮಾಡಲ್ಲ. ರಾಷ್ಟ್ರದ ನಿರ್ಮಾಣಕ್ಕೆ ಕೆಲಸ ಮಾಡೋರು. ಇನ್ನೇನು ಕೇವಲ 8-10 ತಿಂಗಳಲ್ಲಿ ಲೋಕಸಭೆ ಚುನಾವಣೆ ಬರ್ತಿದೆ. ಆ ಚುನಾವಣೆಗೆ ಪಕ್ಷ ಗಟ್ಟಿಗೊಳಿಸುವ ಕೆಲಸ ಮಾಡುತ್ತೇವೆ. ಈ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ ಎಂದರು.

ನಾವು ಹಿಂದೆ ಎಷ್ಟೋ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ನೋಡಿದ್ದೇವೆ. ಸೋಲಿಗೆ ಹಲವಾರು ರೀತಿಯ ಕಾರಣಗಳು ಇವೆ. ನಮ್ಮ ವೋಟ್‌ಬ್ಯಾಂಕ್ ಸರಿಯಾಗಿ ಕ್ರೂಢೀಕರಣವಾಗಿಲ್ಲ. ಒಂದೇ ಕಾರಣದಿಂದ ಸೋತಿಲ್ಲ. ಬೇರೆ ಬೇರೆ ರೀತಿಯಲ್ಲಿ ಸೋಲಿಗೆ ಕಾರಣವಾಗಿದೆ. ಅವುಗಳನ್ನು ಎಲ್ಲವನ್ನೂ ಕುಳಿತು ಚರ್ಚೆ ಮಾಡುತ್ತೇವೆ. ಏನ್ ವ್ಯತ್ಯಾಸ ಆಗಿದೆ. ಎಲ್ಲಿ ಏನಾಗಿದೆ ಎಂದು ಚರ್ಚಿಸಿ, ಆಗಿದ್ದ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಈ ಸೋಲಿಗೆ ನಾನೇ ಹೊಣೆ ಹೊರುತ್ತೇನೆ: ಸುದೀಪ್ ರಾಜಕಾರಣಿ ಅಲ್ಲ. ಸೋಲಿಗೆ ಅವರನ್ನು ಹೊಣೆ ಮಾಡೋದು ಸರಿಯಲ್ಲ. ಅವರು ಕೇವಲ ನಮ್ಮ ಸ್ಟಾರ್ ಪ್ರಚಾರಕ ಅಷ್ಟೇ, ನಾನು ಈಗಾಗಲೇ ಹೇಳಿದ್ದೇನೆ. ಈ ಸೋಲಿಗೆ ನಾನೇ ಹೊಣೆ ಹೊರುತ್ತೇನೆ. ರಾಜ್ಯದ ಆರ್ಥಿಕ ಸ್ಥಿತಿಯನ್ನು ಹಾಳು ಮಾಡದೇ ಜನರ ಕಲ್ಯಾಣ ಆಗಲಿ ಎಂದು ಆಶಿಸುತ್ತೇನೆ. ವಿರೋಧ ಪಕ್ಷದಲ್ಲಿದ್ದು ಸಮರ್ಪಕವಾಗಿ ಕೆಲಸ ಮಾಡುತ್ತೇವೆ ಎಂದರು.

ಇದನ್ನೂ ಓದಿ: ದಕ್ಷಿಣ ಭಾರತ ಬಿಜೆಪಿ ಮುಕ್ತವಾಗಿದೆ, ನಾನು ಕರ್ನಾಟಕದ ಭೂಮಿ ಪುತ್ರ : ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಟಾಂಗ್​

Last Updated :May 13, 2023, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.