ETV Bharat / state

ಅತ್ತಿಬೆಲೆ ಪಟಾಕಿ ದುರಂತ: ಮೃತರ ಕುಟುಂಬಗಳಿಗೆ ಕರ್ನಾಟಕ, ತಮಿಳುನಾಡು ಸರ್ಕಾರದಿಂದ ಪರಿಹಾರ ಘೋಷಣೆ

author img

By ETV Bharat Karnataka Team

Published : Oct 8, 2023, 8:17 AM IST

Updated : Oct 8, 2023, 9:11 AM IST

ಅತ್ತಿಬೆಲೆ ಬಳಿ ಸಂಭವಿಸಿದ ಪಟಾಕಿ ದಾಸ್ತಾನು ಮಳಿಗೆಯ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳು ಹಾಗು ಗಾಯಾಳುಗಳಿಗೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ಪರಿಹಾರ ಘೋಷಿಸಿವೆ.

ಡಿಕೆಶಿ  5 ಲಕ್ಷ ಪರಿಹಾರ ಘೋಷಣೆ
ಡಿಕೆಶಿ 5 ಲಕ್ಷ ಪರಿಹಾರ ಘೋಷಣೆ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

ಆನೇಕಲ್​: ಅತ್ತಿಬೆಲೆ ಗಡಿಯ ಬಾಲಾಜಿ ಕ್ರ್ಯಾಕರ್ಸ್ ಪಟಾಕಿ ದಾಸ್ತಾನು ಮಳಿಗೆಯಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಸಾವಿಗೀಡಾದ 12 ಜನರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ. ನಿನ್ನೆ ರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

"ಮೃತಪಟ್ಟ ಅಮಾಯಕ ಯುವಕರನ್ನು ಕಂಡರೆ ದುಃಖ ಉಮ್ಮಳಿಸಿ ಬರುತ್ತಿದೆ. 19 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಮಾಹಿತಿ ಸಿಕ್ಕಿದೆ. 12 ಮಂದಿ ಸಜೀವ ದಹನವಾಗಿದ್ದಾರೆ. ಪಟಾಕಿ ದಾಸ್ತಾನಿಟ್ಟುಕೊಳ್ಳಲು ಪರವಾನಗಿ ನೀಡಿರಲಿಲ್ಲ. ಮಾರಾಟದ ಅಂಗಡಿಗೆ ಮಾತ್ರ ಅನುಮತಿ ಪಡೆಯಲಾಗಿತ್ತು. ಅಧಿಕಾರಿಗಳ ಕಣ್ಣು ತಪ್ಪಿಸಿ ಅಕ್ರಮ ದಾಸ್ತಾನಿಟ್ಟಿರುವುದೇ ಘಟನೆಗೆ ಕಾರಣ" ಎಂದರು.

"ದಾಸ್ತಾನಿಟ್ಟಿರುವ ಗೋಡೌನ್​ಗೆ ‌ಕಿರಿದಾದ ಬಾಗಿಲಿದೆ. ಇದರಲ್ಲಿ ಕಾರ್ಮಿಕರು ಸಿಲುಕಿದ್ದಾರೆ. ಘಟನೆ ನಡೆದ ಕಟ್ಟಡವನ್ನು ಕಂಡರೆ ಯಾವಾಗ ಬೀಳುತ್ತೋ ಎನ್ನುವ ಆತಂಕ ಮೂಡುತ್ತದೆ. ಕಟ್ಟಡ ರಕ್ಷಣಾ ಕಾರ್ಯಚರಣೆಯಲ್ಲಿರುವ ಅಗ್ನಿಶಾಮಕ ದಳದ ಸಿಬ್ಬಂದಿಯ ಮೇಲೆಯೇ ಬೀಳುವ ಹಾಗಿದೆ. ಹೀಗಾಗಿ ಅವರ ಕಾರ್ಯಕ್ಕೆ ಇನ್ನಷ್ಟು ಸುರಕ್ಷಿತ ಮುನ್ನೆಚ್ಚರಿಕೆ ಕ್ರಮಗಳಿಗಾಗಿ ಸೂಚಿಸಲಾಗಿದೆ. ಒಂದೇ ಅಂತಸ್ತಿನ ಕಟ್ಟಡವಾದರೂ ಸುರಕ್ಷಿತವಲ್ಲದ ದಾಸ್ತಾನು ಮಳಿಗೆ ಇದಾಗಿದೆ. ಮೃತರಲ್ಲಿ ವ್ಯಾಪಾರ ಮಾಡಲು ಬಂದವರೂ ಸೇರಿದ್ದಾರೆ" ಎಂದು ತಿಳಿಸಿದರು.

ಪರಿಹಾರ ಘೋಷಿಸಿದ ತಮಿಳುನಾಡು ಸಿಎಂ: ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರು ಮೃತರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ್ದಾರೆ. ಸಾವಿಗೀಡಾದ ಪ್ರತಿ ವ್ಯಕ್ತಿಯ ಕುಟುಂಬಸ್ಥರಿಗೆ ತಲಾ 3 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ಹಾಗು ಇತರೆ ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿಗಳ ಸಾಮಾನ್ಯ ಪರಿಹಾರ ನಿಧಿಯಿಂದ ಪ್ರಕಟಿಸಿದ್ದಾರೆ.

ಕಂದಾಯ, ಪೊಲೀಸ್ ಇಲಾಖೆಯ ನಿರ್ಲಕ್ಷ್ಯ- ಕೇಂದ್ರ ಸಚಿವ ಎ. ನಾರಾಯಣಸ್ವಾಮಿ: ಪಟಾಕಿ ದಾಸ್ತಾನು ಮಳಿಗೆ ದುರಂತದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಪೊಲೀಸರ ವಿರುದ್ಧ ಕಿಡಿಕಾರಿದರು. "ಅಕ್ರಮ ದಾಸ್ತಾನು‌ ಮಳಿಗೆಗೆ ಹೊಂದಿಕೊಂಡಂತೆ ಮಾರಾಟ ಮಳಿಗೆ ಇದ್ದರೂ ಖುದ್ದು ಪರಿಶೀಲಿಸದೆ ಪರವಾನಗಿ ನೀಡಿರುವ ಕಂದಾಯ, ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ ಘಟನೆಗೆ ಕಾರಣ. ಕೂಡಲೇ ತನಿಖೆ ಕೈಗೊಂಡು ಕ್ರಮ ವಹಿಸಬೇಕು" ಎಂದು ಅವರು ಆಗ್ರಹಿಸಿದ್ದಾರೆ. "ಈ ಸಂಬಂಧ ಮುಖ್ಯಮಂತ್ರಿಯವರಲ್ಲಿಯೂ‌ ಮಾತನಾಡುವೆ. ಘಟನೆಗೆ ನಿಖರ ಕಾರಣ ತಿಳಿದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಿಸಿ, ಡಿಐಜಿ, ಎಸ್ಪಿಗೆ ತಿಳಿಸಿದ್ದೇನೆ" ಎಂದು ಹೇಳಿದರು.

ಅಂಗಡಿ ಮಾಲೀಕ ನವೀನ್​ ಬಂಧನ- ಐಜಿಪಿ ರವಿಕಾಂತೇಗೌಡ: "ಪಟಾಕಿ ಘಟನೆಗೆ ಕಾರಣವಾದ ತಪ್ಪಿತಸ್ಥರನ್ನು ಬಂಧಿಸಲಾಗುವುದು. ಈಗಾಗಲೇ ಅಂಗಡಿ ಮಾಲೀಕ ನವೀನ್ ಬಿನ್ ರಾಮಸ್ವಾಮಿ ರೆಡ್ಡಿಯನ್ನು ಬಂಧಿಸಲಾಗಿದೆ" ಎಂದು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ತಿಳಿಸಿದ್ದಾರೆ. "ಪ್ರತ್ಯಕ್ಷದರ್ಶಿ ಗಾಯಾಳುವೊಬ್ಬರಿಂದ ದೂರು ದಾಖಲಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ" ಎಂದರು.

ಘಟನೆಗೆ ಕಾರಣವನ್ನು ವಿವರಿಸುತ್ತಾ, "ಟ್ರಕ್​ನಿಂದ ಪಟಾಕಿಯನ್ನು ಅನ್ಲೋಡ್ ಮಾಡುವ ಸಂದರ್ಭದಲ್ಲಿ ಘಟನೆ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡು ಇಡೀ ಮಾರಾಟದ ಅಂಗಡಿ, ಅಂಗಡಿಗೆ ಹೊಂದಿಕೊಂಡಿರುವ ಅಕ್ರಮ ದಾಸ್ತಾನು ಮಳಿಗೆಗೂ ಬೆಂಕಿ ಆವರಿಸಿ ಹದಿಮೂರು ಮಂದಿ ಸಾವನ್ನಪ್ಪಿದ್ದಾರೆ. ಒಂಬತ್ತು ಕಳೇಬರಗಳನ್ನು ಗುರುತಿಸಲಾಗಿದೆ. ಉಳಿದ ಮೂವರ ಮುಖಗಳು ಸುಟ್ಟುಹೋಗಿದ್ದು ಗುರುತು ಹಚ್ಚಲು ಅವರ ಸಂಬಂಧಿಕರೇ ಬರಬೇಕಿದೆ. ಡಿಎನ್ಎ ಮೂಲಕ ಅವರನ್ನು ಗುರುತಿಸಿ ಅವರ ಕುಟುಂಬಸ್ಥರಿಗೆ ಶವಗಳನ್ನು ನೀಡಲಿದ್ದೇವೆ" ಎಂದರು.

"ಏಳು ಮಂದಿ ಗಾಯಾಳುಗಳಾಗಿದ್ದು ಅವರಲ್ಲಿ ವೆಂಕಟೇಶ್ ಎನ್ನುವ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಪಿ ನವೀನ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ" ಎಂದು ಐಜಿಪಿ ಮಾಹಿತಿ ನೀಡಿದರು.

ತನಿಖೆಗೆ ಪ್ರತ್ಯೇಕ ತಂಡ ರಚನೆ: "ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲು 1 ತಂಡ ರಚನೆಯಾದರೆ ಮತ್ತೊಂದು ತಂಡ ನುರಿತ ಪರಿಣತರಿಗೆ ಸಹಕರಿಸಿ ತನಿಖೆಗೆ ಸಹಕರಿಸಲು ನಿಯೋಜಿಸಲಾಗಿದೆ. ನವೀನ್, ರಾಜೇಶ್, ವೆಂಕಟೇಶ್ ಸೆಂಟ್ವಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೆಂಕಟೇಶ್ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಉಳಿದಂತೆ, ಅತ್ತಿಬೆಲೆ ಆಕ್ಸಫರ್ಡ್ ಆಸ್ಪತ್ರೆಯಲ್ಲಿ ಸಂಜಯ್, ಚಂದ್ರು, ರಾಜೇಶ್ ಮತ್ತು ಪಾಲ್ ಕಬೀರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರಾಟ ಮಳಿಗೆಯಲ್ಲಿರಬೇಕಾದ ಪಟಾಕಿ ಸಂಗ್ರಹಣಾ ಮಿತಿ ಹೆಚ್ಚಿದ್ದು ಅಕ್ರಮ ದಾಸ್ತಾನು, ನಿಯಮ ಉಲ್ಲಂಘನೆಯೇ ಘಟನೆಗೆ ಕಾರಣ ಎಂಬ ಮಾಹಿತಿ ದೊರೆತಿದೆ" ಎಂದು ತಿಳಿಸಿದರು.

ಮಾರಾಟ ಮಳಿಗೆಗಷ್ಟೇ ಪರವಾನಗಿ, ದಾಸ್ತಾನು ಮಳಿಗೆಗಲ್ಲ- ಡಿಸಿ: ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಮಾತನಾಡಿ, "ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು" ಎಂದಿದ್ದಾರೆ. "ನಿಯಮಬಾಹಿರವಾಗಿ ಪರವಾನಗಿದಾರ ಐದಾರು ವರ್ಷಗಳಿಂದ ಪಟಾಕಿ ಅಂಗಡಿಯೊಂದಿಗೆ ಅಕ್ರಮ ದಾಸ್ತಾನಿಟ್ಟಿದ್ದಾನೆ. ಅಗ್ನಿಶಾಮಕದಳ, ಪೊಲೀಸ್, ಕಂದಾಯ, ಸ್ಥಳೀಯ ಆಡಳಿತದಿಂದಲೂ ಅನುಮತಿ ಪಡೆದು ನವೀಕರಣ ಮಾಡಿಸಿಕೊಂಡಿದ್ದಾರೆ. ಆದರೆ ಕಾರ್ಮಿಕರ ಸುರಕ್ಷತೆ ಹಾಗು‌ ಮುನ್ನೆಚ್ಚರಿಕಾ ಕ್ರಮಗಳನ್ನು ಗಾಳಿಗೆ ತೂರಲಾಗಿತ್ತು" ಎಂದರು.

Last Updated : Oct 8, 2023, 9:11 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.