ETV Bharat / state

ಯುಪಿ ದೊಡ್ಡ ರಾಜ್ಯ, ಅದಕ್ಕೆ ಹೆಚ್ಚು ಅನುದಾನ ನೀಡಲಾಗಿದೆ: ಉಸ್ತುವಾರಿ ಅರುಣ್ ಸಿಂಗ್

author img

By

Published : Feb 3, 2023, 9:50 PM IST

Arun Singh
ಅರುಣ್ ಸಿಂಗ್

ಉತ್ತರ ಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಯುಪಿಯಲ್ಲಿ ಹೆಚ್ಚು ಜನಸಂಖ್ಯೆ ಇದೆ ಮತ್ತು ದೊಡ್ಡ ರಾಜ್ಯ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ಯುಪಿಗೆ ಹೋಲಿಸಿದರೆ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ - ಅರುಣ್ ಸಿಂಗ್

ಬೆಂಗಳೂರು: ಉತ್ತರ ಪ್ರದೇಶಕ್ಕೆ ಕೇಂದ್ರ ಬಜೆಟ್​ನಲ್ಲಿ ಹೆಚ್ಚು ಅನುದಾನ ನೀಡಲಾಗಿದೆ ಎನ್ನುವುದು ನಿಜ. ಉತ್ತರ ಪ್ರದೇಶದಲ್ಲಿ ಹೆಚ್ಚು ಜನಸಂಖ್ಯೆ ಇದೆ. ದೊಡ್ಡ ರಾಜ್ಯವೂ ಹೌದು. ಹಾಗಾಗಿ ಹೆಚ್ಚು ಅನುದಾನ ನೀಡಲಾಗಿದೆ. ಹಾಗೆ ಹೋಲಿಸಿದರೆ ಕರ್ನಾಟಕಕ್ಕೂ ಕೂಡ ಹೆಚ್ಚು ಅನುದಾನ ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್‍ನಲ್ಲಿ ಕರ್ನಾಟಕಕ್ಕೆ ವಿಶೇಷ ಆದ್ಯತೆ ಲಭಿಸಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ನೀಡಲಾಗುತ್ತಿದೆ. ರೈಲ್ವೆಯ ಹಲವು ಯೋಜನೆಗಳಿಗೂ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಹಣ ನೀಡಲಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕರ್ನಾಟಕದಲ್ಲಿ ತ್ವರಿತಗತಿಯಲ್ಲಿ ಕೆಲಸ ಆಗುತ್ತಿದೆ. ಗರಿಷ್ಠ ಮನೆಗಳ ನಿರ್ಮಾಣಕ್ಕೆ ನೆರವು ಲಭಿಸಲಿದೆ. ಜಲಜೀವನ್ ಮಿಷನ್‍ನಲ್ಲೂ ವೇಗವಾಗಿ ಕೆಲಸ ನಡೆಯುತ್ತಿದೆ. ಜಲಜೀವನ್ ಮಿಷನ್‍ನಲ್ಲಿ 70 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದು, ಕರ್ನಾಟಕದ ಹೆಚ್ಚು ಜನರಿಗೆ ಪ್ರಯೋಜನ ಸಿಗಲಿದೆ. ಮನೆ ಮನೆಗೆ ನೀರು ಸರಬರಾಜಾಗಲಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಇದೆ. ಅದನ್ನು ಪರಿಹರಿಸಲು ವಿಶೇಷ ಅನುದಾನ ಕೊಟ್ಟಿದ್ದಾರೆ ಎಂದರು.

ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಎಲ್ಲರ ಗಮನ 150 ಸೀಟು ಗೆಲ್ಲುವ ಕಡೆ ಇರಲಿದೆ. ಕರ್ನಾಟಕದಲ್ಲಿ ಸಂಪೂರ್ಣ ಬಹುಮತದಿಂದ ಸರಕಾರ ರಚಿಸುವುದೇ ನಮ್ಮೆಲ್ಲರ ಆದ್ಯತೆ ಆಗಿರಲಿದೆ. ಎಲ್ಲರೂ ಒಟ್ಟಿಗೆ ಚುನಾವಣೆಗಾಗಿ ಕೆಲಸ ಮಾಡಲಿದ್ದೇವೆ ಎಂದು ಇದೇ ವೇಳೆ ಮುಂಬರುವ ವಿಧಾನ ಸಭಾ ಚುನಾವಣಾ ತಯಾರಿ ಬಗ್ಗೆ ಹೇಳಿದರು.

ಈಶ್ವರಪ್ಪ ಸಚಿವ ಸ್ಥಾನ ಬೇಡ ಎಂದ ವಿಚಾರ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಶ್ವರಪ್ಪ ಕೂಡ ಪಕ್ಷದ ನಿಲುವಿಗೆ ಬದ್ಧರಾಗಿದ್ದಾರೆ. ಎಲ್ಲರದ್ದೂ ಒಂದೇ ಟಾರ್ಗೆಟ್ ಮತ್ತೆ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವುದಾಗಿದೆ. ಹಾಗಾಗಿ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡಲಿದ್ದಾರೆ ಎಂದರು. ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ವಿಶೇಷ ಕಾರ್ಯಕಾರಿಣಿ: ಬಿಜೆಪಿ ಜನ ಸಂಕಲ್ಪ ಯಾತ್ರೆ, ಬೂತ್ ವಿಜಯ್ ಅಭಿಯಾನ ಮತ್ತು ವಿಜಯ ಸಂಕಲ್ಪ ಅಭಿಯಾನಗಳನ್ನು ಮಾಡಿದ್ದು, ಈಗ ರಾಜ್ಯದ ನಾಲ್ಕು ದಿಕ್ಕಿನಿಂದಲೂ ರಥಯಾತ್ರೆಗೆ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಅರಮನೆ ಮೈದಾನದಲ್ಲಿ ವಿಶೇಷ ಕಾರ್ಯಕಾರಿಣಿ ನಡೆಯಲಿದ್ದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್​ ಭಾಗವಹಿಸಲಿದ್ದಾರೆ. ಅಲ್ಲದೇ​ ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕರ್ನಾಟಕದ ಸಹ ಉಸ್ತುವಾರಿ ಡಿ.ಕೆ. ಅರುಣಾ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರು ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಹೈಕಮಾಂಡ್ ನೋಟಿಸ್ ನೀಡಿಲ್ಲ, ನೋಟಿಸ್ ತೋರಿಸಿದ್ರೆ ₹10 ಲಕ್ಷ ಕೊಡ್ತೇನೆ: ಯತ್ನಾಳ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.