ETV Bharat / state

ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಆದರೆ ಆಮಿಷಕ್ಕೆ ಒಳಗಾಗಲ್ಲ: ಆರಗ ಜ್ಞಾನೇಂದ್ರ

author img

By

Published : Jan 16, 2023, 5:08 PM IST

araga jnanendra
ಆರಗ ಜ್ಞಾನೇಂದ್ರ

ಗೃಹ ಸಚಿವರ ಗುಜರಾತ್​ ಪ್ರವಾಸ ಮತ್ತು ಸ್ಯಾಂಟ್ರೋ ರವಿ ಬಂಧನಕ್ಕೆ ಸಂಬಂಧವಿದೆ ಎಂದು ಆರೋಪಿಸಿದ್ದ ಹೆಚ್​ಡಿ ಕುಮಾರಸ್ವಾಮಿ - ನನ್ನ ಆತ್ಮ ನನ್ನನ್ನು ಕಳ್ಳ ಎಂದ ದಿನ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಆಮಿಷಕ್ಕೆ ಒಳಗಾಗಲ್ಲ - ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಆದರೆ ಆಮಿಷಕ್ಕೆ ಒಳಗಾಗಲ್ಲ

ಬೆಂಗಳೂರು: ಸ್ವಚ್ಛ ರಾಜಕಾರಣದಲ್ಲಿ ಬದ್ಧತೆ ಹೊಂದಿರುವ ನಾನು, ಸಮಾಜ ದ್ರೋಹಿಗಳೂ ಮತ್ತು ಪೀಡಕರಿಂದ ಅಕ್ರಮವಾಗಿ ಹಣ ಗಳಿಸಬೇಕಾದ ಸಂದರ್ಭ ಬಂದರೆ, ಬದುಕಲು ಇಚ್ಛಿಸುವುದಿಲ್ಲ, ನನ್ನ ಆತ್ಮ ನನ್ನನ್ನು ಕಳ್ಳ ಎಂದ ದಿನ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬೆಂಗಳೂರಿನಲ್ಲಿರುವ ಮಲೆನಾಡು ಮಿತ್ರ ವೃಂದ ಆಯೋಜಿಸಿದ್ದ, ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಗುಜರಾತ್ ಪ್ರವಾಸಕ್ಕೂ, ಸ್ಯಾಂಟ್ರೋ ರವಿ ಬಂಧನಕ್ಕೂ ಥಳುಕು ಹಾಕಿ ಮಾತನಾಡುತ್ತಿರುವ ಕೆಲವು ನಾಯಕರ ಬಗ್ಗೆ ಪ್ರಸ್ತಾಪಿಸಿ, ’’ನನ್ನ ಗುಜರಾತ್ ಪ್ರವಾಸ ಬಹಳ ಹಿಂದೆಯೇ ನಿಗದಿಯಾಗಿತ್ತು. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ನಿಯೋಗದ ನೇತೃತ್ವ ವಹಿಸಿದ್ದ ನನ್ನ ಗುಜರಾತ್ ಭೇಟಿ ಹಾಗೂ ಕಾರ್ಯಕ್ರಮಗಳು, ಪಾರದರ್ಶಕವಾಗಿವೆ. ಒಂದು ವೇಳೆ ಸ್ಯಾಂಟ್ರೋ ರವಿಯಂತಹ ವ್ಯಕ್ತಿಗಳಿಂದ ಆಮಿಷಕ್ಕೆ ಒಳಗುವಂತಹ ಪರಿಸ್ಥಿತಿ ಬಂದರೆ, ಆತ್ಮಹತ್ಯೆ ದಾರಿ ತುಳಿಯುತ್ತೇನೆ‘‘ ಎಂದು ಭಾವುಕರಾಗಿ ನುಡಿದರು.

ಗುಜರಾತ್ ಪ್ರವಾಸದ ಸಂದರ್ಭದಲ್ಲಿ, ರಾಜ್ಯದಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು, ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ, ಉಪ ಕುಲಪತಿಗಳು ಹಾಗೂ ಇತರ ಹಿರಿಯ ಅಧಿಕಾರಿಗಳ ಜತೆ, ಸಭೆ ನಡೆಸಿದ್ದೇನೆ. ಇದರ ಮುಂದುವರಿದ ಭಾಗವಾಗಿ, ಶೀಘ್ರದಲ್ಲಿಯೇ, ವಿಶ್ವವಿದ್ಯಾಲಯದ ಶಂಕು ಸ್ಥಾಪನೆ ಕಾರ್ಯಕ್ರಮವೂ ನಡೆಯಲಿದೆ. ಗುಜರಾತ್ ಭೇಟಿ ವೇಲೆ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಅವರನ್ನು ಸೌಜನ್ಯಯುತವಾಗಿ ಭೇಟಿ ಮಾಡಿದ್ದೇನೆ. ಎಲ್ಲವೂ ತೆರದ ಪುಸ್ತಕದಂತೆ ನನ್ನ ಜೀವನ ಇದೆ ಎಂದು ಗೃಹ ಸಚಿವರು ಇದೇ ವೆಳೆ ಹೇಳಿದ್ದಾರೆ.

ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ವ್ಯಕ್ತಿಯೊಬ್ಬರು, ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಕುಮಾರಸ್ವಾಮಿ ಹೆಸರೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಆರಗ ಜ್ಞಾನೇಂದ್ರ, ’’ನಾನು ಹಣ ಮಾಡಬಹುದು ಅಂದುಕೊಂಡಿದ್ದರೆ ಹಗರಣಗಳನ್ನೆಲ್ಲ ಮುಚ್ಚಿಹಾಕಬಹುದಿತ್ತು. ನನ್ನ ಸಮಯದಲ್ಲಿ ಪಿಎಸ್ಐ ಹಗರಣವಾಯಿತು, ನನಗೆ ದಾಖಲೆ ಸಿಗುತ್ತಿದ್ದಂತೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ. 107 ಜನರನ್ನು ಬಂಧಿಸಿದ್ದೇನೆ, ಐಪಿಎಸ್ ಅಧಿಕಾರಿ ಅದರಲ್ಲಿಯೂ ಎಡಿಜಿಪಿ ದರ್ಜೆ ಅಧಿಕಾರಿಯನ್ನು ಬಂಧಿಸಿ ಜೈಲಿನಲ್ಲಿಡಲಾಗಿದೆ. ಈ ರೀತಿ ನೈತಿಕವಾಗಿ, ಪ್ರಾಮಾಣಿಕವಾಗಿ ಬದುಕಿದ್ದೇನೆ’’ ಎಂದರು.

’’ಟೀಕೆ ಬಂದರೆ ಎದುರಿಸುತ್ತೇನೆ, ನನಗೆ ಯಾರ ಪ್ರಮಾಣ ಪತ್ರದ ಅಗತ್ಯವಿಲ್ಲ. ನನ್ನ ಆತ್ಮ ಎಲ್ಲಿಯವರೆಗೆ ಕಳ್ಳ ಎನ್ನುವುದಿಲ್ಲವೋ ಅಲ್ಲಿಯವರೆಗೂ ನಾನು ಧೈರ್ಯವಾಗಿ ಬದುಕುತ್ತೇನೆ. ಯಾವಾಗ ನನ್ನ ಆತ್ಮ ನನ್ನನ್ನು ಕಳ್ಳ ಎನ್ನಲಿದೆಯೋ ಅಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಅಂತಹ ಸಂದರ್ಭ ಬಂದರೆ ಆತ್ಮಹತ್ಯೆ ಮಾಡಿಕೊಳ್ಳಲಿದ್ದೇನೆಯೇ ಹೊರತು ರಾಜಿಯಾಗುವುದಿಲ್ಲ. ಅಂತಹ ಸ್ಥಿತಿ ಬರಲು ಸಾಧ್ಯವೂ ಇಲ್ಲ ಎಂದು‘‘ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

45 ವರ್ಷದ ಸಾರ್ವಜನಿಕ ಬದುಕು ನನ್ನದು, ನನ್ನ ನಿವಾಸಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಮನೆಯ ಬೀರುಗಳಿಗೆ ಬೀಗ ಹಾಕಲ್ಲ, ಯಾರು ಬೇಕಾದರೂ ನನ್ನ ಮನಗೆ ಬರಲು ಅವಕಾಶ ಕಲ್ಪಸಿದ್ದೇವೆ. ನನಗೆ ಮತ್ತು ನನ್ನ ಪತ್ನಿಗೆ ಶ್ರೀಮಂತ ಹಿನ್ನೆಲೆ ಇಲ್ಲ. ಸಿರಿವಂತ ಸಂಬಂಧಿಕರೂ ನಮಗೆ ಇಲ್ಲ, ನಾವು ಜನರ ಪ್ರೀತಿಯಿಂದ ಬೆಳೆದಿದ್ದೇವೆ. ನಮ್ಮ ಕೆಲಸ, ನಮ್ಮ ಹೋರಾಟದಿಂದ ತೀರ್ಥಹಳ್ಳಿ ಜನ ನನ್ನನ್ನು ನಾಲ್ಕನೇ ಬಾರಿಗೆ ಶಾಸನಸಭೆಗೆ ಕಳುಹಿಸಿದ್ದಾರೆ ಎಂದು ತಮ್ಮ ಪ್ರಾಮಾಣಿಕತೆಯನ್ನು ಸಮರ್ಥಿಸಿಕೊಂಡು ಪ್ರತಿಪಕ್ಷಗಳ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದರು.

ಇದನ್ನೂ ಓದಿ: ಪಿಂಪ್​ಗಳಿಂದ ಹಣ ತೆಗೆದುಕೊಳ್ಳುವ ಸಂದರ್ಭ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವೆ: ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.