ETV Bharat / state

ಬಿಜೆಪಿ ಸರ್ಕಾರದ ಅವಧಿಯ ಎಪಿಎಂಸಿ ಕಾಯ್ದೆ ಹಿಂಪಡೆಯುವ ತಿದ್ದುಪಡಿ ವಿಧೇಯಕ ಅಂಗೀಕಾರ: ಬಿಜೆಪಿ, ಜೆಡಿಎಸ್​ ವಿರೋಧ

author img

By

Published : Jul 17, 2023, 6:30 PM IST

apmc-act-repeal-amendment-bill-passed-in-assembly
ಬಿಜೆಪಿ ಸರ್ಕಾರದ ಅವಧಿಯ ಎಪಿಎಂಸಿ ಕಾಯ್ದೆ ಹಿಂಪಡೆಯುವ ತಿದ್ದುಪಡಿ ವಿಧೇಯಕ ಅಂಗೀಕಾರ: ಬಿಜೆಪಿ, ಜೆಡಿಎಸ್​ ವಿರೋಧ

ವಿಧಾನಸಭೆಯಲ್ಲಿ ಎಪಿಎಂಸಿ ಕಾಯ್ದೆ ಹಿಂಪಡೆಯುವ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ.

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ವಿವಾದಿತ ಎಪಿಎಂಸಿ ಕಾಯ್ದೆ ಹಿಂಪಡೆಯುವ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿದೆ. ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಪ್ರತಿಭಟನೆ ಮಧ್ಯೆ ವಿಧಾನಸಭೆಯಲ್ಲಿ 2023ನೇ ಸಾಲಿನ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿತು.

ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ವಿಧೇಯಕವನ್ನು ಮಂಡಿಸಿದರು. ಈ ಬಿಲ್ಅನ್ನು ತರಾತುರಿಯಲ್ಲಿ ತಂದಿಲ್ಲ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಈ ಕಾನೂನು ತಂದಿತ್ತು.‌ ಇದರಿಂದ ರೈತರಿಗೆ ಲಾಭ ಆಗಿಲ್ಲ. ಇದರಿಂದ ರಿಲಯಾನ್ಸ್, ಡಿಮಾರ್ಟ್ ನಂತವರಿಗೆ ಲಾಭ ಆಗಿದೆ. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ‌ಕಾನೂನನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಹೀಗಿದ್ದರೂ, ರಾಜ್ಯದಲ್ಲಿ ಈ ಕಾನೂನು ಹಿಂಪಡೆದಿರಲಿಲ್ಲ. ಕೇಂದ್ರ ವಾಪಸ್ ಪಡೆದರೂ ರಾಜ್ಯ ವಾಪಸ್ ಪಡೆದಿಲ್ಲ.‌ ಇದರಿಂದ ರೈತರಿಗೆ ತೊಂದರೆ ಆಗುತ್ತಿತ್ತು. ಈ ಕಾರಣಕ್ಕಾಗಿ ಕಾನೂನಿಗೆ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು.

ಈ ತಿದ್ದುಪಡಿ ವಿಧೇಯಕದಿಂದ ರೈತರಿಗೆ ಅನುಕೂಲ ಆಗಲ್ಲ: ಈ ಬಗ್ಗೆ ಮಾತನಾಡಿದ ಮಾಜಿ ಸಹಕಾರ ಸಚಿವ ಎಸ್​.ಟಿ ಸೋಮಶೇಖರ್, ಎಪಿಎಂಸಿ ಬಗ್ಗೆ ಅಧ್ಯಯನ ಮಾಡಿದರೆ ಕಾನೂನು‌ ವಾಪಸ್ ಪಡೆಯುತ್ತಿರಲಿಲ್ಲ. ಎಪಿಎಂಸಿಯನ್ನು ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಆರಂಭ ಮಾಡಿದ್ದು. ರೈತರ ಬೆಳೆಯನ್ನು ಯಾವಾಗ ಎಲ್ಲಿ ಯಾರಿಗೆ ಬೇಕಾದರೂ ಮಾರಾಟ ಮಾಡಲು ಅವಕಾಶ ಇತ್ತು. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲ ತರುವ ನಿಟ್ಟಿನಲ್ಲಿ ಕಾನೂನು ಜಾರಿಗೆ ತರಲಾಗಿತ್ತು ಎಂದರು.

ಈ ತಿದ್ದುಪಡಿ ವಿಧೇಯಕದಿಂದ ರೈತರಿಗೆ ಅನುಕೂಲ ಆಗಲ್ಲ, ಬದಲಾಗಿ ದಲ್ಲಾಳಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕಾನೂನು‌ ತಿದ್ದುಪಡಿ ಮಾಡಲಾಗಿದೆ ಎಂದರು. ಯಾರ ಜೊತೆಗೆ ಚರ್ಚೆ ಮಾಡದೆ ಈ ತಿದ್ದುಪಡಿ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇನ್ನು ತಿದ್ದುಪಡಿ ಕಾನೂನಿನ ಪ್ರಕಾರ ಎಪಿಎಂಸಿ ಹೊರತಾಗಿ ಬೇರೆ ಬೇರೆ ಖರೀದಿದಾರರಿಗೆ ಬೆಳೆ ಮಾರಾಟ ಮಾಡಿದ್ದಲ್ಲಿ ಆರು ತಿಂಗಳ ಅವಧಿಗೆ ಜೈಲು, ಐದು ಸಾವಿರ ದಂಡ ಹಾಕುವ ಅವಕಾಶ ಇದೆ ಎಂದು ಟೀಕಿಸಿದರು.

ಎಪಿಎಂಸಿಯಿಂದ ರೈತರಿಗೆ ಶೋಷಣೆ ಆಗಲಿದೆ: ಇದೇ ವೇಳೆ ಮಾತನಾಡಿದ ಆರಗ ಜ್ಞಾನೇಂದ್ರ, ರೈತರ ಶೋಷಣೆ ಎಪಿಎಂಸಿಯಿಂದ ನಿಲ್ಲಲ್ಲ. ಇದು ಸಂಘಟಿತ ಶೋಷಣೆಯಾಗಿದೆ. ಎಪಿಎಂಸಿಯಿಂದ ರೈತರಿಗೆ ಶೋಷಣೆ ಆಗಲಿದೆ. ಹಿಂದಿನ ಎಪಿಎಂಸಿ ಕಾಯ್ದೆಯಡಿ ನನಗೆ ಇಚ್ಛೆಗೆ ಅನುಸಾರ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಆದರೆ ಈ ತಿದ್ದುಪಡಿ ಅದಕ್ಕೆ ನಿರ್ಬಂಧ ಹೇರುತ್ತೆ. ದರೋಡೆಕೋರರ ಕೈಗೆ ಅಧಿಕಾರ ಕೊಟ್ಟ ರೀತಿ ಆಗುತ್ತೆ. ಎಪಿಎಂಸಿಗಾಗಿ ರೈತ ಇರಬೇಕೋ ಅಥವಾ ರೈತರಿಗಾಗಿ ಎಪಿಎಂಸಿ ಇರಬೇಕೋ?. ರಾಜಕೀಯ ಉದ್ದೇಶ ಮೀರಿ ನಿರ್ಧಾರ ಕೈಗೊಳ್ಳಬೇಕು. ರೈತರ ಕಲ್ಯಾಣ ಪರ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಮಾತನಾಡಿ, ದಲ್ಲಾಳಿಗಳ ಜೊತೆ ಸೇರಿ ಸರ್ಕಾರ ಈ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧ ಇದೆ. ನಿಮಗೆ ರೈತರ ಬಗ್ಗೆ ಕಾಳಜಿ ಇಲ್ಲ. ಇದನ್ನು ರೈತರ ಅನುಕೂಲವಾಗುವಂತೆ ಮಾಡಬೇಕು.‌ ಆತುರವಾಗಿ ತರುವ ಅಗತ್ಯ ಇಲ್ಲ. ರೈತರ ಜೊತೆ ಚರ್ಚೆ ಮಾಡಿ ತಿದ್ದುಪಡಿ ತನ್ನಿ. ಸರ್ವಾನುಮತದಿಂದ ತಿದ್ದುಪಡಿ ವಿಧೇಯಕ ತನ್ನಿ ಎಂದರು. ಬಳಿಕ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ಕೇಂದ್ರ ಸರ್ಕಾರ ಟೀಕೆ ಮಾಡುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ದಾರಿ ಮಾಡಿಕೊಟ್ಟ ಸಿಎಂ​: ಬಿ ವೈ ವಿಜಯೇಂದ್ರ ಟೀಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.