ETV Bharat / state

ದೆಹಲಿಗೆ ಪ್ರಯಾಣ ಬೆಳೆಸಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ.. ಜೆಡಿಎಸ್-ಬಿಜೆಪಿ ಮೈತ್ರಿಗೆ ಇಂದು ಅಂತಿಮ ಮುದ್ರೆ?

author img

By ETV Bharat Karnataka Team

Published : Sep 21, 2023, 3:04 PM IST

alliance-between-bjp-and-jds-former-cm-hd-kumaraswamy-went-delhi-today
ದೆಹಲಿಗೆ ಪ್ರಯಾಣ ಬೆಳೆಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

ಜೆಡಿಎಸ್​​ - ಬಿಜೆಪಿ ಮೈತ್ರಿಗೆ ಅಂತಿಮ ಮುದ್ರೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಈ ಸಂಬಂಧ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಬೆಂಗಳೂರು : ಬಹುದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಚರ್ಚೆ ಆಗುತ್ತಿರುವ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರಕ್ಕೆ ಇಂದು ಅಂತಿಮ ಮುದ್ರೆ ಬೀಳುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಲು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇಂದು ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಮೈತ್ರಿಗೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಈಗ ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಜೊತೆ ಕುಮಾರಸ್ವಾಮಿ ಅವರು ಸಮಾಲೋಚನೆ ನಡೆಸಲಿದ್ದಾರೆ. ಎರಡು ದಿನಗಳ ಕಾಲ ದೆಹಲಿಯಲ್ಲೇ ವಾಸ್ತವ್ಯ ಹೂಡುವ ಕುಮಾರಸ್ವಾಮಿ ಅವರು, ಸೀಟು ಹಂಚಿಕೆಯನ್ನು ಅಂತಿಮಗೊಳಿಸಿಕೊಂಡೇ ಅವರು ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಸೋಲು ಅನುಭವಿಸಿದ ನಂತರ ಅಧಿಕೃತ ಪ್ರತಿಪಕ್ಷ ಬಿಜೆಪಿಗೆ ಹಲವು ಸಂದರ್ಭಗಳಲ್ಲಿ ಕುಮಾರಸ್ವಾಮಿ ಸಾಥ್ ನೀಡಿದ್ದರು. ಸರ್ಕಾರದ ವಿರುದ್ಧ ನಡೆದ ಎಲ್ಲ ಪ್ರತಿಭಟನೆಗೆ ಬಿಜೆಪಿ ಜೊತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೈಜೋಡಿಸಿ ಬೆಂಬಲಿಸಿದ್ದರು. ಈ ಬೆಳವಣಿಗೆಗಳು ಮೈತ್ರಿಯ ಮುನ್ಸೂಚನೆಯಾಗಿ ಕಂಡುಬಂದಿದ್ದವು. ಅದಕ್ಕೆ ಸ್ಪಷ್ಟ ರೂಪವೆಂಬಂತೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ ಮೈತ್ರಿಗೆ ಒಪ್ಪಿಗೆ ನೀಡಿ ಬಂದಿದ್ದರು.

ಅಲ್ಲದೆ ಪ್ರಾದೇಶಿಕ ಪಕ್ಷದ ಉಳಿವಿಗೆ ಮೈತ್ರಿ ಅನಿವಾರ್ಯ ಎಂಬ ಮಾತಿನ ಮೂಲಕ ಇತ್ತೀಚೆಗೆ ನಡೆದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಮಾವೇಶದಲ್ಲಿ ಸ್ಪಷ್ಟ ಸಂದೇಶ ರವಾನಿಸಿದ್ದರು. ಇದಕ್ಕೂ ಮುನ್ನ ವಿಧಾನಸಭೆ ಅಧಿವೇಶನದಲ್ಲಿ ಕುಮಾರಸ್ವಾಮಿ ಅವರು ಭಾಷಣ ಮಾಡುವಾಗ ಪಕ್ಷದ ಉಳಿವಿಗೆ ಮೈತ್ರಿ ಅನಿವಾರ್ಯದ ಬಗ್ಗೆ ಮಾತನಾಡಿದ್ದರು. ಈಗ ಮೈತ್ರಿಯ ಸ್ವರೂಪ ಅಂತಿಮಗೊಳಿಸುವ ಮೂಲಕ ಜೆಡಿಎಸ್ ಎನ್‌ಡಿಎ ಮೈತ್ರಿಕೂಟವನ್ನು ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ.

ಮೈತ್ರಿ ಹೇಗೆ ? : ಒಕ್ಕಲಿಗ ಮತ್ತು ಜೆಡಿಎಸ್‌ ಪ್ರಾಬಲ್ಯವಿರುವ ಕಡೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬಿಜೆಪಿ ಬೆಂಬಲಿಸುವುದು ಹಾಗೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಇರುವ ಕಡೆ ಜೆಡಿಎಸ್ ಬೆಂಬಲಿಸುವ ಮೂಲಕ ಕೊಡುಕೊಳ್ಳುವಿಕೆ ಮುಖಾಂತರ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಿನಿಂದ ಹೋರಾಟ ನಡೆಸಲಿವೆ.

ಒಂದು ಇಂದಿನ ಉಭಯ ನಾಯಕರ ಸಭೆ ಫಲಪ್ರದವಾಗಿ ಮೈತ್ರಿ ಅಂತಿಮಗೊಂಡರೆ ಶುಕ್ರವಾರ ಅಥವಾ ಶನಿವಾರ ಉಭಯ ಪಕ್ಷಗಳ ನಾಯಕರು ಜಂಟಿಯಾಗಿ ಮೈತ್ರಿಯನ್ನು ದೆಹಲಿಯಲ್ಲೇ ಪ್ರಕಟಿಸುವ ಸಾಧ್ಯತೆ ಇದೆ. ಸಂಸತ್ತಿನ ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ದೆಹಲಿಯಲ್ಲೇ ಇರುವ ಹೆಚ್.ಡಿ ದೇವೇಗೌಡರು ಮೈತ್ರಿಯ ಸಾರಥ್ಯ ವಹಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಲೋಕಸಭಾ ಚುನಾವಣಾ ಪೂರ್ವ ಹೊಂದಾಣಿಕೆ ವಿಚಾರ ಯಶಸ್ವಿಯಾದರೆ, ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆ ಚುನಾವಣೆಗಳಲ್ಲೂ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್‌ ಉತ್ಸುಕವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ತುರ್ತು ಅಧಿವೇಶನ ನಡೆಸಿ 'ನೀರು ಬಿಡಲು ಸಾಧ್ಯವಿಲ್ಲ' ಎಂದು ಸುಗ್ರೀವಾಜ್ಞೆ ಜಾರಿಗೆ ತನ್ನಿ: ಮುಖ್ಯಮಂತ್ರಿ ಚಂದ್ರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.