ETV Bharat / state

ಯುವತಿ ಮೇಲೆ ಅತ್ಯಾಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಆರೋಪ: ಒಬ್ಬನ ಬಂಧನ

author img

By

Published : Jan 11, 2021, 9:20 AM IST

ಅತ್ಯಾಚಾರ ಎಸಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಬಲವಂತ ಮಾಡಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬಳು ದೂರು ನೀಡಿದ್ದಳು. ದೂರಿನ ಆಧಾರದ ಮೇಲೆ ಆರೋಪಿ ಶಬೀರ್ ಅಹಮದ್ ನನ್ನು ಬಂಧಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಈತನ ಸಹೋದರ ಮೊಹಮದ್ ರಿಲ್ವಾನ್‌ಗಾಗಿ ಶೋಧ ನಡೆಸುತ್ತಿದ್ದಾರೆ.

Bangalore
ಯುವತಿ ಮೇಲೆ ಅತ್ಯಾಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಆರೋಪ

ಬೆಂಗಳೂರು: ಸಹೋದರರಿಬ್ಬರು ಅತ್ಯಾಚಾರ ಎಸಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಬಲವಂತ ಮಾಡಿದ್ದಾರೆ ಎಂದು ಆರೋಪಿಸಿ ಯುವತಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

19 ವರ್ಷದ ಯುವತಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಶಬೀರ್ ಅಹಮದ್​​ನನ್ನು ಬಂಧಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಈತನ ಸಹೋದರ ಮೊಹಮದ್ ರಿಲ್ವಾನ್‌ಗಾಗಿ ಶೋಧ ನಡೆಸುತ್ತಿದ್ದಾರೆ.

2018ರಲ್ಲಿ ಸಂತ್ರಸ್ತ ಯುವತಿ ನಗರದ ಸ್ಪಾವೊಂದರಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಆಗಾಗ ಬರುತ್ತಿದ್ದ ಶಬೀರ್​ ಯುವತಿಯನ್ನು ಪರಿಚಯಿಸಿಕೊಂಡು ಬ್ರಿಗೇಡ್ ರಸ್ತೆಯಲ್ಲಿರುವ ಹೋಟೆಲ್‌ವೊಂದರ ಮಾಲೀಕನೆಂದು ನಂಬಿಸಿದ್ದ. ನಂತರ ಸ್ಪಾದಲ್ಲಿ ಯುವತಿಯ ಕೆಲಸ ಬಿಡಿಸಿ 2018 ಅ.1ರಂದು ಬ್ರಿಗೇಡ್ ರಸ್ತೆಯಲ್ಲಿರುವ ಹೋಟೆಲ್‌ವೊಂದರಲ್ಲಿ ಸ್ವಾಗತಕಾರಿಣಿ ಕೆಲಸಕ್ಕೆ ಸೇರಿಸಿದ್ದ. ಇದಾದ ಕೆಲ ಸಮಯದ ಬಳಿಕ ಯುವತಿಗೆ ಕರೆ ಮಾಡಿದ ಶಬೀರ್, ಕೆಲಸದ ವಿಚಾರವಾಗಿ ಮಾತನಾಡುವುದಿದೆ ಎಂದು ಹೇಳಿ ಬ್ರಿಗೇಡ್ ರಸ್ತೆಯಲ್ಲಿರುವ ಓಯೋ ಟೌನ್‌ಹೌಸ್‌ಗೆ ಕರೆಸಿಕೊಂಡಿದ್ದ. ಅಲ್ಲೇ ಇದ್ದ ರೂಮ್‌ವೊಂದಕ್ಕೆ ಯುವತಿಯನ್ನು ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೆಲಸದಿಂದ ತೆಗೆದು ಹಾಕುತ್ತೇನೆ. ನಿನ್ನ ಪಾಲಕರನ್ನು ಜೀವ ಸಹಿತ ಬಿಡುವುದಿಲ್ಲ. ನಿನ್ನ ಮೇಲೆ ಆ್ಯಸಿಡ್ ಹಾಕುವುದಾಗಿ ಬೆದರಿಸಿದ್ದ. ಇದೇ ರೀತಿ 2019ರ ಅವಧಿಯವರೆಗೆ 4 ಬಾರಿ ಶಬೀರ್ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ.

ಸಹೋದರನಿಂದಲೂ ಅತ್ಯಾಚಾರ:

2019 ಫೆಬ್ರವರಿಯಲ್ಲಿ ಯುವತಿ ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲಿ ಇನ್‌ಚಾರ್ಜ್ ಆಗಿದ್ದ ಶಬೀರ್ ಸಹೋದರ ಮೊಹಮದ್ ರಿಲ್ವಾನ್ ಯುವತಿಯ ಬಳಿ ಬಂದು, ನನ್ನ ಅಣ್ಣ ನಿನಗೆ ಅನ್ಯಾಯ ಮಾಡಿದ್ದಾನೆ. ಆತ ಇನ್ನು ಮುಂದೆ ನಿನ್ನ ತಂಟೆಗೆ ಬರುವುದಿಲ್ಲ’ ಎಂದು ಆಶ್ವಾಸನೆ ಕೊಟ್ಟು ಯುವತಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಯುವತಿಗೆ ಪ್ರೇಮ ನಿವೇದನೆ ಮಾಡಿ ವಿವಾಹವಾಗುವುದಾಗಿ ನಂಬಿಸಿ ಇಚ್ಛೆಗೆ ವಿರುದ್ಧವಾಗಿ ಈತನೂ ಹಲವು ಬಾರಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ. ಪದೇ ಪದೆ ಯುವತಿಯ ಮನೆಗೆ ಬಂದು ಈಕೆಯ ಪಾಲಕರ ಬಳಿ ನಯವಾಗಿ ಮಾತನಾಡಿ ಅವರ ವಿಶ್ವಾಸ ಗಿಟ್ಟಿಸಿಕೊಳ್ಳಲು ಯತ್ನಿಸಿ ನಿಮ್ಮ ಮಗಳನ್ನು ವಿವಾಹವಾಗುವುದಾಗಿ ಹೇಳಿ 1.50 ಲಕ್ಷ ರೂ. ಸಾಲ ಪಡೆದಿದ್ದ. ಪಾಲಕರಿಗೆ ಇಷ್ಟವಿಲ್ಲದಿದ್ದರೂ, ಯುವತಿಯ ಒತ್ತಾಯದ ಮೇರೆಗೆ ಮದುವೆಗೆ ಒಪ್ಪಿದ್ದರು. 2020 ನ.20ರಂದು ಆರ್.ಟಿ.ನಗರದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಬ್ಬರಿಗೂ ನಿಶ್ಚಿತಾರ್ಥವಾಗಿತ್ತು. ಅದರಂತೆ ಮುಂದಿನ ಜ.21ರಂದು ವಿವಾಹ ನಿಶ್ಚಯವಾಗಿ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಲಾಗಿತ್ತು.

ಓದಿ: ರೈಲ್ವೆ ಗುತ್ತಿಗೆ ಸಿಬ್ಬಂದಿಯಿಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ: ಇಬ್ಬರ ಬಂಧನ

ಈ ನಡುವೆ ನೀನು ದುಬೈಗೆ ಬಂದರೆ ನಿನಗೆ ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದ ರಿಲ್ವಾನ್, ಯುವತಿಯ ಪಾಸ್‌ಪೋರ್ಟ್ ಫೋಟೋ ಹಾಗೂ ಹಾಳೆಗಳ ಮೇಲೆ ಸಹಿ ಹಾಕಿಸಿಕೊಂಡಿದ್ದ. ಇದಾದ ಬಳಿಕ ಏಕಾಏಕಿ ನೀನು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಬೇಕು ಎಂದು ಬಲವಂತ ಮಾಡಿದ್ದ. ಸಾಲದಕ್ಕೆ ಯುವತಿಯ ಹಣೆಯಲ್ಲಿದ್ದ ಕುಂಕುಮವನ್ನು ಬಲವಂತವಾಗಿ ಅಳಿಸಿದ್ದ. ಇಷ್ಟೆಲ್ಲ ಆದ ನಂತರ ಇದೀಗ ಆರೋಪಿ ರಿಲ್ವಾನ್ ಮೊಬೈಲ್ ಸ್ವಿಚ್​ ಆಫ್​ ಮಾಡಿಕೊಂಡು ಪರಾರಿಯಾಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ಆತನ ಪರಿಚಿತರ ಬಳಿ ವಿಚಾರಿಸಿದಾಗ ಆತನಿಗೆ 2020 ಸೆ.14ರಂದು ಬೇರೆ ಹುಡುಗಿ ಜತೆ ವಿವಾಹವಾಗಿದೆ ಎಂಬುದು ತಿಳಿದು ಬಂದಿದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.