ETV Bharat / state

2026ರ ಜನಸಂಖ್ಯೆಗೆ ಅನುಗುಣವಾಗಿ ಶೇ.5ರಷ್ಟು ಶೌಚಾಲಯ: ಹೈಕೋರ್ಟ್​ಗೆ ಸರ್ಕಾರ ಮಾಹಿತಿ

author img

By ETV Bharat Karnataka Team

Published : Nov 2, 2023, 8:06 PM IST

According to the proposed population of 2026 toilets for 5% people High Court information to Govt
ಹೈಕೋರ್ಟ್

ರಾಜ್ಯದಲ್ಲಿ 2026ರ ಪ್ರಸ್ತಾವಿತ ಜನಸಂಖ್ಯೆಗೆ ಅನುಗುಣವಾಗಿ ಶೇ.5ರಷ್ಟು ಜನರಿಗೆ ಸಾಧ್ಯವಾಗುವಷ್ಟು ಶೌಚಾಲಯ ನಿರ್ಮಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಹೈಕೋರ್ಟ್​ಗೆ ಸರ್ಕಾರ ಮಾಹಿತಿ ನೀಡಿದೆ. ​

ಬೆಂಗಳೂರು: ರಾಜ್ಯದಲ್ಲಿ 2026ರ ಪ್ರಸ್ತಾವಿತ ಜನಸಂಖ್ಯೆಯ ಶೇ.5ರಷ್ಟು ‘ಬಂದು ಹೋಗುವ ಜನಸಂಖ್ಯೆ’ (ಫ್ಲೋಟಿಂಗ್ ಪಾಪುಲೇಷನ್)ಗೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶೌಚಾಲಯ ಮತ್ತು ಮೂತ್ರಾಲಯಗಳನ್ನು ನಿರ್ಮಿಸಲು ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಲೆಟ್ಜ್​ ಕಿಟ್​ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠಕ್ಕೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಎಂ.ಎನ್.ಅಜಯ್​ ನಾಗಭೂಷಣ್​ ಈ ಕುರಿತಂತೆ ಪ್ರಮಾಣ ಪತ್ರವನ್ನು ಹೈಕೋರ್ಟ್​ಗೆ ಸಲ್ಲಿಸಿದರು.

ರಾಜ್ಯದಲ್ಲಿ ಪ್ರಸ್ತುತ 312 ನಗರ ಸ್ಥಳೀಯ ಸಂಸ್ಥೆಗಳಿವೆ. ಇವುಗಳಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕವಾಗಿ ತಲಾ 6 ರಿಂದ 7 ಸೀಟ್‌ಗಳಂತೆ ಒಟ್ಟು 9,167 ಸೀಟ್‌ಗಳ ಸಾಮರ್ಥ್ಯದ 1,360 ಸಾರ್ವಜನಿಕ ಶೌಚಾಲಯಗಳಿವೆ. ಅಲ್ಲದೇ ಒಂದು ಬ್ಲಾಕ್‌ನಲ್ಲಿ ಕನಿಷ್ಠ 4 ಬ್ಲಾಕ್‌ಗಳನ್ನು ಹೊಂದಿರುವ ಒಟ್ಟು 108 ಮೂತ್ರಾಲಯಗಳಿವೆ. ಕೇಂದ್ರ ಸಾರ್ವಜನಿಕ ಆರೋಗ್ಯ ಪರಿಸರ ಸಂಘಟನೆ ಹಾಗೂ ಸ್ವಚ್ಛ ಭಾರತ್ ಮಿಷನ್ ಮಾರ್ಗಸೂಚಿಗಳಂತೆ ಪ್ರತಿ ನಗರ ಸ್ಥಳೀಯ ಸಂಸ್ಥೆಗಳ ಒಟ್ಟು ಜನಸಂಖ್ಯೆಯಲ್ಲಿ ಶೇ.5ರಷ್ಟು, ಅಂದರೆ 250 ಮಂದಿಯನ್ನು ಬಂದು ಹೋಗುವ ಜನಸಂಖ್ಯೆ ಎಂದು ಪರಿಗಣಿಸಬೇಕು. ಆ 250 ಜನಸಂಖ್ಯೆಗೆ ಒಂದು ಶೌಚಾಲಯ/ಮೂತ್ರಾಲಯ ಒದಗಿಸಬೇಕು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ 2011ರ ಜನಸಂಖ್ಯೆ ಪ್ರಕಾರ, ರಾಜ್ಯದ ನಗರ ಜನಸಂಖ್ಯೆ 1.57 ಕೋಟಿ ಇದ್ದು, 2026ರಲ್ಲಿ ಈ ಜನಸಂಖ್ಯೆ 2.01 ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಶೇ.5ರಂತೆ ಬಂದು ಹೋಗುವ ಜನಸಂಖ್ಯೆ 10 ಲಕ್ಷ ಆಗಲಿದೆ. ಈ ಶೇ.5ರಷ್ಟು ಬಂದು ಹೋಗುವ ಜನಸಂಖ್ಯೆ ಆಧರಿಸಿ ಪ್ರತಿ 250 ಮಂದಿಗೆ ಸಾರ್ವಜನಿಕ ಶೌಚಾಲಯದ ಒಂದು ಸೀಟ್ ಒದಗಿಸಬೇಕಾಗಿದೆ.

ಅದಕ್ಕಾಗಿ, 3,081 ಸೀಟ್‌ಗಳ 384 ಹೊಸ ಸಾರ್ವಜನಿಕ ಶೌಚಾಲಯಗಳನ್ನು 37.22 ಕೋಟಿ ರೂ. ವೆಚ್ಚದಲ್ಲಿ , 2,726 ಮೂತ್ರಾಲಯಗಳಿರುವ 635 ಮೂತ್ರಾಲಯ ಬ್ಲಾಕ್‌ಗಳನ್ನು 8.72 ಕೋಟಿ ರೂ. ವೆಚ್ಚದಲ್ಲಿ ಹಾಗೂ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಹೆಚ್ಚು ಜನ ಬಂದು ಹೋಗುವ ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶಗಳಲ್ಲಿ 1,223 ಸೀಟ್‌ಗಳನ್ನು 199 ಇ - ಶೌಚಾಲಯಗಳನ್ನು 30.58 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಇದನ್ನೂ ಓದಿ: ಹೈಕೋರ್ಟ್‌ನ ನೆಲಮಹಡಿ ಕಚೇರಿಗಳ ಸ್ಥಳಾಂತರಕ್ಕೆ ಕೋರಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ಈ ಕ್ರಿಯಾ ಯೋಜನೆಗೆ ಸ್ವಚ್ಛ ಭಾರತ್ ಮಿಷನ್‌ನ 3ನೇ ರಾಜ್ಯ ಮಟ್ಟದ ತಾಂತ್ರಿಕ ಸಮಿತಿ ಅನುಮೋದನೆ ನೀಡಿದೆ. ಅಲ್ಲದೇ, ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯದ 9ನೇ ರಾಷ್ಟ್ರೀಯ ಸಲಹಾ ಹಾಗೂ ಪರಿಶೀಲನಾ ಸಮಿತಿಯ ಒಪ್ಪಿಗೆಯೂ ದೊರಕಿದೆ. ಈ ಕ್ರಿಯಾ ಯೋಜನೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 9 ಕೋಟಿ ರೂ. ವೆಚ್ಚದಲ್ಲಿ 600 ಶೌಚಾಲಯಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ.

ಈ ಶೌಚಾಲಯ, ಮೂತ್ರಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಅ.3ರಂದು ಸುತ್ತೋಲೆ ಹೊರಡಿಸಲಾಗಿದೆ. ಇದಕ್ಕಾಗಿ ಪಾಲಿಕೆ ಆಯುಕ್ತರು, ಮುಖ್ಯಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಮಿತಿ ರಚಿಸುವಂತೆ ಅ.5ರಂದು ಆದೇಶ ಹೊರಡಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

ಈ ಪ್ರಮಾಣ ಪತ್ರ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿಯಲ್ಲಿ ಕಾನೂನು ಸೇವಾ ಪ್ರಾಧಿಕಾರವನ್ನು ಪ್ರತಿವಾದಿಯನ್ನಾಗಿಸಿತು. ಅಲ್ಲದೇ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ರಾಜ್ಯ ಸರ್ಕಾರದ ಕ್ರಿಯಾ ಯೋಜನೆ ಬಗ್ಗೆ ಸ್ಥಳಕ್ಕೆ ಭೇಟಿ ಕೊಟ್ಟು ಸ್ವತಂತ್ರ ಪರಿಶೀಲನಾ ವರದಿ ಸಲ್ಲಿಸಬೇಕು. ಅಲ್ಲದೇ ಕ್ರಿಯಾ ಯೋಜನೆಗೆ ಕೇಂದ್ರ ಸರ್ಕಾರದ ಹಣವೆಷ್ಟು? ರಾಜ್ಯದ ಪಾಲಿನ ಅನುದಾನ ಎಷ್ಟು? ಅದನ್ನು ಹೇಗೆ ಬಳಸಲಾಗುತ್ತಿದೆ? ಕ್ರಿಯಾ ಯೋಜನೆಯ ಅನುಷ್ಠಾನ ಹೇಗೆ? ಎಂಬ ವಿವರವಾದ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು 2024ರ ಜ.11ಕ್ಕೆ ಮುಂದೂಡಿತು.

ಇದನ್ನೂ ಓದಿ: ಸರ್ಕಾರ ಸಿಸಿಬಿ ರಚಿಸಿ ಅಧಿಸೂಚನೆ ಹೊರಡಿಸಿದ ನಂತರ ಪೊಲೀಸ್ ಠಾಣೆಯ ಅಧಿಕಾರ ಹೊಂದಿರಲಿದೆ: ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.