ETV Bharat / state

ಬಿಡಿಎ ಕಚೇರಿಗಳ ಮೇಲೆ ಎಸಿಬಿ ದಾಳಿ : ನಾಲ್ವರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು

author img

By

Published : Dec 6, 2021, 11:57 PM IST

Updated : Dec 7, 2021, 12:05 AM IST

ACB raid on bda
ಬಿಡಿಎ ಕಚೇರಿಗಳ ಮೇಲೆ ಎಸಿಬಿ ದಾಳಿ

ಬಿಡಿಎ ಕಚೇರಿ ಮೇಲೆ ನಡೆದ ಎಸಿಬಿ ದಾಳಿಗೆ ಸಂಬಂಧಿಸಿದಂತೆ ನಾಲ್ವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರ್.ಟಿ ನಗರ, ವಿಜಯನಗರ, ಹೆಚ್.ಎಸ್.ಆರ್ ಲೇಔಟ್, ಬನಶಂಕರಿ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆದಿತ್ತು.

ಬೆಂಗಳೂರು: ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಕಚೇರಿ ಮೇಲೆ ನಡೆದ ಎಸಿಬಿ ದಾಳಿಗೆ ಸಂಬಂಧಿಸಿದಂತೆ ನಾಲ್ವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಿಡಿಎ ಭೂಸ್ವಾಧೀನ ವಿಭಾಗದ ಉಪ ಕಾರ್ಯದರ್ಶಿ 1, 2, 3, 4 ಸೇರಿ ಇತರರ ವಿರುದ್ಧ ಎಸಿಬಿ ಎಫ್‌ಐಆರ್ ದಾಖಲಿಸಿದೆ. ಆದರೆ ಅಧಿಕಾರಿಗಳ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಿಲ್ಲ ಎಂದು ತಿಳಿದುಬಂದಿದೆ.

ಕಳೆದ ನ.23ರಂದು ಬಿಡಿಎ ಕೇಂದ್ರ ಕಚೇರಿ ಸೇರಿದಂತೆ ಐದು ಕಡೆ ದಾಳಿ ನಡೆದಿತ್ತು. ಆರ್.ಟಿ ನಗರ, ವಿಜಯನಗರ, ಹೆಚ್.ಎಸ್.ಆರ್ ಲೇಔಟ್, ಬನಶಂಕರಿ ಕಚೇರಿಗಳಿಂದ ಮಹತ್ವದ ದಾಖಲಾತಿಗಳನ್ನು ಜಪ್ತಿ ಮಾಡಲಾಗಿತ್ತು.

ಬಿಡಿಎ ಭೂಸ್ವಾಧೀನ ಪರಿಹಾರ ಪಾವತಿ ವೇಳೆ ಸುಳ್ಳು ಮಾಹಿತಿ ನೀಡಿ ಪರಿಹಾರವನ್ನು ಕಬಳಿಸಿರುವುದು, ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿ, ಭಾರತ್ ಎಚ್‌ಬಿಸಿಎಸ್ ಲೇಔಟ್ ನಾಗರಿಕ ನಿವೇಶನಗಳನ್ನು ಷರತ್ತು ಉಲ್ಲಂಸಿ ಹಂಚಿಕೆ ಮಾಡಿದ್ದು ಕಂಡುಬಂದಿತ್ತು. ಅಲ್ಲದೆ, ಹೆಚ್‌ಎಸ್‌ಆರ್ ಲೇಔಟ್ 3ನೇ ಸೆಕ್ಟರ್‌ನಲ್ಲಿ ಅನುಮೋದಿತ ನಕ್ಷೆ ರೀತ್ಯ ಕಟ್ಟಡ ನಿರ್ಮಿಸದೆ ನಿಯಮ ಉಲ್ಲಂಸಿದರೂ ಕ್ರಮ ಕೈಗೊಳ್ಳದಿರುವುದನ್ನು ದಾಳಿ ವೇಳೆ ಪತ್ತೆಹಚ್ಚಲಾಗಿತ್ತು.

ಕಡತಗಳ ಪರಿಶೀಲನೆಯಿಂದ ನಿವೇಶನದಾರರಿಗೆ ಹಂಚಿಕೆಯಾದ ಸ್ಥಳ ಹೊರತುಪಡಿಸಿ ಬೇರೆ ಕಡೆ ಜಾಗ ನೀಡಿರುವುದು, ಹಳೆಯ ಬಡಾವಣೆಗಳಲ್ಲಿ ನಿವೇಶನಗಳನ್ನು ಯಾರಿಗೂ ಹಂಚಿಕೆ ಮಾಡದೆ ಖಾಲಿಬಿಟ್ಟು ಖಾಸಗಿ ವ್ಯಕ್ತಿಗಳು ಶೆಡ್ ನಿರ್ಮಿಸಲು ಅವಕಾಶ ನೀಡಿರುವುದು. ನಕಲಿ ದಾಖಲೆಗಳ ಮೂಲಕ ನಿವೇಶನಗಳ ಪರಭಾರೆ, ಕೆಂಪೇಗೌಡ ಬಡಾವಣೆಯಲ್ಲಿ ನೈಜ ಭೂ ಮಾಲೀಕರಿಗೆ ಪರಿಹಾರ ನೀಡದೇ ಮೂರನೇ ವ್ಯಕ್ತಿಗೆ ಹಣ ನೀಡಿರುವುದು, ಸೇರಿದಂತೆ ಹಲವಾರು ಆರೋಪಗಳು ದಾಳಿಯ ವೇಳೆ ಬಹಿರಂಗಗೊಂಡಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಒಂದೇ ಒಂದು ಜೂಮ್ ಕರೆಯಲ್ಲಿ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಬಾಸ್!

Last Updated :Dec 7, 2021, 12:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.