ETV Bharat / state

62 ತಾಲೂಕು ಬರ ಘೋಷಣೆಗೆ ಅರ್ಹ, 134 ಇತರ ತಾಲೂಕುಗಳ ಬೆಳೆ ಸಮೀಕ್ಷೆಗೆ ಸೂಚನೆ: ಸಚಿವ ಕೃಷ್ಣ ಬೈರೇಗೌಡ

author img

By ETV Bharat Karnataka Team

Published : Sep 4, 2023, 6:50 PM IST

62-taluks-eligible-for-drought-declaration-notice-for-crop-survey-of-134-other-taluks-minister-krishna-bhairegowda
62 ತಾಲೂಕು ಬರ ಘೋಷಣೆಗೆ ಅರ್ಹ, 134 ಇತರ ತಾಲೂಕುಗಳ ಬೆಳೆ ಸಮೀಕ್ಷೆಗೆ ಸೂಚನೆ: ಸಚಿವ ಕೃಷ್ಣ ಭೈರೇಗೌಡ

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ಬೆಳೆ ಸಮೀಕ್ಷೆ ಸಂಬಂಧ ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಯಿತು.

ಬೆಂಗಳೂರು : ಬೆಳೆ ಸಮೀಕ್ಷೆಯಂತೆ 62 ತಾಲೂಕುಗಳು ಬರ ಎಂದು ಘೋಷಿಸಲು ಅರ್ಹವಾಗಿದ್ದು, ಉಳಿದಂತೆ 134 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ಮಾಡಲು ಸಚಿವ ಸಂಪುಟ ಉಪಸಮಿತಿಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ವಿಧಾನಸೌಧದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ಪ್ರಕೃತಿ ವಿಕೋಪದಿಂದ ಉದ್ಬವಿಸಬಹುದಾದ ಪರಿಸ್ಥಿತಿಯನ್ನು ಪರಾಮರ್ಶಿಸಲು ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, 19-08-2023ರಲ್ಲಿದ್ದಂತೆ 113 ತಾಲೂಕುಗಳ ಪೈಕಿ ಜಂಟಿ ಸಮೀಕ್ಷೆ ಮಾರ್ಗಸೂಚಿ ಅನ್ವಯ 62 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿದೆ. ಆದರೆ, ಜಂಟಿ ಸಮೀಕ್ಷೆಯ ನಂತರ ಬೆಳೆ ಪರಿಸ್ಥಿತಿ ಮತ್ತೆ ಕುಸಿದಿದೆ ಎಂದು ವರದಿಗಳು ಬಂದಿರುತ್ತವೆ. ಹಾಗಾಗಿ ಉಳಿದ 51 ತಾಲೂಕುಗಳಲ್ಲಿ ಮತ್ತೊಮ್ಮೆ ಜಂಟಿ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

2-09-2023ರ ಅಂತ್ಯಕ್ಕೆ ಅರ್ಹವಾಗಿರುವ 83 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ (Ground Truthing) ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ. ಒಟ್ಟು 51 ಮತ್ತು 83 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ಮುಗಿಸಿ ಒಂದು ವಾರದೊಳಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ. ಈ 134 ತಾಲೂಕುಗಳಲ್ಲಿ ಜಂಟಿ ಸಮೀಕ್ಷೆ ವರದಿ ಆಧಾರದ ಅನುಸಾರ ಬರ ಘೋಷಣೆ ತೀರ್ಮಾನಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ : 2023ರಲ್ಲಿ ರಾಜ್ಯದಲ್ಲಿ ಮುಂಗಾರು ದುರ್ಬಲಗೊಂಡು, ಜೂನ್ ತಿಂಗಳಿನಲ್ಲಿ ಶೇ.56ರಷ್ಟು ಮಳೆ ಕೊರತೆಯಾಗಿತ್ತು. ನಂತರ ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾದರೂ, ಆಗಸ್ಟ್ ತಿಂಗಳಿನಲ್ಲಿ ಶೇಕಡಾ 73 ರಷ್ಟು ಮಳೆ ಕೊರತೆಯಾಗಿದೆ. ಒಟ್ಟಾರೆ ಪ್ರಸಕ್ತ ಮುಂಗಾರಿನಲ್ಲಿ ಜೂನ್ 1ರಿಂದ ಸೆಪ್ಟೆಂಬರ್ 4 ರವರೆಗೆ ವಾಡಿಕೆಯಂತೆ 711 ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 526 ಮಿ.ಮೀ ಮಳೆಯಾಗಿದೆ. ಇದರಿಂದ ಶೇಕಡಾ 26ರಷ್ಟು ಮಳೆ ಕೊರತೆಯಾಗಿದ್ದು, ಬರ ಪರಿಸ್ಥಿತಿ ತಲೆದೋರಿದೆ. ಬರ ಪರಿಸ್ಥಿತಿಗೆ ನಿರ್ವಹಣೆಗೆ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಈವರೆಗೆ 3 ಬಾರಿ ಸಭೆ ನಡೆಸಿ ರಾಜ್ಯದಲ್ಲಿನ ಬರ ಪರಿಸ್ಥಿತಿ ಪರಾಮರ್ಶಿಸಿದೆ ಎಂದು ವಿವರಿಸಿದರು.

22-08-2023ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಕೇಂದ್ರ ಸರ್ಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಮಂತ್ರಾಲಯದ ಪರಿಷ್ಕೃತ ಬರ ಕೈಪಿಡಿ 2020ರಲ್ಲಿ ಸೂಚಿಸಲಾಗಿರುವಂತೆ ಕ್ರಮಕ್ಕೆ ಮುಂದಾಗಲಾಗಿತ್ತು. ಇದರಲ್ಲಿನ ಕಡ್ಡಾಯ ಮಾನದಂಡಗಳಾದ ಮಳೆ ಕೊರತೆ (ಶೇ. 60 ಕಡಿಮೆ ಮಳೆ), ಸತತ 3 ವಾರಗಳ ಶುಷ್ಕ ವಾತಾವರಣ ಮತ್ತು ಇತರೆ ತತ್ಪರಿಣಾಮ ಮಾನದಂಡಗಳ (ಉಪಗ್ರಹ ಆಧಾರತ ಬೆಳೆ ಸೂಚ್ಯಂಕ, ತೇವಾಂಶ ಕೊರತೆ ಹಾಗೂ ಜಲ ಸಂಪನ್ಮೂಲ ಸೂಚ್ಯಂಕ) ಅನ್ವಯ, ರಾಜ್ಯದಲ್ಲಿ ಬರ ಪರಿಸ್ಥಿತಿ ಕಂಡುಬಂದಿರುವ 113 ತಾಲೂಕುಗಳನ್ನು ಕ್ಷೇತ್ರ ಪರಿಶೀಲನೆ ಹಾಗೂ ದೃಢೀಕರಣಕ್ಕಾಗಿ (Ground Truthning) ಜಂಟಿ ಸಮೀಕ್ಷೆ ಕೈಗೊಂಡು ವರದಿಯನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು ಎಂದು ತಿಳಿಸಿದರು.

ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ : ಸಂಪುಟ ಉಪ ಸಮಿತಿಯ ತೀರ್ಮಾನಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು.‌ ಬರ ಘೋಷಣೆಯ ನಂತರ ಕೇಂದ್ರ ಸರ್ಕಾರಕ್ಕೆ ನೆರವಿಗಾಗಿ ಮನವಿ (ಮೆಮೊರಾಂಡಮ್) ಸಲ್ಲಿಸಲಾಗುವುದು. ಬರ ಘೋಷಣೆಯಾದ ದಿನದಿಂದ ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚಿಸಲು ತೀರ್ಮಾನಿಸಲಾಗಿದೆ. ಬರ ಘೋಷಣೆ ನಂತರ ಕುಡಿಯುವ ನೀರು ಕೊರತೆ ಕಂಡು ಬಂದ ವಸತಿ ಪ್ರದೇಶಗಳಲ್ಲಿ ಟ್ಯಾಂಕರ್ ಮುಖಾಂತರ ಅಥವಾ ಬಾಡಿಗೆ ಬೋರ್ ವೆಲ್ ಮುಖಾಂತರ ತುರ್ತು ಕುಡಿಯುವ ನೀರು ಒದಗಿಸುವ ಖರ್ಚು ವೆಚ್ಚವನ್ನು ಎಸ್​ಡಿಆರ್​​ಎಫ್ (SDRF) ಮುಖಾಂತರ ಭರಿಸಲು ಅನುಮತಿಸಲಾಗಿದೆ ಎಂದರು.

ರಾಜ್ಯದಲ್ಲಿ ಮೇವಿನ‌ ಕೊರತೆ ಇಲ್ಲ: ರಾಜ್ಯದಲ್ಲಿ ಸದ್ಯ 43 ವಾರಗಳವರೆಗೆ ಅಗತ್ಯ ಇರುವ ಮೇವು ಲಭ್ಯ ಇದೆ ಎಂದು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹಾಲಿ ಮೇವು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಮೇವಿನ ಕೊರತೆ ನಿಭಾಯಿಸಲು ಕ್ರಮಕೈಗೊಳ್ಳಲಾಗಿದೆ. ನೀರಿನ ವ್ಯವಸ್ಥೆ ಇರುವ ರೈತರಿಗೆ ಮೇವು ಬಿತ್ತನೆ ಬೀಜದ ಕಿಟ್ ವಿತರಿಸಲು ಪಶು ಸಂಗೋಪನೆ ಇಲಾಖೆಗೆ 20 ಕೋಟಿ ರೂ. ಮೊತ್ತ ವಿತರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಎಸ್​ಡಿಆರ್​ಎಫ್​​ನಡಿ 600 ಕೋಟಿ ರೂ. ಲಭ್ಯ: ಸದ್ಯ ಬರ ನಿರ್ವಹಣೆಗಾಗಿ ಎಸ್​ಡಿಆರ್​ಎಫ್​ನಡಿ 600 ಕೋಟಿ ರೂ. ಹಣ ಲಭ್ಯವಿದೆ. ಡಿಸಿಗಳ ಪಿಡಿ ಖಾತೆಯಲ್ಲಿ 529 ಕೋಟಿ ರೂ. ಹಣ ಲಭ್ಯ ಇದೆ. ಜಿಲ್ಲಾ ಸಿಇಒಗಳ ಖಾತೆಯಲ್ಲೂ ತಲಾ 1 ಕೋಟಿ ರೂ. ಆರ್​ಡಿಪಿಆರ್ ಇಲಾಖೆ ಬಿಡುಗಡೆ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ 7 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ವಿವರಿಸಿದರು.

ಈ ಬಾರಿ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆ ಕೊರತೆ ಎದುರಾಗಿದೆ. ಉತ್ತರ ಒಳನಾಡಿನಲ್ಲಿ ಕೆಲವೆಡೆ ಮಳೆಯ ಕೊರತೆ ಇದೆ. ಮಲೆನಾಡಿನಲ್ಲೂ ಮಳೆಯ ಕೊರತೆ ಇದೆ. 13,000 ಹೆಕ್ಟೇರ್​ನಲ್ಲಿ ಪ್ರಾಥಮಿಕ ಬೆಳೆ ಸಮೀಕ್ಷೆ ನಡೆಸಿದ್ದೇವೆ. ಮುಂದೆ ಮಳೆ ಆದ ಕೂಡಲೇ ಬೆಳೆ ಆಗುತ್ತೆ ಎಂಬ ಭ್ರಮೆಯಲ್ಲಿ ಸರ್ಕಾರ ಇಲ್ಲ ಎಂದರು.

196 ತಾಲೂಕುಗಳಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ: ರಾಜ್ಯದ ಸುಮಾರು 196 ತಾಲೂಕುಗಳಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. ಮುಂದೆ ಮಳೆಯಾಗುವುದರಿಂದ ಏನೂ ಪ್ರಯೋಜನ ಆಗುವುದಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ : ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಚೇರಿಗೆ ರೈತರಿಂದ ಮುತ್ತಿಗೆ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.