ETV Bharat / state

2022-23 ಬಜೆಟ್ ತಯಾರಿ ಆರಂಭ: ತೆರಿಗೆ ಪರಿಷ್ಕರಣೆ ಸೇರಿ ಆದಾಯ ವೃದ್ಧಿ, ವೆಚ್ಚ ಮಿತಿಗೆ ಆರ್ಥಿಕ ಇಲಾಖೆ ನಿರ್ದೇಶನ!

author img

By

Published : Oct 24, 2021, 5:05 PM IST

2022-23ನೇ ಸಾಲಿನ ಬಜೆಟ್​​ಗಾಗಿ ಆರ್ಥಿಕ ಇಲಾಖೆ ಈಗಿನಿಂದಲೇ ತಯಾರಿ ಪ್ರಾರಂಭಿಸಿದೆ. ಈ ಸಂಬಂಧ ಆರ್ಥಿಕ ಇಲಾಖೆ ಎಲ್ಲಾ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿದ್ದು, ಆರ್ಥಿಕ ಶಿಸ್ತು, ವಾಸ್ತವ ವೆಚ್ಚ ಅಂದಾಜು, ರಾಜಸ್ವ ಸಂಗ್ರಹಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ನೀಡಿದೆ.

2022-23 state budget preparation begins
ಆರ್ಥಿಕ ಇಲಾಖೆ ಸುತ್ತೋಲೆ

ಬೆಂಗಳೂರು:2022-23 ಬಜೆಟ್​ಗಾಗಿ ಆರ್ಥಿಕ ಇಲಾಖೆ ಈಗಾಗಲೇ ತಯಾರಿ ಆರಂಭಿಸಿದೆ. ಆರ್ಥಿಕ ಇತಿ-ಮಿತಿಯೊಳಗೆ ವೆಚ್ಚ ಅಂದಾಜು ಮಾಡಿ ಕಳುಹಿಸಿಕೊಡುವಂತೆ ಎಲ್ಲಾ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿದೆ. ರಾಜಸ್ವ ಸಂಗ್ರಹ ವೃದ್ಧಿ, ವೆಚ್ಚ ಮಿತಿಯೊಂದಿಗೆ ಬಜೆಟ್ ಅಂದಾಜು ತಯಾರಿಸುವಂತೆ ಎಲ್ಲಾ ಇಲಾಖೆಗಳಿಗೆ ಕಠಿಣ ನಿರ್ದೇಶಗಳನ್ನು ನೀಡಿದೆ.

ಸತತ ಎರಡು ವರ್ಷ ಕೋವಿಡ್ ಲಾಕ್‌ಡೌನ್​​ನಿಂದ ರಾಜ್ಯ ತತ್ತರಿಸಿ ಹೋಗಿದೆ. ಲಾಕ್‌ಡೌನ್​​ನಿಂದ ರಾಜ್ಯದ ಆರ್ಥಿಕತೆ ಬುಡಮೇಲಾಗಿದೆ. ಲಾಕ್‌ಡೌನ್​​ನಿಂದ ತಲೆದೋರಿದ ಆರ್ಥಿಕ ಸಂಕಷ್ಟದಿಂದ ರಾಜ್ಯದ ಬಜೆಟ್ ಅನುಷ್ಠಾನವೇ ಸಾಧ್ಯವಾಗಿಲ್ಲ. ಆದಾಯ ಕೊರತೆಯಿಂದ ಬಜೆಟ್​​ನಲ್ಲಿ ಘೋಷಿಸಲಾದ ಅನುದಾನ ಪೂರೈಕೆ ಕಷ್ಟ ಸಾಧ್ಯವಾಗುತ್ತಿದೆ. ಇದೀಗ ಕೊರೊನಾ, ಆರ್ಥಿಕ ಸಂಕಷ್ಟದ ಕರಿನೆರಳಲ್ಲೇ 2022-23ನೇ ಸಾಲಿನ ಬಜೆಟ್​​ಗಾಗಿ ಆರ್ಥಿಕ ಇಲಾಖೆ ಈಗಿನಿಂದಲೇ ತಯಾರಿ ಪ್ರಾರಂಭಿಸಿದೆ. ಈ ಸಂಬಂಧ ಆರ್ಥಿಕ ಇಲಾಖೆ ಎಲ್ಲಾ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿದ್ದು, ಆರ್ಥಿಕ ಶಿಸ್ತು, ವಾಸ್ತವ ವೆಚ್ಚ ಅಂದಾಜು, ರಾಜಸ್ವ ಸಂಗ್ರಹಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ನೀಡಿದೆ.

ಆರ್ಥಿಕ ಇಲಾಖೆ ನೀಡಿದ ಖಡಕ್ ಸೂಚನೆಗಳೇನು?:

ಮುಂದಿನ ವರ್ಷದ ಬಜೆಟ್ ಅಂದಾಜು ಈ ವರ್ಷ ಪರಿಷ್ಕೃರಿಸಲ್ಪಟ್ಟ ಅಂದಾಜು ಮೊತ್ತದ ಮರುಕಳಿಕೆಯಾಗಬಾರದು. ಮುಂದಿನ ಬಜೆಟ್ ಅಂದಾಜು ಮಾಡುವಾಗ ಸಂಗ್ರಹಿಸಬೇಕಾದ ಬಾಕಿ ತೆರಿಗೆ, ಮುಂದಿನ ವರ್ಷಗಳಲ್ಲಿನ ಅಂದಾಜು ಮೊತ್ತ, ಕಳೆದ ವರ್ಷದ ನಿರ್ವಹಣೆ, ಪ್ರಸಕ್ತ ವರ್ಷದ ಪ್ರಗತಿ ಇತ್ಯಾದಿಗಳನ್ನು ಪರಿಗಣಿಸುವಂತೆ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ.

2022-23 state budget preparation begins
ಆರ್ಥಿಕ ಇಲಾಖೆ ಸುತ್ತೋಲೆ

ಪ್ರಸಕ್ತ ಇರುವ ತೆರಿಗೆ ರಚನೆ ಅಥವಾ ಹೊಸ ತೆರಿಗೆ ಪ್ರಸ್ತಾಪಿಸುವ ಮೂಲಕ ಹೆಚ್ಚುವರಿ ಸಂಪನ್ಮೂಲ ಕ್ರೋಢೀಕರಣದ ಸಾಧ್ಯತೆಗಳ ಬಗ್ಗೆ ಇಲಾಖೆಗಳ ಮುಖ್ಯಸ್ಥರು ಪರಿಶೀಲಿಸಿ, ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ವೃದ್ಧಿಸದ ತೆರಿಗೇತರ ರಾಜಸ್ವ ಬಗ್ಗೆ ಆಕ್ಷೇಪ:

ಆರ್ಥಿಕ ಇಲಾಖೆ ತನ್ನ ಸುತ್ತೋಲೆಯಲ್ಲಿ ಪ್ರಗತಿ ಕಾಣದ ತೆರಿಗೇತರ ರಾಜಸ್ವದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಕೆಲ ವರ್ಷಗಳಿಂದ ತೆರಿಗೇತರ ರಾಜಸ್ವ ಸಂಗ್ರಹ ಇಳಿಕೆಯಾಗುತ್ತಿದ್ದು, ಸಾರ್ವಜನಿಕ ಉದ್ದಿಮೆಗಳ ಕಳಪೆ ಪ್ರದರ್ಶನ, ಕುಂಠಿತಗೊಂಡಿರುವ ವೆಚ್ಚ ಭರಿಸುವಿಕೆಗಳಿಂದ ತೆರಿಗೇತರ ರಾಜಸ್ವ ವೃದ್ಧಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಕಾಲಕಾಲಕ್ಕೆ ಆಡಳಿತಾತ್ಮಕ ಇಲಾಖೆ ನಿಗಾ ವಹಿಸದೇ ಇರುವುದು, ಬಳಕೆ ಶುಲ್ಕ ಪರಿಷ್ಕರಿಸದೇ ಇರುವ ಕಾರಣ ತೆರಿಗೇತರ ರಾಜಸ್ವ ಸಂಗ್ರಹ ಕುಂಠಿತವಾಗಿದೆ ಎಂದು ಆರ್ಥಿಕ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ. ಹೀಗಾಗಿ ತೆರಿಗೇತರ ರಾಜಸ್ವ ಸಂಗ್ರಹ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಾ ಆಡಳಿತಾತ್ಮಕ ಇಲಾಖೆಗಳು ತೆರಿಗೇತರ ಆದಾಯ ಮೂಲಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ಬಳಕೆ ಶುಲ್ಕ ಮತ್ತು ದರ ಪರಿಷ್ಕರಿಸಲು ಕ್ರಮ ಕೈಗೊಳ್ಳುವಂತೆ ಇಲಾಖೆಗಳಿಗೆ ಖಡಕ್ ನಿರ್ದೇಶನ ನೀಡಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ ತಮ್ಮ ಇಲಾಖೆಯ ತೆರಿಗೇತರ ಆದಾಯವನ್ನು ಪರಿಷ್ಕರಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ಪರಿಷ್ಕರಣೆಯ ವಿವರ, ದರ, ಇಸವಿಯ ಮಾಹಿತಿಯನ್ನು 2022-23ಸಾಲಿನ ಬಜೆಟ್ ಅಂದಾಜಿನ ಜೊತೆಗೆ ಕಳುಹಿಸಿಕೊಡುವಂತೆ ತಿಳಿಸಲಾಗಿದೆ. ವಿವಿಧ ಸಾರ್ವಜನಿಕ ಉದ್ದಿಮೆಗಳಿಂದ ಬಡ್ಡಿ, ಡಿವಿಡೆಂಡ್ ಬಂಡವಾಳ ವಸೂಲಾತಿ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ.

ಬಾಕಿಗಳು ಹಾಗೂ ಸಾಲ ವಸೂಲಾತಿಗೆ ಕ್ರಮ ವಹಿಸಿ:

ಇದೇ ವೇಳೆ ಆರ್ಥಿಕ ಇಲಾಖೆ ಎಲ್ಲಾ ಇಲಾಖೆಗಳಿಗೆ ಬಾಕಿ ಮೊತ್ತ ಹಾಗೂ ಸಾಲ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಬದ್ಧ ವೆಚ್ಚ, ಆಡಳಿತ ವೆಚ್ಚ ಭರಿಸುವ ನಿಟ್ಟಿನಲ್ಲಿ ಮುಂದಿನ ಬಜೆಟ್​​ಗೆ ಹಣ ಹೊಂದಿಸಲು ಸಂಪನ್ಮೂಲ ವೃದ್ಧಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದೆ.

ಸರ್ಕಾರಿ ಕಂಪೆನಿಗಳು, ಸಾರ್ವಜನಿಕ ಉದ್ದಿಮೆ, ಸಹಕಾರ ಬ್ಯಾಂಕ್, ಸ್ಥಳೀಯ ಸಂಸ್ಥೆ, ಎನ್​ಜಿಒಗಳಿಗೆ ಮಂಜೂರಾದ ಸಾಲಗಳ ವಸೂಲಾತಿ ಹಲವು ವರ್ಷಗಳಿಂದ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಆರ್ಥಿಕ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಸಾಲ ನೀಡುವ ಪ್ರಮಾಣ ಹೆಚ್ಚಾಗಿದ್ದರೆ, ಸಾಲ ವಸೂಲಾತಿ ಪ್ರಮಾಣ ನಿಂತಲ್ಲೇ ನಿಂತಿದೆ. ಹೀಗಾಗಿ ಈ ಬಗ್ಗೆ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದೆ. ಬಜೆಟ್ ಅಂದಾಜು ಮೊತ್ತ ತಯಾರಿಸುವಾಗ ಸಂಬಂಧಿತ ಅಧಿಕಾರಿಗಳು ವಯಕ್ತಿಕ ನಿಗಾವಹಿಸಬೇಕು. ಆದ್ಯತೆ ಮೇರೆಗೆ ಈ ಬಜೆಟ್ ಅಂದಾಜನ್ನು ಆರ್ಥಿಕ ಇಲಾಖೆಗೆ ಪ್ರತಿ ಇಲಾಖೆಗಳ ಕಾರ್ಯದರ್ಶಿ ಮೂಲಕ ನವೆಂಬರ್ 20ರೊಳಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.