ETV Bharat / state

ಚಪ್ಪಲಿಯೊಳಗೆ ಮರೆಮಾಚಿ 1.2 ಕೆಜಿ ಚಿನ್ನ ಕಳ್ಳ ಸಾಗಣೆ

author img

By

Published : Mar 15, 2023, 2:40 PM IST

Updated : Mar 15, 2023, 4:17 PM IST

ವಿದೇಶದಿಂದ ವಿಮಾನದ ಮೂಲಕ ಬಂದ ಪ್ರಯಾಣಿಕನೊಬ್ಬ ಅಕ್ರಮವಾಗಿ ಚಿನ್ನ ಸಾಗಣೆ ಮಾಡಿ ಕಸ್ಟಮ್ಸ್​ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.

1.2 kg gold smuggled hiding inside shoe
ಚಪ್ಪಲಿಯೊಳಗೆ ಮರೆಮಾಚಿ 1.2 ಕೆಜಿ ಚಿನ್ನ ಕಳ್ಳ ಸಾಗಣೆ

ದೇವನಹಳ್ಳಿ: ಚಪ್ಪಲಿಯೊಳಗೆ ಮರೆಮಾಚಿ ಅಕ್ರಮವಾಗಿ 1.2 ಕೆಜಿ ಚಿನ್ನ ಸಾಗಿಸಲು ಪ್ರಯತ್ನಿಸಿದ ಪ್ರಯಾಣಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನಕ್ಕೆ ಮೇ 12 ರಂದು 6 ಇ-076 ವಿಮಾನದಲ್ಲಿ ಬಂದ ಪ್ರಯಾಣಿಕನನ್ನು ಸಂಶಯದ ಮೇಲೆ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ಪ್ರಯಾಣಿಕ ತನ್ನ ಚಪ್ಪಲಿಯೊಳಗೆ ಮರೆಮಾಚಿ ಚಿನ್ನದ ಬಿಸ್ಕೆಟ್​ಗಳನ್ನು ಇಟ್ಟಿರುವುದು ತಪಾಸಣೆಯ ವೇಳೆ ಬೆಳಕಿಗೆ ಬಂದಿದೆ. 1205 ಗ್ರಾಂ ತೂಕದ 69,40,800 ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ವಾರದ ಹಿಂದೆ ಮತ್ತೊಂದು ಪ್ರಕರಣ: ಮಾರ್ಚ್​ 8 ರಂದು ಕೂಡ ಇದೇ ರೀತಿ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು ಕಸ್ಟಮ್ಸ್​ ಅಧಿಕಾರಿಗಳು ಪತ್ತೆ ಹಚ್ಚಿದ್ದರು. GF-220 ವಿಮಾನದಲ್ಲಿ ಬಹ್ರೈನ್​ನಿಂದ ಬೆಂಗಳೂರು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕ ಬಂದಿಳಿದಿದ್ದು, ಆತನ ನಡವಳಿಕೆಯಲ್ಲಿ ಸಂಶಯ ಕಂಡು ಬಂದ ಹಿನ್ನೆಲೆ ಕಸ್ಟಮ್ಸ್​ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ, ಪೇಸ್ಟ್​ ರೂಪದಲ್ಲಿ ಚಿನ್ನವನ್ನು ತನ್ನ ಗುದನಾಳದಲ್ಲಿ ಮರೆಮಾಚಿಕೊಂಡು ಬಂದಿರುವುದು ಪತ್ತೆಯಾಗಿದೆ.

ಪ್ರಯಾಣಿಕನನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್​ ಅಧಿಕಾರಿಗಳು ಆತನಲ್ಲಿದ್ದ 65,03,656 ಮೌಲ್ಯದ 1171 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್​ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಚಿನ್ನ ಕಸಿದು ಪರಾರಿಯಾಗಿದ್ದ ಪೊಲೀಸ್​ ಸಿಬ್ಬಂದಿ: ಮೊನ್ನೆಯಷ್ಟೆ ಬೆಂಗಳೂರಿನಲ್ಲಿ ಚಿನ್ನ ಖರೀದಿಸಿ ವಾಪಸ್​ ಆಗುತ್ತಿದ್ದವರ ಕೈಯಿಂದ ಸುಮಾರು 1 ಕೋಟಿ 12 ಲಕ್ಷ ಮೌಲ್ಯದ ಚಿನ್ನ ಕಸಿದು ಆರೋಪಿಗಳು ಪರಾರಿಯಾಗಿದ್ದ ಘಟನೆ ನಡೆದಿತ್ತು. ಆರೋಪಿಗಳಲ್ಲಿ ಇಬ್ಬರು ರೈಲ್ವೆ ಪೊಲೀಸ್​ ಸಿಬ್ಬಂದಿಯಾಗಿದ್ದು, ಅವರ ಸಹಿತ ಮೂವರು ಆರೋಪಿಗಳನ್ನು ನಿನ್ನೆ ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದರು. ಕಾನ್​ಸ್ಟೆಬಲ್​ಗಳಾದ ಮೌನೇಶ್​, ಸಿದ್ದಪ್ಪ ಹಾಗೂ ರಾಯಚೂರು ಮೂಲದ ಮೌನೇಶ್​ ಬಂಧಿತ ಆರೋಪಿಗಳು.

ರಾಯಚೂರಿನಲ್ಲಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್​ ರಜಾಕ್​ ಹಾಗೂ ಮಲ್ಲಯ್ಯ ಬೆಂಗಳೂರಿಗೆ ಚಿನ್ನ ಖರೀದಿಸಲು ಬಂದಿದ್ದರು. ಮೌನೇಶ್​ ನೀಡಿದ ಮಾಹಿತಿ ಆಧಾರದಲ್ಲಿ ಚಿನ್ನ ಖರೀದಿಸಿ ವಾಪಸ್​ ರಾಯಚೂರಿಗೆ ಹೋಗಲು ಆನಂದ್​ ರಾವ್​ ಸರ್ಕಲ್​ ಬಳಿ ಬಸ್​ಗೆ ಕಾಯುತ್ತಿದ್ದಾಗ ಅಲ್ಲಿಗೆ ಬಂದ ಆರೋಪಿಗಳು ತಾವು ಪೊಲೀಸರು ಎಂದು ಪರಿಚಯಿಸಿಕೊಂಡು, ಅವರ ಕೈಯಲ್ಲಿದ್ದ ಚಿನ್ನ ಇದ್ದ ಬ್ಯಾಗ್​ ಅನ್ನು ಕಸಿದುಕೊಂಡಿದ್ದರು. ಎಲ್ಲರನ್ನೂ ಆಟೋದಲ್ಲಿ ಕರೆದುಕೊಂಡು ಬಂದ ಆರೋಪಿಗಳು, ಅರ್ಧದಲ್ಲೇ ಅವರನ್ನು ಇಳಿಸಿ ಡಿಸಿಪಿ ಕಚೇರಿಗೆ ಬರುವಂತೆ ಹೇಳಿ ಪರಾರಿಯಾಗಿದ್ದರು. ಅವರ ಸೂಚನೆಯಂತೆ ಅಬ್ದುಲ್​ ಹಾಗೂ ಮಲ್ಲಯ್ಯ ಉಪ್ಪಾರಪೇಟೆ ಠಾಣೆಗೆ ಹೋಗಿ ವಿಚಾರಿಸಿದಾಗ ಆರೋಪಿಗಳು ಆ ಠಾಣೆಯ ಸಿಬ್ಬಂದಿಯಲ್ಲ ಎನ್ನುವುದು ಗೊತ್ತಾಗಿದೆ. ಆಗ ಅಲ್ಲೇ ಪೊಲೀಸರಿಗೆ ಘಟನೆ ಕುರಿತು ವಿವರಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಉಪ್ಪಾರಪೇಟೆ ಠಾಣೆ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದರು. ಪೊಲೀಸರು ಆರೋಪಿಗಳ ಬಳಿ ಇದ್ದ ಚಿನ್ನ ಹಾಗೂ ನಗದು ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: "ಕೈ" ಕೊಟ್ಟ ಏರ್​ ಇಂಡಿಯಾ ವಿಮಾನ ಸಿಬ್ಬಂದಿ ಚಿನ್ನಸಾಗಣೆ ಕಳ್ಳಾಟ: 8 ಕೆಜಿ ಬಂಗಾರ ವಶ

Last Updated : Mar 15, 2023, 4:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.