ETV Bharat / state

ದೇವನಹಳ್ಳಿಯಲ್ಲಿ ರಸ್ತೆ ಬದಿ ಬಿದ್ದಿದ್ದ ಡ್ರೈನ್​ ಕ್ಲೀನರ್​ ಸೇವಿಸಿ ಮೂವರು ಮಕ್ಕಳು ಅಸ್ವಸ್ಥ : ಆಸ್ಪತ್ರೆಗೆ ದಾಖಲು

author img

By ETV Bharat Karnataka Team

Published : Sep 2, 2023, 4:29 PM IST

Updated : Sep 2, 2023, 6:15 PM IST

three-children-got-sick-after-consuming-drain-cleaner
ರಸ್ತೆ ಬದಿ ಬಿದ್ದಿದ್ದ ಡ್ರೈನ್​ ಕ್ಲೀನರ್​ ಸೇವಿಸಿ ಮೂವರು ಮಕ್ಕಳು ಅಸ್ವಸ್ಥ : ಆಸ್ಪತ್ರೆಗೆ ದಾಖಲು

ರಸ್ತೆ ಬದಿ ಬಿದ್ದಿದ್ದ ಡ್ರೈನ್​ ಕ್ಲೀನರ್ ಸೇವಿಸಿ ಮೂವರು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ದೇವನಹಳ್ಳಿಯ ವಿನಾಯಕನಗರದಲ್ಲಿ ನಡೆದಿದೆ.

ದೇವನಹಳ್ಳಿಯಲ್ಲಿ ರಸ್ತೆ ಬದಿ ಬಿದ್ದಿದ್ದ ಡ್ರೈನ್​ ಕ್ಲೀನರ್​ ಸೇವಿಸಿ ಮೂವರು ಮಕ್ಕಳು ಅಸ್ವಸ್ಥ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ಮನೆ ಮುಂದೆ ಆಟ ಆಡುತ್ತಿದ್ದ ಮೂವರು ಮಕ್ಕಳು ರಸ್ತೆಯಲ್ಲಿದ್ದ ವಿಷಕಾರಿ ಡ್ರೈನ್​ ಕ್ಲೀನರ್​ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿರುವ ಘಟನೆ ಜಿಲ್ಲೆಯ ದೇವನಹಳ್ಳಿ ಪಟ್ಟಣದ ವಿನಾಯಕ ನಗರದಲ್ಲಿ ಇಂದು ನಡೆದಿದೆ. ಅಸ್ವಸ್ಥಗೊಂಡ ಮಕ್ಕಳನ್ನು ಸುಚಿತ್ರಾ (3), ಲೋಹಿತ್ಯಾ (4), ವೇದಾಂತ್ (3) ಎಂದು ಗುರುತಿಸಲಾಗಿದೆ. ಮಕ್ಕಳನ್ನು ದೇವನಹಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಮಕ್ಕಳ ಪಾಲಕರು ಕೂಲಿ ಕಾರ್ಮಿಕರಾಗಿದ್ದು, ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ತೆರಳಿದ್ದರು. ಈ ವೇಳೆ ಮೂವರು ಮಕ್ಕಳು ಮನೆಯ ಮುಂದಿನ ರಸ್ತೆಯಲ್ಲಿ ಆಟ ಆಡುತ್ತಿದ್ದರು. ಈ ವೇಳೆ ಮಕ್ಕಳಿಗೆ ವಿಷಕಾರಿ ಡ್ರೈನ್​ ಕ್ಲೀನರ್ ಸಿಕ್ಕಿದೆ. ಇದನ್ನು ಬಾಯಿಗೆ ಹಾಕಿದ್ದು, ಇದರಿಂದ ಅಸ್ವಸ್ಥಗೊಂಡು ರಕ್ತವಾಂತಿ ಮಾಡಿದ್ದಾರೆ. ಬಳಿಕ ಈ ಮಕ್ಕಳನ್ನು ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಕ್ಕಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಹೋರಾಟಗಾರ್ತಿ ಸುಜಾತ ಅವರು, ಈ ಮೂವರು ಕೂಲಿ ಕಾರ್ಮಿಕರ ಮಕ್ಕಳಾಗಿದ್ದಾರೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಕೂಲಿ ಕೆಲಸಕ್ಕೆ ತೆರಳಿದ್ದಾರೆ. ಈ ಮೂವರು ಮಕ್ಕಳು ಮನೆಮುಂದಿನ ರಸ್ತೆಯಲ್ಲಿ ಆಟ ಆಡುತ್ತಿದ್ದರು. ಈ ವೇಳೆ ಈ ಮಕ್ಕಳಿಗೆ ಸಕ್ಕರೆ ತರ ಇರುವ D-klog ಎಂಬ ಡ್ರೈನ್​ ಕ್ಲೀನರ್​ ಸಿಕ್ಕಿದೆ. ಇದನ್ನು ಮಕ್ಕಳು ಬಾಯಿಗೆ ಹಾಕಿಕೊಂಡಿದ್ದು, ಈ ವೇಳೆ ಮೂವರು ಅಸ್ವಸ್ಥಗೊಂಡಿದ್ದಾರೆ. ಈ ವೇಳೆ ಮಕ್ಕಳು ರಕ್ತವಾಂತಿ ಮಾಡುತ್ತಿರುವುದನ್ನು ಇಬ್ಬರು ನೋಡಿದ್ದು, ತಕ್ಷಣ ಮೂವರನ್ನು ಕರೆತಂದು ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯರು ಮಕ್ಕಳಿಗೆ ಯಾವುದೇ ತೊಂದರೆ ಇಲ್ಲ. 8 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಅಸ್ವಸ್ಥ ಮಗುವಿನ ತಂದೆ ವಸಂತ್​ ಮಾತನಾಡಿ, ನಾವು ಬೆಳಗ್ಗೆ ಕೂಲಿ ಕೆಲಸಕ್ಕೆಂದು ಹೋಗಿದ್ದೆವು. ಈ ವೇಳೆ ಮಕ್ಕಳಿಗೆ ಶಾಲೆಗೆ ತೆರಳುವಂತೆ ಹೇಳಿ ತಿಂಡಿಗೆ ಹಣ ಕೊಟ್ಟು ಕೆಲಸಕ್ಕೆ ತೆರಳಿದ್ದೆ. ಈ ವೇಳೆ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ನಮಗೆ ಕರೆ ಮಾಡಿ ಹೇಳಿದರು. ತಕ್ಷಣ ಆಸ್ಪತ್ರೆಗೆ ಬಂದು ನೋಡಿದಾಗ ಘಟನೆ ತಿಳಿದುಬಂದಿದೆ ಎಂದು ಹೇಳಿದರು.

ಸ್ಥಳಕ್ಕೆ ದೇವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಷಕಾರಿ ಪದಾರ್ಥವನ್ನು ರಸ್ತೆಯಲ್ಲಿ ಎಸೆದಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಬೆಳಗಾವಿ: ಆಸ್ತಿಗಾಗಿ ಉಪ್ಪಿಟ್ಟಿನಲ್ಲಿ ಗಂಡನಿಗೆ ವಿಷ ಹಾಕಿದ ಪತ್ನಿ; ಪತಿ ಐಸಿಯುಗೆ, ನಾಯಿ-ಬೆಕ್ಕು ಸಾವು

Last Updated :Sep 2, 2023, 6:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.