ETV Bharat / state

ಅಕ್ರಮ ನಿವೇಶನದಲ್ಲಿ ಮನೆ: ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿಲ್ಲ ಕಾರ್ಯನಿರ್ವಾಹಕ ಅಧಿಕಾರಿ ಮಾತು?

author img

By

Published : Jun 11, 2021, 8:26 AM IST

Updated : Jun 11, 2021, 9:40 AM IST

illegal-scandal-in-the-hodonahalli-gram-panchayat
ಅಕ್ರಮ ನಿವೇಶನದಲ್ಲಿ ಮನೆ ನಿರ್ಮಾಣ

ಆಶ್ರಯ ಯೋಜನೆಯಡಿ ಹಂಚಿಕೆಯಾದ ನಿವೇಶನದಲ್ಲಿ ಹರೀಶ್ ಎಂಬುವವರು ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಇವರ ಮನೆಗೆ ಅಂಟಿಕೊಂಡಂತೆ ಪ್ಯಾಸೇಜ್ ಸಹ ಬಿಡದೆ ಶಿವಕುಮಾರ್​ ಎಂಬುವವರು ಮನೆ ಕಟ್ಟಲು ಮುಂದಾಗಿದ್ದಾರೆ ಎಂಬ ಆರೋಪ ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿಯಲ್ಲಿ ಕೇಳಿಬಂದಿದೆ.

ದೊಡ್ಡಬಳ್ಳಾಪುರ: ಆಶ್ರಯ ಯೋಜನೆಯಡಿ ಮಂಜೂರು ಮಾಡಲಾಗಿದ್ದ ನಿವೇಶನ ಜಾಗವನ್ನು ಪ್ರಭಾವಿಗಳು ಮಧ್ಯಪ್ರವೇಶಿಸಿ ಗ್ರಾಮ ಪಂಚಾಯಿತಿ ಮೂಲಕ ಅಕ್ರಮ ಖಾತೆ ಮಾಡಿಸಿಕೊಂಡು ತಮ್ಮ ಬೆಂಬಲಿಗರಿಗೆ ನೀಡಿರುವ ಆರೋಪ ಜಿಲ್ಲೆಯ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಳಿಬಂದಿದೆ. ಈ ಬಗ್ಗೆ ಸ್ಥಳೀಯರು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರನ್ನು ನೀಡಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂಬ ಮಾತುಗಳು ಕೇಳಿಬಂದಿದೆ.

ಅಕ್ರಮ ನಿವೇಶನದಲ್ಲಿ ಮನೆ ನಿರ್ಮಾಣದ ಕುರಿತು ಹರೀಶ್​ ಬೇಸರ ವ್ಯಕ್ತಪಡಿಸಿದ್ದಾರೆ

ವಿವಾದವೇನು?: 1991ರಲ್ಲಿ ಆಶ್ರಯ ಯೋಜನೆಯಡಿ ಗ್ರಾಮದ 35 ಜನರಿಗೆ ನಿವೇಶನ ಮಂಜೂರು ಮಾಡಲಾಗಿತ್ತು. 40 × 30 ಅಳತೆಯಲ್ಲಿ ನಿವೇಶನದ ಬದಲಿಗೆ 40×25 ಅಳತೆಯ ನಿವೇಶನ ಹಂಚಿಕೆ ಮಾಡಿದ ಪ್ರಭಾವಿಗಳು ಉಳಿದ ಜಾಗವನ್ನು ಹಾಗೆಯೇ ಬಿಟ್ಟುಕೊಂಡಿದ್ದು, 2014ರಲ್ಲಿ ಇದೇ ಜಾಗದಲ್ಲಿ ಗ್ರಾಮ ಪಂಚಾಯಿತಿ ಮೂಲಕ ಅಕ್ರಮ ಖಾತೆ ಮಾಡಿಕೊಂಡ ಪ್ರಭಾವಿಗಳು ತಮ್ಮ ಬೆಂಬಲಿಗರಿಗೆ ನಿವೇಶನವನ್ನು ಅಕ್ರಮವಾಗಿ ಮಾಡಿಸಿಕೊಟ್ಟಿದ್ದಾರೆ ಅನ್ನೋದು ಆರೋಪ.

ಅಕ್ರಮ ಖಾತೆ ಆರೋಪ: ತಿರುಮಗೊಂಡನಹಳ್ಳಿಯ ಶಿವಕುಮಾರ್​​ , ಮಂಜುನಾಥ್, ಈರಪ್ಪ, ಮುನಿಕೃಷ್ಣಪ್ಪ, ಮೂರ್ತಿ, ಮುನಿಯಮ್ಮ ಎಂಬುವವರ ಹೆಸರಿಗೆ ಅಕ್ರಮ ಖಾತೆಯಾಗಿವೆ. ಅಕ್ರಮ ನಿವೇಶನದ ವಿರುದ್ದ ಗ್ರಾಮದ ನಂಜೇಗೌಡರು ಮತ್ತು ಗ್ರಾಮಸ್ಥರು ದೊಡ್ಡಬಳ್ಳಾಪುರ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿ ಅಕ್ರಮ ಖಾತೆಗಳನ್ನು ವಜಾ ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಈಗಲೂ ಕೋರ್ಟ್​ನಲ್ಲಿ ಕೇಸ್ ನಡೆಯುತ್ತಿದೆ.

1991ರಲ್ಲಿ ಆಶ್ರಯ ಯೋಜನೆಯಡಿ ಹಂಚಿಕೆಯಾದ ನಿವೇಶನದಲ್ಲಿ ಹರೀಶ್ ಎಂಬುವವರು ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಇವರ ಮನೆಗೆ ಅಂಟಿಕೊಂಡಂತೆ ಪ್ಯಾಸೇಜ್ ಸಹ ಬಿಡದೆ ಶಿವಕುಮಾರ್​ ಎಂಬುವವರು ಮನೆ ಕಟ್ಟಲು ಮುಂದಾಗಿದ್ದಾರೆ. ಮನೆಗೆ ಗಾಳಿ ಬೆಳಕು ಬರುವುದಿಲ್ಲವೆಂಬ ಕಾರಣಕ್ಕೆ ಹರೀಶ್ ಎರಡು ಅಡಿ ಪ್ಯಾಸೇಜ್ ಬಿಟ್ಟು ಮನೆ ಕಟ್ಟುವಂತೆ ಹೇಳಿದ್ದು, ಇದಕ್ಕೆ ಪ್ರಭಾವಿ ರಾಜಕಾರಣಿಗಳ ಬೆಂಬಲವಿರುವ ಶಿವಕುಮಾರ್​ ಅಕ್ರಮ ಖಾತೆ ಮಾಡಿಸಿಕೊಂಡು ಆ ಸ್ಥಳದಲ್ಲಿಯೇ ನಿವೇಶನ ಕಟ್ಟಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಒಳಗಾಗಿರುವ ಅಧಿಕಾರಿಗಳು: ಈಗಾಗಲೇ ನಂಜೇಗೌಡರು ಶಿವಕುಮಾರ್​ ವಿರುದ್ಧ ದೂರು ಸಹ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಕಾರಣಕ್ಕೆ ದೊಡ್ಡಬಳ್ಳಾಪುರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದಿನಾಂಕ 27-05-2021 ರಂದು ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಆದರೆ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಶಿವಕುಮಾರ್ ರಾತ್ರಿ ಹಗಲು ಮನೆ ಕಟ್ಟುತ್ತಿದ್ದಾರೆ. ಕಟ್ಟಡ ಕಾಮಗಾರಿ ನಿಲ್ಲಿಸುವಂತೆ ಹಾಡೋನಹಳ್ಳಿ ಪಂಚಾಯಿತಿ ಪಿಡಿಓ ಮತ್ತು ಪೊಲೀಸರಿಗೆ ತಿಳಿಸಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ: ಕೋವಿಡ್ 3ನೇ ಸಂಭಾವ್ಯ ಅಲೆ : ಆರೈಕೆ ಕೇಂದ್ರ ಮುಚ್ಚಬೇಡಿ ಎಂದ ಹೈಕೋರ್ಟ್

Last Updated :Jun 11, 2021, 9:40 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.