ETV Bharat / state

ಹೊಸಕೋಟೆ ಟಿಹೆಚ್ಒ ನಾಪತ್ತೆ ಪ್ರಕರಣ ಸುಖಾಂತ್ಯ: ಜಿಲ್ಲಾಧಿಕಾರಿ ಭೇಟಿಯಾದ ವೈದ್ಯ

author img

By

Published : Dec 20, 2020, 11:05 AM IST

ಹೊಸಕೋಟೆ ಟಿಹೆಚ್ಒ ಜಿಲ್ಲಾಧಿಕಾರಿಗಳ ಭೇಟಿ
Hospet Doctor Manjunath meets Devanahalli DC

ಹೊಸಕೋಟೆ ತಾಲೂಕು ಆರೋಗ್ಯಾಧಿಕಾರಿ ಮಂಜುನಾಥ್ ನಾಪತ್ತೆ ಪ್ರಕರಣ ಸುಖಾಂತ್ಯವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳನ್ನು ವೈದ್ಯರು ಭೇಟಿ ಮಾಡಿ ಘಟನೆ ಕುರಿತಂತೆ ಮಾಹಿತಿ ನೀಡಿದರು.

ದೇವನಹಳ್ಳಿ: ಹೊಸಕೋಟೆ ಟಿಹೆಚ್​ಒ ಡಾ. ಮಂಜುನಾಥ್​ ನಾಪತ್ತೆ ಪ್ರಕರಣ ಸುಖಾಂತ್ಯವಾಗಿದೆ. ಆದರೆ ವೈದ್ಯರ ಕುಟುಂಬ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದು, ಹುದ್ದೆಗೆ ರಾಜೀನಾಮೆ ನೀಡುವಂತೆ ಒತ್ತಡ ಹಾಕಿದ್ದಾರೆ. ಜಿಲ್ಲಾಧಿಕಾರಿಗಗಳನ್ನು ಭೇಟಿ ಮಾಡಿದ ಮಂಜುನಾಥ್​ ವಾರಗಳ ಕಾಲ ರಜೆ ಪಡೆದು ನಂತರ ರಾಜೀನಾಮೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.

ಹೊಸಕೋಟೆ ಟಿಹೆಚ್ಒ ಜಿಲ್ಲಾಧಿಕಾರಿಗಳ ಭೇಟಿ

ನಕಲಿ ಕ್ಲಿನಿಕ್​​ಗಳ ಮೇಲೆ ದಾಳಿ ನಡೆಸಿದ ಹೊಸಕೋಟೆ ಟಿಹೆಚ್​ಒ ಡಾ.ಮಂಜುನಾಥ್ ಅವರಿಗೆ ಜೀವ ಬೆದರಿಕೆ ಬಂದಿತ್ತು. ಇದರಿಂದ ಬೇಸತ್ತ ಅವರು ಪ್ರವಾಸಿ ತಾಣಗಳಿಗೆ ತೆರಳಿದ್ದರು. ಈ ವೇಳೆ ಅವರ ಮೊಬೈಲ್​ ಸ್ವಿಚ್​ ಆಫ್​ ಆಗಿದ್ದು, ಕುಟುಂಬದ ಆತಂಕಕ್ಕೆ ಕಾರಣವಾಗಿತ್ತು. ಈ ಸಂಬಂಧ ಹೊಸಕೋಟೆ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಬಳಿಕ ನಾಪತ್ತೆಯಾದ ಮೂರು ದಿನಗಳ ನಂತರ ಮಂಜುನಾಥ್​​ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಶಾಂತಿ ಗ್ರಾಮ ಟೋಲ್​ ಬಳಿ ಪತ್ತೆಯಾಗಿದ್ದರು. ಈ ಮೂಲಕ ಪ್ರಕರಣ ಸುಖಾಂತ್ಯವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಡಾ. ಮಂಜುನಾಥ್​ ಘಟನೆ ಕುರಿತಂತೆ ಸಂಪೂರ್ಣ ಮಾಹಿತಿ ನೀಡಿದ್ದು, ಜಿಲ್ಲಾಧಿಕಾರಿ ಪಿ.ಎನ್​. ರವೀಂದ್ರ ಅವರು ವೈದ್ಯರಿಗೆ ಧೈರ್ಯ ತುಂಬಿ ಜಿಲ್ಲಾಡಳಿತ ನಿಮ್ಮೊಂದಿಗೆ ಇದೆ ಎಂದು ಭರವಸೆ ನೀಡಿದರು.

ಮಂಜುನಾಥ್ ಯೋಗಕ್ಷೇಮ ಮುಖ್ಯ: ಡಿಸಿ

ಡಾ.ಮಂಜುನಾಥ್ ಮತ್ತೆ ಜಿಲ್ಲೆಗೆ ಮರಳಿದ್ದಾರೆ. ಜಿಲ್ಲಾಡಳಿತ ಭವನಕ್ಕೆ ಭೇಟಿ ನೀಡಿ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಲಿದ್ದಾರೆ. ಘಟನೆಯಿಂದ ವೈದ್ಯರು ಆಘಾತಕ್ಕೆ ಒಳಗಾಗಿದ್ದಾರೆ. ಚೇತರಿಸಿಕೊಳ್ಳಲು ವಿಶ್ರಾಂತಿಗಾಗಿ ಮನವಿ ಸಲ್ಲಿಸಿದ್ದಾರೆ. ಇದಕ್ಕಾಗಿ ಒಂದ ವಾರ ರಜೆ ನೀಡಲಾಗಿದೆ. ಮಂಜುನಾಥ್​ ಬೆಂಬಲಕ್ಕೆ ಜಿಲ್ಲಾಡಳಿತ ಸದಾ ಅವರೊಂದಿಗೆ ಇರುತ್ತದೆ. ಅವರ ಯೋಗಕ್ಷೇಮ ನಮಗೆ ಮುಖ್ಯ. ಅವರು ರಾಜೀನಾಮೆ ಕುರಿತು ಮಾತನಾಡಿಲ್ಲ. ಜಿಲ್ಲೆಯಲ್ಲಿ ಸೇವೆ ಮುಂದುವರೆಸುವ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿದೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಓದಿ: ಸುಖಾಂತ್ಯ ಕಂಡ ವೈದ್ಯಾಧಿಕಾರಿ ನಾಪತ್ತೆ ಪ್ರಕರಣ: ಹೋಗಿದ್ದಾದರೂ ಎಲ್ಲಿಗೆ ಗೊತ್ತಾ!?

ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಡಾ. ಮಂಜುನಾಥ್ ಮಾತನಾಡಿದ್ದು, ನಡೆದ ಘಟನೆ ಬಗ್ಗೆ ಡಿಸಿಗೆ ಮಾಹಿತಿ ನೀಡಿದ್ದೇನೆ. ಕಳೆದ ಮೂರು ವರ್ಷಗಳಿಂದ ಹೊಸಪೇಟೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮೂರು ವರ್ಷದಿಂದ ಇಲ್ಲಿಯವರೆಗೂ ಎಲ್ಲಾ ಶಾಸಕರ ಬೆಂಬಲ ದೊರೆತಿತ್ತು. ಯಾವುದೇ ಒತ್ತಡ ಕೂಡ ಇರಲಿಲ್ಲ, ಎಲ್ಲರೂ ನನ್ನ ಕೆಲಸಕ್ಕೆ ಸಹಕಾರ ನೀಡಿದ್ದರು. ಜೈ ರಾಜ್​ ವಿರುದ್ಧ ನೀಡಿದ ದೂರಿನ ಎಫ್​ಐಆರ್​ ಪ್ರತಿಯನ್ನು ಡಿಸಿ ಅವರಿಗೆ ನೀಡಿದ್ದೇನೆ ಎಂದರು.

ಮಕ್ಕಳ ಮೇಲೆ ಆಣೆ ನಾ ಹಣ ಪಡೆದಿಲ್ಲ :

ಸುಜಾತ ಕ್ಲಿನಿಕ್ ಮೇಲೆ ದಾಳಿ ನಡೆಸಿದ ವೇಳೆ 15 ಲಕ್ಷ ಮೌಲ್ಯದ ಔಷಧಿಗಳನ್ನು ವಶಕ್ಕೆ ಪಡೆದಿದ್ದರು. ಅನಧಿಕೃತವಾಗಿ ಚಿಕಿತ್ಸೆ ನೀಡುತ್ತಿದ್ದ ಡಾ.ಮೋಹನ್ ವಿರುದ್ಧ ಕ್ರಮ ತೆಗೆದುಕೊಳ್ಳುಲು ಮುಂದಾಗಿದ್ದರು. ಈ ಸಮಯದಲ್ಲಿ ಮೋಹನ್ ಬಳಿ 5 ಲಕ್ಷ ಲಂಚ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮಂಜುನಾಥ್, ನನ್ನ ಮಕ್ಕಳ ಆಣೆ ನಾನು ಯಾರ ಬಳಿಯೂ ಹಣ ಕೇಳಿಲ್ಲ. ನನ್ನ ಕರ್ತವ್ಯವನ್ನು ನಾನು ನಿಷ್ಠಯಿಂದ ಮಾಡಿದ್ದೀನಿ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ನನ್ನ ಕುಟುಂಬದಿಂದ ರಾಜೀನಾಮೆಗೆ ಒತ್ತಡ :

ಘಟನೆಯಿಂದ ಮನನೊಂದಿರುವ ಡಾ. ಮಂಜುನಾಥ್ ಕುಟುಂಬ ರಾಜೀನಾಮೆ ನೀಡುವಂತೆ ನನ್ನ ಮೇಲೆ ಒತ್ತಡ ಹಾಕಿದೆ. ಮೇಲಾಧಿಕಾರಿಗಳ ಜೊತೆ ಚರ್ಚೆ ಮಾಡಿ ರಾಜೀನಾಮೆ ಬಗ್ಗೆ ನಿರ್ಧರಿಸುವೆ. ನನ್ನ ಹಾಗೂ ಕುಟುಂಬಕ್ಕೆ ಜಯರಾಜ್ ಬೆಂಬಲಿಗರಿಂದ ಪ್ರಾಣ ಬೆದರಿಕೆ ಇದೆ. ನನಗೆ, ನನ್ನ ಕುಟುಂಬಕ್ಕೆ ರಕ್ಷಣೆ ಬೇಕಿದೆ. ನಮಗೇನಾದರೂ ಆದರೆ ಅದಕ್ಕೆ ಜಯರಾಜ್ ಕಡೆಯವರೇ ಹೊಣೆ ಎಂದು ತಮ್ಮ ನೋವನ್ನು ತೋಡಿಕೊಂಡರು.

ಜೈ ರಾಜ್ ವಿರುದ್ಧ ಪ್ರಕರಣ ದಾಖಲು:

ಡಾ. ಮಂಜುನಾಥ್​ಗೆ ಧಮ್ಕಿ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪ ಹಿನ್ನೆಲೆಯಲ್ಲಿ ಜೈರಾಜ್​, ಬಾಲಚಂದ್ರನ್, ಮೋಹನ್ ಸೇರಿದಂತೆ ಉಳಿದ ನಾಲ್ವರ ವಿರುದ್ಧ ಹೊಸಕೋಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.