ETV Bharat / state

ಶಿವಮೊಗ್ಗಕ್ಕೆ ಮೊದಲ ಇಂಡಿಗೋ ಪ್ರಯಾಣ: ವಿಮಾನ ಹತ್ತಿ ಸಂತಸಪಟ್ಟ ಬಿಎಸ್​ವೈ, ಪಾಟೀಲ್​, ಈಶ್ವರಪ್ಪ

author img

By ETV Bharat Karnataka Team

Published : Aug 31, 2023, 11:07 AM IST

Updated : Aug 31, 2023, 12:23 PM IST

Kempegowda International Airport to Shimoga
ಶಿವಮೊಗ್ಗಕ್ಕೆ ಮೊದಲ ಇಂಡಿಗೋ ಪ್ರಯಾಣ

First Flight from Bengaluru to Shivamogga: ಸಚಿವರಾದ ಎಂ.ಬಿ ಪಾಟೀಲ್ ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕೀಯ ನಾಯಕರು ಕೆಂಪೇಗೌಡ ಏರ್​ಪೋರ್ಟ್​ನಿಂದ ಶಿವಮೊಗ್ಗಕ್ಕೆ ತೆರಳುತ್ತಿರುವ ಮೊದಲ ಇಂಡಿಗೋ ವಿಮಾನ ಹತ್ತಿ ಸಂತಸಪಟ್ಟರು.

ಶಿವಮೊಗ್ಗಕ್ಕೆ ಮೊದಲ ಇಂಡಿಗೋ ಪ್ರಯಾಣ: ವಿಮಾನ ಹತ್ತಿ ಸಂತಸಪಟ್ಟ ಬಿಎಸ್​ವೈ, ಪಾಟೀಲ್​, ಈಶ್ವರಪ್ಪ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಸೇವೆ ಇಂದು ಆರಂಭಗೊಂಡಿದೆ. ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ, ಸಚಿವ ಎಂ.ಬಿ ಪಾಟೀಲ್​, ಶಾಸಕ ಬೇಳೂರು ಗೋಪಾಲಕೃಷ್ಣ, ಸಂಸದ ರಾಘವೇಂದ್ರ, ವಿಜಯೇಂದ್ರ, ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ ಇನ್ನೂ ಹಲವರು ರಾಜಕೀಯ ಗಣ್ಯರು ಶಿವಮೊಗ್ಗಕ್ಕೆ ತೆರಳುತ್ತಿರುವ ಮೊದಲ ವಿಮಾನ ಹತ್ತಿ ಸಂತಸಪಟ್ಟರು. ಇಂದು ಮೊದಲ ಇಂಡಿಗೋ ವಿಮಾನವು 9.50ಕ್ಕೆ ಸರಿಯಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗಕ್ಕೆ ಹೊರಟಿತು.

first-flight-from-kempegowda-international-airport-to-shimoga-will-start-from-today
ಶಿವಮೊಗ್ಗಕ್ಕೆ ಮೊದಲ ಇಂಡಿಗೋ ಪ್ರಯಾಣ

ವಿಮಾನ ಹತ್ತುವ ಮೊದಲು ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ, "ಎಲ್ಲಾ ಗೌರವಗಳು ಇಲ್ಲಿನ ರೈತರಿಗೆ ಸಲ್ಲಬೇಕು. ಯಾವುದೇ ಅಡ್ಡಿ ಆತಂಕಗಳಿಲ್ಲದೆಯೇ ರೈತರು ಜಾಗ ಬಿಟ್ಟು ಕೊಟ್ಟ ಪರಿಣಾಮ ಶೀಘ್ರದಲ್ಲೇ ನಾವು ಏರ್​ಪೋರ್ಟ್​ ಮಾಡಲು ಸಾಧ್ಯವಾಯಿತು. ನಮಗೆ ಸಹಕಾರ ಕೊಟ್ಟ ಎಲ್ಲಾ ರೈತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂದು ನಾವು ವಿಮಾನದಲ್ಲಿ ಇಬ್ಬರು ರೈತರನ್ನು ಕರೆದುಕೊಂಡು ಹೋಗುತ್ತಿದ್ದೇವೆ. ರೈತರ ಆಶೀರ್ವಾದದಿಂದಲೇ ಈ ಕೆಲಸ ಆಗಿದೆ" ಎಂದರು.

"ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಶಿವಮೊಗ್ಗ ಅತೀ ದೊಡ್ಡ ವಿಮಾನ ನಿಲ್ದಾಣ ಎಂದು ಹೇಳಲು ಹೆಮ್ಮೆಯಾಗುತ್ತದೆ. ಇಲ್ಲಿ ನೈಟ್​ ಲ್ಯಾಡಿಂಗ್​ ವ್ಯವಸ್ಥೆಯೂ ಇದೆ. ಸಂಸದ ರಾಘವೇಂದ್ರ ಅವರ ವಿಶೇಷ ಪರಿಶ್ರಮದಿಂದ ಈ ಯೋಜನೆ ಇಂದು ಕಾರ್ಯರೂಪಕ್ಕೆ ಬಂದಿದೆ. ಇದರಿಂದ ಅದೆಷ್ಟೋ ಜನರಿಗೆ ಅನುಕೂಲವಾಗಲಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ವಿಮಾನಗಳು ಓಡಾಟ ಮಾಡುವಂತಾಗಲಿದೆ ಎನ್ನುವ ವಿಶ್ವಾಸ ನನಗಿದೆ" ಎಂದು ಹೇಳಿದರು.

first-flight-from-kempegowda-international-airport-to-shimoga-will-start-from-today
ಶಿವಮೊಗ್ಗಕ್ಕೆ ಮೊದಲ ಇಂಡಿಗೋ ಪ್ರಯಾಣ

ಇದನ್ನೂ ಓದಿ: Shivamogga airport: ಬುಧವಾರದಿಂದ ಶಿವಮೊಗ್ಗ- ಬೆಂಗಳೂರು ವಿಮಾನಯಾನ ಸೇವೆ ಕಾರ್ಯಾರಂಭ

ಬಳಿಕ ಮಾತನಾಡಿದ ಸಚಿವ ಎಂ.ಬಿ ಪಾಟೀಲ್​, "ಶಿವಮೊಗ್ಗಕ್ಕೆ ಮೊದಲ ವಿಮಾನ ಸೇವೆ ಪ್ರಾರಂಭವಾಗಿದೆ. ರಾಷ್ಟ್ರಕವಿ ಕುವೆಂಪು ಅವರು ಜನಿಸಿದ ಊರು ಶಿವಮೊಗ್ಗ ಆಗಿರುವುದರಿಂದ ಕುವೆಂಪು ವಿಮಾನ ನಿಲ್ದಾಣವೆಂದೇ ಹೆಸರಿಟ್ಟಿದ್ದೇವೆ. ಒಟ್ಟಾರೆಯಾಗಿ ಇದೊಂದು ಐತಿಹಾಸಿಕ ಕ್ಷಣ. ವಿಮಾನ ಆರಂಭದಿಂದ ಮಧ್ಯ ಕರ್ನಾಟಕಕ್ಕೆ ಬಹಳಷ್ಟು ಅನುಕೂಲವಾಗಲಿದೆ" ಎಂದು ನುಡಿದರು.

ನಂತರ ಮಾಜಿ ಸಚಿವ ಈಶ್ವರಪ್ಪ ಮಾತನಾಡಿ, "ರಾಜ್ಯ ವಿಮಾನ ನಿಲ್ದಾಣಗಳ ಸಾಲಿನಲ್ಲಿ ಶಿವಮೊಗ್ಗ ಸೇರಿಕೊಂಡಿರುವುದು ನಮಗೆಲ್ಲರಿಗೂ ತುಂಬಾ ಹೆಮ್ಮೆಯ ವಿಚಾರ. ವಿಶೇಷವಾಗಿ ಕರ್ನಾಟಕದಲ್ಲಿ ಶಿವಮೊಗ್ಗ ಅನೇಕ ವಿಚಾರವಾಗಿ ಪ್ರಸಿದ್ಧಿಯಾಗಿದ್ದರೂ ಕೂಡ ಏರ್​ಪೋರ್ಟ್​ ಇಲ್ಲ ಎನ್ನುವ ಕೊರತೆ ಇತ್ತು. ಮಾಜಿ ಸಿಎಂ ಯಡಿಯೂರಪ್ಪ ಹಾಗೆಯೇ ಈಗಿನ ಸಂಸದ ರಾಘವೇಂದ್ರ ಅವರ ಪೂರ್ಣ ಪರಿಶ್ರಮದಿಂದ ಇವತ್ತು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗಿದೆ. ಅವರಿಬ್ಬರಿಗೂ ನಾನು ಅಭಿನಂದನೆ ತಿಳಿಸುತ್ತೇನೆ" ಎಂದರು.

ಇದನ್ನೂ ಓದಿ: ಮಲೆನಾಡಿಗರ ಬಹುದಿನದ ಕನಸು ನನಸು: ಶಿವಮೊಗ್ಗದಲ್ಲಿ ಇಂದಿನಿಂದ ಲೋಹದ ಹಕ್ಕಿಗಳ ಹಾರಾಟ

Last Updated :Aug 31, 2023, 12:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.