ETV Bharat / state

ಕೆಂಪೇಗೌಡ ವಿಮಾನ ನಿಲ್ದಾಣ ಆವರಿಸಿದ ದಟ್ಟ ಮಂಜು: ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯಯ

author img

By ETV Bharat Karnataka Team

Published : Jan 14, 2024, 10:09 AM IST

Updated : Jan 14, 2024, 11:04 AM IST

ಕೆಂಪೇಗೌಡ ಏರ್ಪೋಟ್
ಕೆಂಪೇಗೌಡ ಏರ್ಪೋಟ್

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಜು ಆವರಿಸಿದ್ದ ಹಿನ್ನೆಲೆಯಲ್ಲಿ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಅಂದಾಜು 34 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ.

ಮಂಜಿನಿಂದ ವಿಮಾನ ನಿಲ್ದಾಣದಲ್ಲೇ ಬಾಕಿಯಾಗಿರುವ ವಿಮಾನಗಳು

ದೇವನಹಳ್ಳಿ: ಬೆಳಗ್ಗೆಯಿಂದ ದಟ್ಟವಾದ ಮಂಜು ಕವಿದ ಹಿನ್ನೆಲೆ ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯಯವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟಕ್ಕೆ ದಟ್ಟ ಮಂಜು ಬ್ರೇಕ್​ ಹಾಕಿದೆ. ಕಳೆದ‌ 2 ಗಂಟೆಯಿಂದ ಯಾವುದೇ ವಿಮಾನಗಳು ಟೇಕ್​ ಆಪ್ ಆಗಿಲ್ಲ. ಸುಮಾರು 34 ವಿಮಾನಗಳು ಟೇಕ್​ ಆಪ್ ಆಗಲು ಕಾಯುತ್ತಿವೆ. ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ವಿಮಾನಗಳಲ್ಲೆ ಪ್ರಯಾಣಿಕರು ಕುಳಿತುಕೊಂಡಿದ್ದಾರೆ ಎನ್ನಲಾಗಿದೆ.

ದಟ್ಟ ಮಂಜು ಕರಗಿದ ಬಳಿಕ ಒಂದೊಂದೇ ವಿಮಾನಗಳು ಏರ್ಪೋರ್ಟ್​​ನಿಂದ ಟೇಕ್​ ಆಪ್ ಆಗಲಿವೆ. ವಿಮಾನಗಳ ನಿರ್ಗಮನ ಸಮಯದಲ್ಲಿ ಸ್ವಲ್ಪ ಬದಲಾವಣೆಯಾಗಲಿದೆ.

ದೆಹಲಿಯಲ್ಲೂ ಅಧಿಕ ಮಂಜಿಗೆ 200 ವಿಮಾನ ಹಾರಾಟದಲ್ಲಿ ವಿಳಂಬ: ರಾಜಧಾನಿ ದೆಹಲಿಯಲ್ಲೂ ಮಂಜಿನ ಮಟ್ಟ ಅಧಿಕವಾಗಿದ್ದು ಹವಾಮಾನ ಇಲಾಖೆ ಎಲ್ಲೋ ಅಲರ್ಟ್​ ನೀಡಿದೆ. ಗರಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್​ ಇದ್ದು, ಕನಿಷ್ಠ ತಾಪಮಾನ 4 ಡಿಗ್ರಿ ಸೆಲ್ಸಿಯಸ್ ದಾಖಲೆಯಾಗಿದೆ.​ ದಟ್ಟ ಮಂಜಿಗೆ ಒಟ್ಟು 200 ವಿಮಾನ ಹಾಗೂ 22 ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಗಳ ಹಾರಾಟಕ್ಕೆ ತಾತ್ಕಾಲಿಕ ಬ್ರೇಕ್​ ಬಿದ್ದಿದೆ. ಮಂಜು ಆವರಿಸಿ ರನ್​ವೇ ಸ್ಪಷ್ಟವಾಗಿ ಗೊಚರಿಸದೇ ಇರುವ ಕಾರಣ ಟೇಕ್​ ಆಪ್​ ಹಿಂಪಡೆಯಲಾಗಿದೆ. ಇನ್ನು ನಿನ್ನೆ 250 ವಿಮಾನಗಳ ಹಾರಾಟದಲ್ಲಿ ವಿಳಂಬ ಉಂಟಾಗಿತ್ತು. ಅದರಲ್ಲಿ 225 ವಿಮಾನಗಳು ದೇಶೀಯ, 25 ಅಂತಾರಾಷ್ಟ್ರೀಯ ವಿಮಾನಗಳು ಇದ್ದವು. ಇದಕ್ಕೂ ಹಿಂದೆ ಅಂದರೆ ಶುಕ್ರವಾರ ವಿಮಾನ ನಿಲ್ದಾಣದಲ್ಲಿ 300 ವಿಮಾನಗಳು ಬಾಕಿಯಾಗಿದ್ದವು. ಒಟ್ಟಾರೆ ಮಂಜಿನಿಂದ 4-5 ದಿನಗಳಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ರೈಲುಗಳು 1 ರಿಂದ 6 ಗಂಟೆಗಳ ವರೆಗೆ ತಡವಾಗಿ ಸಂಚರಿಸುತ್ತಿವೆ.

ಚಳಿಯ ತೀವ್ರತೆಗೆ ಜನರು ಮನೆಯಿಂದ ಹೊರಬರಲು ಅಸಾಧ್ಯವಾಗಿದೆ. ದಟ್ಟ ಮಂಜಿನ ಪರಿಣಾಮ 10 ಮೀಟರ್​ ದೂರದಲ್ಲಿರುವ ವಸ್ತುಗಳು ಗೋಚರಿಸದ ಪರಿಸ್ಥಿತಿ ಉಂಟಾಗಿದೆ. ಈ ಕುರಿತು ದೆಹಲಿ ಪೋಲೀಸ್ ಇಲಾಖೆ ತನ್ನ ಅಧಿಕೃತ ಎಕ್ಸ್​ ಖಾತೆಯಿಂದ ಪೋಸ್ಟ್ ಮಾಡಿದ್ದು, "ಹವಮಾನ ಇಲಾಖೆ ಜನವರಿ 14,15, 16 ರಂದು ದಟ್ಟವಾದ ಮಂಜಿನ ಮುನ್ಸೂಚನೆಯನ್ನು ನೀಡಿದೆ. ಹಾಗಾಗಿ ಮಂಜಿನಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಲು ನಾವು ಎಲ್ಲರಿಗೂ ಮನವಿ ಮಾಡುತ್ತೇವೆ." ಎಂದು ಹಾಕಿಕೊಂಡಿದೆ.

ಇದನ್ನೂ ಓದಿ: ಸಂಕ್ರಾಂತಿ ಹಿನ್ನೆಲೆ ಬೆಂಗಳೂರು, ಧರ್ಮಸ್ಥಳಕ್ಕೆ ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ

Last Updated :Jan 14, 2024, 11:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.