ETV Bharat / state

ಸಚಿವ ಕಾರಜೋಳ ಕುಟುಂಬ ಸಮೇತ ಮತದಾನ : ಏಕಕಾಲಕ್ಕೆ ಆಗಮಿಸಿ ಸಚಿವ ನಿರಾಣಿ ಕುಟುಂಬದ 20 ಮಂದಿ ಮತದಾನ

author img

By

Published : May 10, 2023, 6:29 PM IST

Updated : May 10, 2023, 7:13 PM IST

ಮತದಾನ
ಮತದಾನ

ಗೋವಿಂದ ಕಾರಜೋಳ ಮತ್ತು ಮುರಗೇಶ್​ ನಿರಾಣಿ ಅವರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು.

ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ ಗೋವಿಂದ ಕಾರಜೋಳ ಮತ್ತು ಮುರುಗೇಶ ನಿರಾಣಿ.

ಬಾಗಲಕೋಟೆ : ವಿಧಾನಸಭಾ ಚುನಾವಣೆ ಹಿನ್ನೆಲೆ ಮುಧೋಳ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗು ಸಚಿವರಾಗಿರುವ ಗೋವಿಂದ ಕಾರಜೋಳ ಅವರು ಕುಟುಂಬ ಸಮೇತ ಮತ ಕೇಂದ್ರಕ್ಕೆ ಆಗಮಿಸಿ, ಮತದಾನ ಮಾಡಿದರು. ಮುಧೋಳ ಪಟ್ಟಣದ ಹೌಸಿಂಗ್ ಕಾಲೋನಿಯಲ್ಲಿ ಇರುವ ಸಮಾಜ ಕಲ್ಯಾಣ ವಸತಿ ಶಾಲೆಯ ಮತಗಟ್ಟೆ ಸಂಖ್ಯೆ 71 ರಲ್ಲಿ ಪುತ್ರ ಅರುಣ್​ ಕಾರಜೋಳ ಹಾಗೂ ಸೊಸೆಯಂದಿರ ಜೊತೆಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ತಮ್ಮ ಮತ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿ ಗೋವಿಂದ ಕಾರಜೋಳ ಅವರು, ಮುಧೋಳ ಮತ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಬಿಜೆಪಿಗೆ ಬೆಂಬಲ ವ್ಯಕ್ತವಾಗುತ್ತಿದ್ದು, ಅಭಿವೃದ್ಧಿ ಕಡೆಗೆ ಜನರ ಬೆಂಬಲ ಇದೆ. ಕಳೆದ ಮೂರು ದಶಕಗಳಿಂದ ಮತಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಹೀಗಾಗಿ ಮತದಾರರ ಸ್ಪಂದನೆ ಜೊತೆಗೆ ಬಿಜೆಪಿ ಪಕ್ಷದ ಪರ ಒಲವು ಇದೆ. ಈ ಬಾರಿ ಬಿಜೆಪಿಗೆ ಬಹುಮತ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ ಕಾರಜೋಳ ಅವರ ಪರವಾಗಿ ನಾಲ್ವರು ಸೊಸೆಯಂದಿರು ಕ್ಷೇತ್ರದಲ್ಲಿ ಸಂಚಾರ ಮಾಡಿ ಮಾವನ ಪರವಾಗಿ ಅಬ್ಬರದ ಪ್ರಚಾರ ನಡೆಸಿದ್ದರು. ಇದೇ ಮೊದಲು ಬಾರಿಗೆ ಸೊಸೆಯಂದಿರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಮತದಾರರನ್ನು ಸೆಳೆಯುವ ಯತ್ನ ನಡೆಸಲಾಗಿತ್ತು. ಇದರಿಂದ ಕುಟುಂಬ ಸಮೇತ ಮತ ಕೇಂದ್ರಕ್ಕೆ ಆಗಮಿಸಿ ಗೋವಿಂದ ಕಾರಜೋಳ ಅವರು ಹಕ್ಕು ಚಲಾಯಿಸಿದರು.

ಸಚಿವ ಮುರುಗೇಶ್​ ನಿರಾಣಿ ಕುಟುಂಬದ 20 ಮಂದಿ ಮತದಾನ : ಜಿಲ್ಲೆಯ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಬೀಳಗಿ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಹಾಗೂ ಸಚಿವ ಮುರುಗೇಶ್​ ನಿರಾಣಿ, ತಮ್ಮ ಸ್ವಗ್ರಾಮ ಹಂಚಿನಾಳ ಗ್ರಾಮದಲ್ಲಿ ಹಕ್ಕು ಚಲಾಯಿಸಿದರು. ಗ್ರಾಮದ ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಮತ ಕೇಂದ್ರದಲ್ಲಿ ಇಡೀ ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿರುವುದು ವಿಶೇಷವಾಗಿದೆ.

ಹಿರಿಯ ವಯಸ್ಸಿನ ತಂದೆ ತಾಯಿ, ಇಬ್ಬರ ಪುತ್ರರು, ಸೊಸೆಂದಿಯರು, ಮೊಮ್ಮಕ್ಕಳು ಸಮೇತ ಹಾಗೂ ಸಹೋದರರ ಪತ್ನಿಯರು, ಮಕ್ಕಳು ಹೀಗೆ ಸುಮಾರು 20 ಜನರು ಏಕಕಾಲಕ್ಕೆ ಆಗಮಿಸಿ ಮತದಾನ ಮಾಡುವ ಮೂಲಕ ಗಮನ ಸೆಳೆದರು. ಚಿಕ್ಕ ಗ್ರಾಮವಾಗಿರುವ ಬೀಳಗಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ತಂದೆ ತಾಯಿ ಹಾಗೂ ಓರ್ವ ಸಹೋದರರು ವಾಸವಿದ್ದು, ರೈತಾಪಿ ಕುಟುಂಬದವರು ಆಗಿರುವ ಮುರುಗೇಶ ನಿರಾಣಿ, ಗ್ರಾಮೀಣ ಪ್ರದೇಶದಲ್ಲಿ ಇನ್ನು ತಮ್ಮ ಮತವನ್ನು ಚಲಾಯಿಸಿಕೊಂಡು ಬರುತ್ತಿದ್ದಾರೆ.

ಈ ಸಂದರ್ಭದಲ್ಲಿ ಸಚಿವ ಮುರುಗೇಶ ನಿರಾಣಿ ಪತ್ನಿ ಕಮಲಾ ನಿರಾಣಿ ಅವರು ಮಾತನಾಡಿ, ನಾಲ್ಕು ತಲೆಮಾರಿನವರು ಒಟ್ಟಾಗಿ ಆಗಮಿಸಿ ಮತ ಚಲಾಯಿಸಿರುವುದು ಸಂತಸವಾಗಿದೆ. ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯ ಮಾಡಿದ್ದಾರೆ. ಪ್ರಚಾರಕ್ಕೆ ಹೋದ ಸಮಯದಲ್ಲಿ ಜನರ ಸ್ಪಂದನೆ ಉತ್ತಮವಾಗಿತ್ತು. ಅವರ ಅಭಿವೃದ್ಧಿ ಕಾರ್ಯ ಮೆಚ್ಚಿ ಮತ್ತೆ ಮತದಾರರು ಮತ್ತೊಮ್ಮೆ ಕೈಹಿಡಿಯಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಳೆದ ಐದು ಚುನಾವಣೆ ಪ್ರಚಾರ ಕಾರ್ಯ ಮಾಡುತ್ತ, ಜನರ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. ಈ ಬಾರಿ ಸಹ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಕಳೆದ ಬಾರಿಗಿಂತಲೂ ಈ ಸಲ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಬಿಜೆಪಿ ಪಕ್ಷ ಗೆಲುವು ಖಚಿತ ಎಂದು‌ ವಿಶ್ವಾಸ ವ್ಯಕ್ತಪಡಿಸಿದರು.

ಬೀಳಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುರುಗೇಶ್​ ನಿರಾಣಿ

ಬೀಳಗಿ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಮುರುಗೇಶ್​ ನಿರಾಣಿ ಅವರು ಮತದಾನದ ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಈ ಸಲ ಸುಮಾರು 35 ಸಾವಿರಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ. ಜನರು ನಮ್ಮ ಸರ್ಕಾರವನ್ನು ಮೆಚ್ಚಿಕೊಂಡಿದ್ದಾರೆ. ಸಾಕಾಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪ್ರಚಾರಕ್ಕೆ ಹೋದ ಸಮಯದಲ್ಲಿ ಜನರ ಸ್ಪಂದನೆ ಉತ್ತಮವಾಗಿತ್ತು. ಹಾಗಾಗಿ ಸರ್ಕಾರವನ್ನು ಬೆಂಬಲಿಸುವುದರಲ್ಲಿ ಅನುಮಾನವಿಲ್ಲ ಎಂದರು.

ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ 400ಕ್ಕೂ ಅಧಿಕ ಮತದಾರರ ಹೆಸರು ಡಿಲೀಟ್: ಮತಗಟ್ಟೆಗೆ ಬಂದವರಿಗೆ ಕಾದಿತ್ತು ಬಿಗ್ ಶಾಕ್

Last Updated :May 10, 2023, 7:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.