ETV Bharat / state

ಕಾಂಗ್ರೆಸ್​​ ಗ್ಯಾರಂಟಿ ಕಾರ್ಡ್ ಕೇವಲ ಭರವಸೆಗೆ ಮಾತ್ರ ಸೀಮಿತ: ಸಚಿವ ಆರ್​​.ಅಶೋಕ್​

author img

By

Published : Feb 26, 2023, 11:20 AM IST

Minister R Ashok
ಸಚಿವ ಆರ್​​.ಅಶೋಕ್​

ಗ್ರಾಮ ವಾಸ್ತವ್ಯ ಹಾಗೂ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಸಮಾರಂಭ. ಕಲಾದಗಿ ಗ್ರಾಮದಲ್ಲಿರುವ ಮುಳುಗಡೆ ಸಮಸ್ಯೆ ಸೇರಿದಂತೆ ರೈತರ ಸಮಸ್ಯೆ ಆಲಿಸಿದ ಸಚಿವ ಆರ್​​.ಅಶೋಕ್​.

ಸಚಿವ ಆರ್​​. ಅಶೋಕ್​

ಬಾಗಲಕೋಟೆ: "ಕಾಂಗ್ರೆಸ್ ನಾಯಕರ ಗ್ಯಾರಂಟಿ ಕಾರ್ಡ್ ಕೇವಲ ಭರವಸೆಗೆ ಮಾತ್ರ ಸೀಮಿತವಾಗಲಿದೆ" ಎಂದು ಸಚಿವ ಆರ್​​.ಅಶೋಕ್​​ ವ್ಯಂಗ್ಯವಾಡಿದರು. ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಹಾಗೂ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ವೇಳೆ ವಿಕಲ ಚೇತನರಿಗೆ ಕೃತಕ ಕಾಲು ಜೋಡಣೆ ಮಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಖುದ್ದು ಕಂದಾಯ ಸಚಿವರೇ ವೇದಿಕೆಯಲ್ಲಿ ವಿಕಲ ಚೇತನ ವ್ಯಕ್ತಿಗೆ ಕೃತಕ ಕಾಲು ಜೋಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್​​ನವರು ಗ್ಯಾರಂಟಿ ಕಾರ್ಡ್ ಕೊಟ್ಟು ಹೋಗಿದ್ದಾರೆ ಅಂತಾ ಹೇಳಿದರು. ಆದರೆ ಅದು ಕೇವಲ ಭರವಸೆ ಮಾತ್ರ. ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿ ತಿಂಗಳು ಮನೆಯ ಯಜಮಾನಿಯ ಅಕೌಂಟ್​​​ಗೆ ಸಾವಿರ ರೂಪಾಯಿ ಹಾಕುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಅವರು (ಕಾಂಗ್ರೆಸ್) ನಾವು ಬಂದರೇ, ಎಂದು ಹೇಳುತ್ತಿದ್ದಾರೆ. ಬರೋ ಗ್ಯಾರಂಟಿ ಯಾರಿಗೈತೆ" ಎಂದು ಪಶ್ನಿಸಿದರು.

"ಬಂದು ಚೆನ್ನಾಗಿ ಊಟ ಮಾಡಿ ಹೋಗೋಕೆ ನಾವು ನೆಂಟರಲ್ಲ, ಈ ಮನೆಯ ಮಕ್ಕಳು. ಕೆಲವರು ಹೇಳ್ತಾರೆ, ಹೋದ ಸಾರಿ ತಪ್ಪು ಮಾಡಿದೆ. ಈ ಸಾರಿ ವೋಟ್ ಹಾಕಿ ದೇವರಾಣೆಗೂ ಮಾಡ್ತೀವಿ ಅಂತಾರೆ. ಆದ್ರೆ ಹೋದ ಸಾರಿಯೂ ದೇವರಾಣೆ ಮಾಡಿಯೇ ಹೇಳಿದ್ದರು. ಅಧಿಕಾರ ಇದ್ದಾಗ ಕೆಲಸ ಮಾಡಬೇಕು. 50 ವರ್ಷಗಳಿಂದ ಅಧಿಕಾರ ಕೊಟ್ಟಿದ್ರಲ್ಲ ಆಗ ಯಾಕೆ ಮಾಡಿಲ್ಲ. ಡಬಲ್ ಇಂಜಿನ್ ಸರ್ಕಾರ ನಿಮ್ಮದೂ ಇತ್ತು. ಅಲ್ಲದೇ ತ್ರಿಬಲ್ ಇಂಜಿನ್ ಕೂಡ ಇತ್ತು. ಈಗ ಒಂದು ಇಂಜಿನ್ ಕೂಡ ಕಾಣ್ತಿಲ್ಲ" ಎಂದು ಕುಟುಕಿದರು.

ಸಮಾರಂಭದ ಬಳಿಕ ವೇದಿಕೆ ಕೆಳಗೆ ಅಧಿಕಾರಿಗಳ ಜತೆಗೆ ಸಾಲಾಗಿ ಕುಳಿತುಕೊಂಡು ಜನರ ಸಮಸ್ಯೆ ಹಾಗೂ ಅಹವಾಲು ಸ್ವೀಕರಿಸಿದರು. ಸಣ್ಣಪುಟ್ಟ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಿದರು. ಇನ್ನು ಕೆಲ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಸೂಚನೆ ನೀಡಿದರು.

ಕಾಂಗ್ರೆಸ್ ನಾಯಕರಿಗೆ ಟಾಂಗ್: ಕಲಾದಗಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಿಗೆ ಸಚಿವ ಮುರುಗೇಶ ನಿರಾಣಿ ಟಾಂಗ್ ನೀಡಿದರು. ಪ್ರಜಾಧ್ವನಿ ಯಾತ್ರೆ ವೇಳೆ ನಿರಾಣಿ ವಿರುದ್ಧ ಕಬ್ಬು ಬೆಲೆ ನೀಡದೆ, ಸಕ್ಕರೆ ಹಂಚುತ್ತಿರುವ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು. ಈ ವಿಚಾರಕ್ಕೆ ತಿರುಗೇಟು ನೀಡಿದ ನಿರಾಣಿ, "ಕಬ್ಬಿನ ಬಿಲ್ ಎಷ್ಟು ನೀಡಿದ್ದಾರೋ ಅಷ್ಟು ಬೀಳಗಿ ತಾಲೂಕಿಗೆ ಬೇರೆ ಕಾರ್ಖಾನೆಯವರು ನೀಡಿಲ್ಲ. ನಿಮಗೆ ತಾಕತ್ತಿದ್ದರೆ ನಾನು ನೀಡಿದಷ್ಟು ಬಿಲ್ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ. ರಾಜಕಾರಣ ಮಾಡಿ. ಆದರೆ ಸುಳ್ಳು ಹೇಳಿ ಕಪ್ಪು ಮಸಿ ಹಚ್ಚುವ ಪ್ರಯತ್ನ ಮಾಡಿದರೆ ನಿಮ್ಮನ್ನ ನಾನು ಸುಮ್ಮನೆ ಬಿಡಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಮುರುಗೇಶ್​ ನಿರಾಣಿ

"ಬೇರೆಯವರು ಕಟ್ಟಿದ ಕಾರ್ಖಾನೆಗಳು ರೈತರ ಮೇಲೆ ಸಾಲ ಹೊರಿಸಿ, ಪ್ರತಿವರ್ಷ ಕಬ್ಬಿನ ಬಿಲ್ ನಲ್ಲಿ 200-300 ರೂ. ಕಡಿಮೆ ಕೊಡುತ್ತಿದ್ದಾರೆ. ಮುರುಗೇಶ್ ನಿರಾಣಿ ಯಾರ‌ ಮೇಲೂ ಸಾಲ ಮಾಡಿಲ್ಲ. ಎಲ್ಲರಿಗಿಂತ 100-200ರೂ. ಹೆಚ್ಚು ನೀಡಿದ ಕೀರ್ತಿ ನಿರಾಣಿ ಗ್ರೂಪ್​​ಗೆ ಸಿಗುತ್ತದೆ. ನಾನು ರಾಜಕೀಯ ಮಾತನಾಡಬಾರದು ಅಂತಾ ಮಾಡಿದ್ದೆ. ಆದ್ರೆ ಇದೇ ವೇದಿಕೆಯಲ್ಲಿ ಮಾತಾಡಿದವರಿಗೆ ಸೂಕ್ಷ್ಮವಾಗಿ ಹೇಳಿದ್ದೇನೆ" ಎಂದರು.

"ಯಾರ್ಯಾರು ಚೀಟಿ ಬರೆದು ಅವರ (ಸಿದ್ದರಾಮಯ್ಯ) ಕೈಯಿಂದ ಮಾತನಾಡಿಸಿದಿರಿ. ನಿಮಗೆ ತಾಕತ್ತಿದ್ದರೆ ಇನ್ನೊಂದು ಸಾರಿ ವೇದಿಕೆ ಬಂದಾಗ ನಾನು ಕೊಟ್ಟಷ್ಟು ಬಿಲ್ ಕೊಟ್ಟು ಮಾತನಾಡಿ. ಕೆಸರು ಎರಚುವ ಕೆಲಸ‌ ಮಾಡಬಾರದು. ಯಾರು ಯೋಗ್ಯರಿದ್ದಾರೆ ಎಂಬುದನ್ನು ಮತದಾರ ಪ್ರಭು ತೀರ್ಮಾನ ಮಾಡುತ್ತಾರೆ. ಯಾರು ಆಯ್ಕೆ ಆಗ್ತಾರೆ ಅವರು ವಿಧಾನಸೌಧಕ್ಕೆ ಹೋಗುತ್ತಾರೆ. ಯಾರು ಸೋಲ್ತಾರೆ ಅವರು ಮನೆಗೆ ಹೋಗುತ್ತಾರೆ. ಕ್ಷೇತ್ರಕ್ಕೆ ನೀವೇನು ಮಾಡಿದ್ದರಿ ಹೇಳಿ. ಬಳಿಕ ನಾವು ಏನು ಮಾಡಿದ್ದೀವೆ ಅಂತಾ ಹೇಳುತ್ತೇವೆ" ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನು ಓದಿ: 18 ಸಾವಿರ ಫಲಾನುಭವಿಗಳ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ, ನಾಳೆ ಬಾ ಎನ್ನುವ ಸ್ಕೀಮ್ ಯಾವುದೂ ಇಲ್ಲ: ಸಚಿವ ಆರ್​ ಅಶೋಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.