ETV Bharat / state

ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಿದ ಕೋವಿಡ್ 2ನೇ ಅಲೆ: ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ

author img

By

Published : Mar 26, 2021, 9:39 AM IST

Increased Covid 2nd wave In Bagalkot district
ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಿದ ಕೋವಿಡ್ 2ನೇ ಅಲೆ

ಕೋವಿಡ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದು ಮುಖ್ಯವಾಗಿದೆ. ಇದರ ಪಾಲನೆಗೆ ನಗರ ಸ್ಥಳೀಯ ಸಂಸ್ಥೆ ಮತ್ತು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ.ರಾಜೇಂದ್ರ ತಿಳಿಸಿದರು.

ಬಾಗಲಕೋಟೆ: ಕೋವಿಡ್ 2ನೇ ಅಲೆಯಿಂದ ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲನೆಗೆ ತಂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ.ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೋವಿಡ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದು ಮುಖ್ಯವಾಗಿದೆ. ಇದರ ಪಾಲನೆಗೆ ನಗರ ಸ್ಥಳೀಯ ಸಂಸ್ಥೆ ಮತ್ತು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ತಂಡಗಳನ್ನು ರಚಿಸಲಾಗಿದೆ. ತಂಡಗಳು ಬಜಾರ್​​, ತರಕಾರಿ ಮಾರುಕಟ್ಟೆ, ಬಸ್ ನಿಲ್ದಾಣ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಸಂಚರಿಸಿ ಮಾಸ್ಕ್​​ ಧರಿಸದಿದ್ದಲ್ಲಿ ನಗರ ಪ್ರದೇಶದವರಿಗೆ 250 ರೂ. ಹಾಗೂ ಗ್ರಾಮೀಣ ಪ್ರದೇಶದವರಿಗೆ 100 ರೂ.ಗಳ ದಂಡ ವಿಧಿಸಲಿದ್ದಾರೆಂದು ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಯಂತ್ರೋಪಕರಣಗಳ ಖರೀದಿ, ಬೆಡ್, ಕಾಟ್​, ಪಿಪಿಇ ಕಿಟ್, ಚಿಕಿತ್ಸೆಗೆ ಬೇಕಾದ ಎಲ್ಲಾ ರೀತಿಯ ಸಲಕರಣೆ, ಊಟದ ವ್ಯವಸ್ಥೆ ಹಾಗೂ ಇತರೆ ಸೇರಿ ಇಲ್ಲಿಯವರೆಗೆ ಒಟ್ಟು 8.72 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಬಗ್ಗೆ ಆಡಿಟ್ ಸಹ ಆಗಿರುವುದಾಗಿ ತಿಳಿಸಿದರು. ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಹಾಕಲಾಗುತ್ತಿದೆ. 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು. ಅಲ್ಲದೇ 45ರಿಂದ 59 ವರ್ಷದೊಳಗಿನವರಿಗೆ ಮಧುಮೇಹ ಮತ್ತು ಅಧಿಕ ರಕ್ತದ ಒತ್ತಡ ಇದ್ದವರು ಲಸಿಕೆ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಯಾವುದೇ ರೀತಿಯ ಲಸಿಕೆ ಸಮಸ್ಯೆ ಇರುವದಿಲ್ಲ. ಬೇರೆ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದ ಬಗ್ಗೆ ಮಾಹಿತಿ ಇದ್ದಲ್ಲಿ ಸಹಾಯವಾಣಿ ಸಂಖ್ಯೆ 1077ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಕೋರಿದರು.

ಓದಿ : ನಂಜನಗೂಡು ಪಂಚ ರಥೋತ್ಸವದಲ್ಲಿ ವಿಘ್ನ... ತೇರು ಎಳೆಯುವಾಗ ಪುಡಿಯಾದ ಚಕ್ರ!

ಜಿಲ್ಲೆಯಲ್ಲಿ ಮಾ. 24ರಂದು ಒಂದೇ ದಿನ 20 ಪ್ರಕರಣಗಳು ಕಂಡುಬಂದಿದ್ದು, ಕಳೆದ 7 ದಿನಗಳಲ್ಲಿ 15,290 ಮಾದರಿ ಪರೀಕ್ಷಿಸಲಾಗಿದೆ. ಅದರಲ್ಲಿ 50 ಕೊರೊನಾ ಪ್ರಕರಣಗಳು ಕಂಡುಬಂದಿವೆ. 18 ಜನ ಮಾತ್ರ ಗುಣಮುಖರಾಗಿದ್ದು, ಯಾವುದೇ ಮರಣ ವರದಿಗಳು ಬಂದಿಲ್ಲ. ಮಹಾರಾಷ್ಟ್ರ ರಾಜ್ಯದಿಂದ ಆಗಮಿಸುವ ಸಾರ್ವಜನಿಕರಿಗೆ ನೆಗೆಟಿವ್ ಪರೀಕ್ಷಾ ವರದಿ ಕಡ್ಡಾಯಗೊಳಿಸಲಾಗಿದೆ. ಕೋವಿಡ್ ಪ್ರಕರಣಗಳು ಹೆಚ್ಚಾದ ಪ್ರದೇಶಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕಂಟೈನ್‍ಮೆಂಟ್ ಝೋನ್ ರಚಿಸಿ ಸದರಿ ಪ್ರದೇಶದ ಮೇಲುಸ್ತುವಾರಿಯಾಗಿ ಇನ್ಸಿಡೆಂಟ್ ಕಮಾಂಡರ್​ಗಳನ್ನು ನೇಮಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.