ETV Bharat / sports

ಜಂತರ್​ ಮಂತರ್​ನಲ್ಲಿ ವಿದ್ಯುತ್​, ನೀರಿನ ಸಂಪರ್ಕ ಕಡಿತ: ಕುಸ್ತಿಪಟುಗಳ ಆರೋಪ

author img

By

Published : Apr 29, 2023, 12:50 PM IST

ಕುಸ್ತಿಪಟುಗಳ ಆರೋಪ
ಕುಸ್ತಿಪಟುಗಳ ಆರೋಪ

ದೆಹಲಿಯ ಜಂತರ್​ಮಂತರ್​ನಲ್ಲಿ ನೀರು, ವಿದ್ಯುತ್​ ಸಂಪರ್ಕ ಕಡಿತ ಮಾಡಲಾಗುತ್ತಿದೆ ಎಂದು ಕುಸ್ತಿಪಟುಗಳ ಆರೋಪ ಮಾಡಿದ್ದಾರೆ. ಪ್ರತಿಭಟನೆ ನಿಲ್ಲಿಸಲು ಬೆದರಿಕೆ ಒಡ್ಡಲಾಗುತ್ತಿದೆ ಎಂದೂ ದೂರಿದ್ದಾರೆ.

ನವದೆಹಲಿ: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್​ (ಡಬ್ಲ್ಯುಎಫ್​ಐ) ಮುಖ್ಯಸ್ಥ ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ ವಿವಿಧ ರೀತಿಯಲ್ಲಿ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಹೋರಾಟನಿರತ ಕುಸ್ತಿಪಟುಗಳು ಆರೋಪಿಸಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಹರಿಬಿಟ್ಟಿರುವ ಕುಸ್ತಿಪಟು ಬಜರಂಗ್ ಪೂನಿಯಾ, ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್​ನಲ್ಲಿ ದೆಹಲಿ ಪೊಲೀಸರು ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಇಡೀ ದೇಶ ನಮ್ಮೊಂದಿಗೆ ನಿಂತಿದ್ದರೂ ಪೊಲೀಸರು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಅದರಲ್ಲಿ ಆರೋಪಿಸಿದ್ದಾರೆ.

ಪ್ರತಿಭಟನಾ ಪ್ರದೇಶದ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಆಹಾರ ಪೂರೈಕೆ ಮತ್ತು ನೀರಿನ ಸರಬರಾಜನ್ನು ತಡೆಯಲಾಗುತ್ತಿದೆ. ದೂರಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಆದರೆ, ನಮ್ಮ ಪ್ರತಿಭಟನೆ ನಿಲ್ಲಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಪೂನಿಯಾ ಹೇಳಿದ್ದಾರೆ.

ದೂರು ನೀಡಿದರೂ ಎಫ್​ಐಆರ್​ ದಾಖಲಿಸದಿದ್ದಕ್ಕೆ ಟೀಕೆ ವ್ಯಕ್ತವಾಗಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್​ ಮಧ್ಯಪ್ರವೇಶದ ಬಳಿಕ ಶುಕ್ರವಾರ ಸಂಜೆ ಭಾರತೀಯ ಕುಸ್ತಿ ಫೆಡರೇಷನ್‌ನ ಕೋಚ್‌ಗಳು ಮತ್ತು ಅದರ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಕುಸ್ತಿಪಟು ಹೇಳಿದ್ದಾರೆ. ಒಲಿಂಪಿಕ್ ಪದಕ ವಿಜೇತರಾದ ಭಜರಂಗ್​ ಪೂನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಸೇರಿದಂತೆ ಭಾರತದ ಹಲವು ಪ್ರಮುಖ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಸಂತ್ರಸ್ತ ಮಹಿಳಾ ಕುಸ್ತಿಪಟುಗಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಪೊಲೀಸರು ಹೇಳೋದೇನು?: ಮಹಿಳಾ ಕುಸ್ತಿಪಟುಗಳಿಂದ ಬಂದ ದೂರುಗಳ ಆಧಾರದ ಮೇಲೆ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ 2 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅಪ್ರಾಪ್ತೆಯ ಮೇಲೆ ದೌರ್ಜನ್ಯ ಆರೋಪದ ಪೋಕ್ಸೋ ಕಾಯ್ದೆಯಡಿ ಸೇರಿ 2 ಎಫ್​ಐಆರ್​ ದಾಖಲಿಸಲಾಗಿದೆ. ಎರಡೂ ಎಫ್‌ಐಆರ್‌ಗಳ ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ದಿಲ್ಲಿ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಪ್ರಣವ್ ತಯಾಲ್ ತಿಳಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಬೆಂಬಲ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಭೇಟಿ ಮಾಡಿದರು. ಲೈಂಗಿಕ ಕಿರುಕುಳ ಆರೋಪವಿರುವ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಅವರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಡಬ್ಲ್ಯುಎಫ್‌ಐ ಮುಖ್ಯಸ್ಥರನ್ನು ಕೇಂದ್ರ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಕಾಂಗ್ರೆಸ್​ ನಾಯಕಿ, ಪ್ರಧಾನಿ ಅವರಿಂದ ನನಗೆ ಯಾವುದೇ ನಿರೀಕ್ಷೆ ಇಲ್ಲ. ಅವರಿಗೆ ಕುಸ್ತಿಪಟುಗಳ ಬಗ್ಗೆ ಕಾಳಜಿ ಇದ್ದಿದ್ದರೆ, ಕನಿಷ್ಠ ಎಲ್ಲರನ್ನೂ ಕರೆದು ಮಾತನಾಡಿಸುತ್ತಿದ್ದರು. ಪದಕ ಗೆದ್ದಾಗ ಚಹಾ ಕೂಟ ನಡೆಸಿ ಸಂಭ್ರಮಿಸಿದರು. ಆದರೆ, ಈಗ ಅವರ ಮನವಿಯನ್ನೂ ಆಲಿಸುತ್ತಿಲ್ಲ ಎಂದು ಜರಿದರು.

ಗಂಭೀರ ಆರೋಪ ಇರುವ ಬ್ರಿಜ್​ ಭೂಷಣ್​​ರನ್ನು ಹುದ್ದೆಯಲ್ಲಿ ಮುಂದುವರಿಸುವುದು ಸಲ್ಲದು. ಹುದ್ದೆಯಲ್ಲಿದ್ದರೆ, ಒತ್ತಡ ಹೇರಿ ಕುಸ್ತಿಪಟುಗಳ ವೃತ್ತಿಜೀವನ ನಾಶ ಮಾಡುವ ಸಾಧ್ಯತೆ ಇರುತ್ತದೆ ಎಂದು ಹೇಳಿದ್ದಾರೆ.

ಓದಿ: ಕುಸ್ತಿಪಟುಗಳಿಗೆ ಪ್ರಿಯಾಂಕಾ ಗಾಂಧಿ ಬೆಂಬಲ: ಬ್ರಿಜ್​​ ಭೂಷಣ್​ ಸಿಂಗ್​ ವಜಾಕ್ಕೆ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.