ETV Bharat / sports

WFI Election: ಕುಸ್ತಿ ಫೆಡರೇಶನ್ ಚುನಾವಣೆಗೆ ಪಂಜಾಬ್-ಹರಿಯಾಣ ಹೈಕೋರ್ಟ್ ತಡೆ

author img

By

Published : Aug 11, 2023, 8:01 PM IST

WFI Election
election

Wrestling Federation of India Election: ಹರಿಯಾಣ ಅಮೆಚೂರ್ ವ್ರೆಸ್ಲಿಂಗ್ ಅಸೋಸಿಯೇಷನ್ ಮತ್ತು ಹರಿಯಾಣ ಕುಸ್ತಿ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ನಾಳೆ ನಡೆಯಬೇಕಿದ್ದ ಚುನಾವಣೆಗೆ ತಡೆ ನೀಡಿದೆ.

ಚಂಡೀಗಢ (ಹರಿಯಾಣ): ನಾಳೆ (ಆಗಸ್ಟ್​ 12) ನಡೆಯಬೇಕಿದ್ದ ಬಹುನಿರೀಕ್ಷಿತ ಭಾರತದ ಕುಸ್ತಿ ಒಕ್ಕೂಟದ ಚುನಾವಣೆಗೆ ಪಂಜಾಬ್-ಹರಿಯಾಣ ಹೈಕೋರ್ಟ್ ತಡೆ ನೀಡಿತು. ಪ್ರಕರಣದ ವಿಚಾರಣೆಯನ್ನು ಆಗಸ್ಟ್​ 28ಕ್ಕೆ ಮುಂದೂಡಲಾಗಿದೆ. ಹರಿಯಾಣ ಕುಸ್ತಿ ಅಸೋಸಿಯೇಷನ್ ಹೂಡಿದ್ದ ದಾವೆಯ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್​ ಈ ಆದೇಶ ಹೊರಡಿಸಿತು.

ವಿವಾದವೇನು?: ಹರಿಯಾಣ ಕುಸ್ತಿ ಅಸೋಸಿಯೇಷನ್ ​​ಅನ್ನು ಭಾರತದ ಕುಸ್ತಿ ಫೆಡರೇಶನ್ ಗುರುತಿಸಿಲ್ಲ. ಆದರೆ ರಾಜ್ಯ ಒಲಿಂಪಿಕ್ ಅಸೋಸಿಯೇಷನ್‌ ಗುರುತಿಸಿದೆ. ಹರಿಯಾಣ ಅಮೆಚೂರ್ ವ್ರೆಸ್ಲಿಂಗ್ ಅಸೋಸಿಯೇಷನ್ ​​​​ಭಾರತದ ಕುಸ್ತಿ ಫೆಡರೇಶನ್‌ನೊಂದಿಗೆ ಸಂಯೋಜಿತವಾಗಿದೆ. ಆದರೆ ಇದು ರಾಜ್ಯ ಒಲಿಂಪಿಕ್ ಅಸೋಸಿಯೇಷನ್‌ನೊಂದಿಗೆ ಸಂಯೋಜಿತವಾಗಿಲ್ಲ.

ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾವು ಹರಿಯಾಣ ರಾಜ್ಯ ಅಮೆಚೂರ್ ವ್ರೆಸ್ಲಿಂಗ್ ಅಸೋಸಿಯೇಷನ್‌ ಚುನಾವಣೆಗೆ ಮತದಾನದ ಹಕ್ಕು ನೀಡಿದೆ. ಆದರೆ ಕಾಂಗ್ರೆಸ್ ರಾಜ್ಯಸಭಾ ಸಂಸದ ದೀಪೇಂದರ್ ಹೂಡಾ ಅಧ್ಯಕ್ಷರಾಗಿರುವ ಹರಿಯಾಣ ಕುಸ್ತಿ ಅಸೋಸಿಯೇಷನ್​ಗೆ ಮತದಾನದ ಹಕ್ಕು ನೀಡಿಲ್ಲ. ಈ ಸಂಬಂಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಆಗಸ್ಟ್ 12ರಂದು, ನಾಳೆ ನಡೆಯಲಿರುವ ಚುನಾವಣೆಗೆ ತಡೆಯಾಜ್ಞೆ ನೀಡಿದೆ.

ಹರಿಯಾಣದಿಂದ ಕುಸ್ತಿ ಸಂಸ್ಥೆಗಳು ಡಬ್ಲ್ಯೂಎಫ್ಐ ಚುನಾವಣೆಗೆ ಇಳಿದಿವೆ. ಈ ಮೂಲಕ ಎರಡೂ ಸಂಸ್ಥೆಗಳು ಪರಸ್ಪರ ಮುಖಾಮುಖಿಯಾಗುತ್ತಿದ್ದು, ಮತದಾನದ ಹಕ್ಕು ಕೇಳುತ್ತಿವೆ. ಆದರೆ ನಿಯಮದಂತೆ ಚುನಾವಣಾ ಅಧಿಕಾರಿಗಳು ಒಂದು ಸಂಸ್ಥೆಗಷ್ಟೇ ಮಾನ್ಯತೆ ನೀಡಿದ್ದಾರೆ. ಚುನಾವಣಾಧಿಕಾರಿಯ ಈ ನಿರ್ಧಾರವನ್ನು ಕೋರ್ಟ್​ನಲ್ಲಿ ಪ್ರಶ್ನಿಸಲಾಗಿದೆ. ಪ್ರಕರಣದಲ್ಲಿ ಭಾರತ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಹಾಗಾಗಿ ನಾನು ನ್ಯಾಯಾಲಯಕ್ಕೆ ಹಾಜರಾಗಿದ್ದೇನೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಸತ್ಯಪಾಲ್ ಜೈನ್ ತಿಳಿಸಿದರು.

ಈ ವಿಚಾರದಲ್ಲಿ ವಿಸ್ತೃತ ಚರ್ಚೆ ಅಗತ್ಯ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಆಗಸ್ಟ್ 3, 7 ಮತ್ತು 8 ರಂದು ಮೂರು ದಿನಗಳ ಕಾಲ ವಾದ-ಪ್ರತಿವಾದ ಆಲಿಸಿದೆ. ಪಂಜಾಬ್-ಹರಿಯಾಣ ಹೈಕೋರ್ಟ್ ಎರಡೂ ಕಡೆಯ ಹೇಳಿಕೆಗಳನ್ನು ಆಲಿಸಿದ ಬಳಿಕ ಚುನಾವಣೆಗೆ ತಡೆಯಾಜ್ಞೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 28 ರಂದು ನಡೆಯಲಿದೆ.

ಆಗಸ್ಟ್ 12ರಂದು ಭಾರತದ ಕುಸ್ತಿ ಫೆಡರೇಶನ್ ಚುನಾವಣೆಗಳು ನಡೆಯಬೇಕಿತ್ತು. ಚುನಾವಣೆಗೆ ಸಂಬಂಧಿಸಿದಂತೆ ಹರಿಯಾಣದ ಎರಡು ಸಂಸ್ಥೆಗಳು ಚುನಾವಣಾಧಿಕಾರಿಯ ಮೊರೆ ಹೋಗಿದ್ದವು. ಪ್ರಕರಣದಲ್ಲಿ, ಎರಡೂ ಸಂಸ್ಥೆಗಳ ಅಭಿಪ್ರಾಯ ಆಲಿಸಿದ ಚುನಾವಣಾಧಿಕಾರಿ ಹರಿಯಾಣ ಅಮೆಚೂರ್ ಕುಸ್ತಿ ಅಸೋಸಿಯೇಷನ್‌ಗೆ ಮತದಾನದ ಹಕ್ಕು ನೀಡಿದರು. ಇದರ ನಂತರ ಹರಿಯಾಣ ಕುಸ್ತಿ ಅಸೋಸಿಯೇಷನ್ ​​ಆದೇಶವನ್ನು ಪ್ರಶ್ನಿಸಿದೆ. ಸದ್ಯಕ್ಕೆ ಭಾರತದ ಕುಸ್ತಿ ಒಕ್ಕೂಟದ ಚುನಾವಣೆಗೆ ಹೈಕೋರ್ಟ್ ತಡೆ ನೀಡಿದೆ ಎಂದು ಹರಿಯಾಣ ಕುಸ್ತಿ ಸಂಸ್ಥೆ ವಕೀಲ ರವೀಂದ್ರ ಮಲಿಕ್ ತಿಳಿಸಿದ್ದಾರೆ.

ಈ ಮೊದಲು ಜುಲೈ 11 ರಂದು ಚುನಾವಣೆ ನಡೆಯಬೇಕಿತ್ತು. ಆದರೆ ಅಸ್ಸಾಂ ಕುಸ್ತಿ ಅಸೋಸಿಯೇಷನ್‌ನ ಅರ್ಜಿಯನ್ನು ಆಲಿಸಿದ ನಂತರ ಗುವಾಹಟಿ ಹೈಕೋರ್ಟ್ ಚುನಾವಣೆಗೆ ತಡೆ ನೀಡಿತು. ಗುವಾಹಟಿ ಹೈಕೋರ್ಟ್‌ ಆದೇಶದ ನಂತರ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ತಾತ್ಕಾಲಿಕ ಸಮಿತಿಯು ಅಸ್ಸಾಂ ಕುಸ್ತಿ ಸಂಸ್ಥೆಯನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿತ್ತು. ಅದರ ನಂತರ ಆಗಸ್ಟ್ 12ರಂದು ಮತದಾನದ ದಿನಾಂಕವನ್ನು ನಿಗದಿಪಡಿಸಲಾಯಿತು. ಆದರೆ ಈಗ ಅದನ್ನೂ ಸಹ ನಿಷೇಧಿಸಲಾಗಿದೆ.

ಇದನ್ನೂ ಓದಿ: WFI Election: ಬ್ರಿಜ್​ ಭೂಷಣ್ ಆಪ್ತ ಸಂಜಯ್ ಸಿಂಗ್ ಮತ್ತು ಏಕೈಕ ಮಹಿಳಾ ಅಭ್ಯರ್ಥಿ ಅನಿತಾ ಶೆರಾನ್ ನಡುವೆ ನೇರ ಪೈಪೋಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.