ETV Bharat / sports

ಫಿಫಾ ವಿಶ್ವಕಪ್ 2026 ಕ್ವಾಲಿಫೈಯರ್: 1-0 ಗೋಲುಗಳಿಂದ ಕುವೈತ್‌ಗೆ ಸೋಲುಣಿಸಿದ ಭಾರತ

author img

By ANI

Published : Nov 17, 2023, 11:46 AM IST

ಭಾರತ ಫುಟ್​ಬಾಲ್​ ತಂಡಕ್ಕೆ ಕುವೈತ್ ವಿರುದ್ಧ ಜಯ
ಭಾರತ ಫುಟ್​ಬಾಲ್​ ತಂಡಕ್ಕೆ ಕುವೈತ್ ವಿರುದ್ಧ ಜಯ

FIFA world cup qualifiers: 2026ರ ಫಿಫಾ ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಭಾರತ ತಂಡವು ಕುವೈತ್‌ ತಂಡವನ್ನು 1-0 ಗೋಲುಗಳಿಂದ ಮಣಿಸಿದೆ.

ಕುವೈತ್: ಇಲ್ಲಿನ ಜಾಬರ್ ಅಲ್-ಅಹ್ಮದ್ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಗುರುವಾರ ನಡೆದ 2026ರ ಫಿಫಾ ವಿಶ್ವಕಪ್ ಎರಡನೇ ಸುತ್ತಿನ ಅರ್ಹತಾ ಪಂದ್ಯದಲ್ಲಿ 1-0 ಗೋಲುಗಳಿಂದ ಕುವೈತ್‌ ವಿರುದ್ಧ ಭಾರತ ಗೆಲುವು ಸಾಧಿಸಿತು. ಪಂದ್ಯದ ಕೊನೆಯ 75ನೇ ನಿಮಿಷದಲ್ಲಿ ಭಾರತದ ಪರ ಮನ್ವಿರ್​ ಸಿಂಗ್ ಗೋಲು ದಾಖಲಿಸಿದರು.

ಕುವೈತ್​ ಆಟಗಾರ ಫೈಝಲ್ ಝೈದ್ ಅಲ್-ಹರ್ಬಿ ದ್ವಿತೀಯಾರ್ಧದ ಸಮಯದಲ್ಲಿ 2 ಬಾರಿ ಹಳದಿ ಕಾರ್ಡ್​ ಪಡೆದು ಪಂದ್ಯದಿಂದ ಹೊರಬಿದ್ದರು. ಹೀಗಾಗಿ ಕುವೈತ್ 10 ಆಟಗಾರರೊಂದಿಗೆ ಪಂದ್ಯ ಕೊನೆಗೊಳಿಸಿತು. ಫಿಫಾ ಶ್ರೇಯಾಂಕ ಪಟ್ಟಿಯಲ್ಲಿ 102ನೇ ಸ್ಥಾನದಲ್ಲಿರುವ ಭಾರತ ಪಂದ್ಯಾರಂಭದಲ್ಲಿ ತನ್ನ ಅರ್ಧ ಆಟಕ್ಕೆ ಸೀಮಿತವಾಗಿತ್ತು. ಏಕೆಂದರೆ, 136ನೇ ಸ್ಥಾನದಲ್ಲಿರುವ ಕುವೈತ್ ಸಾಕಷ್ಟು ಸಮಯ ಚೆಂಡನ್ನು ತನ್ನ ಬಳಿ ಹೊಂದಿತ್ತು. ಹೀಗಿದ್ದರೂ ಆಟ ಮುಂದುವರೆದಂತೆ, ಭಾರತದ ಮಿಡ್‌ಫೀಲ್ಡರ್‌ಗಳು ಚೆಂಡಿನ ಮೇಲೆ ಪ್ರಾಬಲ್ಯ ಸಾಧಿಸಿ ಫಾರ್ವರ್ಡ್‌ಗಳಿಗೆ ಕೆಲವು ಅವಕಾಶಗಳನ್ನು ಸೃಷ್ಟಿಸಿದರು.

ಭಾರತದ ಸಹಲ್ ಅಬ್ದುಲ್ ಸಮದ್ 18ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸುವ ಅವಕಾಶ ಪಡೆದರು. ಆದರೆ, ನಿರೀಕ್ಷೆಯಂತೆ ಯಶಸ್ಸು ಸಿಗಲಿಲ್ಲ. ನಂತರ, ನಿಖಿಲ್ ಪೂಜಾರಿ ನೀಡಿದ ಕ್ರಾಸ್ ಪಾಸ್​ ನಾಯಕ ಸುನಿಲ್ ಛೆಟ್ರಿ ಅವರನ್ನು ತಲುಪಿತು. ಇದೂ ಕೂಡ ಶಾಟ್ ಕ್ರಾಸ್‌ಬಾರ್‌ನ ಮೇಲೆಯೇ ಹಾರಿತು.

27ನೇ ನಿಮಿಷದಲ್ಲಿ ಮಹೇಶ್ ನೌರೆಮ್ ಅವರು ಫ್ರೀಕಿಕ್‌ನಿಂದ ಭಾರತಕ್ಕೆ ಮತ್ತೊಂದು ಶೂಟಿಂಗ್ ಸುವರ್ಣಾವಕಾಶ ಮಾಡಿಕೊಟ್ಟರು. ಅದನ್ನು ಆಕಾಶ್ ಮಿಶ್ರಾ ಗೋಲಾಗಿ ಪರಿವರ್ತಿಸುವಲ್ಲಿ​ ವಿಫಲರಾದರು. ಮೊದಲಾರ್ಧದ ಅಂತಿಮ ನಿಮಿಷಗಳು ಬಾಕಿ ಇದ್ದಾಗ ಆತಿಥೇಯರು ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಗೋಲ್​ ಹೊಡೆಯಲು ಸಾಧ್ಯವಾಗಲಿಲ್ಲ. 75ನೇ ನಿಮಿಷದಲ್ಲಿ ಮನ್ವಿರ್​ ಸಿಂಗ್ ಪ್ರಯಾಸದಾಯಕ ಗೋಲ್​ ಗಳಿಸಿದರು. ಪಂದ್ಯದ ಕೊನೆಯ ನಿಮಿಷಗಳಲ್ಲಿ ಕುವೈತ್ ತನ್ನ ಆಕ್ರಮಣಕಾರಿ ಆಟ ಹೆಚ್ಚಿಸಿತು. ಆದರೆ ತಡೆಗೋಡೆಯಂತೆ ನಿಂತ ಗೋಲ್​ ಕೀಪರ್​ ಗುರುಪ್ರೀತ್​ ಸಿಂಗ್ ಸಂಧು ಎದುರಾಳಿಗಳ ಪ್ರಯತ್ನಗಳನ್ನು ಹಿಮ್ಮೆಟ್ಟಿಸಿದರು.

ನವೆಂಬರ್ 21ರ ಮಂಗಳವಾರ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಎ ಗುಂಪಿನ ಎರಡನೇ ಪಂದ್ಯದಲ್ಲಿ ಭಾರತ ವಿಶ್ವ ನಂ.61 ಕತಾರ್ ತಂಡವನ್ನು ಎದುರಿಸಲಿದೆ. ಭಾರತ ಏಷ್ಯನ್ ಚಾಂಪಿಯನ್‌ಗಳಾದ ಕತಾರ್, ಕುವೈತ್ ಮತ್ತು ಅಫ್ಘಾನಿಸ್ತಾನದೊಂದಿಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ನಾಲ್ಕು ತಂಡಗಳು ತವರು ಮತ್ತು ವಿದೇಶ ರೌಂಡ್-ರಾಬಿನ್ ಮಾದರಿಯಲ್ಲಿ ಪರಸ್ಪರ ಪಂದ್ಯಗಳನ್ನು ಆಡಲಿವೆ.

ಜುಲೈನಲ್ಲಿ ನಡೆದ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (ಎಸ್​ಎಎಫ್​ಎಫ್) ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ ಕುವೈತ್​ ಮತ್ತು ಭಾರತ 1-1 ಸಮಬಲ ಸಾಧಿಸಿದ್ದವು. ನಂತರ ಪೆನಾಲ್ಟಿಗಳ ಮೂಲಕ 5-4 ರಿಂದ ಕುವೈತ್ ತಂಡವನ್ನು ಭಾರತ ಸೋಲಿಸಿತ್ತು.

ಇದನ್ನೂ ಓದಿ: FIFA World Cup 2026: ಭುವನೇಶ್ವರ, ಗುವಾಹಟಿಯಲ್ಲಿ ನಡೆಯಲಿದೆ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಾವಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.