ETV Bharat / sports

ಮೊರಾಕ್ಕೊ ಮೊದಲ ಫೈನಲ್​ ಆಸೆಗೆ ತಣ್ಣೀರೆರಚಿದ ಫ್ರಾನ್ಸ್​... 2-0 ಗೋಲುಗಳಿಂದ ಗೆದ್ದು ಫೈನಲ್​ಗೆ ಎಂಟ್ರಿ

author img

By

Published : Dec 15, 2022, 7:09 AM IST

fifa-world-cup
ಮೊರಾಕ್ಕೊ ಮೊದಲ ಫೈನಲ್​ ಆಸೆಗೆ ತಣ್ಣೀರೆರಚಿದ ಫ್ರಾನ್ಸ್​

ಕತಾರ್​ ನಡೆಯುತ್ತಿರುವ ಫಿಫಾ ವಿಶ್ವಕಪ್​ ಅಂತಿಮಘಟ್ಟಕ್ಕೆ ಬಂದು ನಿಂತಿದೆ. ಎರಡು ದಿಗ್ಗಜ ತಂಡಗಳು ಫೈನಲಿಸ್ಟ್​​ ಆಗಿದ್ದು, ಡಿಸೆಂಬರ್​ 18 ರಂದು ನಡೆಯುವ ಫೈನಲ್​ ಕದನದಲ್ಲಿ ಚಾಂಪಿಯನ್​ ಘೋಷಣೆಯಾಗಲಿದೆ. ಅರ್ಜೆಂಟೀನಾ ಮತ್ತು ಫ್ರಾನ್ಸ್​ ಎದುರಾಳಿಗಳಾಗಿ ಅಂತಿಮ ಕಣದಲ್ಲಿ ಉಳಿದಿವೆ.

ಅಲ್ ಖೋರ್(ಕತಾರ್): ನಿರೀಕ್ಷಿತ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್​ ಫ್ರಾನ್ಸ್​, 2ನೇ ಸೆಮಿಫೈನಲ್​ನಲ್ಲಿ ಮೊರಾಕ್ಕೊವನ್ನು 2-0 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಫೈನಲ್​ಗೆ ಲಗ್ಗೆ ಇಟ್ಟಿದೆ. ಈಗಾಗಲೇ ಫೈನಲ್​ಗೇರಿರುವ ಎರಡು ಬಾರಿಯ ಚಾಂಪಿಯನ್​ ಅರ್ಜೆಂಟೀನಾ ವಿರುದ್ಧ ಪ್ರಶಸ್ತಿಗಾಗಿ ಫ್ರಾನ್ಸ್ ಅಂತಿಮ ಹಣಾಹಣಿ ನಡೆಸಲಿದೆ.

ಇಲ್ಲಿನ ಅಲ್ ಬೇತ್ ಸ್ಟೇಡಿಯಂನಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್​ನ ಥಿಯೋ ಹೆರ್ನಾಂಡೆಜ್ ಮತ್ತು ರಾಂಡಾಲ್ ಕೊಲೊ ಮೌನಿ ಗಳಿಸಿದ ತಲಾ ಒಂದು ಗೋಲುಗಳು, ಮೊದಲ ಬಾರಿಗೆ ಫೈನಲ್​ಗೇರಿ ಇತಿಹಾಸ ಸೃಷ್ಟಿಸುವ ತವಕದಲ್ಲಿದ್ದ ಮೊರಾಕ್ಕೊ ಕನಸಿಗೆ ನೀರೆರಚಿದವು. ಹಾಲಿ ಚಾಂಪಿಯನ್​ ಸತತ ಎರಡನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.

ಐದೇ ನಿಮಿಷದಲ್ಲಿ ಮೊದಲ ಗೋಲು: ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಫ್ರಾನ್ಸ್​, ಮೊರಾಕ್ಕೊ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿತು. ಐದನೇ ನಿಮಿಷದಲ್ಲಿ ಆಂಟೊಯಿನ್ ಗ್ರೀಜ್‌ಮನ್ ನೀಡಿದ ಪಾಸ್​ ಅನ್ನು ಕೈಲಿಯನ್​ ಎಂಬಪ್ಪೆ ಗೋಲು ಮಾಡುವಲ್ಲಿ ಅಲ್ಪದರಲ್ಲೇ ತಪ್ಪಿಸಿಕೊಂಡರು. ಮರುಕ್ಷಣದಲ್ಲೇ ಥಿಯೋ ಹೆರ್ನಾಂಡೆಜ್ ಗೋಲಿನ ಎಡಭಾಗದಿಂದ ಬಾರಿಸಿದ ಚೆಂಡು ಆಟಗಾರರನ್ನು ಬೇಧಿಸಿ ಕಂಬಕ್ಕೆ ಬಡಿದು ಬಲೆ ಸೇರಿತು. 5 ನಿಮಿಷದಲ್ಲಿ ಗೋಲು ಗಳಿಸಿದ ಫ್ರಾನ್ಸ್​ 1-0 ಮುನ್ನಡೆ ಪಡೆದುಕೊಂಡಿತು.

ಇದರ ನಂತರ ತುಂಬಾ ಚುರುಕಾದ ಮೊರಾಕ್ಕೊ ಗೋಲು ಗಳಿಸಲು ಶತಪ್ರಯತ್ನ ನಡೆಸಿತು. ಆದರೆ, ಅಂತಿಮ ಕ್ಷಣಗಳಲ್ಲಿ ಮಾಡಿದ ತಪ್ಪಿನಿಂದಾಗಿ ನಿರಾಸೆ ಅನುಭವಿಸಿತು. ಗೋಲು ಗಳಿಸುವ ಭರದಲ್ಲಿ ಸೋಫಿಯಾನೆ ಬೌಫಲ್ ಫೌಲ್​ ಮಾಡಿದ್ದರಿಂದ ರೆಫ್ರಿ ಹಳದಿ ಕಾರ್ಡ್ ತೋರಿಸಿದರು. ಪ್ರಥಮಾರ್ಧದಲ್ಲಿ ಫ್ರಾನ್ಸ್​ ಪೂರ್ಣ ಪಾರಮ್ಯ ಮೆರೆಯಿತು.

ರಾಂಡಲ್​ ಕೊಲೊ ಮೌನಿ ಮ್ಯಾಜಿಕ್​: ಬಿಗಿಪಟ್ಟಿನಿಂದ ಸಾಗಿದ್ದ ಪಂದ್ಯದಲ್ಲಿ 79ನೇ ನಿಮಿಷ ಫ್ರಾನ್ಸ್​ನ ರಾಂಡಲ್​ ಕೊಲೊ ಮೌನಿಯ ಕಾಲ್ಚಳಕದಿಂದ ಗೋಲು ದಾಖಲಾಯಿತು. 2-0 ಮುನ್ನಡೆಯೊಂದಿಗೆ ಸಾಗಿದ ಫ್ರಾನ್ಸ್​, ಮೊರಕ್ಕೊಗೆ ಯಾವುದೇ ಹಂತದಲ್ಲಿ ಗೋಲು ಬಿಟ್ಟುಕೊಡಲಿಲ್ಲ.

ಪಂದ್ಯ ಉಭಯ ತಂಡಗಳ ಬಲಾಬಲಕ್ಕೆ ಸಾಕ್ಷಿಯಾಯಿತು. ಫ್ರಾನ್ಸ್​ 14 ಬಾರಿ ಗೋಲು ಬಾರಿಸಲು ಯತ್ನಿಸಿದರೆ, 13 ಬಾರಿಯ ಪ್ರಯತ್ನದಲ್ಲಿ ಮೊರಾಕ್ಕೊ ವಿಫಲವಾಯಿತು. 11 ಬಾರಿ ಮಾಡಿದ ತಪ್ಪುಗಳು ದುಬಾರಿಯಾಯಿತು. ಸೋಲಿನ ಮಧ್ಯೆಯೂ ತಂಡದ ಸಂಯೋಜನೆ ಅತ್ಯದ್ಭುತವಾಗಿತ್ತು. ಕೊನೆಯಲ್ಲಿ ಅದೃಷ್ಟ ಫ್ರಾನ್ಸ್​ ಬೆನ್ನೆಗೇರಿ ಫೈನಲ್​ ತಲುಪಿತು.

ಡಿಸೆಂಬರ್​ 17 ರಂದು ಸೆಮಿಫೈನಲ್​ನಲ್ಲಿ ಸೋತ ತಂಡಗಳಾದ ಮೊರಾಕ್ಕೊ ಮತ್ತು ಕ್ರೊವೇಷಿಯಾ ಮೂರನೇ ಸ್ಥಾನಕ್ಕಾಗಿ ಸೆಣಸಾಡಲಿವೆ. ಮರುದಿನ ಅಂದರೆ 18 ರಂದು ನಡೆಯುವ ಹೈವೋಲ್ಟೇಜ್​ ಫೈನಲ್​ ಕದನದಲ್ಲಿ ಎರಡು ಬಾರಿಯ ಚಾಂಪಿಯನ್​ ಅರ್ಜೆಂಟೀನಾ, ಎರಡನೇ ವಿಶ್ವಕಪ್​ ಮೇಲೆ ಗುರಿ ನೆಟ್ಟಿರುವ ಹಾಲಿ ಚಾಂಪಿಯನ್​ ಫ್ರಾನ್ಸ್​ ಸೆಣಸಾಡಲಿವೆ.

ಓದಿ: ಫಿಫಾ ವಿಶ್ವಕಪ್: ವೃತ್ತಿ ಜೀವನದ ಬಗ್ಗೆ ಮೆಸ್ಸಿ ಮಹತ್ವದ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.