ETV Bharat / sports

ಫಿಫಾ ವಿಶ್ವಕಪ್​: ಕ್ರೊವೇಷಿಯಾ ಸೋಲಿಸಿ ಫೈನಲ್​ ತಲುಪಿದ ಅರ್ಜೆಂಟೀನಾ, ಅಂತಿಮ ಕದನಕ್ಕೆ ರೆಡಿ

author img

By

Published : Dec 14, 2022, 7:17 AM IST

fifa-world-cup-argentina-vs-croatia
ಕ್ರೊವೇಷಿಯಾ ಸೋಲಿಸಿ ಫೈನಲ್​ ತಲುಪಿದ ಅರ್ಜೆಂಟೀನಾ

ಫಿಫಾ ವಿಶ್ವಕಪ್​ನ ಮೊದಲ ತಂಡವಾಗಿ ಅರ್ಜೆಂಟೀನಾ ಫೈನಲ್​ ಪ್ರವೇಶಿಸಿತು. ಮಧ್ಯರಾತ್ರಿ ನಡೆದ ಪಂದ್ಯದಲ್ಲಿ ಕ್ರೊವೇಷಿಯಾವನ್ನು 3-0 ಗೋಲುಗಳಿಂದ ಬಗ್ಗುಬಡಿದು ಅಂತಿಮ ಸುತ್ತಿಗೆ ಅರ್ಹತೆ ಪಡೆಯಿತು.

ಅಲ್ ದಾಯೆನ್ (ಕತಾರ್): ಕತಾರ್​​ ಫಿಫಾ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ತವರು ತಂಡವಾದ ಸೌದಿ ಅರೇಬಿಯಾ ವಿರುದ್ಧ ಸೋತಾಗ ವಿಶ್ವಶ್ರೇಷ್ಠ ತಂಡವಾದ ಅರ್ಜೆಂಟೀನಾವನ್ನು ಗೇಲಿ ಮಾಡಿದವರೇ ಹೆಚ್ಚು. ಲಿಯೋನೆಲ್​ ಮೆಸ್ಸಿಯಂತಹ ಈ ಪೀಳಿಗೆಯ ಶ್ರೇಷ್ಠ ಆಟಗಾರರಿರುವ ತಂಡ ಹೀನಾಯವಾಗಿ ಸೋತಿದ್ದು, ಯಾರಿಂದಲೂ ಅರಗಿಸಿಕೊಳ್ಳಲಾಗಲಿಲ್ಲ.

ಮೊದಲ ಸೋಲು ತಂಡದ ತಂತ್ರಗಳನ್ನೇ ಬದಲಿಸಿತು. ವಿಶ್ವಕಪ್​ ಗೆದ್ದು ತೋರಿಸುವ ಛಲ ತೊಟ್ಟ ಆಟಗಾರರು ವಿಶ್ವಕಪ್​ ಗೆಲ್ಲಲೇಬೇಕೆಂಬ ಹಠದೊಂದಿಗೆ ಕಾಲ್ಚೆಂಡಿನ ಜೊತೆ ಹಠಕ್ಕೆ ಬಿದ್ದು ಹೋರಾಡಿದರು. ಅದರ ಫಲಿತಾಂಶವೇ ಇಂದು ಅರ್ಜೆಂಟೀನಾ ವಿಶ್ವಕಪ್​ನ ಮೊದಲ ತಂಡವಾಗಿ ಪೈನಲ್​ ತಲುಪಿದೆ. ಅಚ್ಚರಿಗಳನ್ನೇ ಸೃಷ್ಟಿಸುತ್ತ ಬಂದಿದ್ದ ಕ್ರೊವೇಷಿಯಾ ಎದುರು ಮಧ್ಯರಾತ್ರಿ ನಡೆದ ಪಂದ್ಯದಲ್ಲಿ 3-0 ಗೋಲುಗಳಿಂದ ಗೆದ್ದು ಅಂತಿಮ ಹಣಾಹಣಿಗೆ ಅರ್ಹತೆ ಪಡೆಯಿತು.

ಬಹುತೇಕ ಅಂತಿಮ ವಿಶ್ವಕಪ್​ ಆಡುತ್ತಿರುವ ಲಿಯೋನೆಲ್​ ಮೆಸ್ಸಿ 34 ನೇ ನಿಮಿಷದಲ್ಲಿ ಬಾರಿಸಿದ ಗೋಲು, ತಂಡದ ಭರವಸೆಯ ಆಟಗಾರ ಜೂಲಿಯನ್ ಅಲ್ವಾರೆಜ್ ಬ್ರೇಸ್​ 39, 69 ನೇ ನಿಮಿಷದಲ್ಲಿ ದಾಖಲಿಸಿದ ಎರಡುಗಳ ಗೋಲುಗಳು ಕ್ರೊವೇಷಿಯಾದ ಫೈನಲ್​ ಹಾದಿಯನ್ನು ಮುಚ್ಚಿ ಹಾಕಿತು. ಬೆಲ್ಜಿಯಂ, ಬ್ರೆಜಿಲ್​ನಂಹ ದಿಗ್ಗಜ ತಂಡಗಳನ್ನು ಮಣ್ಣುಮುಕ್ಕಿಸಿದ್ದ 2018 ರ ರನ್ನರ್​ ಅಪ್​ ಕ್ರೊವೇಷಿಯಾ 2014 ರ ರನ್ನರ್​ ಅಪ್​ ಅರ್ಜೆಂಟೀನಾದ ಮುಂದೆ ಬಾಲಬಿಚ್ಚಲಿಲ್ಲ.

ಕ್ರೊವೇಷಿಯಾ ಸೋಲಿಗೆ ಮೆಸ್ಸಿ ಮುನ್ನುಡಿ: ಆಟ ಆರಂಭವಾದ ಅರ್ಧಗಂಟೆಯಲ್ಲಿ ಹಲವು ಬಾರಿ ಗೋಲು ಗಳಿಸಲು ಸೆಣಸಾಟ ನಡೆಸಿದ ಉಭಯ ತಂಡಗಳು ಯಶ ಕಾಣಲಿಲ್ಲ. ಕ್ರೊವೇಷಿಯಾದ ಡೊಮಿನಿಕ್ ಲಿವಾಕೊವಿಕ್ ತಪ್ಪು ಮಾಡಿ ಎದುರು ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ನೀಡಿದರು. ಪೆನಾಲ್ಟಿ ಅವಕಾಶ ಪಡೆದ ಅರ್ಜೆಂಟೀನಾ ತನ್ನ ಅನುಭವವೆಲ್ಲ ಧಾರೆ ಎರೆದು 34 ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದು ಮೈದಾನದಲ್ಲಿ ಸಂಚಲನ ಸೃಷ್ಟಿಸಿದ್ದಲ್ಲದೇ ಅರ್ಜೆಂಟೀನಾ 1-0 ಮುನ್ನಡೆ ಸಾಧಿಸಿತು.

ಮೆಸ್ಸಿ ವಿಶ್ವಕಪ್​ನಲ್ಲಿ ಗಳಿಸಿದ ಒಟ್ಟಾರೆ 11ನೇ ಗೋಲು ಇದಾಗಿದೆ. ಅರ್ಜೆಂಟೀನಾ ಪರ ವಿಶ್ವಕಪ್​ಗಳಲ್ಲಿ ಅತ್ಯಧಿಕ ಗೋಲು ಬಾರಿಸಿದ ಮೊದಲ ಫುಟ್ಬಾಲಿಗ ಎಂಬ ದಾಖರೆ ಬರೆದರು. ಇದಕ್ಕೂ ಮೊದಲು ಲೋಥರ್ ಮ್ಯಾಥಾಸ್ 10 ಗೋಲು ಗಳಿಸಿದ್ದರು.

ನುಸುಳುವ ಪಾದರಸ ಅಲ್ವಾರೆಜ್​: ಫುಟ್ಬಾಲ್​ ಕ್ರೀಡೆಯಲ್ಲಿ ನುಸುಳುವಿಕೆ ಕೌಶಲ್ಯಕ್ಕೆ ಹೆಚ್ಚು ಫಲವಿದೆ. ಮೆಸ್ಸಿ ಪಡೆಯ ಜೂಲಿಯನ್​ ಅಲ್ವಾರೆಜ್​ ಬ್ರೇಸ್​ 39ನೇ ನಿಮಿಷದಲ್ಲಿ ಕ್ರೊವೇಷಿಯಾ ಪಡೆಯನ್ನು ಭೇದಿಸಿ ಚೆಂಡನ್ನು ಗೋಲಿನ ಬಲೆಗೆ ಸೇರಿಸಿದರು. ಇದರಿಂದ ತಂಡ ಪ್ರಥಮಾರ್ಧದಲ್ಲಿ 2-0 ಮುನ್ನಡೆ ಪಡೆಯಿತು.

ದ್ವಿತಿಯಾರ್ಧದಲ್ಲಿ ಎರಡೂ ತಂಡಗಳು ಗರಿಷ್ಠ ಆಟವಾಡುವ ಮೂಲಕ ಸಾಮರ್ಥ್ಯ ಮೆರೆದವು. ಆದರೆ, 69ನೇ ನಿಮಿಷದಲ್ಲಿ ಮೆಸ್ಸಿಯ ಅದ್ಭುತ ಪಾಸ್​ನಿಂದಾಗಿ ಅಲ್ವಾರೆಜ್ ಪಂದ್ಯದ ತನ್ನ ಎರಡನೇ ಗೋಲು ಗಳಿಸಿದರು. ಇದು ಮುನ್ನಡೆಯನ್ನು 3-0 ಗೆ ಹೆಚ್ಚಿಸಿತು. ಅರ್ಜೆಂಟೀನಾ ತಂಡದ ಕೌಶಲ್ಯಯುತ ಆಟಕ್ಕೆ ಕ್ರೊವೇಷಿಯಾ ಕೊನೆಗೂ ತಲೆಬಾಗಲೇಬೇಕಾಯಿತು.

6 ಬಾರಿಗೆ ಫೈನಲ್​ಗೆ ಮೆಸ್ಸಿ ಪಡೆ ಎಂಟ್ರಿ: ಎರಡು ಬಾರಿಯ ಚಾಂಪಿಯನ್​, 2014 ರ ರನ್ನರ್​ ಅಪ್​ ಅರ್ಜೆಂಟೀನಾ 6 ನೇ ಬಾರಿಗೆ ಫೈನಲ್​ ಪ್ರವೇಶಿಸಿತು. ಇಂದು ನಡೆಯುವ ಫ್ರಾನ್ಸ್ ಮತ್ತು ಮೊರಾಕ್ಕೊ ನಡುವಿನ ಎರಡನೇ ಸೆಮಿಫೈನಲ್​ನಲ್ಲಿ ಗೆಲ್ಲುವ ತಂಡದ ಎದುರು ಅಂತಿಮ ಕದನದಲ್ಲಿ ಸೆಣಸಾಡಲಿದ್ದಾರೆ.

ಓದಿ: ಇರಾನ್ ಮಹಿಳೆಯ ಹಕ್ಕು ಬೆಂಬಲಿಸಿದ್ದ ಫುಟ್ಬಾಲ್ ಆಟಗಾರನಿಗೂ ಗಲ್ಲು ಶಿಕ್ಷೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.