ETV Bharat / sports

'8 ಕೆ.ಜಿ ಮಟನ್ ತಿಂದರೆ ಎಲ್ಲಿರುತ್ತೆ ಫಿಟ್ನೆಸ್‌?': ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಪಾಕಿಸ್ತಾನ ತಂಡದ ವಿರುದ್ಧ ವಾಸಿಂ ಅಕ್ರಮ್ ವಾಗ್ದಾಳಿ

author img

By ANI

Published : Oct 24, 2023, 4:36 PM IST

Wasim Akram
Wasim Akram

ಪಾಕಿಸ್ತಾನ ಕ್ರಿಕೆಟ್ ಆಟಗಾರರ ಮುಖ ನೋಡಿದರೆ ಅವರು ದಿನಕ್ಕೆ 8 ಕೆ.ಜಿ ಮಟನ್ ತಿನ್ನುವಂತಿದೆ. ಯಾರಿಗೂ ಫಿಟ್​ನೆಸ್​​ ಮೇಲೆ ಕಾಳಜಿ ಇದ್ದಂತಿಲ್ಲ ಎಂದು ಪಾಕಿಸ್ತಾನ ಮಾಜಿ ವೇಗಿ ವಾಸಿಂ ಅಕ್ರಮ್ ಟೀಕಾಪ್ರಹಾರ ನಡೆಸಿದ್ದಾರೆ.

ನವದೆಹಲಿ: ಏಳು ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನವನ್ನು ಮಣಿಸಿದ್ದ ಪಾಕಿಸ್ತಾನ​ ಸೋಮವಾರ ತನ್ನ ಎಂಟನೇ ಮುಖಾಮುಖಿಯಲ್ಲಿ ಎಡವಿ ಬಿತ್ತು. 2023ರ ವಿಶ್ವಕಪ್​ನಲ್ಲಿ ಐದು ಪಂದ್ಯಗಳನ್ನು ಆಡಿರುವ ಪಾಕಿಸ್ತಾನಕ್ಕೆ ಎರಡರಲ್ಲಿ ಗೆದ್ದು, ಮೂರು ಪಂದ್ಯ ಸೋತಿದೆ. ಸೆಮಿ ಫೈನಲ್​ ಸ್ಥಾನ ಪಡೆಯಲು ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ತಂಡವಿದೆ. ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ಮತ್ತು ಫಿಟ್‌ನೆಸ್ ಮಟ್ಟವನ್ನು ಪಾಕಿಸ್ತಾನ ಕ್ರಿಕೆಟ್ ದಂತಕಥೆ ವಾಸಿಂ ಅಕ್ರಮ್ ಕಟುವಾಗಿ ಟೀಕಿಸಿದ್ದಾರೆ.

ನೆದರ್ಲೆಂಡ್​, ಶ್ರೀಲಂಕಾ ತಂಡಗಳ ವಿರುದ್ಧ ಫೀಲ್ಡಿಂಗ್​ ಎಡವಟ್ಟುಗಳ ನಡುವೆಯೂ ಪಾಕಿಸ್ತಾನ ಗೆಲುವು ಸಾಧಿಸಿತ್ತು. ಆದರೆ ನಂತರ ಭಾರತ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ ಮುಂದೆ ಮಾಡಿರುವ ಕ್ಷೇತ್ರ ರಕ್ಷಣೆಯ ತಪ್ಪು, ಬೌಲಿಂಗ್​ ಬದಲಾವಣೆಯ ಕ್ರಮ ಮತ್ತು ಬ್ಯಾಟಿಂಗ್​ ವೈಫಲ್ಯಗಳು ತಂಡದ ಫಲಿತಾಂಶದ ಮೇಲೆ ಕೆಟ್ಟ ಪರಿಣಾಮ ಬೀರಿದೆ.

"ಈ ಫಲಿತಾಂಶ ಇಂದು ಮುಜುಗರದ ಸಂಗತಿಯಾಗಿದೆ. ಅಫ್ಘಾನಿಸ್ತಾನ 8 ವಿಕೆಟ್‌ಗಳೊಂದಿಗೆ 280-290 ರನ್‌ಗಳನ್ನು ಬೆನ್ನಟ್ಟಿದರು. ಅಫ್ಘನ್ನರು ಪಿಚ್​ ಬಗ್ಗೆ ಚಿಂತಿಸದೇ ಆಡಿದ್ದಾರೆ" ಎಂದು ವಾಸಿಂ ಅಕ್ರಮ್ ಖಾಸಗಿ ಮಾಧ್ಯಮವೊಂದರ ಚರ್ಚೆಯಲ್ಲಿ ಪಾಲ್ಗೊಂಡು ಹೇಳಿದರು.

"ನಮ್ಮ ತಂಡದ ಆಟಗಾರರ ಫಿಟ್ನೆಸ್ ಮಟ್ಟವನ್ನು ಗಮನಿಸಬೇಕಿದೆ. ಕಳೆದ ಎರಡು ವರ್ಷಗಳಲ್ಲಿ ಅವರು ಫಿಟ್ನೆಸ್ ಪರೀಕ್ಷೆಗೆ ಒಳಗಾಗಿಲ್ಲ ಎಂದು ನಾವು ಕಳೆದ ಮೂರು ವಾರಗಳಿಂದ ಹೇಳುತ್ತಿದ್ದೇನೆ. ಆಟಗಾರರ ಹೆಸರನ್ನು ನಾನು ಹೇಳಬೇಕೆಂದೇನಿಲ್ಲ, ಮುಖ ನೋಡಿದರೆ ಗೊತ್ತಾಗುತ್ತದೆ ಅವರು ಎಷ್ಟು ಫಿಟ್ನೆಸ್​ ಹೊಂದಿದ್ದಾರೆ ಅಂತ. ಲಗ್ತಾ ಹೈ ರೋಜ್ 8 ಕಿಲೋ ನಿಹಾರಿ ಖತೇ ಹೈಂ (ಅವರು ಪ್ರತಿದಿನ 8 ಕಿಲೋ ಮಾಂಸ ತಿನ್ನುತ್ತಾರೆ ಎಂಬಂತೆ ಕಾಣುತ್ತದೆ). ಕೆಲವು ಪರೀಕ್ಷೆಗಳನ್ನು ಕಡ್ಡಾಯವಾಗಿ ನಡೆಸಬೇಕು. ದೇಶಕ್ಕಾಗಿ ಆಡಿದ್ದಕ್ಕಾಗಿ ಆಟಗಾರರಿಗೆ ಹಣ ನೀಡಲಾಗುತ್ತಿದೆ. ಹೀಗಾಗಿ ನಿರ್ದಿಷ್ಟ ಮಾನದಂಡಗಳಿರಲೇಬೇಕು" ಎಂದರು.

  • " class="align-text-top noRightClick twitterSection" data="">

ಇದೇ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ವಿಕೆಟ್‌ಕೀಪರ್ ಮೊಯಿನ್ ಖಾನ್, ಪಿಸಿಬಿಯ ವೇಳಾಪಟ್ಟಿಯನ್ನು ಪ್ರಶ್ನಿಸಿದ್ದಾರೆ. "ವಿಶ್ವಕಪ್‌ಗಾಗಿ ಸಂಪೂರ್ಣ ಯೋಜನೆಯ ಕೊರತೆಯಾಗಿದೆ. ಈ ಮಹತ್ವದ ಟೂರ್ನಿಗೂ ಮುನ್ನ ತಂಡ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಮತ್ತು ನಂತರ ಏಷ್ಯಾಕಪ್ ಸೇರಿದಂತೆ 3 ತಿಂಗಳು ಆಡುವುದರಲ್ಲಿ ತೊಡಗಿತ್ತು. ಈಗ ಅಟಗಾರರು ಮೈದಾನದಲ್ಲಿ ಬಳಲಿದಂತೆ ಕಾಣುತ್ತಿದ್ದಾರೆ. ಅವರಲ್ಲಿ ಒಂದು ರೀತಿಯ ಆಲಸ್ಯ ಇದೆ. ಪಿಸಿಬಿ ಯಾರ ಸಲಹೆ ತೆಗೆದುಕೊಂಡು ವೇಳಾಪಟ್ಟಿ ಮಾಡುತ್ತಿದೆ ಎಂಬುದು ನನಗೆ ತಿಳಿಯುತ್ತಿಲ್ಲ" ಎಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಬಗ್ಗೆ ಕಿಡಿಕಾರಿದರು.

ಸೋಮವಾರ ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್​ ಮಾಡಿ 282 ರನ್‌ಗಳ ಗುರಿಯನ್ನು ಅಫ್ಘಾನ್​ಗೆ ನೀಡಿತ್ತು. ಇದನ್ನು ಬೆನ್ನತ್ತಿದ ಅಫ್ಘಾನಿಸ್ತಾನ ಒಂದು ಓವರ್​ ಉಳಿಸಿಕೊಂಡು 8 ವಿಕೆಟ್​ಗಳ ಜಯ ದಾಖಲಿಸಿತ್ತು. ಅಫ್ಘನ್​ ಈ ವಿಶ್ವಕಪ್​ನಲ್ಲಿ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಅಲಂಕರಿಸಿತು. ಹಾಲಿ ಚಾಂಪಿಯನ್​ ಇಂಗ್ಲೆಂಡ್​ 10ನೇ ಸ್ಥಾನಕ್ಕೆ ಕುಸಿದಿದೆ.

ಮುಂದಿನ ಸವಾಲು: ಪಾಕಿಸ್ತಾನ ಅಕ್ಟೋಬರ್​ 27ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸಿದರೆ, ಅಫ್ಘಾನಿಸ್ತಾನ ಅ. 30ರಂದು ಶ್ರೀಲಂಕಾ ವಿರುದ್ಧ ಆಡಲಿದೆ.

ಇದನ್ನೂ ಓದಿ: ಪಾಕ್ ವಿರುದ್ದ ಅಫ್ಘಾನ್​ ಐತಿಹಾಸಿಕ ಗೆಲುವು: ರಶೀದ್​ ಖಾನ್​ರೊಂದಿಗೆ ಸಂಭ್ರಮಿಸಿದ ಇರ್ಫಾನ್​ ಪಠಾಣ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.