ETV Bharat / sports

ವಿಶ್ವಕಪ್​ ಫೈನಲ್​ನಲ್ಲಿ ಭಾರತದ ನೀರಸ ಬ್ಯಾಟಿಂಗ್​ ಪ್ರದರ್ಶನ: ಕಾಂಗರೂ ಪಡೆಗೆ 241 ರನ್​ಗಳ ಗುರಿ

author img

By ETV Bharat Karnataka Team

Published : Nov 19, 2023, 1:46 PM IST

Updated : Nov 19, 2023, 6:28 PM IST

World Cup 2023 Final: ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ 50 ಓವರ್​ಗೆ 240 ರನ್​ಗಳಿಸಿದೆ.

India vs Australia Final match report
India vs Australia Final match report

ಅಹಮದಾಬಾದ್ (ಗುಜರಾತ್​): ವಿಶ್ವಕಪ್​ನಲ್ಲಿ ಹತ್ತು ಪಂದ್ಯಗಳನ್ನು ಗೆದ್ದುಕೊಂಡು ಭಾರತ ಫೈನಲ್​ ತಲುಪಿತ್ತು. ಆದರೆ ಫೈನಲ್​ ಪಂದ್ಯದಲ್ಲೇ ತಂಡ ನೀರಸ ಬ್ಯಾಟಿಂಗ್​ ಪ್ರದರ್ಶನ ನೀಡಿದೆ. ವಿರಾಟ್​ ಕೊಹ್ಲಿ (54) ಮತ್ತು ಕೆ ಎಲ್​ ರಾಹುಲ್​ (66) ಅರ್ಧಶತಕ ಇನ್ನಿಂಗ್ಸ್​ ಹಾಗೇ ನಾಯಕ ರೋಹಿತ್​ ಶರ್ಮಾ ಅವರ 47 ರನ್​ನ ಕೊಡುಗೆಯಿಂದಾಗಿ ನಿಗದಿತ ಓವರ್​ ಅಂತ್ಯಕ್ಕೆ ಆಲ್​ಔಟ್​ ಆದ ತಂಡ 240 ರನ್​ ಕಲೆಹಾಕಿದೆ.

2023ರ ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಲೀಗ್​ ಹಂತದಲ್ಲಿ ಇಂಗ್ಲೆಂಡ್​ ವಿರುದ್ಧ ಒಮ್ಮೆ ಇಂತಹ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿತ್ತು. ಅದೇ ರೀತಿ ಮತ್ತೊಂದು ಕಳಪೆ ಬ್ಯಾಟಿಂಗ್​​ ಇನ್ನಿಂಗ್ಸ್ ಆಡಿದರು. 2023ರ ವಿಶ್ವಕಪ್​ನಲ್ಲಿ ಭಾರತ ತಂಡ ಮೊದಲ ಬಾರಿಗೆ ಆಲ್​ಔಟ್​ ಆಗಿದೆ. ​

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿತು. 130,000 ಜನ ಪ್ರೇಕ್ಷಕರು ಭಾರತದ ಬ್ಯಾಟಿಂಗ್​ ಕಂಡು ಒಮ್ಮೆಗೆ ದಂಗಾದರು. 10ಕ್ಕೆ 10 ಪಂದ್ಯವನ್ನು ಹೆಚ್ಚು ಒತ್ತಡಕ್ಕೆ ಒಳಗಾಗದೇ ಗೆದ್ದಿದ್ದ ತಂಡ ತವರು ಮೈದಾನದಲ್ಲಿ ಆಸೀಸ್​ ಬೌಲಿಂಗ್ ಮುಂದೆ ಮಂಕಾಯಿತು.

ಆರಂಭಿಕ ಜೊತೆಯಾಟದ ಕೊರತೆ: ರೋಹಿತ್​ ಶರ್ಮಾ ಕಳೆದ ಎಲ್ಲಾ ಇನ್ನಿಂಗ್ಸ್​ನಲ್ಲಿ ಅಬ್ಬರ ಆಟವನ್ನೇ ಆಡಿದ್ದರು. ಇಂದು ಸಹ ಅದೇ ರೀತಿ ಬ್ಯಾಟ್​ ಬೀಸುತ್ತಿದ್ದರು. ಆದರೆ 5ನೇ ಓವರ್​ನಲ್ಲಿ 4 ರನ್​ ಗಳಿಸಿದ್ದ ಶುಭಮನ್​ ಗಿಲ್​ ವಿಕೆಟ್ ಒಪ್ಪಿಸಿ ಹೊರನಡೆದರು. ಇದರಿಂದ ದೊಡ್ಡ ಆರಂಭವನ್ನು ತಂಡ ಕಳೆದಿಕೊಂಡಿತು.

ವಿರಾಟ್​ - ರೋಹಿತ್​ ಜೊತೆಯಾಟದ ನಿರೀಕ್ಷೆ: ಅನುಭವಿ ಬ್ಯಾಟರ್​ಗಳಿಂದ ದೊಡ್ಡ ಪಾಲುದಾರಿಕೆಯ ಇನ್ನಿಂಗ್ಸ್​ ಬರಬಹುದು ಎಂದು ಭಾವಿಸಿದ್ದ ಕ್ರಿಕೆಟ್​ ಅಭಿಮಾನಿಗಳಿಗೆ ರೋಹಿತ್​ ಶರ್ಮಾ ಬೇಸರ ಮೂಡಿಸಿದರು. 10ನೇ ಓವರ್​ನಲ್ಲಿ ಸಿಕ್ಸ್​ ಬಾರಿಸುವ ಬರದಲ್ಲಿ ವಿಕೆಟ್​ ಕೈಚೆಲ್ಲಿದರು. ರೋಹಿತ್​ ಮತ್ತು ವಿರಾಟ್​ 46 ರನ್​ಗಳ ಜೊತೆಯಾಟವನ್ನು ಆಡಿದ್ದರು. 31 ಬಾಲ್​ನಲ್ಲಿ 4 ಬೌಂಡರಿ ಮತ್ತು 3 ಸಿಕ್ಸ್​​ನಿಂದ 47ರನ್​ ಗಳಿಸಿ ರೋಹಿತ್​ ಔಟ್​ ಆದರು.

ಅಯ್ಯರ್​ ವಿಫಲ: ಲೀಗ್​ ಹಂತದ ಕೊನೆಯ ಪಂದ್ಯ ಮತ್ತು ಸೆಮೀಸ್​ನಲ್ಲಿ ಶತಕ ಗಳಿಸಿದ್ದ ಅಯ್ಯರ್​ ಅವರಿಂದ ಮಹತ್ವದ ಪಂದ್ಯದಲ್ಲಿ ದೊಡ್ಡ ನಿರೀಕ್ಷೆಗಳಿದ್ದವು. ಆದರೆ ಅದನ್ನು ಅಯ್ಯರ್​ ಹುಸಿಗೊಳಿಸಿ 4 ರನ್​ಗೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಹಾದಿ ಹಿಡಿದರು.

ವಿರಾಟ್​ ರಾಹುಲ್​ ಆಸರೆ: ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2ರನ್​ಗೆ 3 ವಿಕೆಟ್​ ಕಳೆದುಕೊಂಡು ಭಾರತ ಸಂಕಷ್ಟದಲ್ಲಿದ್ದಾಗ ವಿರಾಟ್​ ಕೊಹ್ಲಿ ಮತ್ತು ಕೆ ಎಲ್​ ರಾಹುಲ್​ ಇನ್ನಿಂಗ್ಸ್​ ತಂಡಕ್ಕೆ ಬಲ ನೀಡಿತ್ತು. ಇಂದು ಅದೇ ಇನ್ನಿಂಗ್ಸ್​ ಇಬ್ಬರಿಂದ ನಿರೀಕ್ಷೆ ಇತ್ತು. ಆದರೆ ಅರ್ಧಶತಕ ಗಳಿಸಿದ ವಿರಾಟ್​ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು. ಇನ್ನಿಂಗ್ಸ್​ನಲ್ಲಿ ವಿರಾಟ್​ 63 ಬಾಲ್​ ಆಡಿ 4 ಬೌಂಡರಿಯಿಂದ 54 ರನ್​ ಗಳಿಸಿದರು.

ರಾಹುಲ್​ಗೆ ಸಾಥ್​ ನೀಡದ ಜಡೇಜ: ಕೊನೆಯ ಓವರ್​ಗಳಲ್ಲಿ ಅಬ್ಬರಿಸಲು ಸೂರ್ಯ ನೆರವಾಗುತ್ತಾರೆ ಎಂಬ ಉದ್ದೇಶದಿಂದ ಜಡೇಜಾಗೆ ಬಡ್ತಿ ನೀಡಿ ಮೈದಾನಕ್ಕೆ ಕಳಿಸಲಾಯಿತು. ಆದರೆ ಅಗತ್ಯ ಸಮಯದಲ್ಲಿ ಜಡೇಜಾರಿಂದ ಉತ್ತಮ ಇನ್ನಿಂಗ್ಸ್​ ಬರಲಿಲ್ಲ. 9 ರನ್​ಗೆ ಜಡೇಜ ವಿಕೆಟ್​ ಒಪ್ಪಿಸಿದರು.

ಅರ್ಧಶತಕ ಗಳಿಸಿ ರಾಹುಲ್​ ಔಟ್​: ರಾಹುಲ್​ ವಿಕೆಟ್​ ಪತನದ ನಡುವೆಯೂ ಜವಾಬ್ದಾರಿಯುತ ಇನ್ನಿಂಗ್ಸ್​ ಆಡಿದರು. ಆದರೆ ಕೊನೆಯವರೆಗೂ ಇದ್ದು ತಂಡಕ್ಕೆ ಅಮೂಲ್ಯ ಕೊಡುಗೆ ನೀಡುತ್ತಾರೆ ಎಂಬ ಅಭಿಮಾನಿಗಳ ನಿರೀಕ್ಷೆ ನಿಜವಾಗಲಿಲ್ಲ. 107 ಬಾಲ್​ ಎದುರಿಸಿದ ರಾಹುಲ್​ 1 ಬೌಂಡರಿಯ ಸಹಾಯದಿಂದ 66 ರನ್​ ಗಳಿಸಿ ಔಟ್​ ಆದರು. ಕೊನೆಯಲ್ಲಿ ಶಮಿ (6), ಬುಮ್ರಾ (1), ಕುಲ್ದೀಪ್​ (10) ತಮ್ಮಿಂದಾದ ಇನ್ನಿಂಗ್ಸ್ ಆಡಿದರು. ಇದರಿಂದ ತಂಡ 50 ಓವರ್​ಗೆ ಎಲ್ಲಾ ವಿಕೆಟ್​ಗಳನ್ನು ಕಳೆದುಕೊಂಡು 240 ರನ್​ ಕಲೆಹಾಕಿತು.

ಆಸೀಸ್​ ಪರ ಸ್ಟಾರ್ಕ್​ 3 ವಿಕೆಟ್​ ಪಡೆದರೆ ಜೋಶ್ ಹೇಜಲ್​ವುಡ್, ಕಮಿನ್ಸ್​ 2 ಮತ್ತು ಮ್ಯಾಕ್ಸ್​ವೆಲ್​, ಝಂಪಾ ಒಂದೊಂದು ವಿಕೆಟ್​ ಕಿತ್ತರು.

ಇದನ್ನೂ ಓದಿ: ವಿಶ್ವಕಪ್​ ಫೈನಲ್​: ಕುತೂಹಲ ಮೂಡಿಸಿದ ಭಾರತ ತಂಡದ 11ರ ಬಳಗ, ಅಶ್ವಿನ್​ಗೆ ಸಿಗುತ್ತಾ ಚಾನ್ಸ್​?

Last Updated : Nov 19, 2023, 6:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.