ವಿಶ್ವಕಪ್ ಫೈನಲ್: ಕುತೂಹಲ ಮೂಡಿಸಿದ ಭಾರತ ತಂಡದ 11ರ ಬಳಗ, ಅಶ್ವಿನ್ಗೆ ಸಿಗುತ್ತಾ ಚಾನ್ಸ್?

ವಿಶ್ವಕಪ್ ಫೈನಲ್: ಕುತೂಹಲ ಮೂಡಿಸಿದ ಭಾರತ ತಂಡದ 11ರ ಬಳಗ, ಅಶ್ವಿನ್ಗೆ ಸಿಗುತ್ತಾ ಚಾನ್ಸ್?
Ravichandran Ashwin: ಆಸ್ಟ್ರೇಲಿಯಾ ವಿರುದ್ಧ ಗಮನಾರ್ಹ ಪ್ರದರ್ಶನ ನೀಡಿರುವ ಸ್ಪಿನ್ನರ್ ಅಶ್ವಿನ್ಗೆ ಫೈನಲ್ ಕದನದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಬುಶೇನ್ತಂತಹ ಬ್ಯಾಟರ್ಗಳ ಕಡಿವಾಣಕ್ಕೆ ಸ್ಪಿನ್ ಅಸ್ತ್ರ ಪ್ರಮುಖವಾಗಿದೆ.
ಅಹಮದಾಬಾದ್: ವಿಶ್ವದ ಅತಿ ದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವವೇ ಕಾತುರದಿಂದ ಕಾಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಒಂದೂವರೆ ಗಂಟೆಯಷ್ಟೇ ಬಾಕಿಯಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕ್ರೀಡಾಂಗಣಕ್ಕೆ ಬಂದಿವೆ. ಫೈನಲ್ ವಿಜಯಕ್ಕೆ ಇತ್ತಂಡಗಳು ರಣತಂತ್ರ ರೂಪಿಸುತ್ತಿವೆ. ಭಾರತಕ್ಕೆ ಗೆಲುವೊಂದೇ ಗುರಿಯಾಗಿದ್ದು, ಆಡುವ ಹನ್ನೊಂದು ಆಟಗಾರರ ಮೇಲೆ ಎಲ್ಲರ ಕಣ್ಣಿದೆ.
ನಾಯಕ ರೋಹಿತ್ ಶರ್ಮಾ ಟಾಸ್‌ಗೆ ತೆರಳಿದಾಗ ನೀಡುವ ಪ್ಲೇಯಿಂಗ್ ಇಲೆವೆನ್ ಪಟ್ಟಿಯಲ್ಲಿ ಭಾರತ ತಂಡದ ಹಿರಿಯ ಸ್ಪಿನ್ ಮಾಂತ್ರಿಕ ಅಶ್ವಿನ್ಗೆ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಆಸೀಸ್ ಬ್ಯಾಟರ್ಗಳ ವಿರುದ್ಧ ಸ್ಪಿನ್ ಬೌಲಿಂಗ್ ಯಶಸ್ವಿಯಾದ ಕಾರಣ ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಅವರ ಜೊತೆಗೆ ಹೆಚ್ಚುವರಿಯಾಗಿ ಅಶ್ವಿನ್ರನ್ನೂ ತಂಡಕ್ಕೆ ಸೇರಿಸಿಕೊಳ್ಳುತ್ತಾರಾ ಎಂಬುದು ಪ್ರಶ್ನೆಯಾಗಿದೆ.
ವಿಶ್ವಕಪ್ಗೆ ಭಾರತ ತಂಡವನ್ನು ಘೋಷಿಸಿದಾಗ ಅಶ್ವಿನ್ಗೆ ಸ್ಥಾನ ಸಿಕ್ಕಿರಲಿಲ್ಲ. ಆಲ್‌ರೌಂಡರ್ ಕೋಟಾದಲ್ಲಿ ಗುಜರಾತಿನ ಸ್ಪಿನ್ನರ್ ಅಕ್ಷರ್ ಪಟೇಲ್ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ, ಗಾಯದ ಸಮಸ್ಯೆಯಿಂದ ಅಕ್ಷರ್ ಟೂರ್ನಿಯಿಂದ ಹೊರಗುಳಿಯಬೇಕಾಯಿತು. ಬಳಿಕ ಕೊನೆಯ ಗಳಿಗೆಯಲ್ಲಿ ಅಶ್ವಿನ್ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು.
ಕೇರಂ ಸ್ಪೆಷಲಿಸ್ಟ್ ಅಶ್ವಿನ್ ವಿಶ್ವಕಪ್ನಂತಹ ದೊಡ್ಡ ಟೂರ್ನಿಗಳಲ್ಲಿ ಆಡಿದ ಅನುಭವವಿದೆ. ಇದು ಅವರಿಗೆ ಮೂರನೇ ವಿಶ್ವಕಪ್ ಕೂಡ ಹೌದು. ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಹ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಛಾತಿ ಅಶ್ವಿನ್ ಮಣಿಕಟ್ಟಿಗಿದೆ. ಮಧ್ಯಮ ಕ್ರಮಾಂಕದಲ್ಲಿ ಸವಾಲಾಗುವ ಮಾರ್ನಸ್ ಲಬುಶೇನ್ರನ್ನು ಕಾಡಿದ ದಾಖಲೆಗಳೂ ಇವೆ. ಲೀಗ್ ಹಂತದಲ್ಲಿ ಕಾಂಗರೂ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಿದ್ದ ಅಶ್ವಿನ್ 10 ಓವರ್ ಬೌಲಿಂಗ್ನಲ್ಲಿ 34 ರನ್ 1 ವಿಕೆಟ್ ಪಡೆದು ಪ್ರಭಾವಿಯಾಗಿದ್ದರು. ಇದಾದ ಬಳಿಕ ಅಶ್ವಿನ್ಗೆ ಯಾವ ಪಂದ್ಯದಲ್ಲೂ ಅವಕಾಶ ಸಿಗಲಿಲ್ಲ.
ಯಾರ ಬದಲಿಗೆ ಅಶ್ವಿನ್?: 2011 ರ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿರುವ ಅಶ್ವಿನ್ ಅವರನ್ನು ಈ ಪಂದ್ಯದಲ್ಲಿ ಕಣಕ್ಕಿಳಿಸಿದರೆ, ಯಾರು ಹೊರಗುಳಿಯುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಈಗಾಗಲೇ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡು ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಭಾರತ ಕೇವಲ ಐದು ಸ್ಪೆಷಲಿಸ್ಟ್ ಬೌಲರ್‌ಗಳೊಂದಿಗೆ ಆಡುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ತಕ್ಕಮಟ್ಟಿಗೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತ್ರಿವಳಿ ವೇಗದ ಬೌಲಿಂಗ್ ಯಶಸ್ವಿಯಾಗಿದೆ. ಹಾಗೊಂದು ವೇಳೆ ಅಶ್ವಿನ್ ಆಡಿಸಿದಲ್ಲಿ ಸೂರ್ಯಕುಮಾರ್ ಅಥವಾ ಮೊಹಮದ್ ಸಿರಾಜ್ ಅವಕಾಶ ತಪ್ಪಿಸಿಕೊಳ್ಳಲಿದ್ದಾರೆ.
ಸದ್ಯಕ್ಕೆ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಆಡುವ ಹನ್ನೊಂದರ ಬಳಗ ಮತ್ತು ಅಶ್ವಿನ್ ಸೇರ್ಪಡೆ ಬಗ್ಗೆಯೂ ಎಲ್ಲೂ ಮಾಹಿತಿ ಹಂಚಿಕೊಂಡಿಲ್ಲ. ನೆಟ್ ಅಭ್ಯಾಸದ ವೇಳೆ ಅಶ್ವಿನ್ ಹಲವು ಗಂಟೆಗಳ ಕಾಲ ಬೆವರು ಹರಿಸಿದ್ದು ನೋಡಿದರೆ, ಅವಕಾಶ ಸಿಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
