ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್: ಕೊಹ್ಲಿ, ಅಶ್ವಿನ್ಗೆ ವಿಶಿಷ್ಟ ದಾಖಲೆ ಬರೆಯುವ ಅವಕಾಶ

ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್: ಕೊಹ್ಲಿ, ಅಶ್ವಿನ್ಗೆ ವಿಶಿಷ್ಟ ದಾಖಲೆ ಬರೆಯುವ ಅವಕಾಶ
ICC world cup final: Virat Kohli, Ashwin to create record: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಉಭಯ ತಂಡಗಳು ಇತಿಹಾಸ ರಚಿಸಲು ರಣತಂತ್ರ ಹೆಣೆಯುತ್ತಿವೆ. ವಿರಾಟ್ ಕೊಹ್ಲಿ ಮತ್ತು ಅಶ್ವಿನ್ ಅವರಿಗೆ ವಿಶೇಷ ದಾಖಲೆ ಬರೆಯುವ ಅವಕಾಶವಿದೆ.
ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಅಂತಿಮ ಹಂತ ತಲುಪಿದೆ. ಯಾರಿಗೆ ವಿಶ್ವ ಚಾಂಪಿಯನ್ ಪಟ್ಟ ಎನ್ನುವುದು ರಿವೀಲ್ ಆಗಲು ಕೆಲವೇ ಗಂಟೆಗಳಷ್ಟೇ ಬಾಕಿ. ವಿಶ್ವದ ಕ್ರಿಕೆಟ್ ಅಭಿಮಾನಿಗಳ ಚಿತ್ತ ಇದೀಗ ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನತ್ತ ನೆಟ್ಟಿದೆ.
ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿರುವ ರೋಚಕ ಕಾದಾಟದಲ್ಲಿ ಆತಿಥೇಯ ಭಾರತಕ್ಕೆ ಐದು ಬಾರಿ ವಿಶ್ವ ಚಾಂಪಿಯನ್ ಪಟ್ಟ ಹೊಂದಿರುವ ಆಸ್ಟ್ರೇಲಿಯಾ ಸವಾಲೊಡ್ಡಲಿದೆ. ಮೂರನೇ ಬಾರಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಲು ಟೀಂ ಇಂಡಿಯಾ ಸಿದ್ಧತೆ ನಡೆಸಿದೆ. ಹಾಗೆಯೇ ಭಾರತದ ಪರ ವಿಶಿಷ್ಟ ದಾಖಲೆ ಸೃಷ್ಟಿಸಲು ಅನುಭವಿಗಳಾದ ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್ ಜೋಡಿ ತುದಿಗಾಲಿನಲ್ಲಿ ನಿಂತಿದ್ದಾರೆ.
ಗರಿಷ್ಠ ಏಕದಿನ ವಿಶ್ವಕಪ್ ಗೆದ್ದ ಸಾಧನೆ: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ವಿಶ್ವಕಪ್ ವಿಜೇತ ತಂಡದ ಭಾಗವಾಗಿರುವುದು ಸಾಮಾನ್ಯ ಸಾಧನೆಯಲ್ಲ. ವಿಶ್ವದ ಅನೇಕ ಆಟಗಾರರು ಒಂದಕ್ಕಿಂತ ಹೆಚ್ಚು ಬಾರಿ ಈ ಸಾಧನೆಗೈದಿರುವುದು ವಿಶೇಷ. ಇಂದಿನ ಫೈನಲ್ ಪಂದ್ಯದಲ್ಲಿ ಗೆದ್ದು ಭಾರತ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದರೆ ಭಾರತದ ಇಬ್ಬರು ಅನುಭವಿ ಆಟಗಾರರು ವಿಶಿಷ್ಟ ದಾಖಲೆ ಬರೆದವರ ಸಾಲಿಗೆ ಸೇರಲಿದ್ದಾರೆ. ಭಾರತದ ಪರ ಒಂದಕ್ಕಿಂತ ಹೆಚ್ಚು ಬಾರಿ ಏಕದಿನ ವಿಶ್ವಕಪ್ ಗೆದ್ದ ಆಟಗಾರರು ಎಂಬ ದಾಖಲೆಯ ಪಟ್ಟಿಯಲ್ಲಿ ಸ್ಥಾನ ಪಡೆಯುವ ಅವಕಾಶ ಈ ಬಾರಿ ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್‌ಗಿದೆ.
2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಚಾಂಪಿಯನ್ ಆದಾಗ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದಿದ್ದರು. ಟೂರ್ನಿಯಲ್ಲಿ 9 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ತಲಾ ಒಂದೊಂದು ಶತಕ ಹಾಗೂ ಅರ್ಧಶತಕದ ಸಹಿತ 282 ರನ್ ಗಳಿಸಿದ್ದರು. ಇನ್ನು 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಪಡೆದಿದ್ದರು. 12 ವರ್ಷಗಳ ಬಳಿಕ ಮತ್ತೊಮ್ಮೆ ಭಾರತ ಏಕದಿನ ವಿಶ್ವಕಪ್‌ನ ಅಂತಿಮ ಘಟ್ಟ ತಲುಪಿದ್ದು, ಈ ಬಾರಿಯೂ ಸಹ ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್ ತಂಡದ ಭಾಗವಾಗಿದ್ದಾರೆ. ಭಾರತ ವಿಶ್ವಕಪ್‌ಗೆ ಮುತ್ತಿಕ್ಕಿದರೆ ಅದು ಈ ಇಬ್ಬರು ಅನುಭವಿಗಳ ಪಾಲಿಗೆ ಮತ್ತಷ್ಟು ಸ್ಮರಣೀಯ ಕ್ಷಣವಾಗಲಿದೆ.
ಹೆಚ್ಚು ಬಾರಿ ವಿಶ್ವಕಪ್ ಗೆದ್ದ ತಂಡದ ಭಾಗವಾದವರು: ಏಕದಿನ ವಿಶ್ವ ಸಮರದಲ್ಲಿ ಅಧಿಕ ಬಾರಿ ಚಾಂಪಿಯನ್ ತಂಡದ ಭಾಗವಾಗಿದ್ದ ಹೆಗ್ಗಳಿಕೆ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗರಾದ ಗ್ಲೆನ್ ಮೆಗ್ರಾಥ್, ರಿಕ್ಕಿ ಪಾಂಟಿಂಗ್ ಹಾಗೂ ಆ್ಯಡಂ ಗಿಲ್ಕ್ರಿಸ್ಟ್ಗೆ ಸಲ್ಲುತ್ತದೆ. ಆಸೀಸ್‌ನ ಈ ದಿಗ್ಗಜ ಆಟಗಾರರು ಮೂರು ಬಾರಿ ಚಾಂಪಿಯನ್ಸ್ ತಂಡದ ಭಾಗವಾಗುವ ಮೂಲಕ ದಾಖಲೆ ಬರೆದಿದ್ದಾರೆ. 1999, 2003 ಹಾಗೂ 2007ರ ವಿಶ್ವಕಪ್‌ನಲ್ಲಿ ಮೂವರೂ ಆಟಗಾರರು ತಮ್ಮ ತಂಡದಲ್ಲಿದ್ದರು.
ಇವರಲ್ಲದೇ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ 1987ರ ವಿಶ್ವಕಪ್ ವಿಜೇತ ತಂಡದಲ್ಲಿದ್ದರೆ, 1999ರಲ್ಲಿ ನಾಯಕನಾಗಿ ವಿಶ್ವಕಪ್ ಗೆದ್ದ ದಾಖಲೆ ಹೊಂದಿದ್ದಾರೆ. ಇನ್ನು ಡರೆನ್ ಲೆಹ್ಮನ್ ಹಾಗೂ ಆಸ್ಟ್ರೇಲಿಯಾದ ಸಾರ್ವಕಾಲಿಕ ಬೆಸ್ಟ್ ಫಿನಿಷರ್ ಮೈಕಲ್ ಬೆವನ್ 1999 ಹಾಗೂ 2003ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಎತ್ತಿಹಿಡಿದಾಗ ತಂಡದ ಸದಸ್ಯರಾಗಿದ್ದವರು. ಇವರಲ್ಲದೆ 2003 ಹಾಗೂ 2007ರ ವಿಶ್ವಕಪ್ ಗೆದ್ದ ತಂಡದಲ್ಲಿ ಮ್ಯಾಥ್ಯೂ ಹೇಡನ್, ಆ್ಯಂಡ್ರ್ಯೂ ಸೈಮಂಡ್ಸ್ ಹಾಗೂ ಬ್ರಾಡ್ ಹಾಗ್ ಮತ್ತು 2007 ಹಾಗೂ 2015ರ ವಿಶ್ವ ಚಾಂಪಿಯನ್ ತಂಡದಲ್ಲಿ ಮೈಕೆಲ್ ಕ್ಲಾರ್ಕ್ ಹಾಗೂ ಶೇನ್ ವ್ಯಾಟ್ಸನ್ ಸ್ಥಾನ ಪಡೆದದ್ದರು.
ವಿಶ್ವಕಪ್ ಇತಿಹಾಸದಲ್ಲಿ ಆರಂಭದಲ್ಲೇ ಎರಡು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ತಂಡ ವಿಂಡೀಸ್. ಆರು ಜನ ವಿಂಡೀಸ್ ತಂಡದ ಆಟಗಾರರು ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ. 1975 ಹಾಗೂ 1979ರ ವಿಶ್ವಕಪ್‌ನಲ್ಲಿ ಕೆರಿಬಿಯನ್ನರು ಚಾಂಪಿಯನ್ ಆದಾಗ ನಾಯಕ ಕ್ಲೈವ್ ಲಾಯ್ಡ್ ಸೇರಿದಂತೆ ವಿವಿಯನ್ ರಿಚರ್ಡ್ಸ್, ಗಾರ್ಡನ್ ಗ್ರಿನಿಡ್ಜ್, ಅಲ್ವಿನ್ ಕಾಳಿಚರಣ್, ಡೆರಿಕ್ ಮುರ್ರೆ ಹಾಗೂ ಆ್ಯಂಡಿ ರಾಬರ್ಟ್ಸ್ ಈ ವಿಶೇಷ ದಾಖಲೆಗೆ ಆರಂಭಿಕ ಮುನ್ನಡಿ ಬರೆದಿದ್ದರು.
