ETV Bharat / sports

IND vs WI, 4th T20: ನಾಳೆ ಭಾರತ-ವಿಂಡೀಸ್‌ 4ನೇ ಟಿ-20; ಉಭಯ ತಂಡಗಳಿಂದ ಭಾರಿ ಪೈಪೋಟಿ ನಿರೀಕ್ಷೆ

author img

By

Published : Aug 11, 2023, 8:31 PM IST

IND vs WI 4th T20
IND vs WI 4th T20

IND vs WI, 4th T20: ಮೂರನೇ ಟಿ20 ಗೆಲುವಿನಿಂದ ಭಾರತ ತಂಡವು ವಿಂಡೀಸ್​ ವಿರುದ್ಧದ ಸರಣಿಯಲ್ಲಿ ಜೀವಂತವಾಗಿದೆ. ನಾಳೆ ಫ್ಲೋರಿಡಾದಲ್ಲಿ ನಡೆಯುವ ಪಂದ್ಯ ಗೆದ್ದಲ್ಲಿ ಸರಣಿ ಸಮಬಲವಾಗಲಿದೆ.

ಲಾಡರ್‌ಹಿಲ್ (ಫ್ಲೋರಿಡಾ): ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ​ ಇಂಡಿಯಾ ಸಿರೀಸ್​ ಅನ್ನು ಜೀವಂತವಾಗಿ ಉಳಿಸಿಕೊಂಡಿದೆ. ಹೀಗಾಗಿ ನಾಲ್ಕು ಮತ್ತು ಐದನೇ ಟಿ20 ಪಂದ್ಯದ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಆದರೆ ಭಾರತ ಮುಂದಿನ ಎರಡು ಪಂದ್ಯಗಳನ್ನೂ ಗೆಲ್ಲಬೇಕಾದಲ್ಲಿ ತಂಡದಲ್ಲಿ ಬಹಳಷ್ಟು ಸುಧಾರಣೆ ಮಾಡಿಕೊಳ್ಳಬೇಕಿದೆ.

ಸದ್ಯ ಐದು ಪಂದ್ಯಗಳ ಸರಣಿಯಲ್ಲಿ ವೆಸ್ಟ್​ ಇಂಡೀಸ್​ 2-1 ರಿಂದ ಮುನ್ನಡೆಯಲ್ಲಿದೆ. ಮುಂದಿನ ಎರಡೂ ಪಂದ್ಯಗಳು ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ಸ್ಟೇಡಿಯಂನಲ್ಲಿ ನಡೆಯಲಿವೆ. ಭಾರತ ಸರಣಿ ವಶಪಡಿಸಿಕೊಳ್ಳಲು ಎರಡೂ ಪಂದ್ಯವನ್ನು ಗೆಲ್ಲಲೇಬೇಕು. ವಿಂಡೀಸ್​ ಒಂದು ಗೆಲುವಿಗಾಗಿ ಎದುರು ನೋಡುತ್ತಿದೆ.

ಆರಂಭಿಕರ ವೈಫಲ್ಯ: ಮೂರನೇ ಪಂದ್ಯಕ್ಕೆ ಇಶಾನ್​ ಕಿಶನ್​ ಅವರನ್ನು ಕೂರಿಸಿ ಯಶಸ್ವಿ ಜೈಸ್ವಾಲ್​​ಗೆ ಅವಕಾಶ ಮಾಡಿಕೊಡಲಾಯಿತು. ಆದರೆ ಜೈಸ್ವಾಲ್​ ಯಶಸ್ವಿ ಇನ್ನಿಂಗ್ಸ್​ ಕಟ್ಟುವಲ್ಲಿ ವಿಫಲರಾದರು. ಅತ್ತ ಯುವ ಬ್ಯಾಟರ್​ ಶುಭಮನ್​ ಗಿಲ್​ ಸಹ ಮೂರು ಟಿ20ಯಲ್ಲಿ ವಿಫಲರಾಗಿದ್ದಾರೆ. ಮೂರು ಪಂದ್ಯದಲ್ಲಿ ಆರಂಭಿಕ ಜೊತೆಯಾಟವೇ ಮೂಡಿಬಂದಿಲ್ಲ. ಐಪಿಎಲ್​​ನಲ್ಲಿ ಮಿಂಚಿದ್ದ ಮೂವರು ಆಟಗಾರರೂ ಸಹ ಉತ್ತಮ ಓಪನಿಂಗ್​ ನೀಡುವಲ್ಲಿ ವಿಫಲರಾಗಿದ್ದಾರೆ. ನಾಲ್ಕನೇ ಪಂದ್ಯಕ್ಕೆ ಗಿಲ್​ಗೆ ಕೊಕ್ ಕೊಟ್ಟು ಮತ್ತು ಇಶಾನ್​ ಸ್ಥಾನ ಪಡೆಯುತ್ತಾರಾ ಅಥವಾ ಪ್ರಿನ್ಸ್​ಗೆ ಇನ್ನೊಂದು ಅವಕಾಶ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಸೂರ್ಯ, ತಿಲಕ್ ಭರವಸೆ: ವಿಂಡೀಸ್​ ವಿರುದ್ಧದ ಟಿ20 ಸರಣಿಯಲ್ಲಿ ಪಾದಾರ್ಪಣೆ ಮಾಡಿದ ತಿಲಕ್​ ವರ್ಮಾ ಉತ್ತಮ ಲಯದಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಮೂರು ಪಂದ್ಯದಲ್ಲಿ ಕ್ರಮವಾಗಿ 39,51, ಮತ್ತು 49 ರನ್​ ಗಳಿಸಿ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಿದ್ದಾರೆ. ಮೂರನೇ ಪಂದ್ಯದಲ್ಲಿ ಬಿರುಸಿನ ಆಟವಾಡಿ ಫಾರ್ಮ್​ಗೆ ಮರಳಿರುವ ಟಿ20 ನಂ.01 ಬ್ಯಾಟರ್​ ಸೂರ್ಯ ಕುಮಾರ್ ಯಾದವ್​​ ನಾಲ್ಕನೇ ಪಂದ್ಯಕ್ಕೂ ಭರವಸೆ ಆಗಿದ್ದಾರೆ. ಮೂರನೇ ಪಂದ್ಯದಲ್ಲಿ ಸೂರ್ಯ 188 ರ ಸ್ಟ್ರೈಕ್​ರೇಟ್​ನಲ್ಲಿ 83 ರನ್​ ಗಳಿಸಿದ್ದರು. ಇದರಿಂದ ಭಾರತ ಎರಡು ಓವರ್​ ಉಳಿಸಿಕೊಂಡು ಪಂದ್ಯ ಗೆದ್ದಿತ್ತು. ಇವರ ಜೊತೆ ಹಾರ್ದಿಕ್​ ಪಾಂಡ್ಯ ಸಹ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದರು. ಹೀಗಾಗಿ ಮಧ್ಯಮ ಕ್ರಮಾಂಕ ಬಲವಾಗಿ ಕಂಡು ಬರುತ್ತಿದೆ.

ವೇಗಿಗಳ ವಿಚಾರ : ವಿಂಡೀಸ್ ಬ್ಯಾಟರ್​ಗಳು ವೇಗದ ಬೌಲರ್​ಗಳನ್ನು ಸುಲಭವಾಗಿ ದಂಡಿಸುತ್ತಿದ್ದಾರೆ. ಕಳೆದ ಮೂರು ಪಂದ್ಯದಲ್ಲೂ ವೇಗಿಗಳು ದುಬಾರಿಯಾಗಿದ್ದರು. ಮೂರನೇ ಪಂದ್ಯದಲ್ಲಿ ಕೊನೆಯ ಎರಡು ಓವರ್​​ನಲ್ಲಿ ವೇಗಿಗಳು ರನ್​ ಬಿಟ್ಟುಕೊಟ್ಟಿದ್ದರಿಂದ 160ರ ಗುರಿಯನ್ನು ಭಾರತ ಪಡೆದುಕೊಂಡಿತು. ಇಲ್ಲವಾದಲ್ಲಿ 140ರ ಆಸುಪಾಸಿನಲ್ಲಿ ವಿಂಡೀಸ್ ಅ​​ನ್ನು ನಿಯಂತ್ರಿಸಬಹುದಿತ್ತು. ಡೆತ್​ ಓವರ್​ ಕಂಟ್ರೋಲ್​ ಪ್ರತಿ ಪಂದ್ಯದಲ್ಲೂ ತಪ್ಪುತ್ತಿದ್ದು ಇದನ್ನು ತಿದ್ದಿಕೊಳ್ಳಬೇಕಿದೆ.

ಫಾರ್ಮ್​ಗೆ ಬರ್ತಿದ್ದಾರೆ ವಿಂಡೀಸ್​ ಆಟಗಾರರು: ಮೊದಲೆರಡು ಪಂದ್ಯದಲ್ಲಿ ಪೂರನ್​ ಮತ್ತು ಪೊವೆಲ್​ ಮಾತ್ರ ಫಾರ್ಮ್​ನಲ್ಲಿದ್ದರು. ಈ ಇಬ್ಬರು ಬ್ಯಾಟರ್​ಗಳನ್ನು ನಿಯಂತ್ರಿಸಿದರೆ ಭಾರತಕ್ಕೆ ಗೆಲುವು ಖಚಿತ ಎಂಬಂತಿತ್ತು. ಆದರೆ ಈಗ ವಿಂಡೀಸ್​ನ ಆರಂಭಿಕ ಆಟಗಾರರೂ ಫಾರ್ಮ್​ಗೆ ಮರಳಿದ್ದಾರೆ. ಬ್ರಾಂಡನ್ ಕಿಂಗ್ ಕಳೆದ ಪಂದ್ಯದಲ್ಲಿ 42 ರನ್​ ಗಳಿಸಿ ಉತ್ತಮ ಆರಂಭವನ್ನು ವಿಂಡೀಸ್​ಗೆ ನೀಡಿದ್ದರು. ಪೂರನ್​ ಯಾವುದೇ ಸಮಯದಲ್ಲು ಅಬ್ಬರಿಸುವ ಸಾಮರ್ಥ್ಯ ಹೊಂದಿದ್ದಾರೆ. ಮೂರನೇ ಪಂದ್ಯದಲ್ಲಿ ಡೆತ್​ ಓವರ್​ನಲ್ಲಿ ಪೋವೆಲ್​ ಟೀಂ​ ಇಂಡಿಯಾದ ಬೌಲರ್​ಗಳನ್ನು ಕಾಡಿದ್ದರು. ಹಾರ್ದಿಕ್​ ಪಡೆ ಈ ಮೂವರನ್ನು ನಿಯಂತ್ರಿಸಿದಲ್ಲಿ ಸರಣಿ ಸಮಬಲ ಸಾಧಿಸಬಹುದು.

ಪಿಚ್​ ರಿಪೋರ್ಟ್ : ಸ್ಪಿನ್​ ಫೇವರ್​ ಪಿಚ್​ ಇದಾಗಿದ್ದು, ಟಾಸ್​ ಗೆದ್ದ ನಾಯಕ ಬ್ಯಾಟಿಂಗ್​ ಮಾಡುವುದು ಇಲ್ಲಿನ ಮೊದಲ ಆಯ್ಕೆ. ಏಕೆಂದರೆ ಮೊದಲು ಬ್ಯಾಟಿಂಗ್​ ಮಾಡಿದ ತಂಡ ಉತ್ತಮ ರನ್​ ಗಳಿಸಿದ ನಿದರ್ಶನಗಳಿವೆ. ಎರಡನೇ ಇನ್ನಿಂಗ್ಸ್​ನಲ್ಲಿ ಬೌಲಿಂಗ್​ ಟಫ್​ ಆಗಲಿದ್ದು ರನ್​ ಗಳಿಸಲು ಕಷ್ಟ ಪಡಬೇಕಾಗುತ್ತದೆ.

ಸಂಭಾವ್ಯ ತಂಡ.. ಭಾರತ: ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್

ವೆಸ್ಟ್ ಇಂಡೀಸ್ : ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್, ರೋವ್‌ಮನ್ ಪೊವೆಲ್, ಶಿಮ್ರಾನ್ ಹೆಟ್ಮೆಯರ್, ರೊಮಾರಿಯೊ ಶೆಫರ್ಡ್, ರೋಸ್ಟನ್ ಚೇಸ್, ಅಕೆಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್

ಪಂದ್ಯ ಎಲ್ಲಿ, ಯಾವಾಗ?: ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ಸ್ಟೇಡಿಯಂನಲ್ಲಿ ನಾಳೆ ಭಾರತೀಯ ಕಾಲಮಾನ 8ಕ್ಕೆ ಪಂದ್ಯ ಆರಂಭವಾಗಲಿದೆ. ಜಿಯೋ ಸಿನಿಮಾ, ಡಿಡಿ ಚಂದನ ಮತ್ತು ಡಿಡಿ ಸ್ಪರ್ಟ್ಸ್​​ನಲ್ಲಿ ನೇರಪ್ರಸಾರ ಲಭ್ಯ.

ಇದನ್ನೂ ಓದಿ: Kane Williamson: ವಿಶ್ವಕಪ್​ಗೂ ಮುನ್ನವೇ ಕಿವೀಸ್​ ನಾಯಕ ವಿಲಿಯಮ್ಸನ್​​ ಕಮ್‌ಬ್ಯಾಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.