ETV Bharat / sports

ಮಹಿಳಾ ಟಿ20 ತ್ರಿಕೋನ ಸರಣಿ: ವಿಂಡೀಸ್ ಗೆದ್ದ ಭಾರತ; ಫೈನಲ್​ಗೆ ಇನ್ನೊಂದೇ ಹೆಜ್ಜೆ

author img

By

Published : Jan 24, 2023, 2:26 PM IST

india beat west indies
ತ್ರಿಕೋನ ಟಿ20 ಸರಣಿ

ದಕ್ಷಿಣ ಆಫ್ರಿಕಾ, ವೆಸ್ಟ್​ ಇಂಡೀಸ್​ ವಿರುದ್ಧದ ತ್ರಿಕೋನ ಟಿ20 ಸರಣಿಯಲ್ಲಿ ಭಾರತ ಅಜೇಯವಾಗಿ ಮುನ್ನುಗ್ಗುತ್ತಿದೆ. ಹರಿಣಗಳ ವಿರುದ್ಧ ಮೊದಲ ಪಂದ್ಯ ಗೆದ್ದಿದ್ದ 'ಭಾರತೀ'ಯರು ಕೆರಿಬಿಯನ್​ ಮಹಿಳೆಯರ ವಿರುದ್ಧವೂ 56 ರನ್​ಗಳ ಅಂತರದಲ್ಲಿ ಜಯಿಸಿದರು. ಇನ್ನೊಂದು ಪಂದ್ಯ ಗೆದ್ದರೆ ಫೈನಲ್​ ಖಚಿತ.

ಈಸ್ಟ್​ ಲಂಡನ್​: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳೆಯರ ತ್ರಿಕೋನ ಟಿ20 ಸರಣಿಯಲ್ಲಿ ಭಾರತ ಮತ್ತೊಂದು ದಿಗ್ವಿಜಯ ಸಾಧಿಸಿದೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ವನಿತೆಯರು 56 ರನ್​ಗಳಿಂದ ಗೆಲುವು ಸಾಧಿಸಿದರು. ಮೊದಲು ಬ್ಯಾಟ್​ ಮಾಡಿದ ಭಾರತ 2 ವಿಕೆಟ್​ಗೆ 167 ರನ್​ ಗಳಿಸಿತು. ಇದಕ್ಕುತ್ತರವಾಗಿ ಕೆರೆಬಿಯನ್​ ಟೀಂ 4 ವಿಕೆಟ್​ಗೆ 111 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಭಾರತದ ಸ್ಮೃತಿ ಮಂಧಾನ ಮತ್ತು ನಾಯಕಿ ಹರ್ಮನ್​ಪ್ರೀತ್​ ಕೌರ್​ ಅವರ ಅಜೇಯ ಅರ್ಧಶತಕಗಳ ನೆರವಿನಿಂದ ತಂಡ ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್​ಗೆ 167 ರನ್​ ಗಳಿಸಿತು. ಯಾಸ್ಟಿಕಾ ಬಾಟಿಯಾ 18, ಹರ್ಲಿನ್​ ಡಿಯೋಲ್​ 12 ರನ್​ಗಳಿಗೆ ಔಟಾದರು. ಬಳಿಕ ಜೊತೆಯಾದ ಬ್ಯಾಟಿಂಗ್​ ಸ್ಟಾರ್​ ಮಂಧಾನ ಮತ್ತು ಕೌರ್​ ವೆಸ್ಟ್​ ಇಂಡೀಸ್​ ವನಿತೆಯರ ಬೆಂಡೆತ್ತಿದರು.

ಬಿಡುಬೀಸಾಗಿ ಬ್ಯಾಟ್​ ಮಾಡಿದ ಸ್ಮೃತಿ ಮಂಧಾನ ಮತ್ತೊಮ್ಮೆ ಭಾರತವನ್ನು ಗೆಲುವಿನೆಡೆಗೆ ಕೊಂಡೊಯ್ದರು. 51 ಎಸೆತಗಳಲ್ಲಿ 74 ರನ್​ ಬಾರಿಸಿದ ಮಂಧಾನ ಇನಿಂಗ್ಸ್​ನಲ್ಲಿ 10 ಬೌಂಡರಿ, 1 ಸಿಕ್ಸರ್​ ಸಿಡಿಸಿ ಅಜೇಯರಾಗುಳಿದರು. ಇನ್ನೊಂದೆಡೆ, ಹಿರಿತನ ಮತ್ತು ನಾಯಕತ್ವದ ಗುಣ ತೋರಿದ ಹರ್ಮನ್​ಪ್ರೀತ್​ ಕೌರ್​ 35 ಎಸೆತಗಳಲ್ಲಿ 56 ರನ್​ ಮಾಡಿ ಅರ್ಧಶತಕ ಸಂಭ್ರಮಾಚರಣೆ ಮಾಡಿದರು. ಇದರಲ್ಲಿ 8 ಬೌಂಡರಿ ಬಾರಿಸಿದರು. ಇಬ್ಬರ ಶತಕದ ಜೊತೆಯಾಟದಿಂದ ಭಾರತ ತಂಡ 167 ರನ್ ಗಳಿಸಿತು.

ಕ್ರೀಸ್‌ ಕಚ್ಚಿಕೊಂಡು ಬ್ಯಾಟ್​ ಬೀಸಿದ ಸ್ಮೃತಿ ಮತ್ತು ಕೌರ್​ ಆಟವನ್ನು ಬೇರ್ಪಡಿಸಲು ವೆಸ್ಟ್​ ಇಂಡೀಸ್​ ನಾಯಕಿ ಹೈಲೇ ಮ್ಯಾಥ್ಯೂವ್ಸ್​ 7 ಬೌಲರ್​ಗಳನ್ನು ಬಳಸಿದರು. ಆದರೂ ಯಾವುದೇ ಫಲ ಸಿಗಲಿಲ್ಲ.

ರನ್​ ಗಳಿಸಲು ಪರದಾಟ: 167 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಕೆರಿಬಿಯನ್​ ವನಿತೆಯರು ರನ್​ ಗಳಿಸಲು ಪರದಾಡಿದರು. ರಶದಾ ವಿಲಿಯಮ್ಸನ್​ 8, ಬ್ರಿಟ್ನಿ ಕೂಪರ್​ 0, ಶಬೀಕ ಗಜ್ನಬಿ 3 ರನ್​ಗೆ ಔಟಾದರು. ಶೀಮೈನ್​ ಕ್ಯಾಂಪ್​ಬೆಲ್ಲೆ 47 ರನ್​ ಗಳಿಸಿ ಪ್ರತಿರೋಧ ಒಡ್ಡಿದರೂ, ನಿಧಾನಗತಿಯ ಬ್ಯಾಟ್​ನಿಂದಾಗಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ನಾಯಕಿ ಹೈಲೆ ಮ್ಯಾಥ್ಯೂವ್ಸ್​ 34, ಅಫಿ ಫ್ಲೆಚರ್​ 10 ರನ್​ ಗಳಿಸಿದರು.

ಭಾರತದ ಪರ ಬಿಗುವಿನ ದಾಳಿ ನಡೆಸಿದ ದೀಪ್ತಿ ಶರ್ಮಾ 2 ವಿಕೆಟ್​ ಪಡೆದರೆ, ರಾಜೇಶ್ವರಿ ಗಾಯಕ್ವಾಡ್​, ರಾಧಾ ಯಾದವ್​ ತಲಾ 1 ವಿಕೆಟ್​ ಕಿತ್ತರು. ಉಳಿದ ಬೌಲರ್​ಗಳು ರನ್​ ಬಿಟ್ಟುಕೊಡದೇ ಕಾಡಿದರು.

ವೆಸ್ಟ್ ಇಂಡೀಸ್ ವಿರುದ್ಧದ ಗೆಲುವು ಮೂಲಕ ಟೀಂ ಇಂಡಿಯಾ ಅಗ್ರಸ್ಥಾನ ಕಾಯ್ದುಕೊಂಡಿದೆ. ವೆಸ್ಟ್ ಇಂಡೀಸ್ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಸೋತು ಕೊನೆಯ ಸ್ಥಾನದಲ್ಲಿದೆ. ಆತಿಥೇಯ ತಂಡ ದಕ್ಷಿಣ ಆಫ್ರಿಕಾ 2 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಸರಣಿಯಲ್ಲಿ ಭಾರತ ಆಡಿದ 2 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ 4 ಅಂಕ ಪಡೆದಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಫೈನಲ್‌ ಪ್ರವೇಶ ಖಚಿತವಾಗಲಿದೆ. ಕೊನೆಯ ಗ್ರೂಪ್ ಪಂದ್ಯ ಜನವರಿ 30 ರಂದು ವೆಸ್ಟ್ ಇಂಡೀಸ್ ಸೆಣಸಾಡಲಿದೆ.

ಇದನ್ನೂ ಓದಿ: ಐಸಿಸಿ ವರ್ಷದ ಟಿ20 ತಂಡದಲ್ಲಿ ಕೊಹ್ಲಿ, ಸೂರ್ಯ, ಪಾಂಡ್ಯಗೆ ಸ್ಥಾನ: ಬಟ್ಲರ್​ ನಾಯಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.