ETV Bharat / sports

ಕೊಹ್ಲಿ ಪಡೆಯ ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಿದ ​ಯೂಟ್ಯೂಬ್​ ನೋಡಿ ಸ್ಪಿನ್​ ಕಲಿತ 'ಭಾರತೀಯ'ಸ್ಪಿನ್ನರ್​

author img

By

Published : Nov 1, 2021, 3:38 PM IST

ನ್ಯೂಜಿಲ್ಯಾಂಡ್​ ತಂಡದ ಬೌಲಿಂಗ್ ಘಟಕದ ಕಡೆ ಒಮ್ಮೆ ನೋಡಿದಾಗ ಟ್ರೆಂಟ್ ಬೌಲ್ಟ್​ ಮತ್ತು ಟಿಮ್ ಸೌಥಿ ತಂಡದ ಸ್ಟಾರ್​ ಬೌಲರ್​ಗಳಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಸೋಧಿ ಭಾನುವಾರ ತಂಡದಲ್ಲಿ ತಮ್ಮ ಪಾತ್ರ ಎಂತಹ ಮಹತ್ವ ಪಡೆದಿದೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಇದನ್ನು ತಂಡದ ನಾಯಕ ಕೇನ್​ ವಿಲಿಯಮ್ಸನ್​ ಕೂಡ ಒಪ್ಪಿಕೊಂಡಿದ್ದು, ಸೋಧಿ ತಂಡದ ಪ್ರಮುಖ ಆಟಗಾರ ಎಂದಿದ್ದಾರೆ..

India vs New Zealand
ಇಶ್ ಸೋಧಿ

ದುಬೈ : ಇಂದರ್ಬೀರ್ ಸಿಂಗ್​ ಸೋಧಿ ಅಥವಾ ಇಶ್​ ಸೋಧಿ ಹೆಸರನ್ನು ಭಾರತ ತಂಡ ಮತ್ತು ವಿರಾಟ್​ ಕೊಹ್ಲಿ ಬಹುಕಾಲ ನೆನಪಿನಲ್ಲಿರಿಸಿಕೊಳ್ಳಬೇಕು.

ಯಾಕೆಂದರೆ, ವಿಶ್ವಕಪ್​ನಲ್ಲಿ ಸೆಮಿಫೈನಲ್​​ ಪ್ರವೇಶಿಸಲು ಮಾಡು ಇಲ್ಲವೇ ಮಡಿ ಎಂಬಂತಿದ್ದ ಪಂದ್ಯದಲ್ಲಿ ಭಾರತದ ಪ್ರಮುಖ ಬ್ಯಾಟರ್​ಗಳಿಗೆ ಪೆವಿಲಿಯನ್​ ದಾರಿ ತೋರಿಸುವ ಮೂಲಕ ಈ 29 ವರ್ಷದ ಭಾರತೀಯ ಮೂಲದ ಬೌಲರ್ ತಮ್ಮ ಜನ್ಮದಿನದಂದು​ ಭಾರತೀಯರ ಕನಸನ್ನು ನುಚ್ಚು ನೂರು ಮಾಡಿದರು.

ಲೂದಿಯಾನದಲ್ಲಿ ಜನಿಸಿ ನ್ಯೂಜಿಲ್ಯಾಂಡ್​​ನಲ್ಲಿ ನೆಲೆಸಿರುವ ಸೋಧಿ ಭಾನುವಾರ ನಡೆದ ಪಂದ್ಯದಲ್ಲಿ ಕೇವಲ ವಿಕೆಟ್​ ಪಡೆದು ಮಾತ್ರ ಭಾರತಕ್ಕೆ ಆಘಾತ ನೀಡಲಿಲ್ಲ. ಬದಲಾಗಿ 4 ಓವರ್​ಗಳಲ್ಲಿ 17 ರನ್​ ನೀಡಿ ರನ್​ಗತಿಗೂ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.

ಅವರು ಭಾರತದ ಬೆನ್ನೆಲುಬಾಗಿದ್ದ ವಿರಾಟ್​ ಕೊಹ್ಲಿ ಮತ್ತು ರೋಹಿತ್ ಶರ್ಮಾ ವಿಕೆಟ್ ಪಡೆದು 2007ರ ಚಾಂಪಿಯನ್​ ತಂಡವನ್ನು 110 ರನ್​ಗಳಿಗೆ ಕಟ್ಟಿ ಹಾಕುವ ಮೂಲಕ 2021ರ ವಿಶ್ವಕಪ್​ನಿಂದ ಗುಂಪು ಹಂತದಲ್ಲೇ ಹೊರ ಬೀಳುವಂತೆ ಮಾಡಿದರು. ವಿಲಿಯಮ್ಸನ್​ ಪಡೆ ಈ ಮೊತ್ತವನ್ನು ಕೇವಲ 14.3 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು.

ಯೂಟ್ಯೂಬ್ ನೋಡಿ ಸ್ಪಿನ್​ ಕಲಿತ ಸೋಧಿ

ಭಾರತಕ್ಕೆ ಆಘಾತಕಾರಿ ಸೋಲುಣಿಸಲು ಕಿವೀಸ್‌​ಗೆ ನೆರವಾಗಿದ್ದ ಇಶ್​ ಸೋಧಿ ಲೆಗ್​ಸ್ಪಿನ್​ ಬೌಲಿಂಗ್ ಕೌಶಲ್ಯ ಕಲಿತದ್ದು ಯೂಟ್ಯೂಬ್​ ನೋಡಿ ಎನ್ನುವುದು ವಿಶೇಷ. ಶೇನ್​ ವಾರ್ನ್, ಸ್ಟುವರ್ಟ್​ ಮೆಕ್​ಗಿಲ್​​ ಮತ್ತು ಅನಿಲ್ ಕುಂಬ್ಳೆ ಅವರ ಬೌಲಿಂಗ್ ವಿಡಿಯೋವನ್ನು ನೋಡಿ ಲೆಗ್​ ಸ್ಪಿನ್​ ಕೌಶಲ್ಯಗಳನ್ನು ಕಲಿತಿದ್ದಾರೆ. ಇವರಿಗೆ ಮಾಜಿ ಕಿವೀಸ್ ಆಲ್​ರೌಂಡರ್​ ದೀಪಕ್​ ಪಟೇಲ್ ಮಾರ್ಗದರ್ಶಕರಾಗಿ, ಸೋಧಿ ಇಂದು ಒಬ್ಬ ಕೌಶಲ್ಯಯುತ ಬೌಲರ್​ ಆಗಲು ನೆರವಾಗಿದ್ದಾರೆ.

ನ್ಯೂಜಿಲ್ಯಾಂಡ್​ ತಂಡದ ಬೌಲಿಂಗ್ ಘಟಕದ ಕಡೆ ಒಮ್ಮೆ ನೋಡಿದಾಗ ಟ್ರೆಂಟ್ ಬೌಲ್ಟ್​ ಮತ್ತು ಟಿಮ್ ಸೌಥಿ ತಂಡದ ಸ್ಟಾರ್​ ಬೌಲರ್​ಗಳಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ, ಸೋಧಿ ಭಾನುವಾರ ತಂಡದಲ್ಲಿ ತಮ್ಮ ಪಾತ್ರ ಎಂತಹ ಮಹತ್ವ ಪಡೆದಿದೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಇದನ್ನು ತಂಡದ ನಾಯಕ ಕೇನ್​ ವಿಲಿಯಮ್ಸನ್​ ಕೂಡ ಒಪ್ಪಿಕೊಂಡಿದ್ದು, ಸೋಧಿ ತಂಡದ ಪ್ರಮುಖ ಆಟಗಾರ ಎಂದಿದ್ದಾರೆ.

"ಇಶ್​ ಮಹೋನ್ನತ ಟಿ20 ಮತ್ತು ವೈಟ್​ ಬಾಲ್​ ಬೌಲರ್. ಅವರು ದೀರ್ಘ ಸಮಯದಿಂದ ನಮ್ಮ ತಂಡದ ದೊಡ್ಡ ಭಾಗವಾಗಿದ್ದಾರೆ. ಅವರೂ ವಿಶ್ವದಾದ್ಯಂತ ಹಲವಾರು ಟೂರ್ನಿಗಳಲ್ಲಿ ಆಡಿದ್ದು, ಅತ್ಯುತ್ತಮ ಅನುಭವ ಹೊಂದಿದ್ದಾರೆ. ಸೋಧಿ ಮತ್ತು ಮಿಚೆಲ್ ಸ್ಯಾಂಟ್ನರ್​ ಇಂತಹ ಪರಿಸ್ಥಿತಿಗಳಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ" ಎಂದು ಭಾರತವನ್ನು ಮಣಿಸಿದ ನಂತರ ವಿಲಿಯಮ್ಸನ್​ ಹೇಳಿದ್ದಾರೆ.

ಯುಎಇಯಲ್ಲಿನ ವಿಕೆಟ್‌ಗಳು ಸ್ಪಿನ್‌ಗೆ ಅನುಕೂಲಕರವಾಗಿರುವುದರಿಂದ, ನಿಧಾನಗತಿಯ ಬೌಲರ್‌ಗಳು ಟೂರ್ನಿಯಲ್ಲಿ ಭಾರಿ ಪ್ರಭಾವ ಬೀರಲಿದ್ದಾರೆ ಎಂಬುದು ಹೆಚ್ಚು ಸ್ಪಷ್ಟವಾಗಿದೆ. ಅವರಲ್ಲಿ ಇಶ್​ ಸೋಧಿ ಕೂಡ ಅತ್ಯುತ್ತಮವಾದ ಬೌಲರ್​ ಎಂದು ಪ್ರದರ್ಶನದ ಮೂಲಕ ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ. ಪ್ರಸ್ತುತ ಸಕ್ರಿಯ ಸ್ಪಿನ್​ ಬೌಲರ್​ಗಳಲ್ಲಿ ಆಫ್ಘಾನಿಸ್ತಾನದ ರಶೀದ್ ಖಾನ್ ಮತ್ತು ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಮಾತ್ರ ಟಿ20 ಕ್ರಿಕೆಟ್​ನಲ್ಲಿ ಸೋಧಿ(77) ಅವರಗಿಂತ ಹೆಚ್ಚು ವಿಕೆಟ್​ ಪಡೆದಿದ್ದಾರೆ.

ಆದರೂ ಸೋಧಿಗೆ ವಿಶ್ವ ಕ್ರಿಕೆಟ್​ನಲ್ಲಿ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ. ಆದರೆ, ನಿನ್ನೆಯ ಪಂದ್ಯದಲ್ಲಿ 2 ಪ್ರಮುಖ ವಿಕೆಟ್ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ವಿಶ್ವಕ್ರಿಕೆಟ್‌ನಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ.

ಇದನ್ನು ಓದಿ:T20 ವಿಶ್ವಕಪ್: 2ನೇ ಪಂದ್ಯದಲ್ಲಿ ಕಳಪೆ ಪ್ರದರ್ಶನಕ್ಕೆ ಸೇಹ್ವಾಗ್ ಬೇಸರ.. ಟೀಕಿಸಬೇಡಿ ಎಂದ ಟರ್ಬನೇಟರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.