ETV Bharat / sports

ಶುಭ್​ಮನ್​ ಗಿಲ್​ ಭರ್ಜರಿ ಶತಕ.. ಸೈಯದ್​ ಮುಷ್ತಾಕ್​ ಅಲಿ ಟ್ರೋಫಿಯಿಂದ ಕರ್ನಾಟಕ ಔಟ್​

author img

By

Published : Nov 1, 2022, 9:14 PM IST

shubman-gills-knock-t20-century-in-mushtaq-ali-trophy
ಸೈಯದ್​ ಮುಷ್ತಾಕ್​ ಅಲಿ ಟ್ರೋಫಿಯಿಂದ ಕರ್ನಾಟಕ ಔಟ್​

ಸೈಯದ್​ ಮುಷ್ತಾಕ್​ ಅಲಿ ಟಿ20 ಟ್ರೋಫಿಯಲ್ಲಿ ಪಂಜಾಬ್ ಪರವಾಗಿ ಆಡುತ್ತಿರುವ ಶುಭ್​ಮನ್​ ಗಿಲ್​ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ತಂಡವನ್ನು ಸೆಮಿಫೈನಲ್​ ತಲುಪಿಸಿದ್ದಾರೆ.

ಕೋಲ್ಕತ್ತಾ: ವಿಶ್ವಕಪ್​ ಬಳಿಕ ನ್ಯೂಜಿಲ್ಯಾಂಡ್​ ಏಕದಿನ, ಟಿ20 ಸರಣಿಗೆ ಆಯ್ಕೆಯಾಗಿರುವ ಭಾರತದ ಬ್ಯಾಟರ್​ ಶುಭ್​ಮನ್​ ಗಿಲ್​ ಸೈಯದ್​ ಮುಷ್ತಾಕ್​ ಅಲಿ ಟ್ರೋಫಿಯಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಇದರಿಂದ ಪಂಜಾಬ್​ ತಂಡ ಕರ್ನಾಟಕ ವಿರುದ್ಧ 9 ರನ್​ಗಳ ಗೆಲುವು ಸಾಧಿಸಿ ಸೆಮಿಫೈನಲ್​ ತಲುಪಿತು. ಅಲ್ಲದೇ, ಕಿವೀಸ್​ ವಿರುದ್ಧದ ಸರಣಿಗೆ ಆಯ್ಕೆಯಾದ ದಿನದ ಬಳಿಕ ಗಿಲ್​ ಈ ಸಾಧನೆ ಮಾಡಿರುವುದು ಆಯ್ಕೆ ಸಮಿತಿಯ ನಂಬಿಕೆ ಉಳಿಸಿಕೊಂಡಂತಾಗಿದೆ.

ಈಡನ್ ಗಾರ್ಡನ್ಸ್‌ನಲ್ಲಿ ಮಂಗಳವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ 55 ಎಸೆತಗಳಲ್ಲಿ 126 ರನ್ ಗಳಿಸಿದ ಶುಭಮನ್ ಗಿಲ್ ಮೊದಲ ಟಿ20 ಶತಕ ಗಳಿಸಿದರು. ಪಂಜಾಬ್​ ನಿಗದಿತ ಓವರ್​ನಲ್ಲಿ 4 ವಿಕೆಟ್​ಗೆ 225 ರನ್​ಗಳ ಬೃಹತ್​ ಮೊತ್ತ ದಾಖಲಿಸಿತು.

ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್​ಗೆ ಗಿಲ್ ವೈಭವದ ಶತಕದ ಇನಿಂಗ್ಸ್​ ಕಟ್ಟಿದರು. ಗಿಲ್​ ಬ್ಯಾಟ್​ನಿಂದ 11 ಬೌಂಡರಿ, 9 ಸಿಕ್ಸರ್​ಗಳು ಸಿಡಿದವು. ಇದಲ್ಲದೇ, ಅನ್ಮೋಲ್​ ಪ್ರೀತ್​ ಸಿಂಗ್ ಕೂಡ ಸಿಡಿದು 59 ರನ್ ಗಳಿಸಿದರು. ಕೊನೆಯಲ್ಲಿ ಸನ್ವೀರ್​ ಸಿಂಗ್​ರ 27 ರನ್​ಗಳಿಂದ ತಂಡ ಒಟ್ಟಾರೆ 225 ರನ್​ಗಳ ಶಿಖರ ಕಟ್ಟಿತು.

ಹೋರಾಡಿ ಸೋತ ಕರ್ನಾಟಕ: ಇದಕ್ಕುತ್ತರವಾಗಿ ಬ್ಯಾಟ್​ ಮಾಡಿದ ಕರ್ನಾಟಕ ಆರಂಭಿಕ ಹಿನ್ನಡೆಗೆ ಒಳಗಾಯಿತು. ನಾಯಕ ಮಯಾಂಕ್​ ಅಗರ್​ವಾಲ್​, ರೋಹನ್​ ಪಾಟೀಲ್​, ಲವ್​ನೀತ್ ಸಿಸೋಡಿಯಾ ಎರಡಂಕಿ ದಾಟದೇ ಔಟಾದರು. ಇದರಿಂದ 18 ರನ್​ಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಬಳಿಕ ಕ್ರೀಸ್​ ಹಂಚಿಕೊಂಡ ಮನೀಶ್​ ಪಾಂಡೆ, ಎಲ್​ಆರ್​ ಚೇತನ್​ ತಂಡಕ್ಕೆ ಚೇತರಿಕೆ ನೀಡಿದರು. ಸೊಗಸಾಗಿ ಬ್ಯಾಟ್​ ಬೀಸಿ ಪಾಂಡೆ 45, ಚೇತನ್​ 33 ರನ್​ ಮಾಡಿದರು.

ಅಭಿನವ್​ "ಮನೋಹರ ಅರ್ಧಶತಕ": ಪಾಂಡೆ ಔಟಾದ ಬಳಿಕ ಬಂದ ಅಭಿನವ್​ ಮನೋಹರ್​ ಮನಮೋಹಕ ಅರ್ಧಶತಕ ಬಾರಿಸಿದರು. ತಲಾ 5 ಬೌಂಡರಿ, ಸಿಕ್ಸರ್​ ನೆರವಿನಿಂದ ಔಟಾಗದೇ 62 ರನ್​ ಗಳಿಸಿದರು. ಮನೋಜ್​ ಭಾಂಗ್ಡೆ 25, ಕೃಷ್ಣಪ್ಪ್ ಗೌತಮ್​ ಔಟಾಗದೇ 30 ರನ್​ ಬಾರಿಸಿದರೂ ಗೆಲ್ಲಲು ಸಾಧ್ಯವಾಗದೇ ಸೆಮಿಫೈನಲ್​ ರೇಸ್​ನಿಂದ ಹೊರಬಿದ್ದಿತು.

ಓದಿ: ಗಬ್ಬಾದಲ್ಲಿ ಇಂಗ್ಲೆಂಡ್​ಗೆ ಹಬ್ಬ: ಕಿವೀಸ್​ ವಿರುದ್ಧ 20 ರನ್​ ಗೆಲುವು.. 3 ತಂಡಗಳ ಮಧ್ಯೆ ಸೆಮೀಸ್​​ ಜಿದ್ದಾಜಿದ್ದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.