ETV Bharat / sports

ಪಂತ್​ vs ಕಾರ್ತಿಕ್: ವಿಶ್ವಕಪ್​​​ ದೃಷ್ಟಿಯಿಂದ ಆಸ್ಟ್ರೇಲಿಯಾ ಟೂರ್ನಿಯಲ್ಲಿ ಯಾರಿಗೆ ಮಣೆ?

author img

By

Published : Sep 20, 2022, 7:19 AM IST

Rishabh Pant vs Dinesh Karthik
Rishabh Pant vs Dinesh Karthik

ಮುಂಬರುವ ವಿಶ್ವಕಪ್​ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ ಆರಂಭಗೊಳ್ಳುತ್ತಿರುವ ಟಿ20 ಸರಣಿ ಭಾರತಕ್ಕೆ ಮಹತ್ವದ್ದಾಗಿದೆ.

ಮೊಹಾಲಿ(ಪಂಜಾಬ್​): ಐಸಿಸಿ ಟಿ20 ವಿಶ್ವಕಪ್​ ಟೂರ್ನಿ ಆರಂಭಗೊಳ್ಳಲು ಕೆಲ ದಿನಗಳಷ್ಟೇ ಬಾಕಿ. ಹೀಗಿರುವಾಗ ಟೀಂ ಇಂಡಿಯಾ ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಈ ಟೂರ್ನಿಯಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಳ್ಳುವ ಆಟಗಾರರು ಬಹುತೇಕವಾಗಿ ಟಿ20 ವಿಶ್ವಕಪ್​​ನಲ್ಲೂ ಕಣಕ್ಕಿಳಿಯಲಿದ್ದಾರೆಂಬ ಮಾತು ಕೇಳಿ ಬರಲು ಶುರುವಾಗಿದ್ದು, ಮುಖ್ಯವಾಗಿ ವಿಕೆಟ್ ಕೀಪರ್​ ಜವಾಬ್ದಾರಿ ಯಾರ ಹೆಗಲಿಗೆ ಬೀಳಲಿದೆ ಎಂಬುದೀಗ ಕುತೂಹಲ ಮೂಡಿಸಿದೆ.

ಪ್ರಶಸ್ತಿಗೆ ಮುತ್ತಿಕ್ಕುವ ಹುಮ್ಮಸ್ಸಿನಿಂದ ಏಷ್ಯಾಕಪ್​​ನಲ್ಲಿ ಕಣಕ್ಕಿಳಿದಿದ್ದ ಟೀಂ ಇಂಡಿಯಾ ನಿರಾಸೆ ಅನುಭವಿಸಿದೆ. ಆದರೆ, ಇದೀಗ ಯಾವುದೇ ರೀತಿಯ ತಪ್ಪುಗಳಾಗದಂತೆ ವಿಶ್ವಕಪ್​​ಗೆ ರೋಹಿತ್ ಪಡೆ ಸಜ್ಜಾಗುತ್ತಿದೆ. ಮುಖ್ಯವಾಗಿ, ಮಧ್ಯಮ ಕ್ರಮಾಂಕ ಹಾಗೂ ಬೌಲಿಂಗ್​ ವಿಭಾಗದಲ್ಲಿ ಸುಧಾರಣೆ ಆಗಬೇಕಾಗಿದ್ದು ಕೆಲ ಆಟಗಾರರ ಮೇಲಿನ ಜವಾಬ್ದಾರಿಯೂ ಹೆಚ್ಚಾಗಿದೆ.

ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕೆ.ಎಲ್.ರಾಹುಲ್​ ಇನ್ನಿಂಗ್ಸ್​ ಆರಂಭಿಸುವುದು ಖಚಿತವಾಗಿದ್ದು, ವಿರಾಟ್​​ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನುಳಿದಂತೆ ಸೂರ್ಯಕುಮಾರ್ ಯಾದವ್​​, ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಲಿದ್ದಾರೆ.

ರಿಷಭ್​ ಪಂತ್​ vs​ ದಿನೇಶ್ ಕಾರ್ತಿಕ್​​: ವಿಶ್ವಕಪ್​ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರಿಷಭ್ ಅಥವಾ ದಿನೇಶ್ ಕಾರ್ತಿಕ್​ಗೆ ಮಣೆ ಹಾಕುವ ಬಗ್ಗೆ ಗೊಂದಲವಿದೆ. ಅನುಭವಿ ಆಟಗಾರ ದಿನೇಶ್ ಹಾಗೂ ವಿಕೆಟ್ ಕೀಪರ್​ ಬ್ಯಾಟರ್ ಪಂತ್ ದೊಡ್ಡ ಹೊಡೆತಗಳಿಗೆ ಹೆಸರುವಾಸಿಯಾಗಿದ್ದು, ಒಬ್ಬರಿಗೆ ಮಾತ್ರ ಅವಕಾಶ ಸಿಗಲಿದೆ. ಏಷ್ಯಾ ಕಪ್​​ನ ಪಾಕ್​ ವಿರುದ್ಧದ ಪಂದ್ಯದಲ್ಲಿ ದಿನೇಶ್​ಗೆ ಅವಕಾಶ ನೀಡಲಾಗಿತ್ತು. ತದನಂತರ ಸೂಪರ್​ 4 ಹಂತದಲ್ಲಿ ಪಂತ್​ ಆಡಿದ್ದ ಮೂರು ಪಂದ್ಯಗಳಿಂದ ಕೇವಲ 51 ರನ್​​ಗಳಿಸಿ, ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ದಿನೇಶ್ ಕಾರ್ತಿಕ್​ ಯಾವ ಕ್ರಮಾಂಕದಲ್ಲೂ ಬೇಕಾದ್ರೂ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ.

ಜಡೇಜಾ ಸ್ಥಾನಕ್ಕೆ ಯಾರು?: ಗಾಯಗೊಂಡು ಹೊರಗುಳಿದಿರುವ ರವೀಂದ್ರ ಜಡೇಜಾ ಅವರ ಸ್ಥಾನಕ್ಕೆ ಎಡಗೈ ಬ್ಯಾಟರ್​ ಯಾರು ಎಂಬ ಪ್ರಶ್ನೆಯೆದ್ದಿದೆ. ಸ್ಫೋಟಕ ಆಟಗಾರ ದೀಪಕ್ ಹೂಡಾಗೆ ಯಾವ ಪಾತ್ರ ಸಿಗಲಿದೆ ಎಂಬುದು ಗೊಂದಲ ಮೂಡಿಸಿದೆ. ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಹರ್ಷಲ್ ತಂಡಕ್ಕೆ ಮರಳಿರುವುದು ಬೌಲಿಂಗ್ ವಿಭಾಗದ ಶಕ್ತಿ ಹೆಚ್ಚಿಸಿದೆ. ಸ್ಪಿನ್​ ವಿಭಾಗದಲ್ಲಿ ಯಜುವೇಂದ್ರ ಚಹಲ್ ಜೊತೆ ಯಾರು ಕಣಕ್ಕಿಳಿಯಲಿದ್ದಾರೆಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಸರಣಿ: ಮಧ್ಯಮ ಕ್ರಮಾಂಕ, ಬೌಲಿಂಗ್​ ಪಡೆಗೆ ಬೇಕು ಬಲ

ಅನುಭವಿಗಳ ಅನುಪಸ್ಥಿತಿಯಲ್ಲಿ ಕಾಂಗರೂ ಪಡೆ: ಡೇವಿಡ್​ ವಾರ್ನರ್​, ಮಿಚೆಲ್​ ಸ್ಟಾರ್ಕ್​, ಮಾರ್ಕಸ್​ ಸ್ಟೋಯ್ನಿಸ್​​, ಮಿಚೆಲ್​ ಮಾರ್ಷ್​ ಅವರ ಅನುಪಸ್ಥಿತಿಯಲ್ಲಿ ಆ್ಯರನ್​ ಫಿಂಚ್​ ಬಳಗ ಭಾರತದ ಪ್ರವಾಸ ಕೈಗೊಂಡಿದೆ. ಈಗಾಗಲೇ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಫಿಂಚ್​​ಗೆ ಈ ಸರಣಿ ಮಹತ್ವದ್ದು. ಸ್ಫೋಟಕ ಹೊಡೆತಕ್ಕೆ ಹೆಸರಾಗಿರುವ ಟಿಮ್ ಡೇವಿಡ್ ಮೇಲೆ ಎಲ್ಲರ ಕಣ್ಣಿದೆ. ಸಿಂಗಪೂರ ಪರ ಕಣಕ್ಕಿಳಿಯುತ್ತಿದ್ದ ಈ ಆಟಗಾರನಿಗೆ ಆಸ್ಟ್ರೇಲಿಯಾ ಚೊಚ್ಚಲ ಅವಕಾಶ ನೀಡಿದೆ.

ಟೀಂ ಇಂಡಿಯಾ ತಂಡ: ರೋಹಿತ್ ಶರ್ಮಾ(ಕ್ಯಾಪ್ಟನ್​), ಕೆ.ಎಲ್.ರಾಹುಲ್​(ಉಪನಾಯಕ), ವಿರಾಟ್​​ ಕೊಹ್ಲಿ, ಸೂರ್ಯಕುಮಾರ್ ಯಾದವ್​, ದೀಪಕ್ ಹೂಡಾ, ರಿಷಭ್ ಪಂತ್(ವಿ.ಕೀ)​, ದಿನೇಶ್ ಕಾರ್ತಿಕ್(ವಿ.ಕೀ)​, ಹಾರ್ದಿಕ್ ಪಾಂಡ್ಯ, ಆರ್​.ಅಶ್ವಿನ್​, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್​, ದೀಪಕ್ ಚಹರ್​, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್​.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.