ETV Bharat / sports

ಟಿ20 ವಿಶ್ವಕಪ್​: ನ್ಯೂಜಿಲ್ಯಾಂಡ್​ ಸವಾಲು ಗೆದ್ದು ಫೈನಲ್​ ತಲುಪಿದ ಪಾಕಿಸ್ತಾನ

author img

By

Published : Nov 9, 2022, 5:01 PM IST

Updated : Nov 9, 2022, 5:40 PM IST

ಟೀಕೆಗಳನ್ನು ಮೆಟ್ಟಿನಿಂತು ಭರ್ಜರಿ ಪ್ರದರ್ಶನ ತೋರಿದ ಪಾಕಿಸ್ತಾನ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್​ನಲ್ಲಿ ಮೊದಲ ತಂಡವಾಗಿ ಫೈನಲ್​ ತಲುಪಿತು.

pakistan-win-against-new-zealand-in-semi-final
ನ್ಯೂಜಿಲ್ಯಾಂಡ್​ ಸವಾಲು ಗೆದ್ದು ಫೈನಲ್​ ತಲುಪಿದ ಪಾಕಿಸ್ತಾನ

ಸಿಡ್ನಿ(ಆಸ್ಟ್ರೇಲಿಯಾ): ಟೀಕೆಗಳನ್ನು ಮೆಟ್ಟಿನಿಂತು ಭರ್ಜರಿ ಪ್ರದರ್ಶನ ತೋರಿದ ಪಾಕಿಸ್ತಾನ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್​ನಲ್ಲಿ ಮೊದಲ ತಂಡವಾಗಿ ಫೈನಲ್​ ತಲುಪಿತು. ಸಿಡ್ನಿ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು 7 ವಿಕೆಟ್​ಗಳಿಂದ ಬಗ್ಗುಬಡಿದು ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯಿತು.

ಗುಂಪು ಹಂತದಲ್ಲಿ ಭಾರತ, ಜಿಂಬಾಬ್ವೆ ವಿರುದ್ಧ ಸೋತಿದ್ದ ಪಾಕಿಸ್ತಾನ ಬಳಿಕ ಪುಟಿದೆದ್ದು ಫೈನಲ್​ಗೆ ಅರ್ಹತೆ ಪಡೆದುಕೊಂಡಿತು. ಮೊದಲ ಸೆಮಿಫೈನಲ್​ನಲ್ಲಿ ಗ್ರೂಪ್​ 1 ರ ಅಗ್ರಸ್ಥಾನಿ ನ್ಯೂಜಿಲ್ಯಾಂಡ್​ ವಿರುದ್ಧ ಭರ್ಜರಿ ಪ್ರದರ್ಶನ ತೋರಿತು. ಕಿವೀಸ್​ ನೀಡಿದ್ದ 153 ರನ್​ಗಳ ಗುರಿಯನ್ನು 19.1 ಓವರ್​ನಲ್ಲಿ ಅನಾಯಾಸವಾಗಿ ತಲುಪಿತು.

ಬಾಬರ್​, ರಿಜ್ವಾನ್​ ಶೋ: ವಿಶ್ವಕಪ್​ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ ಮಹತ್ವದ ಪಂದ್ಯದಲ್ಲಿ ಭರ್ಜರಿ ಬ್ಯಾಟ್​ ಬೀಸಿದರು. ವಿಕೆಟ್​ ಕೀಪರ್​ ಮೊಹಮದ್​ ರಿಜ್ವಾನ್​ ಜೊತೆ ಸೇರಿ ಮೊದಲ ವಿಕೆಟ್​ಗೆ 105 ರನ್​ಗಳ ಭದ್ರ ಬುನಾದಿ ಹಾಕಿ ಪಂದ್ಯ ಗೆಲ್ಲುವಂತೆ ಮಾಡಿದರು.

ಬಾಬರ್​ ಅಜಂ 42 ಎಸೆತಗಳಲ್ಲಿ 7 ಬೌಂಡರಿಗಳ ಸಮೇತ 53 ರನ್​ಗಳ ಅರ್ಧಶತಕ ಬಾರಿಸಿದರು. ತಂಡದ ಪ್ರಮುಖ ಬ್ಯಾಟರ್​ ಮೊಹಮದ್​​ ರಿಜ್ವಾನ್​ 43 ಎಸೆತಗಳಲ್ಲಿ 5 ಬೌಂಡರಿಗಳಿಂದ 57 ರನ್ ಮಾಡಿದರು. ಇಬ್ಬರೂ ಅರ್ಧಶತಕ ಸಿಡಿಸಿ ನ್ಯೂಜಿಲ್ಯಾಂಡ್​ ಫೈನಲ್​ ಆಸೆಯನ್ನು ನುಚ್ಚುನೂರು ಮಾಡಿದರು. ಇಬ್ಬರೂ ಔಟಾದ ಬಳಿಕ ಸಿಡಿದ ಮೊಹಮದ್​ ಹ್ಯಾರೀಸ್​ 30 ರನ್​ ಗಳಿಸಿದರು.

ಮೌನವಾದ ಕಿವೀಸ್​ ಬೌಲಿಂಗ್​: ಮೊದಲು ಬ್ಯಾಟ್​ ಮಾಡಿದ ನ್ಯೂಜಿಲ್ಯಾಂಡ್​ 152 ರನ್​ಗಳ ಸಾಧಾರಣ ಗುರಿ ನೀಡಿದಾಗಲೇ ಸೋಲಿನ ಭೀತಿ ಎದುರಾಗಿತ್ತು. ಗಾಯದ ಮೇಲೆ ಬರೆ ಎಳೆದಂತೆ ರಿಜ್ವಾನ್​ ಮತ್ತು ಬಾಬರ್​ ಅರ್ಧಶತಕ ಸಿಡಿಸಿದಾಗ ತಂಡ ಸೋಲೊಪ್ಪಿಕೊಂಡಿತು.

ವೇಗಿಗಳಾದ ಟ್ರೆಂಟ್​ ಬೌಲ್ಟ್​ 2 ವಿಕೆಟ್​ ಪಡೆದರೆ, ಟಿಮ್​ ಸೌಥಿ, ಲೂಕಿ ಫರ್ಗ್ಯೂಸನ್​ ಪ್ರಭಾವಿಯಾಗಲೇ ಇಲ್ಲ. ಸ್ಪಿನ್ನರ್​ ಮಿಚೆಲ್​ ಸ್ಯಾಂಟ್ನರ್​ 1 ವಿಕೆಟ್​ ಪಡೆದರೆ, ಇಶ್​ ಸೋಧಿ ಸ್ಪಿನ್​ ಅಸ್ತ್ರ ಶಕ್ತಿ ಕಳೆದುಕೊಂಡಿತು.

3 ನೇ ಸಲ ಪಾಕ್​ ಫೈನಲ್​ಗೆ: 2009 ರ ಟಿ20 ವಿಶ್ವಕಪ್​ ವಿಜೇತ ಪಾಕಿಸ್ತಾನ 3 ನೇ ಸಲ ಫೈನಲ್​ಗೆ ಲಗ್ಗೆ ಇಟ್ಟಿದೆ. 2007 ರ ಚೊಚ್ಚಲ ವಿಶ್ವಕಪ್​ನಲ್ಲಿ ಭಾರತದ ಎದುರು ಸೋಲು ಕಂಡಿತ್ತು. ಈಗ ನ್ಯೂಜಿಲ್ಯಾಂಡ್​ ವಿರುದ್ಧ ಗೆದ್ದ ಫೈನಲ್​ಗೆ ತಲುಪಿದೆ.

ಸೆಮಿಫೈನಲ್​ನಲ್ಲಿ ಪಾಕ್​ ಎದುರು 4 ನೇ ಸೋಲು: ವಿಶ್ವಕಪ್​ಗಳ ಇತಿಹಾಸದಲ್ಲಿ ನ್ಯೂಜಿಲ್ಯಾಂಡ್​ ತಂಡಕ್ಕೆ ಪಾಕಿಸ್ತಾನ ಇನ್ನಿಲ್ಲದಂತೆ ಕಾಡಿದೆ. ಏಕದಿನ ಮತ್ತು ಟಿ20 ವಿಶ್ವಕಪ್​ಗಳಲ್ಲಿ ನಾಲ್ಕು ಬಾರಿ ನಾಲ್ಕರಘಟ್ಟದಲ್ಲಿ ಕಿವೀಸ್​ಗೆ ಪಾಕ್​ ತಂಡ ಸೋಲುಣಿಸಿದೆ. 1992 ಮತ್ತು 1999 ರ ಏಕದಿನ, 2007 ಮತ್ತು 2022 ರ ಟಿ20 ವಿಶ್ವಕಪ್​ನಲ್ಲಿ ನ್ಯೂಜಿಲ್ಯಾಂಡ್ ಸೋಲು ಕಂಡಿದೆ. ಕಿವೀಸ್​ ತಂಡ ಈವರೆಗೂ ಒಂದೇ ಒಂದು ವಿಶ್ವಕಪ್​ ಗೆಲುವು ಸಾಧಿಸಿಲ್ಲ.

ವಿಕೆಟ್​ಲೆಸ್​ ಟಿಮ್​ ಸೌಥಿ: 2021 ರ ಟಿ20 ವಿಶ್ವಕಪ್​ನಿಂದ ನ್ಯೂಜಿಲ್ಯಾಂಡ್​ನ ಟಿಮ್​ ಸೌಥಿ ವಿಕೆಟ್​ ಇಲ್ಲದೇ ಅಭಿಯಾನ ಮುಗಿಸಿದರು. ಈ ವಿಶ್ವಕ್​ಪ್​ನಲ್ಲಿ ಗುಂಪು ಹಂತ ಸೇರಿ 6 ಪಂದ್ಯಗಳಾಡಿರುವ ಸೌಥಿ ಒಂದೇ ಒಂದು ವಿಕೆಟ್​ ಗಳಿಸಿಲ್ಲ. ಕಳೆದ ಆವೃತ್ತಿಯಲ್ಲೂ ವಿಕೆಟ್​ ಪಡೆಯದೇ ವಿಶ್ವಕಪ್​ ಮುಗಿಸಿದ್ದರು. ಇದು ಕಿವೀಸ್​ ತಂಡಕ್ಕೆ ದುಬಾರಿಯಾಯಿತು.

ನಾಳೆ ಇಂಗ್ಲೆಂಡ್​- ಭಾರತ ಸೆಮಿ: ನಾಳೆ ಅಡಿಲೇಡ್​ನಲ್ಲಿ ಇಂಗ್ಲೆಂಡ್​ ಮತ್ತು ಭಾರತದ ಮಧ್ಯೆ 2ನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಗೆಲ್ಲುವ ತಂಡ ಫೈನಲ್​ನಲ್ಲಿ ಪಾಕಿಸ್ತಾನದ ಜೊತೆಗೆ ಸೆಣಸಾಡಲಿದೆ.

ಓದಿ: ಸೆಮಿಫೈನಲ್​ನಲ್ಲಿ ಪರದಾಡಿದ ಕಿವೀಸ್​.. ಪಾಕ್​ಗೆ 153 ರನ್​ಗಳ ಸಾಧಾರಣ ಗುರಿ

Last Updated : Nov 9, 2022, 5:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.