ಮಹಮ್ಮದ್ ಶಮಿಗೆ ಕೋವಿಡ್: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಔಟ್‌, ಉಮೇಶ್‌ಗೆ ಸ್ಥಾನ

author img

By

Published : Sep 18, 2022, 9:00 AM IST

Mohammed Shami

ಟೀಂ ಇಂಡಿಯಾ ವೇಗದ ಬೌಲರ್ ಮಹಮ್ಮದ್ ಶಮಿ ಅವರಿಗೆ ಕೋವಿಡ್-19 ಸೋಂಕು ತಗುಲಿದ್ದು ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಿಂದ ಹೊರಗುಳಿಯಲಿದ್ದಾರೆ.

ಭಾರತ ಕ್ರಿಕೆಟ್ ತಂಡಕ್ಕೆ ಅನುಭವಿ ವೇಗಿ ಮಹಮ್ಮದ್ ಶಮಿ ಕಮ್‌ಬ್ಯಾಕ್ ಮತ್ತಷ್ಟು ವಿಳಂಬವಾಗುತ್ತಿದೆ. ಶಮಿ ಇದೀಗ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದಲೂ ಹೊರಗುಳಿಯಬೇಕಿದೆ. ಆಸೀಸ್ ವಿರುದ್ಧದ ಚುಟುಕು ಪಂದ್ಯಾವಳಿಗಳು ಸೆಪ್ಟೆಂಬರ್ 20 ರಿಂದ ಮೊಹಾಲಿಯಲ್ಲಿ ಆರಂಭವಾಗಲಿದೆ. ವರದಿಯ ಪ್ರಕಾರ, ಇವರ ಸ್ಥಾನಕ್ಕೆ ಮತ್ತೋರ್ವ ಅನುಭವಿ ಉಮೇಶ್ ಕುಮಾರ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ ಎಂದು ತಿಳಿದುಬಂದಿದೆ.

umesh yadav
ಉಮೇಶ್ ಯಾದವ್

ತೊಡೆಸಂದು ನೋವಿನಿಂದ ಬಳಲುತ್ತಿದ್ದ ಉಮೇಶ್ ಯಾದವ್ ಇದೀಗ ಫಿಟ್‌ ಆಗಿದ್ದಾರೆ. ಇವರು 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಭಾರತ ತಂಡದ ಭಾಗವಾಗಿದ್ದರು. "ಮಹಮ್ಮದ್ ಶಮಿ ಅವರಿಗೆ ಕೋವಿಡ್-19 ಸೋಂಕು ಬಾಧಿಸಿದೆ. ಆದ್ರೆ ಸೌಮ್ಯ ಪ್ರಮಾಣದ ಲಕ್ಷಣಗಳಿದ್ದು, ಆತಂಕವಿಲ್ಲ. ಸದ್ಯಕ್ಕೆ ಅವರು ಐಸೊಲೇಷನ್‌ನಲ್ಲಿ ಇರಬೇಕಿದೆ. ವರದಿ ನೆಗೆಟಿವ್ ಬಂದ ನಂತರದಲ್ಲಿ ತಂಡ ಸೇರಿಕೊಳ್ಳುವರು" ಎಂದು ಬಿಸಿಸಿಐ ಅಧಿಕೃತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: 36 ರನ್​ ಬಾರಿಸಿದರೆ ಈ ಆಟಗಾರನ ದಾಖಲೆ ಮುರಿಯುವ ವಿರಾಟ್​ ಕೊಹ್ಲಿ

ಆದ್ರೆ, ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ಶಮಿ ಮರಳುವುದು ಬಹುತೇಕ ಅನುಮಾನ. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ತಂಡ ಸೇರಿಕೊಳ್ಳಬಹುದು ಎಂದು ಬಿಸಿಸಿಐ ಅಧಿಕಾರಿಯೋರ್ವರು ಹೇಳಿದರು. ಆಸ್ಟ್ರೇಲಿಯಾ ಸರಣಿ ಮುಗಿದ ನಂತರ 10 ದಿನಗಳ ಕಾಲಾವಕಾಶವಿದೆ. ಅವರು ಕೋವಿಡ್‌ನಿಂದ ಗುಣಮುಖರಾಗಿ ತಂಡ ಸೇರ್ಪಡೆಗೊಳ್ಳುವ ವಿಶ್ವಾಸವಿದೆ ಎಂದು ಅವರು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.