ETV Bharat / sports

ನೆದರ್​ಲ್ಯಾಂಡ್ ವಿರುದ್ಧವೂ ಕಣಕ್ಕಿಳಿಯುತ್ತಿಲ್ಲ ಕಿವೀಸ್​ ನಾಯಕ.. ಮೂರನೇ ಪಂದ್ಯಕ್ಕೆ ಆಡುವ ನಿರೀಕ್ಷೆ

author img

By ETV Bharat Karnataka Team

Published : Oct 8, 2023, 4:55 PM IST

Kane Williamson
Kane Williamson

ಐಪಿಎಲ್​ ವೇಳೆ ಗಾಯಕ್ಕೆ ತುತ್ತಾದ ಕೇನ್​ ವಿಲಿಯಮ್ಸನ್​ ನಾಳೆ ನಡೆಯಲಿರುವ ನೆದರ್​ಲ್ಯಾಂಡ್​ ವಿರುದ್ಧದ ಪಂದ್ಯದಲ್ಲೂ ಮೈದಾನಕ್ಕಿಳಿಯುತ್ತಿಲ್ಲ.

ಹೈದರಾಬಾದ್ (ತೆಲಂಗಾಣ): ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ನ್ಯೂಜಿಲೆಂಡ್​ ಪ್ರಮುಖ ಆಟಗಾರರಾದ ನಾಯಕ ಕೇನ್​ ವಿಲಿಯಮ್ಸನ್​, ಟಿಮ್​ ಸೌಥಿ, ಲಾಕಿ ಫರ್ಗ್ಯೂಸನ್​ ಮತ್ತು ಬ್ರೆಸ್​ವೆಲ್ ಅವರಿಲ್ಲದೇ ಮೈದಾನಕ್ಕಿಳಿದಿತ್ತು. ಅಲ್ಲದೇ ಆ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತ್ತು. ಬಲಿಷ್ಠ ಹಾಲಿ ಚಾಂಪಿಯನ್​ ಇಂಗ್ಲೆಂಡ್​ಗೆ ಸುಲಭವಾಗಿ ಮಣ್ಣು ಮುಕ್ಕಿಸಿದ ಕಿವೀಸ್​ ದುರ್ಬಲ ನೆದರ್​ಲ್ಯಾಂಡ್​ ವಿರುದ್ಧವೂ ಪ್ರಮುಖ ಆಟಗಾರರನ್ನು ತೊರೆದು ಮೈದಾನಕ್ಕಿಳಿಯುವ ಚಿಂತನೆಯಲ್ಲಿದೆ. ಈ ಮೂಲಕ ಗಾಯಾಳುಗಳಿಗೆ ಇನ್ನಷ್ಟು ಚೇತರಿಕೆಗೆ ಸಮಯ ನೀಡುವ ಚಿಂತನೆಯಲ್ಲಿದೆ ತಂಡ.

2023ರ 16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​​) ವೇಳೆ ಕೇನ್​​ ವಿಲಿಯಮ್ಸ್​ನ್ ಗಾಯಕ್ಕೆ ತುತ್ತಾಗಿದ್ದರು. ನಂತರ ವಿಶ್ವಕಪ್​ ವೇಳೆಗೆ ಚೇತರಿಸಿಕೊಂಡ ಅವರು ತಂಡಕ್ಕೆ ಸೇರುಕೊಂಡಿದ್ದರು. ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ವಿಶ್ವಕಪ್​ನ ಅಭ್ಯಾಸ ಪಂದ್ಯಗಳಲ್ಲಿ ವಿಲಿಯಮ್ಸನ್​ ಆಡಿದ್ದರು. ಆ ಪಂದ್ಯಗಳಲ್ಲಿ ಕ್ರಮವಾಗಿ 54 ಮತ್ತು 37 ರನ್​ ಗಳಿಸಿದ್ದರು. ಆದರೆ ಮತ್ತೆ ಅಭ್ಯಾಸದ ಸಂದರ್ಭದ ಗಾಯ ಉಲ್ಬಣಗೊಂಡಿದ್ದರಿಂದ ವಿಶ್ವಕಪ್​ ಉದ್ಘಾಟನಾ ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ನಾಳೆ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲೂ ವಿಲಿಯಮ್ಸನ್​ ಆಡುವುದಿಲ್ಲ ಎಂದು ಕೋಚ್​ ಮಾಹಿತಿ ನೀಡಿದ್ದಾರೆ.

"ಕೇನ್ ತುಂಬಾ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಮೈದಾನಕ್ಕೆ ಇಳಿಯಲು ಇನ್ನೂ ಸ್ವಲ್ಪ ಹೆಚ್ಚಿನ ತಯಾರಿಯ ಅಗತ್ಯ ಇದೆ. ಅವರ ದೇಹದ ಮೇಲೆ ಅವರಿಗೆ ಭರವಸೆ ಬರಬೇಕಿದೆ. ಹೀಗಾಗಿ ನಾಳಿನ ಪಂದ್ಯಕ್ಕೆ ಅವರು ತಂಡದಿಂದ ಹೊರಗಿರುತ್ತಾರೆ. ತಂಡದ ಮೂರನೇ ಪಂದ್ಯಕ್ಕೆ ಅವರು ಮರಳುವ ವಿಶ್ವಾಸ ಇದೆ. ನೆದರ್​ಲ್ಯಾಂಡ್​ ವಿರುದ್ಧದ ಪಂದ್ಯಕ್ಕೂ ಮುನ್ನ ಇಂದು ತರಬೇತಿಯ ಸೆಷನ್ ಮಾಡಲಾಗಿದೆ. ಇದರಲ್ಲಿ ಕೇನ್​ ಬಿಟ್ಟು ಉಳಿದವರು​ ಭಾಗವಹಿಸಲಿದ್ದು, ಫಿಟ್​ ಆದವರನ್ನು ನೆದರ್​ಲ್ಯಾಂಡ್​ ವಿರುದ್ಧ ಆಡಿಸಲಾಗುತ್ತದೆ" ಎಂದು ಮುಖ್ಯ ಕೋಚ್ ಸ್ಟೇಡ್ ತಿಳಿಸಿದ್ದಾರೆ.

ಭಾನುವಾರ ನಡೆದ ಸೆಷನ್​ನಲ್ಲಿ ಲಾಕಿ ಫರ್ಗ್ಯೂಸನ್​ ಮತ್ತು ಟಿಮ್​ ಸೌಥಿ ಉತ್ತಮವಾಗಿ ಕಂಡು ಬಂದಿದ್ದು ನಾಳಿನ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಭರವಸೆಯನ್ನು ಕೋಚ್​ ತಿಳಿಸಿದ್ದಾರೆ. ಅಕ್ಟೋಬರ್ 13 ರಂದು ಚೆನ್ನೈನಲ್ಲಿ ಬಾಂಗ್ಲಾದೇಶದ ವಿರುದ್ಧ ನ್ಯೂಜಿಲೆಂಡ್‌ ತನ್ನ ಮೂರನೇ ವಿಶ್ವಕಪ್​ ಪಂದ್ಯವನ್ನು ಆಡಲಿದೆ. ಈ ವೇಳೆ ಕೇನ್ ಮರಳಲಿದ್ದಾರೆ.

ನ್ಯೂಜಿಲೆಂಡ್​ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್​ ಕೊಟ್ಟಿದ್ದ 282 ರನ್​ ಗುರಿಯನ್ನು ಕೇವಲ 1 ವಿಕೆಟ್​ ಕಳೆದುಕೊಂಡು ಗೆದ್ದಿದ್ದರು. ಕಿವೀಸ್​ನ ಡೆವೋನ್​ ಕಾನ್ವೆ 152 ಮತ್ತು ರಚಿನ್​ ರವೀಂದ್ರ 123 ರನ್ ಗಳಿಸಿ ಅಜೇಯವಾಗಿ ಇನ್ನಿಂಗ್ಸ್​ ಮುಕ್ತಾಯ ಮಾಡಿದ್ದರು. 282ರನ್​ನ ಗುರಿಯನ್ನು ಕಿವೀಸ್​ ಪಡೆ ಸುಲಭವಾಗಿ ಚೇಸ್​ ಮಾಡಿಗೆದ್ದುಕೊಂಡಿತ್ತು.

ಇದನ್ನೂ ಓದಿ: Cricket World Cup 2023: ಆಸ್ಟ್ರೇಲಿಯಾಕ್ಕೆ ಸ್ಮಿತ್​ ಬಲ.. 25 ಓವರ್​ ಅಂತ್ಯಕ್ಕೆ ಆಸಿಸ್​ 102/ 2

ETV Bharat Logo

Copyright © 2024 Ushodaya Enterprises Pvt. Ltd., All Rights Reserved.