ETV Bharat / sports

Cricket World Cup 2023: ಭಾರತದ ಸ್ಪಿನ್​ ಮೋಡಿಗೆ ಸರ್ವಪತನ ಕಂಡ ಆಸಿಸ್​.. ರೋಹಿತ್​ ಪಡೆಗೆ ದ್ವಿಶತಕದ ಗುರಿ

author img

By ETV Bharat Karnataka Team

Published : Oct 8, 2023, 1:53 PM IST

Updated : Oct 8, 2023, 6:11 PM IST

cricket-world-cup-2023-india-vs-australia-5th-match
ಭಾರತ ವಿರುದ್ಧ ಟಾಸ್​ ಗೆದ್ದ ಆಸ್ಪ್ರೇಲಿಯಾ ಬ್ಯಾಟಿಂಗ್ ಆಯ್ಕೆ

Cricket World Cup 2023: ಏಕದಿನ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯ ಐದನೇ ಪಂದ್ಯದಲ್ಲಿ ಇಂದು ಭಾರತ ಹಾಗೂ ಆಸ್ಪ್ರೇಲಿಯಾ ಮುಖಾಮುಖಿಯಾಗಿವೆ. ಭಾರತಕ್ಕೆ ಆಸಿಸ್​ 200 ರನ್​ನ ಗುರಿ ನೀಡಿದೆ.

ಚೆನ್ನೈ (ತಮಿಳುನಾಡು): ಇಲ್ಲಿನ ಎಂ ಎ ಚಿದಂಬರಮ್​ ಕ್ರೀಡಾಂಗಣದ ಪಿಚ್​ ಸ್ಪಿನ್ ಬೌಲರ್​ಗಳಿಗೆ ನೆಚ್ಚಿನದ್ದಾಗಿದೆ. ಅದರಂತೆ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಭಾರತದ ತ್ರಿವಳಿ ಸ್ಪಿನ್ನರ್​ಗಳು ಯಶಸ್ವಿಯಾಗಿ ನಿಯಂತ್ರಿಸಿದರು. ಆಸ್ಟ್ರೇಲಿಯಾ 49.3 ಓವರ್​ ಅಂತ್ಯಕ್ಕೆ 10 ವಿಕೆಟ್​ ಕಳೆದುಕೊಂಡು 199 ರನ್ ಗಳಿಸಿದೆ. ವಿಶ್ವಕಪ್​ನಲ್ಲಿ ಶುಭಾರಂಭ ಮಾಡಲು ರೋಹಿತ್​ ಪಡೆ 200 ರನ್​ ಗುರಿ ಭೇದಿಸಬೇಕಿದೆ​.

ಚೆಪಾಕ್​ ಮೈದಾನದಲ್ಲಿ ಟಾಸ್​ ಗೆದ್ದ ಆಸಿಸ್​ ನಾಯಕ ಪ್ಯಾಟ್​​ ಕಮಿನ್ಸ್​​ ಮೊದಲು ಬ್ಯಾಟಿಂಗ್​ ಮಾಡುವ ನಿರ್ಧಾರವನ್ನು ಮಾಡಿದರು. ಆದರೆ ನಾಯಕನ ನಿರ್ಧಾರವನ್ನು ಸಮರ್ಥಿಸುವಲ್ಲಿ ಬ್ಯಾಟರ್​ಗಳು ವಿಫಲರಾದರು ಅಥವಾ ಭಾರತೀಯ ಬೌಲರ್​ಗಳು ಆಸ್ಟ್ರೇಲಿಯಾದ ಲೆಕ್ಕಾಚಾರವನ್ನು ಅಡಿಮೇಲು ಮಾಡಿದರು. ಹೊಸ ಬಾಲ್​ನಲ್ಲಿ ಯಾವಾಗಲೂ ಪರಿಣಾಮಕಾರಿ ಆದ ಬುಮ್ರಾ ಆಸ್ಟ್ರೇಲಿಯಾವನ್ನು ಆರಂಭದಲ್ಲೇ ಕಾಡಿದರು. ನಂತರ ಸ್ಪಿನ್ನರ್​ಗಳು ಆಸಿಸ್​ನ ರನ್​ ಬೇಟೆಗೆ ಕಡಿವಾಣ ಹಾಕಲು ಯಶಸ್ವಿ ಆದರು.

ಇನ್ನಿಂಗ್ಸ್​ನ ಮೂರನೇ ಮತ್ತು ವೈಯುಕ್ತಿಕ ಎರಡನೇ ಓವರ್​ ಮಾಡಿದ ಬುಮ್ರಾ ಆರಂಭಿಕ ಆಟಗಾರ ಮಿಚೆಲ್​ ಮಾರ್ಷ್​ ಅವರ ವಿಕೆಟ್​ ಪಡೆದರು. ಶೂನ್ಯಕ್ಕೆ ವಿಕೆಟ್​ ಕೊಟ್ಟು ಮಾರ್ಷ್​ ಪೆವಿಲಿಯನ್​ಗೆ ಮರಳಿದರು. ಎರಡನೇ ವಿಕೆಟ್​ಗೆ ಒಂದಾದ ಅನುಭವಿ ಜೋಡಿ ಸ್ಟೀವ್​ ಸ್ಮಿತ್​ ಮತ್ತು ಡೇವಿಡ್​ ವಾರ್ನರ್​ ವಿಕೆಟ್​ ನಿಲ್ಲಿಸುವ ಸಲುವಾಗಿ ರನ್​ ಕಡೆ ಗಮನಹರಿಸದೇ ನಿಧಾನವಾಗಿ ಆಡಿದರು.

ಇಬ್ಬರು ಅನುಭವಿ ಆಟಗಾರರು ಅರ್ಧಶತಕಕ್ಕೂ ಮುನ್ನ ವಿಕೆಟ್​ ಒಪ್ಪಿಸಿ ತಂಡಕ್ಕೆ ದೊಡ್ಡ ಇನ್ನಿಂಗ್ಸ್​​ ಕಟ್ಟುವಲ್ಲಿ ವಿಫಲರಾದರು. ಆದರೆ ಈ ಜೋಡಿ 69 ರನ್​ನ ಪಾಲುದಾರಿಕೆಯನ್ನು ಮಾಡಿತು. ಇದೇ ಇನ್ನಿಂಗ್ಸ್​ನ ದೊಡ್ಡ ಜೊತೆಯಾಟವಾಗಿದೆ. 52 ಬಾಲ್​ನಲ್ಲಿ 41 ರನ್​ ಗಳಿಸಿ ಆಡುತ್ತಿದ್ದ ವಾರ್ನರ್ ಕುಲ್ದೀಪ್​ಗೆ ವಿಕೆಟ್​ ಕೊಟ್ಟರೆ, 71 ಬಾಲ್​ ಆಡಿ 46 ರನ್​ ಗಳಿಸಿದ್ದ ಸ್ಮಿತ್​ ಜಡೇಜಾಗೆ ವಿಕೆಟ್​ ಒಪ್ಪಿಸಿದರು.

ಸ್ಮಿತ್​ ವಿಕೆಟ್​ ಪಡೆದ ನಂತರ ಜಡೇಜ ಆಸಿಸ್​ನ ಮತ್ತೆರಡು ವಿಕೆಟ್​ಗಳನ್ನು ತಮ್ಮ ಬತ್ತಳಿಕೆಗೆ ಸೇರಿಸಿಕೊಂಡರು. ಮಾರ್ನಸ್​ ಲಬುಶೇನ್ (27) ಪಿಚ್​ಗೆ ಸೆಟಲ್​ ಆಗುವಷ್ಟರಲ್ಲಿ ಜಡೇಜಾ ಸ್ಪಿನ್​ಗೆ ಔಟ್​ ಆದರೆ, ಅವರ ಬೆನ್ನಲ್ಲೇ ಶೂನ್ಯಕ್ಕೆ ಅಲೆಕ್ಸ್​ ಕ್ಯಾರಿ ಸಹ ಪೆವಿಲಿಯನ್​ಗೆ ಮರಳಿದರು. ನಂತರ ಕ್ಯಾಮೆರಾನ್ ಗ್ರೀನ್ (8) ಅಶ್ವಿನ್​ಗೆ ಬಲಿಯಾದರು. ನಾಯಕ ಪ್ಯಾಟ್​ ಕಮಿನ್ಸ್​ 15 ರನ್​ಗೆ ಬುಮ್ರಾಗೆ ವಿಕೆಟ್​ ಕೊಟ್ಟರು.

ನಂತರ ಟೇಲ್​ ಎಂಡರ್​ಗಳಾದ ಝಂಪಾ ಮತ್ತು ಸ್ಟಾರ್ಕ್ ವಿಕೆಟ್​ನ್ನು ಹಾರ್ದಿಕ್​ ಪಾಂಡ್ಯ ಮತ್ತು ಸಿರಾಜ್​ ಪಡೆದು 49.3 ಓವರ್​ ಆಸ್ಟ್ರೇಲಿಯಾವನ್ನು ಆಲ್​ಔಟ್​ಗೆ ತಳ್ಳಿದರು. 199 ರನ್​ಗೆ ಆಸ್ಟ್ರೇಲಿಯಾ ಸರ್ವಪತನ ಕಂಡಿತು. ಭಾರತ ಪರ ಜಡೇಜಾ 3, ಕುಲ್ದೀಪ್​, ಬುಮ್ರಾ 2 ವಿಕೆಟ್​ ಪಡೆದರು. ಅಶ್ವಿನ್​, ಸಿರಾಜ್​, ಪಾಂಡ್ಯ ತಲಾ ಒಂದು ವಿಕೆಟ್​ ಪಡೆದುಕೊಂಡರು.

ಇದನ್ನೂ ಓದಿ: ಏಷ್ಯನ್​ ಗೇಮ್ಸ್: ಭಾರತೀಯ ಅಥ್ಲೀಟ್‌ಗಳು 107 ಪದಕ ಗೆದ್ದಿರುವುದು ಐತಿಹಾಸಿಕ ಸಾಧನೆ- ಪ್ರಧಾನಿ ಮೋದಿ ಮೆಚ್ಚುಗೆ

Last Updated :Oct 8, 2023, 6:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.